ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಎಂ. ಎಸ್. ಸುಬ್ಬುಲಕ್ಷ್ಮಿ ಬಯೋಪಿಕ್‌ಗೆ ಚೆನ್ನೈನಲ್ಲಿ ಅದ್ದೂರಿ ಚಾಲನೆ; ನಟಿ ರಶ್ಮಿಕಾ ಮಂದಣ್ಣಗೆ ಕಮಲ್ ಹಾಸನ್ ಕೊಟ್ಟ ಸಲಹೆ ಏನು?

MS Subbulakshmi biopic: ‘ಭಾರತ ರತ್ನ’ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಬಯೋಪಿಕ್‌ ‘ಎಂಎಸ್: ಎ ಲೆಗಸಿ ಆನ್ ಸ್ಕ್ರೀನ್’ ಚಿತ್ರಕ್ಕೆ ಚೆನ್ನೈನಲ್ಲಿ ಅದ್ಧೂರಿ ಚಾಲನೆ ದೊರೆತಿದೆ. ನಟಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಆಯ್ಕೆಯಾಗಿದ್ದು, ಈ ಚಿತ್ರಕ್ಕೆ ಗೌತಮ್ ತಿನ್ನನೂರಿ ನಿರ್ದೇಶನ, ಅನಿರುದ್ಧ್ ಸಂಗೀತ ಮತ್ತು ರಾಕ್‌ಲೈನ್-ಅಲ್ಲು ಅರವಿಂದ್ ನಿರ್ಮಾಣವಿದೆ.

ರಶ್ಮಿಕಾ ನಟನೆಯ MS Subbulakshmi ಬಯೋಪಿಕ್‌ಗೆ ಚೆನ್ನೈನಲ್ಲಿ ಚಾಲನೆ

-

Avinash GR
Avinash GR Sep 17, 2026 8:41 AM

ಗಾನಕೋಗಿಲೆ, ‘ಭಾರತ ರತ್ನ’ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಜೀವನಗಾಥೆ ಇದೀಗ ಬೆಳ್ಳಿಪರದೆಯ ಮೇಲೆ ಅನಾವರಣಗೊಳ್ಳಲು ಸಜ್ಜಾಗಿದೆ. ‘ಎಂಎಸ್: ಎ ಲೆಗಸಿ ಆನ್ ಸ್ಕ್ರೀನ್’ (MS: A Legacy On Screen) ಹೆಸರಿನ ಈ ಬಹುನಿರೀಕ್ಷಿತ ಬಯೋಪಿಕ್‌ನಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರು ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ.

ಎಂ.ಎಸ್. ಸುಬ್ಬುಲಕ್ಷ್ಮಿ ಅವರ 110ನೇ ಜನ್ಮದಿನಾಚರಣೆಯ ವಿಶೇಷ ಸಂದರ್ಭದಲ್ಲಿ ಚೆನ್ನೈನಲ್ಲಿ ಆಯೋಜಿಸಲಾಗಿದ್ದ ಅದ್ಧೂರಿ ಸಮಾರಂಭದಲ್ಲಿ ಚಿತ್ರದ ಶೀರ್ಷಿಕೆ ಹಾಗೂ ಫಸ್ಟ್ ಲುಕ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿ, ಚಿತ್ರಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ಕಮಲ್‌ ಹಾಸನ್‌ ಕ್ಲ್ಯಾಪ್‌ ಮಾಡುತ್ತಿದ್ದಂತೆಯೇ, ವೇದಿಕೆ ಮೇಲೆ, ಎಂ. ಎಸ್‌ ಅಮ್ಮ ಹಾಡಿದ್ದ ಜನಪ್ರಿಯ ʻಭಾಗ್ಯದ ಲಕ್ಷ್ಮಿ ಬಾರಮ್ಮ ನಮ್ಮಮ್ಮ ನೀ ಸೌಭಾಗ್ಯದ ಲಕ್ಷ್ಮಿ ಬಾರಮ್ಮʼ ಗೀತೆಯನ್ನು ಹಾಡಲಾಯಿತು.

ಎಂ.ಎಸ್.‌ ಅಮ್ಮ ʻಪ್ಯಾನ್ ಇಂಡಿಯಾ ಲೇಡಿ ಸೂಪರ್‌ಸ್ಟಾರ್ʼ

ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಚಿತ್ರಕ್ಕೆ ಶುಭಕೋರಿದ ನಟ ಕಮಲ್ ಹಾಸನ್, ಎಂ.ಎಸ್. ಸುಬ್ಬುಲಕ್ಷ್ಮಿ ಅವರನ್ನು ‘ಪ್ಯಾನ್ ಇಂಡಿಯಾ ಲೇಡಿ ಸೂಪರ್‌ಸ್ಟಾರ್’ ಎಂದು ಬಣ್ಣಿಸಿದರು. ಮೈಕಲ್ ಜಾಕ್ಸನ್‌ರಂತಹ ಜಾಗತಿಕ ಐಕಾನ್ ಪಾತ್ರವನ್ನು ನಿರ್ವಹಿಸುವಾಗ ಒಬ್ಬ ನಟನ ಮೇಲೆ ಎಂತಹ ಒತ್ತಡವಿರುತ್ತದೆಯೋ, ಅಂತಹದ್ದೇ ಬೃಹತ್ ಜವಾಬ್ದಾರಿ ಮತ್ತು ಸವಾಲು ಈ ಪಾತ್ರದಲ್ಲೂ ಇದೆ ಎಂದು ಅಭಿಪ್ರಾಯಪಟ್ಟರು.

"ಎಂ.ಎಸ್. ಅಮ್ಮ ತಮ್ಮ ಸಂಗೀತದ ಮೂಲಕ ಇಡೀ ಭಾರತವನ್ನು ಒಗ್ಗೂಡಿಸಿದ ಶಕ್ತಿ. ಅಂದಿನ ಕಾಲದಲ್ಲೇ ಸಂಸ್ಕೃತ, ಹಿಂದಿ ಸೇರಿದಂತೆ ಹತ್ತು ಹಲವು ಭಾಷೆಗಳಲ್ಲಿ ಗಾನಸುಧೆ ಹರಿಸಿ ಜನಮನ ಗೆದ್ದ ಮಹಾನ್ ಚೇತನ. ಅಂತಹ ಐತಿಹಾಸಿಕ ಪಾತ್ರವನ್ನು ಒಪ್ಪಿಕೊಂಡ ರಶ್ಮಿಕಾ ಅವರ ಧೈರ್ಯ ಶ್ಲಾಘನೀಯ. ನಾನೆಷ್ಟೇ ವೇಷ ಬದಲಿಸಿದರೂ, ಗಡ್ಡ ತೆಗೆದರೂ ನನ್ನಿಂದ ಈ ಪಾತ್ರ ಮಾಡಲು ಸಾಧ್ಯವಿರಲಿಲ್ಲ. ಆದರೆ, ಎಂ.ಎಸ್. ಅಮ್ಮನಂತೆ ನಿಮ್ಮ ಕಣ್ಣುಗಳಲ್ಲಿ ಆ ಕರುಣೆಯ ಭಾವವನ್ನು ತಂದರೆ ನೀವು ಅರ್ಧ ಯುದ್ಧ ಗೆದ್ದಂತೆ" ಎಂದು ರಶ್ಮಿಕಾಗೆ ಕಮಲ್‌ ಹಾಸನ್ ಹುರಿದುಂಬಿಸಿದರು.

ಈ ಪಾತ್ರಕ್ಕೆ ನನ್ನ ಶಕ್ತಿಮೀರಿ ನ್ಯಾಯ ಒದಗಿಸುತ್ತೇನೆ

ಈ ಪಾತ್ರ ಸಿಕ್ಕಿರುವುದು ತಮ್ಮ ಸೌಭಾಗ್ಯ ಎಂದ ನಟಿ ರಶ್ಮಿಕಾ ಮಂದಣ್ಣ, "ಪ್ರಸ್ತುತ ನನ್ನ ಮನಸ್ಸಿನಲ್ಲಿ ಕೃತಜ್ಞತೆಯ ಭಾವವೊಂದೇ ತುಂಬಿದೆ. ಅಮ್ಮನವರ ಕಂಠದಲ್ಲಿ ಒಂದು ಅದ್ಭುತ ದೈವಿಕ ಶಕ್ತಿಯಿದೆ; ಅವರ ಹಾಡುಗಳನ್ನು ಕೇಳುವಾಗ ಸಾಕ್ಷಾತ್ ದೇವರ ಸನ್ನಿಧಿಯಲ್ಲೇ ಕುಳಿತಂತೆ ಭಾಸವಾಗುತ್ತದೆ. ಅಮ್ಮಾ, ನಿಮ್ಮ ಜೀವನದ ಒಂದು ಸಣ್ಣ ಭಾಗವಾಗಲು ನನ್ನನ್ನು ಆರಿಸಿಕೊಂಡಿದ್ದೀರಿ, ಇದಕ್ಕೆ ನಾನು ಸದಾ ಚಿರಋಣಿ. ನೀವು ಮೇಲಿನಿಂದ ಇದನ್ನು ನೋಡುವಾಗ ನಿಮ್ಮ ಮುಖದಲ್ಲಿ ಒಂದು ಸಣ್ಣ ನಗು ಮೂಡಿದರೂ ನನಗೆ ಅಷ್ಟೇ ಸಾಕು. ಈ ಪಾತ್ರಕ್ಕೆ ನನ್ನ ಶಕ್ತಿಮೀರಿ ನೂರಕ್ಕೆ ನೂರರಷ್ಟು ನ್ಯಾಯ ಒದಗಿಸುತ್ತೇನೆ" ಎಂದು ಭರವಸೆ ನೀಡಿದರು.

ʻಭಾರತ ರತ್ನʼ ಎಂ. ಎಸ್‌. ಸುಬ್ಬುಲಕ್ಷ್ಮೀ ಬಯೋಪಿಕ್‌ನಲ್ಲಿ ರಶ್ಮಿಕಾ ಮಂದಣ್ಣ ನಟನೆ; ನಿರ್ಮಾಣದ ಹೊಣೆಹೊತ್ತ ರಾಕ್‌ಲೈನ್ ವೆಂಕಟೇಶ್‌

ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜನೆ

ಈ ಐತಿಹಾಸಿಕ ಬಯೋಪಿಕ್‌ಗೆ ‘ಜೆರ್ಸಿ’ ಖ್ಯಾತಿಯ ಪ್ರತಿಭಾವಂತ ನಿರ್ದೇಶಕ ಗೌತಮ್ ತಿನ್ನನೂರಿ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಖ್ಯಾತ ಸಂಗೀತ ಮಾಂತ್ರಿಕ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜನೆಯ ಜವಾಬ್ದಾರಿ ಹೊತ್ತಿದ್ದಾರೆ. ಭಾರತೀಯ ಚಿತ್ರರಂಗದ ಹೆಸರಾಂತ ನಿರ್ಮಾಪಕರಾದ ಅಲ್ಲು ಅರವಿಂದ್, ರಾಕ್‌ಲೈನ್ ವೆಂಕಟೇಶ್ ಹಾಗೂ ಬನ್ನಿ ವಾಸು ಜಂಟಿಯಾಗಿ ಬೃಹತ್ ಕ್ಯಾನ್ವಾಸ್‌ನಲ್ಲಿ ಈ ಸಿನಿಮಾವನ್ನು ನಿರ್ಮಿಸುತ್ತಿದ್ದು, ಬಹುಭಾಷೆಗಳಲ್ಲಿ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಈ ಚಿತ್ರ ಮೂಡಿಬರಲಿದೆ.