ತೆಲುಗು ನಟ ಜೂನಿಯರ್ ಎನ್ ಟಿ ಆರ್ ಅವರ ಮುಂದಿನ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಯಾಕೆಂದರೆ, ಹಿಂದಿನ ದೇವರ ಸಿನಿಮಾ ಹೇಳಿಕೊಳ್ಳುವಂತಹ ಗೆಲುವನ್ನು ನೀಡಿಲ್ಲ. ಹಾಗಾಗಿ, ಈ ಹೊಸ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಅಲ್ಲದೆ, ಈ ಚಿತ್ರವನ್ನು ಪ್ರಶಾಂತ್ ನೀಲ್ ಅವರು ನಿರ್ದೇಶನ ಮಾಡುತ್ತಿರುವುದು ನಿರೀಕ್ಷೆ ದುಪ್ಪಟ್ಟಾಗಲು ಕಾರಣವಾಗಿದೆ. ಆದರೆ ಈ ಸಿನಿಮಾದ ಬಗ್ಗೆ ಒಂದಿಲ್ಲೊಂದು ವದಂತಿಗಳು ಹರಿದಾಡುತ್ತಲೇ ಇರುತ್ತವೆ.
ಈ ಪೀರಿಯಾಡಿಕ್ ಆ್ಯಕ್ಷನ್ ಸಿನಿಮಾಗೆ 'ಡ್ರ್ಯಾಗನ್' ಎಂಬ ಶೀರ್ಷಿಕೆಯನ್ನು ಫೈನಲ್ ಮಾಡಲಾಗಿದೆ ಎಂಬ ಸುದ್ದಿಗಳಿದ್ದರೂ, ಅದಿನ್ನೂ ನಿಜವಾಗಿಲ್ಲ. ಇದರ ಮಧ್ಯೆ ಈ ಸಿನಿಮಾದ ಶೂಟಿಂಗ್ ಮತ್ತು ಎನ್‌ಟಿಆರ್ ಲುಕ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅನೇಕ ವದಂತಿಗಳು ಹರಿದಾಡುತ್ತಿವೆ. ಇದಕ್ಕೆ ಇತ್ತೀಚೆಗಷ್ಟೇ ಚಿತ್ರತಂಡ ಸ್ಪಷ್ಟನೆ ನೀಡುವ ಮೂಲಕ ಖಡಕ್ ಆಗಿಯೇ ಕೌಂಟರ್ ನೀಡಿದೆ.
Rukmini Vasanth: ಜೂ. ಎನ್‌ಟಿಆರ್-ಪ್ರಶಾಂತ್ ನೀಲ್ ಚಿತ್ರಕ್ಕೆ ರುಕ್ಮಿಣಿ ವಸಂತ್ ನಾಯಕಿ; ನಿರ್ಮಾಪಕನಿಂದ ಘೋಷಣೆ
ಎನ್‌ಟಿಆರ್ ಲುಕ್ ಬಗ್ಗೆ ವದಂತಿಗಳು
ಸೋಶಿಯಲ್ ಮೀಡಿಯಾದಲ್ಲಿ ಈ ಸಿನಿಮಾದ ಬಗ್ಗೆ ನಾನಾ ಊಹಾಪೋಹಗಳು ಶುರುವಾಗಿದ್ದವು. ಮುಖ್ಯವಾಗಿ ಈ ಸಿನಿಮಾಗಾಗಿ ಎನ್‌ಟಿಆರ್ ಮಾಡಿಕೊಂಡಿರುವ ಹೊಸ ಲುಕ್ ನಿರ್ದೇಶಕ ಪ್ರಶಾಂತ್ ನೀಲ್‌ಗೆ ಇಷ್ಟವಾಗಿಲ್ಲ ಎಂಬುದು ಲೇಟೆಸ್ಟ್ ವದಂತಿ. ಈ ಲುಕ್ ಗೊಂದಲದಿಂದಲೇ ಶೂಟಿಂಗ್ ಅನ್ನೇ ರದ್ದು ಮಾಡಲಾಗಿದೆ. ಬರೀ ರದ್ದು ಮಾತ್ರವಲ್ಲ, ಇಡೀ ಪ್ರಾಜೆಕ್ಟ್ ಅನ್ನೇ ಸಂಪೂರ್ಣವಾಗಿ ಮುಂದೂಡಲಾಗಿದೆ. ಸಿನಿಮಾ ಚಿತ್ರೀಕರಣವೇ ನಿಂತುಹೋಗಿದೆ ಎಂಬೆಲ್ಲಾ ಮಾತುಗಳು ಕಳೆದ ಮೂರ್ನಾಲ್ಕು ದಿನಗಳಿಂದ ಹರಿದಾಡಿವೆ.
ಈ ಸುದ್ದಿಗಳೆಲ್ಲಾ ಸುಳ್ಳು
ಆದರೆ ಸುದ್ದಿಯಲ್ಲಿ ಯಾವುದೇ ಸತ್ಯ ಇಲ್ಲ ಎಂದು ನಿರ್ಮಾಣ ಸಂಸ್ಥೆಗಳಾದ ಮೈತ್ರಿ ಮೂವಿ ಮೇಕರ್ಸ್ ಮತ್ತು ಎನ್ ಟಿ ಆರ್ ಆರ್ಟ್ಸ್ ಸ್ಪಷ್ಟಪಡಿಸಿವೆ. "ನಮ್ಮ ಸಿನಿಮಾದಲ್ಲಿ ನಾಯಕನ ಲುಕ್ ಅಥವಾ ಶೆಡ್ಯೂಲ್ ರದ್ದತಿ ಬಗ್ಗೆ ಬರುತ್ತಿರುವ ಸುದ್ದಿಗಳೆಲ್ಲವೂ ಸುಳ್ಳು. ಸಿನಿಮಾದ ಕೆಲಸಗಳು ಮೊದಲಿನ ಯೋಜನೆಯಂತೆಯೇ ವೇಗವಾಗಿ ನಡೆಯುತ್ತಿವೆ. ಪ್ರಸ್ತುತ ನಡೆಯುತ್ತಿರುವ ವಿರಾಮವು ಕೇವಲ ಒಂದು ಶೆಡ್ಯೂಲ್‌ನಿಂದ ಮತ್ತೊಂದು ಶೆಡ್ಯೂಲ್‌ಗೆ ನಡುವೆ ಇರುವ ಸಾಮಾನ್ಯ ಪ್ರಿಪರೇಷನ್ ಗ್ಯಾಪ್ ಮಾತ್ರ" ಎಂದು ಹೇಳಲಾಗಿದೆ.
ಏನೇ ಇದ್ದರೂ ನಾವೇ ಹೇಳ್ತೀವಿ
"ಭಾರಿ ಆ್ಯಕ್ಷನ್ ಸೀಕ್ವೆನ್ಸ್‌ಗಳಿಗಾಗಿ ಸ್ವಲ್ಪ ಸಮಯವನ್ನು ಮೀಸಲಿಡುವುದು ನಿರ್ದೇಶಕ ಪ್ರಶಾಂತ್ ನೀಲ್ ಅವರ ಶೈಲಿ. ಆ ತಾಂತ್ರಿಕ ಕೆಲಸಗಳಿಗಾಗಿಯೇ ಈ ಬ್ರೇಕ್ ತೆಗೆದುಕೊಳ್ಳಲಾಗಿದೆ. ಅನಗತ್ಯವಾದ ಮತ್ತು ದೃಢೀಕರಿಸದ ಮಾಹಿತಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಬೇಡಿ, ಯಾವುದೇ ಅಪ್‌ಡೇಟ್ ಇದ್ದರೂ ಅಧಿಕೃತವಾಗಿ ನಾವೇ ತಿಳಿಸುತ್ತೇವೆ" ಎಂದು ಅಭಿಮಾನಿಗಳಿಗೆ ಚಿತ್ರತಂಡ ಹೇಳಿದೆ.
ಮೈತ್ರಿ ಮೂವೀ ಮೇಕರ್ಸ್ ಹಂಚಿಕೊಂಡ ಪೋಸ್ಟ್
ಇನ್ನೂ, ಹೆಸರು ಫೈನಲ್ ಆಗದ ಈ ಸಿನಿಮಾದಲ್ಲಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸುವುದು ಖಚಿತವಾಗಿದೆ. ಬಾಲಿವುಡ್ ನಟ ಅನಿಲ್ ಕಪೂರ್ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. 'ಕೆಜಿಎಫ್', 'ಸಲಾರ್' ಖ್ಯಾತಿಯ ರವಿ ಬಸ್ರೂರ್ ಈ ಸಿನಿಮಾಗೂ ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಹಾಕಲಾದ ಭಾರಿ ಸೆಟ್‌ಗಳಲ್ಲಿ ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಈ ಚಿತ್ರವನ್ನು ಮೊದಲು ಒಂದೇ ಭಾಗದಲ್ಲಿ ಮಾಡಲು ಯೋಜಿಸಲಾಗಿದ್ದರೂ, ಕಥೆಯ ವ್ಯಾಪ್ತಿಯ ದೃಷ್ಟಿಯಿಂದ ಎರಡು ಭಾಗಗಳಾಗಿ ಬಿಡುಗಡೆ ಮಾಡುವ ಆಲೋಚನೆಯಲ್ಲಿ ಚಿತ್ರತಂಡ ಇದೆ ಎಂದು ಹೇಳಲಾಗುತ್ತಿದೆ.