ಮೋಹನ್‌ಲಾಲ್ ಮಗ ಪ್ರಣವ್ ಜೊತೆ ಕಲ್ಯಾಣಿ ಕಲ್ಯಾಣ; ʻಇದೆಲ್ಲಾ ಶುದ್ಧ ಸುಳ್ಳುʼ ಎಂದ ನಟಿಯ ತಾಯಿ ಲಿಸ್ಸಿ
ಪ್ರಣವ್ ಮೋಹನ್‌ಲಾಲ್ ಮತ್ತು ಕಲ್ಯಾಣಿ ಪ್ರಿಯದರ್ಶನ್ ಅವರ ಮದುವೆ ಸುದ್ದಿಯು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಈ ಬಗ್ಗೆ ಕಲ್ಯಾಣಿ ಅವರ ತಾಯಿ ಲಿಸ್ಸಿ ಸ್ಪಷ್ಟನೆ ನೀಡಿದ್ದಾರೆ. ಪ್ರಣವ್ ಮೋಹನ್‌ಲಾಲ್ ಮತ್ತು ಕಲ್ಯಾಣಿ ದಾಂಪತ್ಯ ಬದುಕಿಗೆ ಕಾಲಿಡುತ್ತಿದ್ದಾರೆ ಎಂಬುದು ಕೇವಲ ವದಂತಿ ಎಂದು ಅವರು ತಿಳಿಸಿದ್ದಾರೆ.
-
ಮಲಯಾಳಂ ನಟ ಮೋಹನ್‌ಲಾಲ್ ಅವರ ಪುತ್ರ ಪ್ರಣವ್ ಸದ್ಯ ಚಿತ್ರರಂಗದಲ್ಲಿ ಬೇಡಿಕೆಯ ನಟರಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಅದೇ ರೀತಿ ನಿರ್ದೇಶಕ ಪ್ರಿಯದರ್ಶನ್ ಅವರ ಪುತ್ರಿ ಕಲ್ಯಾಣಿ ಕೂಡ ಸದ್ಯ ದಕ್ಷಿಣ ಭಾರತದ ಸ್ಟಾರ್ ನಟಿಯಾಗಿದ್ದಾರೆ. ಅಂದಹಾಗೆ, ಮೋಹನ್‌ಲಾಲ್ ಮತ್ತು ಪ್ರಿಯದರ್ಶನ್ ಎಷ್ಟೊಂದು ಆತ್ಮೀಯ ಸ್ನೇಹಿತರು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ಇವರ ಮಕ್ಕಳಾದ ಪ್ರಣವ್ ಮತ್ತು ಕಲ್ಯಾಣಿ ದಾಂಪತ್ಯ ಬದುಕಿಗೆ ಕಾಲಿಡುತ್ತಿದ್ದಾರೆ ಎಂಬ ಸುದ್ದಿ ಸಖತ್ ವೈರಲ್ ಆಗಿದೆ.
ಆದರೆ, ಇದೆಲ್ಲಾ ನಿಜವಲ್ಲ. ಸ್ವತಃ ಕಲ್ಯಾಣಿ ಅವರೇ ಹಿಂದೊಮ್ಮೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದರು. ಆದರೂ ವದಂತಿಗಳು ಹಬ್ಬುವುದು ಮಾತ್ರ ನಿಂತಿಲ್ಲ. ಇದೀಗ ಮತ್ತೊಮ್ಮೆ ಕಲ್ಯಾಣಿ - ಪ್ರಣವ್ ಮದುವೆ ಸುದ್ದಿ ಟ್ರೆಂಡ್ ಆಗಿದೆ. ಆ ಬಗ್ಗೆ ಈಗ ಕಲ್ಯಾಣಿ ಅವರೇ ತಾಯಿ, ಹಿರಿಯ ನಟಿ ಲಿಸ್ಸಿ ಅವರೇ ಸ್ಪಷ್ಟನೆ ನೀಡಿದ್ದಾರೆ. ಮದುವೆ ಕುರಿತ ಎಲ್ಲಾ ಊಹಾಪೋಹಗಳಿಗೆ ಅಂತ್ಯ ಹಾಡಿದ್ದಾರೆ.
Vijay Rashmika Wedding: ʻವಿರೋಷ್ʼ ಸಂಭ್ರಮ ನೋಡೋದೇ ಒಂದು ಸೌಭಾಗ್ಯ; ನಟಿ ಕಲ್ಯಾಣಿ ಪ್ರಿಯದರ್ಶನ್
ಕಾಮೆಂಟ್‌ನಲ್ಲಿ ಉತ್ತರಿಸಿದ ಲಿಸ್ಸಿ
ಇತ್ತೀಚೆಗೆ 'ವಿಷು' ಹಬ್ಬದ ಶುಭಾಶಯಗಳನ್ನು ಕೋರಿ ಲಿಸ್ಸಿ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಈ ವೇಳೆ ಬಳಕೆದಾರರೊಬ್ಬರು ಕಲ್ಯಾಣಿ ಮತ್ತು ಪ್ರಣವ್ ಮದುವೆಯ ಬಗ್ಗೆ ಕಾಮೆಂಟ್ ಮಾಡಿದ್ದರು. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಲಿಸ್ಸಿ, "ಇದು ಸುಳ್ಳು ಸುದ್ದಿ" ಎಂದು ಖಡಕ್ ಆಗಿ ಉತ್ತರಿಸಿದ್ದಾರೆ.
ಈ ವದಂತಿ ಹುಟ್ಟಿಕೊಳ್ಳಲು ಕಾರಣವೇನು?
ಅಸಲಿಗೆ, ಪ್ರಣವ್ ಮತ್ತು ಕಲ್ಯಾಣಿ ನಡುವೆ ಇಂಥದ್ದೊಂದು ಗಾಸಿಪ್ ಹುಟ್ಟಿಕೊಳ್ಳಲು ಕಾರಣ, ಹೃದಯಂ ಸಿನಿಮಾ. 2022ರಲ್ಲಿ ತೆರೆಕಂಡ ಈ ಚಿತ್ರದಲ್ಲಿ ಕಲ್ಯಾಣಿ ಮತ್ತು ಪ್ರಣವ್ ದಂಪತಿಗಳಾಗಿ ನಟಿಸಿದ್ದರು. ಇವರ ಆನ್-ಸ್ಕ್ರೀನ್ ಕೆಮಿಸ್ಟ್ರಿ ಸಖತ್ ಮೋಡಿ ಮಾಡಿತ್ತು. ಇಬ್ಬರು ನಿಜ ಜೀವನದಲ್ಲಿ ಜೋಡಿಯಾದರೆ ಚೆನ್ನಾಗಿರುತ್ತದೆ ಎಂಬ ಮಾತುಗಳು ಕೇಳಿಬಂದವು. ಅಲ್ಲದೆ, ಅವರ ಕುಟುಂಬಗಳ ನಡುವಿನ ಹಲವು ವರ್ಷಗಳ ಸ್ನೇಹವು ಇವರಿಬ್ಬರು ನಿಜ ಜೀವನದಲ್ಲೂ ಒಂದಾಗಲಿದ್ದಾರೆ ಎಂಬ ವದಂತಿಗಳಿಗೆ ಇನ್ನಷ್ಟು ಪುಷ್ಟಿ ನೀಡಿತ್ತು.
ಇಬ್ಬರು ಸಹೋದರ-ಸಹೋದರಿ ಸಂಬಂಧ
ಹೌದು, ಹಿಂದೊಮ್ಮೆ ನಿರ್ಮಾಪಕ ಆಲಪ್ಪುಳ ಅಶ್ರಫ್ ಅವರು ಈ ಬಗ್ಗೆ ನೇರವಾಗಿ ಕಲ್ಯಾಣಿ ತಾಯಿ ಲಿಸ್ಸಿ ಅವರನ್ನೇ ಪ್ರಶ್ನೆ ಮಾಡಿದ್ದರು. ಆಗ ಮಾತನಾಡಿದ್ದ ಲಿಸ್ಸಿ, "ಅಶ್ರಫ್, ಒಂದು ವೇಳೆ ಅವರಿಗೆ (ಪ್ರಣವ್-ಕಲ್ಯಾಣಿ) ಅಂತಹ ಆಸೆ ಇದ್ದಿದ್ದರೆ ಎರಡೂ ಕುಟುಂಬಗಳಿಗೂ ಅದಕ್ಕಿಂತ ಸಂತೋಷದ ವಿಷಯ ಮತ್ತೊಂದಿಲ್ಲ. ಆದರೆ ಅವರ ನಡುವೆ ಅಂತಹ ಯಾವುದೇ ಸಂಬಂಧವಿಲ್ಲ. ಬಾಲ್ಯದಿಂದಲೂ ಅವರಿಬ್ಬರ ನಡುವೆ ಅಣ್ಣ-ತಂಗಿಯ ಬಾಂಧವ್ಯವಿದೆ. ಅಪ್ಪು (ಪ್ರಣವ್) ಅವರಿಗೆಲ್ಲಾ ಒಬ್ಬ ಹೀರೋ ಇದ್ದಂತೆ. ಮರ ಹತ್ತುವುದು, ಗೋಡೆ ಜಿಗಿಯುವುದು ಹೀಗೆ ಮಕ್ಕಳ ತಂಡದಲ್ಲಿ ಆತನೇ ನಾಯಕನಾಗಿದ್ದ. ಕಲ್ಯಾಣಿ ಇದುವರೆಗೆ ಯಾರನ್ನೂ ಪ್ರೀತಿಸಿಲ್ಲ, ಆ ಬಗ್ಗೆ ನನಗೆ ಖಾತ್ರಿಯಿದೆ" ಎಂದಿದ್ದರು.