ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬಾಕ್ಸ್ ಆಫೀಸ್‌ನಲ್ಲಿ 350 ಕೋಟಿ ರೂ. ಗಡಿ ತಲುಪಿದ ‘ಹನುಮಾನ್ ಅಂಶ್’;‌ ಈ ಚಿತ್ರವನ್ನು ಬರೋಬ್ಬರಿ 15 ಬಾರಿ ನೋಡಿ ಭಾವುಕರಾದ ನೀಮ್ ಕರೋಲಿ ಬಾಬಾ ಪುತ್ರಿ!

ನೀಮ್ ಕರೋಲಿ ಬಾಬಾ ಜೀವನಾಧರಿತ ʻಹನುಮಾನ್ ಅಂಶ್ʼ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ 350 ಕೋಟಿ ರೂ. ಗಡಿಯತ್ತ ಮುನ್ನುಗ್ಗುತ್ತಿದ್ದು, ಭಾವನಾತ್ಮಕವಾಗಿಯೂ ಹೊಸ ದಾಖಲೆ ಬರೆದಿದೆ. ನೀಮ್ ಕರೋಲಿ ಬಾಬಾ ಅವರ ಪುತ್ರಿ ಗಿರಿಜಾ ಜಿ ಚಿತ್ರವನ್ನು 15 ಬಾರಿ ವೀಕ್ಷಿಸಿ ಭಾವುಕರಾಗಿದ್ದಾರೆ.

ʻಹನುಮಾನ್ ಅಂಶ್ʼ ಚಿತ್ರವನ್ನ 15 ಬಾರಿ ನೋಡಿದ ನೀಮ್ ಕರೋಲಿ ಬಾಬಾ ಪುತ್ರಿ

-

Avinash GR
Avinash GR Sep 21, 2026 12:56 PM

ಆಧ್ಯಾತ್ಮಿಕ ಸಂತ ನೀಮ್ ಕರೋಲಿ ಬಾಬಾ ಅವರ ಜೀವನ ಹಾಗೂ ಪಯಣವನ್ನು ಆಧರಿಸಿ ತೆರೆಕಂಡಿರುವ ‘ಹನುಮಾನ್ ಅಂಶ’ ಸಿನಿಮಾ ಕೇವಲ ಚಿತ್ರಮಂದಿರಗಳಲ್ಲಿ ದಾಖಲೆಯ ಕಲೆಕ್ಷನ್ ಮಾಡುತ್ತಿರುವುದು ಮಾತ್ರವಲ್ಲದೆ, ಭಾವನಾತ್ಮಕವಾಗಿಯೂ ಹೊಸ ಅಲೆ ಸೃಷ್ಟಿಸಿದೆ. ನೀಮ್ ಕರೋಲಿ ಬಾಬಾ ಅವರ ಪುತ್ರಿ, ‘ಅಮ್ಮಾ ಜಿ’ ಎಂದೇ ಖ್ಯಾತರಾಗಿರುವ ಗಿರಿಜಾ ಜಿ ಅವರು ಈ ಚಿತ್ರವನ್ನು ಬರೋಬ್ಬರಿ 15 ಬಾರಿ ವೀಕ್ಷಿಸಿದ್ದು, ಪ್ರತಿ ಬಾರಿಯೂ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ ಎಂಬ ವಿಚಾರವನ್ನು ಚಿತ್ರದ ನಿರ್ಮಾಪಕಿ ರಾಗಿಣಿ ಸೋನಾ ಹಂಚಿಕೊಂಡಿದ್ದಾರೆ.

15 ಬಾರಿ ವೀಕ್ಷಿಸಿ ಕಣ್ಣೀರಿಟ್ಟ ಗಿರಿಜಾ

ಚಿತ್ರದ ಬಿಡುಗಡೆಗೂ ಮುನ್ನ ನಿರ್ದೇಶಕ ವಿಶಾಲ್ ಚತುರ್ವೇದಿ ಹಾಗೂ ನಿರ್ಮಾಪಕಿ ರಾಗಿಣಿ ಸೋನಾ ಅವರು ಬಾಬಾ ಅವರ ಕುಟುಂಬದ ಆಶೀರ್ವಾದ ಪಡೆಯಲು ಬಯಸಿದ್ದರು. ಈ ವೇಳೆ ದೂರವಾಣಿ ಮೂಲಕ ಗಿರಿಜಾ ಜಿ ಅವರೊಂದಿಗೆ ಮಾತುಕತೆ ನಡೆಸಲಾಯಿತು. ಸಿನಿಮಾ ನೋಡುವಿರಾ ಎಂದು ಕೇಳಿದಾಗ, “ಸರಿಯಾದ ಸಮಯ ಬಂದಾಗ ಖಂಡಿತ ನೋಡುತ್ತೇನೆ” ಎಂದಿದ್ದ ಗಿರಿಜಾ ಜಿ, ನಂತರ ಚಿತ್ರವನ್ನು ನೋಡಿ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ, 15 ಬಾರಿ ವೀಕ್ಷಿಸಿ ಕಣ್ಣೀರಿಟ್ಟಿದ್ದಾರೆ. ಗಿರಿಜಾ ಜಿ ಅವರ ಈ ಸ್ಪಂದನೆ ತಮ್ಮ ಇಡೀ ತಂಡಕ್ಕೆ ಸಿಕ್ಕ ಅತ್ಯಂತ ದೊಡ್ಡ ಗೌರವ ಹಾಗೂ ಪ್ರಶಸ್ತಿ ಎಂದು ನಿರ್ಮಾಪಕಿ ರಾಗಿಣಿ ಸಂತಸ ವ್ಯಕ್ತಪಡಿಸಿದ್ದಾರೆ.

ಅಷ್ಟೇ ಅಲ್ಲದೆ, ಗಿರಿಜಾ ಜಿ ಅವರೊಂದಿಗಿನ ಮೊದಲ ಮಾತುಕತೆ ತಮ್ಮ ಜೀವನವನ್ನೇ ಬದಲಿಸಿದ ಅಪರೂಪದ ಅನುಭವ ಎಂದು ರಾಗಿಣಿ ಸ್ಮರಿಸಿದ್ದಾರೆ. ತಮ್ಮ ತಂದೆ ಹಿಂದೆ ನೈನಿತಾಲ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ರಾಗಿಣಿ ಹೇಳಿದ ತಕ್ಷಣವೇ, ಗಿರಿಜಾ ಜಿ ಅವರು ರಾಗಿಣಿ ಅವರ ತಂದೆಯನ್ನು ಗುರುತಿಸಿದ್ದಲ್ಲದೆ, ಸುಮಾರು 50 ವರ್ಷಗಳ ಹಿಂದೆ ಆಗ್ರಾದಲ್ಲಿದ್ದ ಅವರ ಮನೆಯ ನಿಖರವಾದ ವಿಳಾಸ ಹಾಗೂ ಹಿರಿಯ ಸಹೋದರನ ಹೆಸರನ್ನೂ ನಿಖರವಾಗಿ ತಿಳಿಸಿದ್ದರು. “ನನಗೆ ಎಲ್ಲವೂ ಕಣ್ಣಮುಂದೆ ಜೀವಂತವಾಗಿ ಸ್ಪಷ್ಟವಾಗಿ ಕಾಣಿಸುತ್ತಿದೆ” ಎಂದು ಗಿರಿಜಾ ಜಿ ಹೇಳಿದ ಕ್ಷಣ ರಾಗಿಣಿ ತೀವ್ರ ಭಾವುಕರಾಗಿದ್ದರು. ಚಿತ್ರ ಮಾಡುವ ಮುನ್ನ ಬಾಬಾ ಅವರ ಮಗಳು ಜೀವಂತವಾಗಿದ್ದಾರೆ ಎಂಬ ವಿಚಾರವೇ ತಿಳಿದಿರದ ತಂಡಕ್ಕೆ, ಈ ಘಟನೆ ಬಾಬಾ ಅವರೇ ತಮ್ಮನ್ನು ಈ ಚಿತ್ರಕ್ಕಾಗಿ ಆಯ್ಕೆ ಮಾಡಿದ್ದಾರೆಂಬ ದೈವಿಕ ನಂಬಿಕೆಯನ್ನು ಮೂಡಿಸಿತಂತೆ.

Hanuman Ansh : 100 ಕೋಟಿ ರೂ‌ OTT ಒಪ್ಪಂದ ಬಗ್ಗೆ ʻಹನುಮಾನ್ ಅಂಶ್’ ತಂಡ ಹೇಳಿದ್ದೇನು?

ಎಲ್ಲರನ್ನೂ ಪ್ರೀತಿಸಿ, ಎಲ್ಲರಿಗೂ ಅನ್ನ ನೀಡಿ

ನಂತರ ಖುದ್ದಾಗಿ ಗಿರಿಜಾ ಜಿ ಮತ್ತು ಬಾಬಾ ಅವರ ಮೊಮ್ಮಗ ಧನಂಜನ್ ಜಿ ಅವರನ್ನು ಭೇಟಿಯಾದ ಚಿತ್ರತಂಡ ಅವರ ಆಶೀರ್ವಾದ ಪಡೆಯಿತು. ಬಾಬಾ ಅವರ “ಎಲ್ಲರನ್ನೂ ಪ್ರೀತಿಸಿ, ಎಲ್ಲರಿಗೂ ಅನ್ನ ನೀಡಿ” ಎಂಬ ಬೋಧನೆಯನ್ನು ಇಂದಿಗೂ ಚಾಚೂತಪ್ಪದೆ ಪಾಲಿಸುತ್ತಿರುವ ಗಿರಿಜಾ ಜಿ ಅವರಲ್ಲಿ ತಮಗೆ ಸ್ವತಃ ನೀಮ್ ಕರೋಲಿ ಬಾಬಾ ಅವರ ಪ್ರತಿರೂಪವೇ ಕಂಡಿತು ಎಂದು ರಾಗಿಣಿ ಹೇಳಿದ್ದಾರೆ.‌

350 ಕೋಟಿ ರೂ. ಗಡಿಯಲ್ಲಿ ʻಹನುಮಾನ್‌ ಅಂಶ್‌ʼ

ಇನ್ನು ಗಲ್ಲಾಪೆಟ್ಟಿಗೆಯ ವರದಿ ಪ್ರಕಾರ, ವಿಶಾಲ್ ಚತುರ್ವೇದಿ ನಿರ್ದೇಶನದ ‘ಹನುಮಾನ್ ಅಂಶ್’ ಜಾಗತಿಕವಾಗಿ ಈಗಾಗಲೇ 347.05 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದ್ದು, ಸಲೀಸಾಗಿ 350 ಕೋಟಿ ರೂ. ಗಡಿಯತ್ತ ಮುನ್ನುಗ್ಗುತ್ತಿದೆ. ಆದಾಗ್ಯೂ, ಬಾಕ್ಸ್ ಆಫೀಸ್ ಗಳಿಕೆಗಿಂತ ಬಾಬಾ ಅವರ ಕುಟುಂಬ ನೀಡಿದ ಪ್ರೀತಿ ಹಾಗೂ ಆಶೀರ್ವಾದವೇ ಚಿತ್ರಕ್ಕೆ ಸಂದ ನಿಜವಾದ ಯಶಸ್ಸು ಎಂದು ಚಿತ್ರತಂಡ ಹೆಮ್ಮೆಯಿಂದ ಹೇಳಿಕೊಂಡಿದೆ.