Jailer 2: ʻಕೆಡಿʼ ಬಳಿಕ ಪುನಃ ದಕ್ಷಿಣ ಭಾರತದತ್ತ ಮುಖ ಮಾಡಿದ ನಟಿ ನೋರಾ ಫತೇಹಿ! ರಜನಿಕಾಂತ್ ಸಿನಿಮಾದಲ್ಲಿ ʻಬಿಂದಾಸ್ʼ ಡ್ಯಾನ್ಸ್
Jailer 2 Movie: ರಜನಿಕಾಂತ್-ನೆಲ್ಸನ್ ಕಾಂಬಿನೇಷನ್‌ನ ಬಹುನಿರೀಕ್ಷಿತ ʻಜೈಲರ್ 2ʼ ಸಿನಿಮಾದ ಮೂಲಕ ಬಾಲಿವುಡ್ ಬೆಡಗಿ ನೋರಾ ಫತೇಹಿ ಕಾಲಿವುಡ್ ಅಂಗಳಕ್ಕೆ ಕಾಲಿಟ್ಟಿದ್ದಾರೆ. ಕನ್ನಡದ ‘ಕೆಡಿ’ ವಿವಾದದ ನಂತರ ಇದೀಗ ತಮಿಳಿನ ಈ ‘ಬಿಂದಾಸ್’ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತದ ಈ ಹಾಡು ಬಿಡುಗಡೆಯಾಗಿ ಧೂಳೆಬ್ಬಿಸುತ್ತಿದೆ.
-
ಬಾಲಿವುಡ್ ಬ್ಯೂಟಿ ನೋರಾ ಫತೇಹಿ ಮತ್ತೊಮ್ಮೆ ದಕ್ಷಿಣ ಭಾರತದ ಚಿತ್ರರಂಗದತ್ತ ಮುಖ ಮಾಡಿದ್ದಾರೆ. ಇತ್ತೀಚೆಗಷ್ಟೇ ಕನ್ನಡದ ‘ಕೆಡಿ’ ಸಿನಿಮಾದ ಹಾಡೊಂದರ ವಿಚಾರವಾಗಿ ವಿವಾದಕ್ಕೀಡಾಗಿ, ಆ ಕುರಿತು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದ ಅವರು ಇದೀಗ ಕಾಲಿವುಡ್ ಅಂಗಳಕ್ಕೆ ಪ್ರವೇಶಿಸಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ ಜೋಡಿಯ ಬ್ಲಾಕ್‌ಬಸ್ಟರ್ ಚಿತ್ರ ‘ಜೈಲರ್’ನ ಮುಂದುವರಿದ ಭಾಗ ‘ಜೈಲರ್ 2’ ತೆರೆಗೆ ಸಿದ್ಧವಾಗುತ್ತಿದ್ದು, ಈ ಬಹುನಿರೀಕ್ಷಿತ ಚಿತ್ರದ ವಿಶೇಷ ಹಾಡೊಂದಕ್ಕೆ ನೋರಾ ಸೊಂಟ ಬಳುಕಿಸಿದ್ದಾರೆ.
ಬಿಂದಾಸ್ ಹಾಡಿನಲ್ಲಿ ನೋರಾ
ಚಿತ್ರೀಕರಣ ಸಂಪೂರ್ಣ ಮುಗಿಸಿಕೊಂಡಿರುವ ಈ ಚಿತ್ರವು ದಸರಾ ಹಬ್ಬದ ಸಂಭ್ರಮಕ್ಕೆ ಅಕ್ಟೋಬರ್ 15ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಈಗಾಗಲೇ ಬಿಡುಗಡೆಯಾಗಿರುವ 'ಅಲಾ ಬೋಲೇಲೋ', 'ಒನ್ ಸನ್ ಒನ್ ಮೂನ್' ಮತ್ತು 'ಒನ್ ನೇಮ್' ಹಾಡುಗಳು ಸದ್ದು ಮಾಡುತ್ತಿರುವ ಬೆನ್ನಲ್ಲೇ, ಇದೀಗ ಚಿತ್ರತಂಡ ನೋರಾ ಫತೇಹಿ ಹಾಕಿರುವ ‘ಬಿಂದಾಸ್’ ಎಂಬ ಹಾಡಿನ ಲಿರಿಕಲ್ ವಿಡಿಯೋವನ್ನು ರಿಲೀಸ್ ಮಾಡಿದೆ.
ಅನಿರುದ್ಧ್ ಸಂಗೀತ ಸಂಯೋಜನೆ
ಹಲವು ಭಾಷೆಗಳ ಚಿತ್ರರಂಗದಲ್ಲಿ ಸ್ಪೆಷಲ್ ಹಾಡುಗಳ ಮೂಲಕವೇ ಅಪಾರ ಅಭಿಮಾನಿ ಬಳಗ ಸಂಪಾದಿಸಿರುವ ನೋರಾ ಫತೇಹಿ ಅವರಿಗೆ ಇದು ತಮಿಳು ಚಿತ್ರರಂಗಕ್ಕೆ ಚೊಚ್ಚಲ ಪ್ರವೇಶವಾಗಿದೆ. ಸಂಗೀತ ಮಾಂತ್ರಿಕ ಅನಿರುದ್ಧ್ ರವಿಚಂದರ್ ಸಂಯೋಜಿಸಿರುವ ಈ ಹಾಡಿಗೆ ಗಾಯಕಿ ದೀಪ್ತಿ ಸುರೇಶ್ ಜೊತೆಗೂಡಿ ಅನಿರುದ್ಧ್ ಅವರೇ ಧ್ವನಿಯಾಗಿದ್ದಾರೆ. ಸೂಪರ್ ಸುಬ್ಬು ಸಾಹಿತ್ಯ ರಚಿಸಿದ್ದು, ಖ್ಯಾತ ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ಕೊರಿಯೋಗ್ರಫಿ ಮಾಡಿದ್ದಾರೆ.
ಹಾಡಿನಲ್ಲಿ ನೋರಾ ತಮ್ಮ ಎಂದಿನ ಸಿಗ್ನೇಚರ್ ಶೈಲಿಯಲ್ಲಿ ಪೂಲ್ ಟೇಬಲ್ ಮೇಲೆ ಭರ್ಜರಿ ಹೆಜ್ಜೆ ಹಾಕಿದ್ದು, ಮುಖವಾಡ ಧರಿಸಿದ ಹಿನ್ನೆಲೆ ನೃತ್ಯಗಾರರು ಹಾಗೂ ಸೂಟ್-ಹ್ಯಾಟ್ ಧರಿಸಿದ ಇಬ್ಬರು ಬಾಲಕರು ಹಾಡಿನ ಆಕರ್ಷಣೆ ಹೆಚ್ಚಿಸಿದ್ದಾರೆ. 'ಚೋರಿ ಹೋಗಯಿ...' ಎಂಬ ಹಿಂದಿ ಪದಗಳ ಜುಗಲ್‌ಬಂದಿಯೊಂದಿಗೆ ಮೂಡಿಬಂದಿರುವ ಈ ಹಾಡಿನಲ್ಲಿ ರಜನಿಕಾಂತ್ ಅವರ ಎಂದಿನ ಸ್ಟೈಲಿಶ್ ಮ್ಯಾನರಿಸಂ ಕೂಡ ಅಭಿಮಾನಿಗಳನ್ನು ಸೆಳೆದಿದೆ.
ಅಂದು ಕಾವಾಲಾ, ಇಂದು ಬಿಂದಾಸ್
2023ರಲ್ಲಿ ತೆರೆಕಂಡಿದ್ದ ‘ಜೈಲರ್’ ಚಿತ್ರದಲ್ಲಿ ತಮನ್ನಾ ಭಾಟಿಯಾ ಅವರ 'ಕಾವಾಲಾ' ಹಾಡು ಸೃಷ್ಟಿಸಿದ್ದ ಕ್ರೇಜ್ ಮಾದರಿಯಲ್ಲೇ, ಈ ‘ಬಿಂದಾಸ್’ ಹಾಡು ಕೂಡ ಹೊಸ ಸಂಚಲನ ಮೂಡಿಸುವ ಮುನ್ಸೂಚನೆ ನೀಡಿದೆ. ನೆಲ್ಸನ್ ನಿರ್ದೇಶನದ ಈ ಚಿತ್ರವು ಒಟ್ಟು 12 ಹಾಡುಗಳ ಬೃಹತ್ ಆಲ್ಬಮ್ ಹೊಂದಿದ್ದು, ಅದರಲ್ಲಿ ನೋರಾ ಮತ್ತು ರಜನಿಕಾಂತ್ ಜೋಡಿಯ ಈ ʻಬಿಂದಾಸ್ʼ ಸಾಂಗ್ ಪ್ರಮುಖ ಹೈಲೈಟ್ ಆಗಿ ಪ್ರೇಕ್ಷಕರನ್ನು ರಂಜಿಸಲಿದೆ ಎಂಬ ನಿರೀಕ್ಷೆ ಚಿತ್ರತಂಡದ್ದು.