ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಜೀ ಕನ್ನಡದಲ್ಲಿ ಸೆ.28 ರಿಂದ ‘ಜಗದ್ಧಾತ್ರಿ’ ಧಾರಾವಾಹಿ ಶುರು; ಈ ಸೀರಿಯಲ್‌ಗಾಗಿ ಒಂದಾದ ಕಿರುತೆರೆ ಸ್ಟಾರ್ಸ್!‌

Jagaddhatri serial: ‘ಜಗದ್ಧಾತ್ರಿ’ ಧಾರಾವಾಹಿಯು ಸೆಪ್ಟೆಂಬರ್ 28ರಂದು ಜೀ ಕನ್ನಡದಲ್ಲಿ ಪ್ರಸಾರ ಆರಂಭಿಸಲಿದೆ. ಅಂಡರ್‌ಕವರ್ ಪೊಲೀಸ್ ಆಫೀಸರ್ ಆಗಿ ಮೋಕ್ಷಿತಾ ಪೈ ನಟಿಸಿದ್ದು, ತಾಯಿಯ ಮೇಲಿನ ದೇಶದ್ರೋಹದ ಸುಳ್ಳು ಕಳಂಕ ತೊಡೆದುಹಾಕುವ ಮಹತ್ವದ ಹೋರಾಟ ಇದರಲ್ಲಿದೆ. ವಿಜಯ್ ಸೂರ್ಯ ಮತ್ತು ಕವಿತಾ ಗೌಡ ಕೂಡ ಈ ಸೀರಿಯಲ್‌ನಲ್ಲಿ ನಟಿಸಲಿದ್ದಾರೆ.

‘ಜಗದ್ಧಾತ್ರಿ’ ಸೀರಿಯಲ್‌ಗಾಗಿ ಒಂದಾದ ಮೋಕ್ಷಿತಾ, ವಿಜಯ್ ಸೂರ್ಯ, ಕವಿತಾ ಗೌಡ

-

Avinash GR
Avinash GR Sep 27, 2026 12:27 PM

ಕಿರುತೆರೆ ವೀಕ್ಷಕರಿಗೆ ನಿರಂತರವಾಗಿ ವಿಭಿನ್ನ ಹಾಗೂ ನವೀನ ಕಥಾಹಂದರಗಳನ್ನು ಉಣಬಡಿಸುತ್ತಿರುವ ಜೀ ಕನ್ನಡ ವಾಹಿನಿ ಇದೀಗ ಮತ್ತೊಂದು ಹೊಸ ಅಲೆಯ ಧಾರಾವಾಹಿಯೊಂದಿಗೆ ಪ್ರೇಕ್ಷಕರ ಎದುರು ಬರಲು ಸಜ್ಜಾಗಿದೆ. ಮಹಿಳಾ ಅಂಡರ್‌ಕವರ್ ಪೊಲೀಸ್ ಅಧಿಕಾರಿಯೊಬ್ಬಳ ಸಾಹಸಮಯ ಬದುಕಿನ ಕಥೆಯನ್ನು ಒಳಗೊಂಡಿರುವ ನೂತನ ಧಾರಾವಾಹಿ ‘ಜಗದ್ಧಾತ್ರಿ’ ಇದೇ ಸೆಪ್ಟೆಂಬರ್ 28 ರಿಂದ ಪ್ರತಿ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.

'ಜಗದ್ಧಾತ್ರಿ'ಯ ರೂಪದಲ್ಲಿ ಮೋಕ್ಷಿತಾ

ಈ ಧಾರಾವಾಹಿಯಲ್ಲಿ ಮೋಕ್ಷಿತಾ ಪೈ ಖಡಕ್ ಪೊಲೀಸ್ ಅಧಿಕಾರಿ 'ಜಗದ್ಧಾತ್ರಿ'ಯ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಕುಟುಂಬದಲ್ಲಿ ಇದ್ದುಕೊಂಡೇ ಹೊರಜಗತ್ತಿನ ಅಪರಾಧಗಳನ್ನು ಮಟ್ಟಹಾಕುವ ಪೊಲೀಸ್ ಅಧಿಕಾರಿಯಾಗಿ, ಅಪ್ಪಟ ದೇಶಭಕ್ತೆಯಾಗಿದ್ದ ತನ್ನ ತಾಯಿಯ ಮೇಲಿನ ದೇಶದ್ರೋಹದ ಸುಳ್ಳು ಕಳಂಕವನ್ನು ತೊಡೆದುಹಾಕಲು ಆಕೆ ನಡೆಸುವ ಹೋರಾಟವೇ ಈ ಕಥೆಯ ಮೂಲ ತಿರುಳು. ಮನೆಯವರ ನಿಷ್ಠುರ ಮಾತುಗಳನ್ನು ಮೌನವಾಗಿ ಸಹಿಸುತ್ತಲೇ ತಾಯಿಗೆ ನ್ಯಾಯ ಒದಗಿಸಲು ಶ್ರಮಿಸುವ ಜಗದ್ಧಾತ್ರಿಯ ಪಾತ್ರವು ಇಂದಿನ ಯುವ ಪೀಳಿಗೆಯನ್ನು ಸೆಳೆಯುವಂತೆ ಹೊಸ ಆಯಾಮದಲ್ಲಿ ಮೂಡಿಬರುತ್ತಿದೆ.

ಖುಷಿ ತಂದಿದೆ ಎಂದ ವಿಜಯ್‌ ಸೂರ್ಯ

ಇತ್ತೀಚೆಗಷ್ಟೇ ನಾಯಕ ನಟ ವಿಜಯ್ ಲಲಿತಾ ಸೂರ್ಯ ಹಾಗೂ ಮೋಕ್ಷಿತಾ ಪೈ ಅವರ ಡ್ಯುಯೆಟ್ ಹಾಡಿನ 'ಹುಕ್ ಸ್ಟೆಪ್' ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿ ಮೆಚ್ಚುಗೆ ಗಳಿಸಿದೆ. ಈ ಬಗ್ಗೆ ಸಂತಸ ಹಂಚಿಕೊಂಡಿರುವ ನಟ ವಿಜಯ್, "ಬಹಳ ದಿನಗಳ ಬಳಿಕ ಪ್ರೀತಿ-ಪ್ರೇಮದ ಎಳೆಯುಳ್ಳ ಇಂಥದ್ದೊಂದು ವಿಶಿಷ್ಟ ಪಾತ್ರ ನಿರ್ವಹಿಸುತ್ತಿರುವುದು ಅಪಾರ ಖುಷಿ ತಂದಿದೆ" ಎಂದಿದ್ದಾರೆ.

ಪ್ರಮುಖ ಪಾತ್ರದಲ್ಲಿ ಕವಿತಾ ಗೌಡ

ಈ ಧಾರಾವಾಹಿಯಲ್ಲಿ ಮೋಕ್ಷಿತಾ ಮತ್ತು ವಿಜಯ್ ಇಬ್ಬರೂ ಐಪಿಎಸ್ ಅಧಿಕಾರಿಗಳಾಗಿ ನಟಿಸಿದ್ದು, ಇವರೊಂದಿಗೆ ಕವಿತಾ ಗೌಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಗೆ ಮರಳಿದ್ದಾರೆ. ಜೊತೆಗೆ ಗಿರಿಜಾ ಲೋಕೇಶ್, ಅರುಣಾ ಬಾಲರಾಜ್, ಲಕ್ಷ್ಮೀ ಸಿದ್ದಯ್ಯ, ಮೈಕೋ ಮಂಜು, ವಚನ್ ಹೊಸಮಠ, ರವಿ ಭಟ್, ಸೋನಿಯಾ ಪೊನ್ನಮ್ಮ ಹಾಗೂ ಮಾನಸಿ ಸುಧೀರ್ ಸೇರಿದಂತೆ ಅನುಭವಿ ಕಲಾವಿದರ ಬಹುದೊಡ್ಡ ತಾರಾಗಣವೇ ಈ ಧಾರಾವಾಹಿಯಲ್ಲಿದೆ.

BBK 11: ಬಿಗ್ ಬಾಸ್ ಮನೆಯಲ್ಲಿ ಮತ್ತೆ ಸದ್ದು ಮಾಡಿದ ಮೋಕ್ಷಿತಾ-ಗೌತಮಿ-ಮಂಜು ವಿಚಾರ: ನೀರಿಗೆ ತಳ್ಳಿದ್ದು ಯಾರನ್ನು?

ಬೆಳ್ಳಿತೆರೆಯ ಜನಪ್ರಿಯ ಬರಹಗಾರ-ನಿರ್ದೇಶಕ ಮಹೇಶ್ ರಾವ್ ಹಾಗೂ ಪ್ರಕಾಶ್ ಅವರ ನಿರ್ಮಾಣದಲ್ಲಿ, ಮಹೇಶ್ ಸಾರಂಗ್ ನಿರ್ದೇಶನದಲ್ಲಿ ಈ ಸೀರಿಯಲ್ ಮೂಡಿಬರುತ್ತಿದ್ದು, 'ಕೀರ್ತಿ ಅಕ್ಷಯ ನೆಟ್‌ವರ್ಕ್' ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿದೆ. ಕೌಟುಂಬಿಕ ಭಾವನೆಗಳ ಜೊತೆಗೆ ಭರ್ಜರಿ ಆ್ಯಕ್ಷನ್ ದೃಶ್ಯಗಳು ಹಾಗೂ ರೋಮ್ಯಾಂಟಿಕ್ ಕಥೆಯ ಮಿಶ್ರಣ ಇಲ್ಲಿದೆ.

ವೀಕ್ಷಕರಿಗೆ ಪರಿಪೂರ್ಣ ಮನರಂಜನೆ

ಜೀ ಕನ್ನಡದ ಬ್ಯುಸಿನೆಸ್ ಹೆಡ್ ದೀಪಕ್ ಶ್ರೀರಾಮುಲು ಮಾತನಾಡಿ, "ಪ್ರತಿಯೊಬ್ಬ ಹೆಣ್ಣೂ ಮನೆಯ ಸವಾಲುಗಳನ್ನು ಎದುರಿಸುತ್ತಲೇ ಜಗತ್ತನ್ನು ಮುನ್ನಡೆಸುತ್ತಾಳೆ. ಈ ಕಥೆಯಲ್ಲೂ ಜಗದ್ಧಾತ್ರಿ ತನ್ನ ಕುಟುಂಬದ ಸಂಕಷ್ಟಗಳನ್ನು ಮೆಟ್ಟಿ ನಿಂತು ಸೂಪರ್ ಕಾಪ್ ಆಗಿ ಕರ್ತವ್ಯ ನಿರ್ವಹಿಸುವ ಪಯಣವನ್ನು ಅದ್ಭುತವಾಗಿ ಕಟ್ಟಿಕೊಡಲಾಗಿದೆ. ಈ ವಿಭಿನ್ನ ಪ್ರಯತ್ನ ವೀಕ್ಷಕರಿಗೆ ಹೊಸ ಅನುಭವದ ಜೊತೆಗೆ ಪರಿಪೂರ್ಣ ಮನರಂಜನೆ ನೀಡಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.