NBK 111: ಶೂಟಿಂಗ್ ವೇಳೆ ನಂದಮೂರಿ ಬಾಲಕೃಷ್ಣ ಕಾಲಿಗೆ ಬಲವಾದ ಪೆಟ್ಟು: ಹೈದರಾಬಾದ್ ಆಸ್ಪತ್ರೆಗೆ ದಾಖಲು, ಹೆಲ್ತ್ ರಿಪೋರ್ಟ್ ಔಟ್!
ತೆಲುಗು ಚಿತ್ರರಂಗದ ಹಿರಿಯ ನಟ ನಂದಮೂರಿ ಬಾಲಕೃಷ್ಣ ಅವರು ‘NBK 111’ ಚಿತ್ರೀಕರಣದ ವೇಳೆ ಕಾಕಿನಾಡ ಪೋರ್ಟ್‌ನಲ್ಲಿ ಜಾರಿ ಬಿದ್ದು ಎಡ ಮೊಣಕಾಲಿಗೆ ಬಲವಾದ ಏಟು ಮಾಡಿಕೊಂಡಿದ್ದಾರೆ. ಹೈದರಾಬಾದ್‌ನ ಎಐಜಿ ಆಸ್ಪತ್ರೆಗೆ ದಾಖಲಾಗಿರುವ ಅವರ ಮೊಣಕಾಲಿನಲ್ಲಿ ರಕ್ತ ಹೆಪ್ಪುಗಟ್ಟಿದ್ದು, ಸ್ನಾಯುಗಳು ಹರಿದಿರುವ ಶಂಕೆ ವ್ಯಕ್ತವಾಗಿದೆ.
-
ತೆಲುಗು ಚಿತ್ರರಂಗದ ಹಿರಿಯ ನಟ ನಂದಮೂರಿ ಬಾಲಕೃಷ್ಣ ಅವರು ತಮ್ಮ ಮುಂಬರುವ 'NBK 111' ಸಿನಿಮಾದ ಚಿತ್ರೀಕರಣದ ವೇಳೆ ಆಕಸ್ಮಿಕವಾಗಿ ಜಾರಿ ಬಿದ್ದು, ಅವರ ಎಡ ಮೊಣಕಾಲಿಗೆ ಬಲವಾದ ಏಟು ಬಿದ್ದಿದೆ. ಸದ್ಯ ಅವರನ್ನು ಹೈದರಾಬಾದ್‌ನ ಗಚಿಬೌಲಿಯಲ್ಲಿರುವ ಆಸ್ಪತ್ರೆಗೆ (AIG Hospital) ದಾಖಲಿಸಲಾಗಿದ್ದು, ವೈದ್ಯರು ಅಧಿಕೃತ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದಾರೆ.
ಗೋಪಿಚಂದ್ ಮಲಿನೇನಿ ನಿರ್ದೇಶನದ ಈ ಸಿನಿಮಾದ ಬೃಹತ್ ಸಾಹಸ ದೃಶ್ಯವೊಂದನ್ನು ಕಾಕಿನಾಡ ಪೋರ್ಟ್ ಪ್ರದೇಶದಲ್ಲಿ ಚಿತ್ರೀಕರಿಸುವಾಗ ಈ ಅವಘಡ ಸಂಭವಿಸಿದೆ. ಗಾಯಗೊಂಡ ತಕ್ಷಣ ಬಾಲಕೃಷ್ಣ ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ತದನಂತರ ಹೆಚ್ಚಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆಗಾಗಿ ಅವರನ್ನು ಹೈದರಾಬಾದ್‌ಗೆ ಕರೆತರಲಾಯಿತು.
ವೈದ್ಯರು ನೀಡಿದ ಹೆಲ್ತ್ ರಿಪೋರ್ಟ್‌ನಲ್ಲಿ ಏನಿದೆ?
ಬಾಲಯ್ಯ ಅವರ ಆರೋಗ್ಯ ಸ್ಥಿತಿಯ ಕುರಿತು ಎಐಜಿ ಆಸ್ಪತ್ರೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. "ಪ್ರಾಥಮಿಕ ತಪಾಸಣೆಯಲ್ಲಿ ಬಾಲಕೃಷ್ಣ ಅವರ ಎಡ ಮೊಣಕಾಲಿನ ಸುತ್ತ ರಕ್ತ ಹೆಪ್ಪುಗಟ್ಟಿರುವುದು ಹಾಗೂ ಸ್ನಾಯುಗಳ ಸುತ್ತ ಉರಿಯೂತ ಕಂಡುಬಂದಿದೆ. ಗಾಯದ ತೀವ್ರತೆಯಿಂದಾಗಿ ಆ ಭಾಗದ ಸ್ನಾಯುಗಳು ಹರಿದಿರುವ ಸಾಧ್ಯತೆಯಿದೆ ಎಂದು ವೈದ್ಯರು ಶಂಕಿಸಿದ್ದಾರೆ. ಆರ್ಥೋಪೆಡಿಕ್ ತಜ್ಞರ ತಂಡದ ನೇತೃತ್ವದಲ್ಲಿ ವಿಸ್ತೃತ ಮಟ್ಟದ ಕ್ಲಿನಿಕಲ್ ಮತ್ತು ಡಯಾಗ್ನಾಸ್ಟಿಕ್ ತಪಾಸಣೆಗಳನ್ನು ನಡೆಸಲಾಗುತ್ತಿದೆ" ಎಂದು ಆಸ್ಪತ್ರೆ ಹೇಳಿದೆ.
ನಂದಮೂರಿ ಬಾಲಕೃಷ್ಣ ನಟನೆಯ 112ನೇ ಸಿನಿಮಾಗೆ ಮುಹೂರ್ತ; ಮಾವನ ಸಿನಿಮಾಗೆ ಅಳಿಯನಿಂದಲೇ ಕ್ಲ್ಯಾಪ್!
ಬಾಲಯ್ಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ
"ಬಾಲಕೃಷ್ಣ ಅವರ ಹಳೆಯ ಹೆಲ್ತ್ ರೆಕಾರ್ಡ್‌ಗಳನ್ನು ಪರಿಶೀಲಿಸಿ 'ಮಲ್ಟಿಡಿಸಿಪ್ಲಿನರಿ' ತಜ್ಞರ ತಂಡ ಚಿಕಿತ್ಸೆ ನೀಡುತ್ತಿದೆ. ಪ್ರಸ್ತುತ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಎಲ್ಲಾ ವೈದ್ಯಕೀಯ ಪರೀಕ್ಷೆಗಳು ಪೂರ್ಣಗೊಂಡ ನಂತರ ಮುಂದಿನ ಚಿಕಿತ್ಸಾ ಕ್ರಮಗಳನ್ನು ನಿರ್ಧರಿಸಲಾಗುವುದು ಮತ್ತು ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ಅಧಿಕೃತವಾಗಿ ಪ್ರಕಟಿಸಲಾಗುವುದು" ಎಂದು ಆಸ್ಪತ್ರೆ ತಿಳಿಸಿದೆ.
ಸದ್ಯ ನಂದಮೂರಿ ಬಾಲಕೃಷ್ಣ ಎರಡು ಸಿನಿಮಾಗಳನ್ನು ಘೋಷಣೆ ಮಾಡಿದ್ದಾರೆ. ಗೋಪಿಚಂದ್ ಮಲಿನೇನಿ ಜೊತೆಗಿನ ಸಿನಿಮಾದ ಶೂಟಿಂಗ್ ಬಿರುಸಿನಿಂದ ನಡೆಯುತ್ತಿದ್ದರೆ, ಅತ್ತ ಕೊರಟಾಲ ಶಿವ ಜೊತೆಗೂ ಒಂದು ಸಿನಿಮಾವನ್ನು ಬಾಲಯ್ಯ ಒಪ್ಪಿಕೊಂಡಿದ್ದಾರೆ. ಅದರ ಕೆಲಸಗಳು ಕೂಡ ಆರಂಭವಾಗಿವೆ. ಸದ್ಯ ಬಾಲಯ್ಯಗೆ ಏಟಾಗಿರುವುದರಿಂದ, ಕೆಲ ವಾರಗಳ ಕಾಲ ಚಿತ್ರೀಕರಣಕ್ಕೆ ತಡೆಯುಂಟಾಗಲಿದೆ.