ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

‘ಹನುಮಾನ್ 2–ದಿ ರೈಸ್ ಆಫ್ ವಾನರಾಸ್’ ಸಿನಿಮಾ ಅನೌನ್ಸ್‌; ಸೂಪರ್‌ ಹೀರೋ ಆಗಿ ಮಿಂಚಲಿದ್ದಾರೆ ನಟ ವೈಷ್ಣವ್ ತೇಜ್‌!

HanuMan 2 Movie: ಪ್ರೈಮ್‌ಶೋ ಎಂಟರ್‌ಟೈನ್‌ಮೆಂಟ್ ತನ್ನ ಫ್ಯಾಂಟಸಿ ಸಿನಿಮಾ ಜಗತ್ತನ್ನು ವಿಸ್ತರಿಸಿದೆ. ‘ಹನುಮಾನ್ 2–ದಿ ರೈಸ್ ಆಫ್ ವಾನರಾಸ್’ ಶೀರ್ಷಿಕೆಯಡಿ ನಿರ್ಮಾಣವಾಗುತ್ತಿರುವ ಈ ಹೊಸ ಚಿತ್ರಕ್ಕೆ ವಿ.ಐ. ಆನಂದ್ ಆಕ್ಷನ್ ಕಟ್ ಹೇಳಲಿದ್ದು, ಪಂಜ ವೈಷ್ಣವ್ ತೇಜ್ ಸೂಪರ್ ಹೀರೋ ಆಗಿ ಮಿಂಚಲಿದ್ದಾರೆ.

‘ಹನುಮಾನ್ 2’ ಸಿನಿಮಾ ಘೋಷಣೆ; ಸೂಪರ್ ಹೀರೋ ಆಗಿ ನಟ ಪಂಜ ವೈಷ್ಣವ್ ತೇಜ್!

-

Avinash GR
Avinash GR Nov 22, 2026 3:37 PM

ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದು ದೇಶಾದ್ಯಂತ ಪ್ರೇಕ್ಷಕರ ಮನಗೆದ್ದ ಬ್ಲಾಕ್‌ಬಸ್ಟರ್ ‘ಹನು-ಮಾನ್’ ಸಿನಿಮಾದ ಅಭೂತಪೂರ್ವ ಯಶಸ್ಸಿನ ಬೆನ್ನಲ್ಲೇ, ಪ್ರೈಮ್‌ಶೋ ಎಂಟರ್‌ಟೈನ್‌ಮೆಂಟ್ ನಿರ್ಮಾಣ ಸಂಸ್ಥೆ ತನ್ನ ಫ್ಯಾಂಟಸಿ ಸಿನಿಮಾ ಜಗತ್ತನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಸಜ್ಜಾಗಿದೆ.

ಈ ಸಂಸ್ಥೆಯು ತನ್ನ ಮುಂದಿನ ಮಹತ್ವಾಕಾಂಕ್ಷೆಯ ದೃಶ್ಯಕಾವ್ಯ ‘ಹನುಮಾನ್ 2 – ದಿ ರೈಸ್ ಆಫ್ ವಾನರಾಸ್’ ಚಿತ್ರವನ್ನು ಅಧಿಕೃತವಾಗಿ ಘೋಷಿಸಿದ್ದು, ಪ್ರತಿಭಾವಂತ ಯುವ ನಟ ಪಂಜ ವೈಷ್ಣವ್ ತೇಜ್ ಈ ಚಿತ್ರದಲ್ಲಿ ನಾಯಕನಾಗಿ ಬಣ್ಣಹಚ್ಚಲಿದ್ದಾರೆ. ಪುರಾಣ, ಕಲ್ಪನೆ ಹಾಗೂ ಅಸಾಧಾರಣ ಸಿನಿಮಾ ಸಾಧ್ಯತೆಗಳ ಬೇರುಗಳನ್ನು ಹೊಂದಿರುವ ಈ ಚಿತ್ರವು ಪ್ರೇಕ್ಷಕರಿಗೆ ಹೊಸದೊಂದು ರೋಚಕ ಪ್ರಪಂಚದ ಬಾಗಿಲು ತೆರೆಯುವ ಭರವಸೆ ನೀಡಿದೆ.

ದುಪ್ಪಟ್ಟು ನಿರೀಕ್ಷೆ ಹುಟ್ಟುಹಾಕಿದ ಸಿನಿಮಾ

ಚಿತ್ರದ ಶೀರ್ಷಿಕೆಯ ಜೊತೆಗೆ ಬಿಡುಗಡೆಯಾಗಿರುವ ಅನೌನ್ಸ್‌ಮೆಂಟ್ ಪೋಸ್ಟರ್ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ದೈತ್ಯ ದೈವಿಕ ಬಾಲ ಮತ್ತು ಅಲೌಕಿಕ ದೈವಿಕ ಶಕ್ತಿಯಿಂದ ಸುತ್ತುವರಿದು ಮೋಡಗಳ ನಡುವೆ ಮೇಲೇರುತ್ತಿರುವ ವ್ಯಕ್ತಿಯ ಶಕ್ತಿಶಾಲಿ ದೃಶ್ಯವನ್ನು ಈ ಪೋಸ್ಟರ್ ಒಳಗೊಂಡಿದ್ದು, ಸಿನಿಮಾದ ಭವ್ಯ ಫ್ಯಾಂಟಸಿ ಹಿನ್ನೆಲೆ ಹಾಗೂ ಪಾತ್ರಗಳ ಬಗೆಗಿನ ಪ್ರೇಕ್ಷಕರ ಆಸಕ್ತಿಯನ್ನು ದುಪ್ಪಟ್ಟುಗೊಳಿಸಿದೆ.

ವಿ. ಐ. ಆನಂದ್‌ ನಿರ್ದೇಶನದ ಸಿನಿಮಾ

ವಿಭಿನ್ನ ಕಲ್ಪನಾತ್ಮಕ ಹಾಗೂ ಫ್ಯಾಂಟಸಿ ಕಥೆಗಳನ್ನು ತೆರೆಯ ಮೇಲೆ ತರುವುದರಲ್ಲಿ ಹೆಸರುವಾಸಿಯಾಗಿರುವ ನಿರ್ದೇಶಕ ವಿ. ಐ. ಆನಂದ್ ಈ ಚಿತ್ರಕ್ಕೆ ಕಥೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಪಂಜ ವೈಷ್ಣವ್ ತೇಜ್ ಮತ್ತು ನಿರ್ದೇಶಕ ವಿ. ಐ. ಆನಂದ್ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಈ ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಇದೆ. ಪ್ರತಿಷ್ಠಿತ ಪ್ರೈಮ್‌ಶೋ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಾಪಕರಾದ ಕೆ. ನಿರಂಜನ್ ರೆಡ್ಡಿ ಮತ್ತು ಚೈತನ್ಯ ರೆಡ್ಡಿ ಈ ಚಿತ್ರಕ್ಕೆ ಅದ್ದೂರಿಯಾಗಿ ಬಂಡವಾಳ ಹೂಡುತ್ತಿದ್ದಾರೆ.

ಈಗಾಗಲೇ ‘ಹನು-ಮಾನ್’ ಮೂಲಕ ದೊಡ್ಡ ಗೆಲುವು ಕಂಡಿರುವ ಈ ನಿರ್ಮಾಪಕರು, ಪ್ರಸ್ತುತ ಸಾಯಿ ದುರ್ಗಾ ತೇಜ್ ಅವರೊಂದಿಗೆ 'SYG' ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರೊಂದಿಗೆ 'ಬಿಲ್ಲಾ ರಂಗ ಬಾಷಾ' ಚಿತ್ರಗಳನ್ನು ನಿರ್ಮಿಸುತ್ತಿದೆ. ಇದೀಗ ಪ್ರೇಕ್ಷಕರಿಗೆ ಹೊಸ ಅನುಭವ ನೀಡುವ ಉದ್ದೇಶದೊಂದಿಗೆ ಮತ್ತೊಂದು ದೊಡ್ಡ ಸಿನಿಮಾ ಸಾಹಸಕ್ಕೆ ಕೈಹಾಕಿದ್ದಾರೆ. ಸದ್ಯ ಶೀರ್ಷಿಕೆ ಹಾಗೂ ಫಸ್ಟ್ ಲುಕ್ ಪೋಸ್ಟರ್ ಘೋಷಣೆಯ ಮೂಲಕ ಸಿನಿಪ್ರಿಯರ ಗಮನ ಸೆಳೆದಿರುವ ಚಿತ್ರತಂಡ, ಸಿನಿಮಾದಲ್ಲಿ ತಾರಾಗಣ ಹಾಗೂ ತಾಂತ್ರಿಕ ವರ್ಗದ ಕುರಿತಾದ ಅಪ್‌ಡೇಟ್‌ಗಳನ್ನು ಶೀಘ್ರದಲ್ಲೇ ಹಂಚಿಕೊಳ್ಳಲಿದೆ.