Nandamuri Balakrishna: 'ಕನ್ನಡವೇ ಸತ್ಯ, ಕನ್ನಡವೇ ನಿತ್ಯ' ಎಂದು ಅಬ್ಬರಿಸಿದ ಬಾಲಯ್ಯ; ʻಅಖಂಡ 2ʼ ಸಿನಿಮಾಗೆ ಹೇಗಿದೆ ರೆಸ್ಪಾನ್ಸ್?
Akhanda 2 Release: ನಂದಮೂರಿ ಬಾಲಕೃಷ್ಣ ಅವರ 'ಅಖಂಡ 2' ಚಿತ್ರವು ಡಿಸೆಂಬರ್ 12 ರಂದು ತೆರೆಗೆ ಬಂದಿದೆ. ಚಿತ್ರಕ್ಕೆ ನಿರೀಕ್ಷಿತ ಪ್ರತಿಕ್ರಿಯೆ ಸಿಗದಿದ್ದರೂ, ಬಾಲಯ್ಯ ಹೇಳಿದ 'ಕನ್ನಡವೇ ಸತ್ಯ ಕನ್ನಡವೇ ನಿತ್ಯ' ಡೈಲಾಗ್ ಭಾರೀ ವೈರಲ್ ಆಗಿದೆ. "ಕರ್ನಾಟಕ ನನ್ನ ಸಹೋದರರ ಮನೆ" ಎಂದು ಹೇಳಿ ಶ್ರೀಕೃಷ್ಣದೇವರಾಯ ಮತ್ತು ಡಾ. ರಾಜ್‌ಕುಮಾರ್‌ರನ್ನು ನೆನೆದಿದ್ದಾರೆ ಬಾಲಯ್ಯ.
-
ತೆಲುಗು ನಟ ನಂದಮೂರಿ ಬಾಲಕೃಷ್ಣ ಅಭಿನಯದ ʻಅಖಂಡ 2ʼ ಸಿನಿಮಾವು ಕೊನೆಗೂ ತೆರೆಕಂಡಿದೆ. ಡಿಸೆಂಬರ್ 5ರಂದು ರಿಲೀಸ್ ಆಗಬೇಕಿದ್ದ ಈ ಚಿತ್ರವು ಕಾರಣಾಂತರಗಳಿಂದ ಡಿಸೆಂಬರ್ 12ರಂದು ಗ್ರ್ಯಾಂಡ್ ಆಗಿ ತೆರೆಕಂಡಿದೆ. ತೆಲುಗು ಜೊತೆಗೆ ಕನ್ನಡ, ತಮಿಳು, ಹಿಂದಿಯಲ್ಲೂ ಈ ಸಿನಿಮಾ ರಿಲೀಸ್ ಆಗಿದೆ. ಅಂದಹಾಗೆ, ಈ ಚಿತ್ರದಲ್ಲಿನ ಬಾಲಯ್ಯ ಅವರ ಒಂದು ಡೈಲಾಗ್ ಸಖತ್ ವೈರಲ್ ಆಗಿದೆ. ಅದು ಕೂಡ ಕನ್ನಡದ ಬಗ್ಗೆ ಇರುವ ಡೈಲಾಗ್!
ವಿಲನ್ ಮುಂದೆ ಬಾಲಯ್ಯ ಅಬ್ಬರ
ದೃಶ್ಯವೊಂದರಲ್ಲಿ ಖಳನೊಬ್ಬ, "ಏಯ್.. ನಾನು ಕನ್ನಡಿಗ ಕಣೋ. ನೋಡ್ತಿನಿ ನಿನ್ನ ಸಂಗತಿ.." ಎಂದು ಹೇಳುತ್ತಾನೆ. ಆಗ ಬಾಲಯ್ಯ, "ಕರ್ನಾಟಕ ನನ್ನ ಸಹೋದರರ ಮನೆ. ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಕನ್ನಡವೇ ಸತ್ಯ ಕನ್ನಡವೇ ನಿತ್ಯ.." ಎಂದು ಖಡಕ್ ಆಗಿ ಡೈಲಾಗ್ ಹೇಳಿರುವ ಬಾಲಯ್ಯ, ವಿಜಯನಗರ ಸಾಮ್ರಾಜ್ಯದ ಶ್ರೀಕೃಷ್ಣದೇವರಾಯ, ವರನಟ ಡಾ. ರಾಜ್‌ಕುಮಾರ್ ಅವರ ಬಗ್ಗೆಯೂ ಮಾತನಾಡಿದ್ದಾರೆ. ಬಳಿಕ ಖಳನಿಗೆ, "ನಿನಗೆ ಕನ್ನಡಿಗ ಎಂದು ಹೇಳಿಕೊಳ್ಳುವ ಅರ್ಹತೆ ಇಲ್ಲ ಎಂದು ಸರಿಯಾಗಿ ಗೂಸಾ ನೀಡುತ್ತಾರೆ.
ವೈರಲ್ ಆಯ್ತು ಈ ಡೈಲಾಗ್
ಸಖತ್ ಮಾಸ್ ಆಗಿ ಕನ್ನಡದ ಬಗ್ಗೆ ಬಾಲಯ್ಯ ಹೇಳಿರುವ ಈ ಡೈಲಾಗ್ ಇದೀಗ ಸಖತ್ ವೈರಲ್ ಆಗುತ್ತಿದೆ. ಅಸಲಿಗೆ, ಬಾಲಯ್ಯ ಅವರ ಕನ್ನಡದ ಉಚ್ಛಾರಣೆಯಲ್ಲಿ ಒಂದಷ್ಟು ತಪ್ಪುಗಳಿವೆ. ಆದರೂ, ಅವರು ಕನ್ನಡದ ಬಗ್ಗೆ ಹೇಳಿರುವ ಶೈಲಿ ಕನ್ನಡಿಗರಿಗೆ ಇಷ್ಟವಾಗಿದೆ. ಈ ಚಿತ್ರವು ಕನ್ನಡದಲ್ಲೂ ರಿಲೀಸ್ ಆಗಿರುವುದರಿಂದ ಫ್ಯಾನ್ಸ್ ಇನ್ನಷ್ಟ ಖುಷಿಯಿಂದ ಸಿನಿಮಾವನ್ನು ನೋಡುತ್ತಿದ್ದಾರೆ.
ವೈರಲ್ ಆಗುತ್ತಿರುವ ಬಾಲಯ್ಯ ಡೈಲಾಗ್
Karnataka is my brother's house ❤
— Hacker Chowdary ✌ᵀᴴᴬᴺᴰᴬⱽᴬᴹ (@Hacker_4_CBN) December 11, 2025
Intro lo Multi language Dialogue pure Balayya stuff 🔥🔥🔥
Kannada Hindi Telugu with nativity#Akhanda2 will be received by every region, let's see 👀 pic.twitter.com/Wa50ppnlPw
ಹೇಗಿದೆ ಬಾಲಯ್ಯ ಸಿನಿಮಾ?
ಈ ಹಿಂದೆ ತೆರೆಕಂಡಿದ್ದ ʻಅಖಂಡʼ ಸಿನಿಮಾವು ದೊಡ್ಡಮಟ್ಟದ ಗೆಲುವನ್ನು ಪಡೆದುಕೊಂಡಿತ್ತು. ಹಾಗಾಗಿ, ಅದರ ಸೀಕ್ವೆಲ್ ಮಾಡಿದ್ದಾರೆ ನಿರ್ದೇಶಕ ಬೊಯಪಾಟಿ ಶ್ರೀನು. ಆದರೆ ʻಅಖಂಡ 2ʼ ಚಿತ್ರಕ್ಕೆ ನಿರೀಕ್ಷಿತ ಪ್ರತಿಕ್ರಿಯೆ ಸಿಕ್ಕಿಲ್ಲ. ಎಲ್ಲಾ ಕಡೆ ಈ ಚಿತ್ರವು ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದ್ದರೂ, ಅದ್ಭುತ ಎಂಬಂತಹ ಮಾತುಗಳು ಕೇಳಿಬರುತ್ತಿಲ್ಲ. ಮೊದಲಾರ್ಧದಲ್ಲಿ ಉತ್ತಮವಾಗಿದೆಯಾದರೂ, ದ್ವಿತೀಯಾರ್ಧದಲ್ಲಿ ಚಿತ್ರವು ಹಾದಿ ತಪ್ಪಿದಂತೆ ಭಾಸವಾಗುತ್ತದೆ. ಬೊಯಪಾಟಿ ಶ್ರೀನು ಅವರು ಇನ್ನೂ ಉತ್ತಮವಾದ ಸ್ಕ್ರಿಪ್ಟ್ ಮಾಡಿಕೊಳ್ಳಬಹುದಿತ್ತು. ಬಾಲಯ್ಯ ಈಚೆಗೆ ಸಾಲು ಸಾಲು ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಆದರೆ ಇದೀಗ ʻಅಖಂಡ 2ʼ ನಿರಾಸೆ ಮೂಡಿಸಿದೆ ಎಂಬ ಮಾತುಗಳನ್ನು ಅಭಿಮಾನಿಗಳು ಹೇಳುತ್ತಿದ್ದಾರೆ.
ನಂದಮೂರಿ ಬಾಲಕೃಷ್ಣ ಅವರು ದ್ವಿಪಾತ್ರದಲ್ಲಿ ನಟಿಸಿದ್ದು, ಸಂಯುಕ್ತಾ ಮೆನನ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಆದಿ ಪಿನಿಸೆಟ್ಟಿ, ಹರ್ಷಾಲಿ ಮಲ್ಹೋತ್ರಾ, ಪೂರ್ಣ, ಕಬೀರ್ ದುಹಾನ್ ಸಿಂಗ್, ಶಾಶ್ವತ ಚಟರ್ಜಿ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದು, ಸಂಗೀತವನ್ನು ಎಸ್. ಥಮನ್ ನೀಡಿದ್ದಾರೆ. ರಾಮ್ ಆಚಂಟಾ, ಗೋಪಿಚಂದ್ ಆಚಂಟಾ ಅವರು ಈ ಚಿತ್ರಕ್ಕೆ ಹಣ ಹಾಕಿದ್ದಾರೆ.