ʼಕಾಂತಾರ ಚಾಪ್ಟರ್ 1ʼ ಚಿತ್ರದ ಶೂಟಿಂಗ್ ವೇಳೆ ದೈವಿಕ ಅನುಭವ; ಅಪರೂಪದ ಸಂಗತಿ ಬಿಚ್ಚಿಟ್ಟ ಛಾಯಾಗ್ರಾಹಕ ಅರವಿಂದ್ ಕಶ್ಯಪ್
Kantara: Chapter 1: ಸದ್ಯ ಇಡೀ ದೇಶವೇ ಸ್ಯಾಂಡಲ್‌ವುಡ್‌ನತ್ತ ಕಣ್ಣು ಮಿಟುಕಿಸದೇ ಕೂತೂಹಲದಿಂದ ಕಾಯುವಂತೆ ಮಾಡಿದ ಚಿತ್ರ ರಿಷಬ್ ಶೆಟ್ಟಿ ಅವರ 'ಕಾಂತಾರ ಚಾಪ್ಟರ್ 1'. ಈಗಾಗಲೇ ಈ ಬಹುನಿರೀಕ್ಷಿತ ಚಿತ್ರದ ಶೂಟಿಂಗ್ ಪೂರ್ಣಗೊಂಡಿದ್ದು, ಅಕ್ಟೋಬರ್ 2ರಂದು ವಿವಿಧ ಭಾಷೆಗಳಲ್ಲಿ ತೆರೆ ಕಾಣಲಿದೆ. ಈ ಮಧ್ಯೆ ಶೂಟಿಂಗ್ ಸೆಟ್‌ನಲ್ಲಿ ತಮಗಾದ ವಿಶಿಷ್ಟ ಅನುಭವವನ್ನು ಛಾಯಾಗ್ರಾಹಕ ಅರವಿಂದ್ ಕಶ್ಯಪ್ ಬಿಚ್ಚಿಟ್ಟಿದ್ದಾರೆ.

-

ಬೆಂಗಳೂರು: ತುಳುನಾಡಿನ ವಿಶಿಷ್ಟ ಸಂಸ್ಕೃತಿ, ಭೂತಾರಾಧನೆಯನ್ನು ಸಮರ್ಥವಾಗಿ ಕಟ್ಟಿಕೊಟ್ಟು ಸಿನಿಪ್ರೇಮಿಗಳಿಗೆ ಕರಾವಳಿಯ ಜನ ಜೀವನ ಪರಿಚಯಿಸಿದ ಸಿನಿಮಾ ʼಕಾಂತಾರʼ (Kantara). ಹೊಂಬಾಳೆ ಪಿಲ್ಮ್ಸ್ (Hombale Films) ನಿರ್ಮಿಸಿ, ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶಿಸಿದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುವ ಜತೆಗೆ ವಿಮರ್ಶಕರ ಗಮನವನ್ನೂ ಸೆಳೆದು ರಾಷ್ಟ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. ಇದೀಗ ಈ ಚಿತ್ರದ ಪ್ರೀಕ್ವೆಲ್ ಸಿದ್ಧವಾಗಿದೆ. ಅಂದರೆ ʼಕಾಂತಾರʼ ಚಿತ್ರದ ಕಥೆ ನಡೆಯುವುದಕ್ಕೆ ಮುನ್ನ ಏನಾಗಿತ್ತು ಎನ್ನುವುದನ್ನು ರಿಷಬ್ ಶೆಟ್ಟಿ 'ಕಾಂತಾರ ಚಾಪ್ಟರ್ 1' (Kantara: Chapter 1) ಮೂಲಕ ಹೇಳಲಿದ್ದಾರೆ. ಈ ಚಿತ್ರದಲ್ಲಿಯೂ ರಿಷಬ್ ನಿರ್ದೇಶನದ ಜತೆಗೆ ನಾಯಕನ ಜವಾಬ್ದಾರಿಯನ್ನೂ ನಿರ್ವಹಿಸಿದ್ದಾರೆ. ಬರೋಬ್ಬರಿ 250 ದಿನಗಳ ಕಾಲ ನಡೆದ ಚಿತ್ರೀಕರಣ ಮುಕ್ತಾಯವಾಗಿದ್ದು, ಅಕ್ಟೋಬರ್ 2ರಂದು ತೆರೆಗೆ ಬರಲಿದೆ. ಈ ಮಧ್ಯೆ ಸಿನಿಮಾದ ಶೂಟಿಂಗ್ ವೇಳೆ ತಮಗಾದ ವಿಶಿಷ್ಟ ದೈವಿಕ ಅನುಭವವನ್ನು ಛಾಯಾಗ್ರಾಹಕ ಅರವಿಂದ್ ಕಶ್ಯಪ್ (Arvind Kashyap) ಬಿಚ್ಚಿಟ್ಟಿದ್ದಾರೆ.
‘ಟೈಮ್ಸ್ ಆಫ್ ಇಂಡಿಯಾ’ಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ. ʼʼಕಾಂತಾರ ಚಾಪ್ಟರ್ 1ʼ ಸೆಟ್‌ನಲ್ಲಿ ನಮಗೆ ದೈವಿಕ ಶಕ್ತಿಯ ಪರಿಚಯವಾಯ್ತುʼʼ ಎಂದು ಹೇಳಿದ್ದಾರೆ. ಜತೆಗೆ ʼಕಾಂತಾರʼ ಹೇಗೆ ತಮ್ಮ ಜೀವನದ ಟರ್ನಿಂಗ್ ಪಾಯಿಂಟ್ ಆಯ್ತು ಎನ್ನುವುದನ್ನು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Kantara Chapter 1: 250 ದಿನಗಳ ಶೂಟಿಂಗ್...ಮೈ ನವಿರೇಳಿಸೋ ಸೀನ್! ಕಾಂತಾರ-1 ಮೇಕಿಂಗ್ ವಿಡಿಯೊದ ಝಲಕ್ ನೋಡಿ
ಅರವಿಂದ್ ಕಶ್ಯಪ್ ಹೇಳಿದ್ದೇನು?
ನಗರದಲ್ಲಿ ಹುಟ್ಟಿ ಬೆಳೆದ ತಾನು ಆಚರಣೆಗಳು ಮತ್ತು ನಂಬಿಕೆಗಳ ಬಗ್ಗೆ ಅಸಡ್ಡೆ ಹೊಂದಿದ್ದೆ. ಅದನ್ನು ಬದಲಾಯಿಸಿದ್ದೇ ʼಕಾಂತಾರʼ ಎಂದು ಹೇಳಿದ್ದಾರೆ. "ಕಾಂತಾರʼ ಚಿತ್ರ ನನ್ನ ಜೀವನದಲ್ಲಿ ಸಂಭವಿಸಿದ ಒಂದು ಮಹತ್ವದ ತಿರುವು - ತರ್ಕ ಮತ್ತು ವಿವರಣೆಯನ್ನು ಮೀರಿದ ಕೆಲವು ಅನುಭವಗಳು ಘಟಿಸುತ್ತವೆ ಎನ್ನುವುದನ್ನು ನಾನು ಅರಿತುಕೊಂಡೆ" ಎಂದು ತಿಳಿಸಿದ್ದಾರೆ.
ಚಿತ್ರ ನಿರ್ಮಾಣವನ್ನೂ ಮೀರಿ ತಮಗೆ ಶೂಟಿಂಗ್ ಸೆಟ್‌ನಲ್ಲಿ ಎದುರಾದ ಅನುಭವವನ್ನು ಅವರು ವಿವರಿಸಿದ್ದು ಹೀಗೆ. ʼʼಸೆಟ್‌ನಲ್ಲಿ ಯಾವಾಗಲೂ ಒಂದು ರೀತಿಯ ದೈವಿಕ ಶಕ್ತಿ ಇರುವ ಭಾವನೆ ಮೂಡುತ್ತಿತ್ತು. ಅಲ್ಲದೆ ಪ್ರತಿ ಬಾರಿಯೂ ಶೂಟಿಂಗ್ ಆರಂಭಿಸುವ ಮುನ್ನ ಪ್ರಾರ್ಥನೆ ಸಲ್ಲಿಸಲಾಗುತ್ತಿತ್ತು. ಜತೆಗೆ ಕೆಲವೊಂದು ಆಚರಣೆಗಳನ್ನು ನೆರವೇರಿಸಲಾಗುತ್ತಿತ್ತು. ಮೊದ ಮೊದಲು ಇದರ ಪ್ರಾಧಾನ್ಯತೆ ನನಗೆ ಗೊತ್ತಿರಲಿಲ್ಲ. ಸ್ವಲ್ಪ ದಿನಗಳಲ್ಲಿ ಕೆಲವೊಂದು ಅಸ್ವಾಭಾವಿಕ ಬೆಳವಣಿಗೆಗಳು ನಡೆಯತೊಡಗಿದವುʼʼ ಎಂದು ಹೇಳಿದ್ದಾರೆ.
ಮುಂದುವರಿದು, ʼʼಒಂದು ನಿರ್ದಿಷ್ಟ ಸ್ಥಳದಲ್ಲಿ ಚಿತ್ರೀಕರಣ ನಡೆಸಿದಾಗ ನನ್ನ ಬಲಕಾಲಿಗೆ ಗಾಯವಾಗಿತ್ತು. ಇದೊಂದು ಕಾಕತಾಳೀಯ ಘಟನೆ ಎಂದೇ ಭಾವಿಸಿದ್ದೆ. ಆದರೆ ಆ ನಿರ್ದಿಷ್ಟ ಜಾಗದಲ್ಲಿ ಶೂಟಿಂಗ್ ನಡೆಸುವಾಗ ಪ್ರತಿ ಬಾರಿಯೂ ನನ್ನ ಬಲಕಾಲಿಗೆ ಗಾಯವಾಗುತ್ತಿತ್ತು. ಇದರಿಂದ ಅನುಮಾನ ಮೂಡಿ ಜ್ಯೊತಿಷಿಗಳ ಬಳಿ ಹೋದೆವು. ಆಗ ಅವರು ನಾವು ಶೂಟಿಂಗ್ ನಡೆಸುವ ಸ್ಥಳ ನಾಗ ಸ್ಥಾನ (ನಾಗ ಬನ) ಎಂದು ಹೇಳಿದರು. ಅಂದರೆ ನಾಗ ಶಕ್ತಿ ಓಡಾಡುವ ಜಾಗ ಎಂದರ್ಥʼʼ ಎಂದು ವಿವರಿಸಿದ್ದಾರೆ.
ʼʼಬಳಿಕ ಅವರ ಸಲಹೆಯಂತೆ ನಾವು ಪ್ರಾರ್ಥನೆ ಸಲ್ಲಿಸಿದೆವು. ನೀವು ನಂಬುತ್ತೀರೋ ಬಿಡ್ತಿರೋ ಅದಾದ ಬಳಿಕ ಯಾವುದೇ ಸಮಸ್ಯೆ ಎದುರಾಗಲಿಲ್ಲ. ಚಿತ್ರೀಕರಣ ಸರಾಗವಾಗಿ ನಡೆಯಿತು. ಇದಲ್ಲದೆ ಇನ್ನೂ ಒಂದು ಪವಾಡ ನಡೆದಿದೆ. ಕೆಲವೊಮ್ಮೆ ಇದ್ದಕ್ಕಿದ್ದಂತೆ ಲೈಟ್‌ಗಳು ಆರುತ್ತಿದ್ದವು. ಜತೆಗೆ ಉಪಕರಣಗಳು ಕೈಕೊಡುತ್ತಿದ್ದವು. ಹೀಗಾಗಿ ನಾವು ಪ್ರಾರ್ಥನೆ ಸಲ್ಲಿಸಿದೆವು. ನಂತರ ಎಲ್ಲವೂ ಸರಾಗವಾಗಿ, ಸಹಜವಾಗಿ ನಡೆದವು. ಕಾಣದ ಶಕ್ತಿಗಳು ನಮಗಿಂತ ಹೆಚ್ಚಿನ ಸಾಮರ್ಥ್ಯ ಹೊಂದಿವೆ ಎನ್ನುವುದನ್ನು ಈ ಮೂಲಕ ನಮಗೆ ನೆನಪಿಸುತ್ತವೆ ಎಂದು ಭಾಸವಾಯಿತು" ಎಂದು ಅವರು ಹೇಳಿದ್ದಾರೆ.
ಅರವಿಂದ್ ಕಶ್ಯಪ್ ತಮ್ಮ ಮಾತು ಮುಂದುವರಿಸುತ್ತ, ʼʼನಾವು ಅತ್ಯಂತ ಜಾಗರೂಕರಾಗಿ ʼಕಾಂತಾರ ಚಾಪ್ಟರ್ 1ʼ ಶೂಟಿಂಗ್ ನಡೆಸಿದ್ದೇವೆ. ಕೆಲವೊಮ್ಮೆ ನಾವು ಮೊದಲೇ ಪ್ಲ್ಯಾನ್ ಮಾಡದ ಸ್ಥಳಗಳಲ್ಲಿಯೂ ಚಿತ್ರೀಕರಣ ಮಾಡಿದ್ದೇವೆ. ಆಗೆಲ್ಲ ಕಾಡು ಪ್ರಾಣಿಗಳ ಓಡಾಟ, ಘರ್ಜನೆಯ ಸದ್ದು ಕೇಳಿಸುತ್ತಿದ್ದವು. ದೊಡ್ಡ ಸಂಖ್ಯೆಯ ಸಿಬ್ಬಂದಿಯೊಂದಿಗೆ ನಾವು ಕಾರ್ಯ ನಿರ್ವಹಿಸಿದ್ದರೂ ಯಾವುದೇ ಅಪಾಯವಾಗದಂತೆ ದೈವಿಕ ಶಕ್ತಿಯೇ ನಮ್ಮನ್ನು ಕಾಪಾಡಿದೆ. ಮಾನವರು ಸಂಪೂರ್ಣವಾಗಿ ಗ್ರಹಿಸಲು ಸಾಧ್ಯವಾಗದ ಶಕ್ತಿಗಳಿವೆ ಎಂಬುದರ ಅರಿವು ಈಗ ನನಗಾಗಿದೆʼʼ ಎಂದು ವಿವರಿಸಿದ್ದಾರೆ. ʼಕಾಂತಾರʼ ಚಿತ್ರಕ್ಕೂ ಅರವಿಂದ್ ಕಶ್ಯಪ್ ಅವರ ಛಾಯಾಗ್ರಹವಿತ್ತು.