Kiccha Sudeep: ʻಯುದ್ಧಕ್ಕೆ ರೆಡಿʼ ಎಂದು ಸುದೀಪ್ ಹೇಳಿದ್ದು ಯಾರಿಗೆ? ಚಕ್ರವರ್ತಿ ಚಂದ್ರಚೂಡ್ ಬಾಯಿಬಿಟ್ಟ ಸತ್ಯವಿದು!
Sudeep War Statement: ಹುಬ್ಬಳ್ಳಿಯಲ್ಲಿ ಸುದೀಪ್ ಅವರು "ಯುದ್ಧಕ್ಕೆ ಸಿದ್ಧ" ಎಂದು ಹೇಳಿದ್ದು ಯಾರ ವಿರುದ್ಧ ಎಂಬ ಗೊಂದಲಕ್ಕೆ ಚಕ್ರವರ್ತಿ ಚಂದ್ರಚೂಡ್ ತೆರೆ ಎಳೆದಿದ್ದಾರೆ. ಸುದೀಪ್ ಅವರ ಈ ಹೇಳಿಕೆ ಯಾವುದೇ ವ್ಯಕ್ತಿಯ ವಿರುದ್ಧವಲ್ಲ, ಬದಲಿಗೆ ಚಿತ್ರರಂಗವನ್ನು ಕಾಡುತ್ತಿರುವ ಪೈರಸಿ, ಪೇಯ್ಡ್ ನೆಗೆಟಿವ್ ರಿವ್ಯೂ ಮತ್ತು ಚಿತ್ರಮಂದಿರಗಳಲ್ಲಿ ನಡೆಯುವ ಅಸಹ್ಯಕರ ವರ್ತನೆಗಳ ವಿರುದ್ಧ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
-
"ಹೊರಗಡೆ ಒಂದು ಪಡೆ ಯುದ್ಧಕ್ಕೆ ರೆಡಿ ಆಗ್ತಿದೆ, ಈ ವೇದಿಕೆ ಮೇಲೆ ನಿಂತು ಹೇಳ್ತಾ ಇದ್ದೀನಿ, ಯುದ್ಧಕ್ಕೆ ಸಿದ್ಧ. ಯಾಕೆಂದರೆ ನಾವು ನಮ್ಮ ಮಾತಿಗೆ ಬದ್ಧ. ಕೆಲವೊಮ್ಮೆ ನನಗೆ ಅನ್ನಿಸುತ್ತದೆ, ಸೈಲೆಂಟ್ ಆಗಿರೋದು ಒಳ್ಳೆಯದೋ ಕೆಟ್ಟದ್ದೋ ಗೊತ್ತಿಲ್ಲ. ಆದರೆ ನಿಮಗಾಗಿ, ನನ್ನ ಸ್ನೇಹಿತರು ಚೆನ್ನಾಗಿರಬೇಕು ಎಂಬ ಉದ್ದೇಶದಿಂದ, ನಾವೆಲ್ಲರೂ ಚೆನ್ನಾಗಿರಬೇಕು, ನಾವೆಲ್ಲರೂ ಒಳ್ಳೆಯ ಹೆಸರು ಪಡೆಯಬೇಕು ಎಂಬ ಒಂದೇ ಕಾರಣಕ್ಕೆ ನಾನು ಬಾಯಿ, ಎಲ್ಲವನ್ನು ಮುಚ್ಚಿಕೊಂಡು ಇದ್ದೇ ಹೊರತು, ನನಗೆ ಬಾಯಿ ಇಲ್ಲ ಅಂತಲ್ಲ" - ಇದು ಕಿಚ್ಚ ಸುದೀಪ್ ಅವರು ಹುಬ್ಬಳ್ಳಿಯಲ್ಲಿ ಈಚೆಗೆ ಹೇಳಿಕೆ ನೀಡಿದ್ದರು.
ಈ ಸ್ಟೇಟ್‌ಮೆಂಟ್ ವೈರಲ್ ಆಗುತ್ತಿದ್ದಂತೆಯೇ, ಸುದೀಪ್ ಈ ರೀತಿ ಹೇಳಿದ್ದು ಯಾರಿಗೆ ಎಂಬ ಪ್ರಶ್ನೆ ಎಲ್ಲಾ ಕಡೆ ಕೇಳಿಬಂದಿತ್ತು. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಭಾರಿ ಚರ್ಚೆ ಆಗಿತ್ತು. ಬಹುತೇಕ ಊಹೆ, ಅದು ದರ್ಶನ್ ಅವರಿಗೆ ಹೇಳಿದ್ದು ಎಂಬುದಾಗಿತ್ತು. ಅಲ್ಲದೆ, ದರ್ಶನ್ ಫಾನ್ಸ್ ಕೂಡ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದರು. ವಿಜಯಲಕ್ಷ್ಮೀ ಅವರು ದಾವಣಗೆರೆಯಲ್ಲಿ ನೀಡಿದ ಹೇಳಿಕೆಯು ಇದಕ್ಕೆ ಪ್ರತಿಕ್ರಿಯೆ ಆಗಿತ್ತು ಎಂದು ಹೇಳಲಾಗಿತ್ತು. ಆದರೆ ಇದೀಗ ಈ ಎಲ್ಲದರ ಬಗ್ಗೆ ಸುದೀಪ್ ಆಪ್ತ, ಮಾಜಿ ಬಿಗ್ ಬಾಸ್ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್ ಫೇಸ್ ಲೈವ್‌ನಲ್ಲಿ ಉತ್ತರಿಸಿದ್ದಾರೆ.
ಕುಂಬಳಕಾಯಿ ಕಳ್ಳ ಅಂದರೆ..
"ನಾನು ಬೆಂಕಿ ಹಾಕೋದಕ್ಕೆ ಮಾತನಾಡುವುದಿಲ್ಲ. ಇವತ್ತು ಚಿತ್ರರಂಗ ದೊಡ್ಡಮಟ್ಟದಲ್ಲಿ ಸಂಕಷ್ಟ ಎದುರಿಸುತ್ತಿರುವುದು ಪೈರಸಿಯಿಂದ. ಯಾಕೆಂದರೆ, ಒಂದು ಸಿನಿಮಾದ ಮೊದಲ ಶೋ ಮುಗಿದ 5 ನಿಮಿಷಗಳಲ್ಲಿ ಇಡೀ ಸಿನಿಮಾದ ಲಿಂಕ್ ಹರಿದಾಡುತ್ತಿರುತ್ತದೆ. ಸಿನಿಮಾ ರಿವ್ಯೂ ಮಾಡುವುದು ತಪ್ಪಲ್ಲ. ದುಡ್ಡು ಕೊಟ್ಟು ಸಿನಿಮಾ ನೋಡಿದ ಎಲ್ಲರಿಗೂ ವಿಮರ್ಶೆ ಮಾಡುವ ಅಧಿಕಾರ ಇದೆ. ಆದರೆ ರಿವ್ಯೂ ಹೆಸರಿನಲ್ಲಿ ಸಿನಿಮಾವನ್ನು ನಾಶ ಮಾಡೋದಕ್ಕೆ ಒಂದಷ್ಟು ಮಂದಿ ಹುಟ್ಟುಕೊಂಡಿದ್ದಾರೆ. ಕಮರ್ಷಿಯಲ್ ಸಿನಿಮಾವನ್ನು ನಾಶ ಮಾಡಬೇಕು ಎನ್ನುವವರ ಒಂದು ಪಡೆ ಇದೆ, ಪೈರಸಿ ಮಾಡುವವ ಪಡೆ ಇದೆ, ಶೋ ಮುಗಿಯುವುದಕ್ಕೂ ಮುನ್ನವೇ ಬುಕ್ ಮೈ ಶೋನಲ್ಲಿ ನೆಗೆಟಿವ್ ಅನ್ನು ಲಾಕ್ ಮಾಡುತ್ತಾರೆ" ಎಂದು ಚಕ್ರವರ್ತಿ ಹೇಳಿದ್ದಾರೆ.
ಚಕ್ರವರ್ತಿ ಚಂದ್ರಚೂಡ್ ಫೇಸ್ ಬುಕ್ ಲೈವ್
ಕುಚೋದ್ಯಗಳ ವಿರುದ್ಧ ಯುದ್ಧ
"ಥಿಯೇಟರ್‌ಗೆ ಆಡಿಯೆನ್ಸ್ ಬಂದರೆ, ಅಲ್ಲೊಂದು ಹಬ್ಬದ ವಾತಾವರಣ ಇರಬೇಕು. ಎಲ್ಲಾ ವರ್ಗದ ಜನರು ಬಂದಾಗ ಮಾತ್ರ ಸಿನಿಮಾ ಗೆಲ್ಲೋದು. ಆದರೆ ಅಲ್ಲಿ ಶರ್ಟ್ ಹರ್ಕೊಳೋದು, ದಿವಂಗತರಾಗಿರುವ ನಟರ ಬಗ್ಗೆ, ಅವರ ಹೆಂಡತಿ ಮಕ್ಕಳ ಬಗ್ಗೆ ಮಾತನಾಡೋದು, ಚಾಲೆಂಜ್ ಹಾಕೋದು, ಅಸಹ್ಯವಾಗಿ ನಡೆದುಕೊಂಡರೆ ಯಾರು ಥಿಯೇಟರ್‌ಗೆ ಬರ್ತಾರೆ? ಜಾತಿ ಧರ್ಮ ಮರೆತು ಜನರು ಥಿಯೇಟರ್ ಒಂಥರಾ ದೇವಸ್ಥಾನ ಇದ್ದಂಗೆ. ನೀವು ಆರಾಧಿಸಿಸುವವರನ್ನು ಪ್ರೀತಿಸಿ, ತಪ್ಪಿಲ್ಲ. ಆದರೆ ಬೇರೆಯವರನ್ನು ಯಾಕೆ ಎಳೆದು ತರುತ್ತೀರಿ? ಈ ಥರದ ಎಲ್ಲಾ ಕುಚೋದ್ಯಗಳ ವಿರುದ್ಧ, ಅಸಹ್ಯಗಳ ವಿರುದ್ಧ, ಪೈರಸಿಗಳ ವಿರುದ್ಧ ಮಾರ್ಕ್ ಚಿತ್ರ ತಂಡದ ಅಧಿನಾಯಕ ಕಿಚ್ಚ ಸುದೀಪ್ ಅವರು ಒಂದು ಯುದ್ಧ ಮಾಡ್ತೀನಿ ಅಂತ ಹೇಳಿದ್ದರು, ಅದು ತಪ್ಪಾ" ಎಂದು ಚಕ್ರವರ್ತಿ ಚಂದ್ರಚೂಡ್ ಹೇಳಿದ್ದಾರೆ.
ಎಲ್ಲಾ ಸಿನಿಮಾಗಳಿಗೂ ಇರುವ ಸವಾಲು
"ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡಿಕೊಳ್ತಾರೆ. ನೀವು ಬೇರೆಯದನ್ನೆಲ್ಲಾ ಮುಟ್ಟಿಕೊಂಡರೆ ಹೇಗೆ? ಈಗ ಹೇಳಿರುವ ಸವಾಲು ಬರೀ ಮಾರ್ಕ್‌ಗೆ ಮಾತ್ರವಲ್ಲ, 45 ಸಿನಿಮಾಗೆ ಇರುವ ಸವಾಲು, ಬೇರೆ ಎಲ್ಲಾ ಸಿನಿಮಾಗಳಿಗೂ ಇರುವ ಸವಾಲು. ಈಚೆಗೆ ಡೆವಿಲ್ ಸಿನಿಮಾ ಟೀಮ್ ಕೂಡ 9 ಸಾವಿರ ಚಿಲ್ಲರೆ ಪೈರಸಿ ಲಿಂಕ್‌ಗಳನ್ನು ತೆಗೆದ್ವಿ ಅಂತ. ನಾನು ಹೇಳಿದ ಈ ಸಮಸ್ಯೆಗಳನ್ನು ಯಾರು ಮಾಡಿದರೂ ತಪ್ಪೇ? ಇದಕ್ಕೆ ಸುದಿಪ್ ಅವರು ತುಪ್ಪ ಸುರಿದಿದ್ದಾರಾ? ಅವರು ಉತ್ತಮವಾಗಿ ನಡೆದುಕೊಳ್ಳಿ ಎಂದೇ ಫ್ಯಾನ್ಸ್‌ಗೆ ಹೇಳಿದ್ದಾರೆ" ಎಂದು ಚಕ್ರವರ್ತಿ ಹೇಳಿದ್ದಾರೆ.