ʻಪೆದ್ದಿʼ ಸಿನಿಮಾ ಶೂಟಿಂಗ್ ವೇಳೆ ರಾಮ್ ಚರಣ್ ಪೆಟ್ಟು; 4 ಹೊಲಿಗೆ ಹಾಕಿಸಿಕೊಂಡು ಪುನಃ ಸೆಟ್‌ಗೆ ಮರಳಿದ ನಟ!
Ram Charan Injury: ಹೈದರಾಬಾದ್‌ನಲ್ಲಿ 'ಪೆದ್ದಿ' ಸಿನಿಮಾದ ಆಕ್ಷನ್ ದೃಶ್ಯವೊಂದರ ಚಿತ್ರೀಕರಣದ ವೇಳೆ ನಟ ರಾಮ್ ಚರಣ್ ಅವರ ಕಣ್ಣಿನ ಹುಬ್ಬಿನ ಬಳಿ ಗಾಯವಾಗಿದೆ. ಕೂಡಲೇ ಅವರಿಗೆ 4 ಹೊಲಿಗೆಗಳನ್ನು ಹಾಕಲಾಗಿದ್ದು, ಚಿಕಿತ್ಸೆ ಪಡೆದ ಕೆಲವೇ ಗಂಟೆಗಳಲ್ಲಿ ಅವರು ಮತ್ತೆ ಶೂಟಿಂಗ್‌ಗೆ ಹಾಜರಾಗಿದ್ದಾರೆ.
-
ʻಮೆಗಾ ಪವರ್ ಸ್ಟಾರ್ʼ ರಾಮ್ ಚರಣ್ ಅವರು ಸದ್ಯ ʻಪೆದ್ದಿʼ ಸಿನಿಮಾದ ಶೂಟಿಂಗ್‌ನಲ್ಲಿ ಮಗ್ನರಾಗಿದ್ದಾರೆ. ಏಪ್ರಿಲ್ 30ಕ್ಕೆ ಈ ಚಿತ್ರವನ್ನು ರಿಲೀಸ್ ಮಾಡಬೇಕು ಎಂಬುದು ಚಿತ್ರತಂಡ ಗುರಿಯಾಗಿದ್ದು, ಆ ನಿಟ್ಟಿನಲ್ಲಿ ಬಿರುಸಿನಿಂದ ಕೆಲಸಗಳು ಸಾಗಿವೆ. ಆದರೆ ಈ ನಡುವೆ ಶೂಟಿಂಗ್ ವೇಳೆ ರಾಮ್ ಚರಣ್ ಅವರಿಗೆ ಪೆಟ್ಟಾಗಿದ್ದು, ಅಭಿಮಾನಿಗಳಲ್ಲಿ ಆತಂಕವನ್ನು ಉಂಟು ಮಾಡಿದೆ.
ಏನಾಯಿತು ರಾಮ್ ಚರಣ್‌ಗೆ?
ಶೂಟಿಂಗ್ ವೇಳೆ ನಟ ರಾಮ್ ಚರಣ್ ಅವರ ಕಣ್ಣಿನ ಬಳಿ ಸಣ್ಣ ಪ್ರಮಾಣದ ಗಾಯವಾಗಿದ್ದು, ತಕ್ಷಣವೇ ಚಿಕಿತ್ಸೆ ನೀಡಲಾಗಿದೆ. ವಿಶೇಷವೆಂದರೆ, ಪೆಟ್ಟಾಗಿದ್ದರೂ ಕೂಡ ಅವರು ಯಾವುದೇ ವಿಶ್ರಾಂತಿ ಪಡೆಯದೇ ಪುನಃ ಶೂಟಿಂಗ್‌ನಲ್ಲಿ ಮಗ್ನರಾಗಿದ್ದಾರೆ. ಹೌದು, ಮಂಗಳವಾರ (ಮಾ.24) ಹೈದರಾಬಾದ್‌ನಲ್ಲಿ ಭರ್ಜರಿ ಆ್ಯಕ್ಷನ್ ದೃಶ್ಯವೊಂದರ ಚಿತ್ರೀಕರಣ ನಡೆಯುತ್ತಿದ್ದಾಗ ಈ ಘಟನೆ ಸಂಭವಿಸಿದೆ.
Allu Sirish Nayanika Reddy: ವೈವಾಹಿಕ ಜೀವನಕ್ಕೆ ಕಾಲಿಟ್ಟ ಅಲ್ಲು ಸಿರಿಶ್; ಫೋಟೋ ಹಂಚಿಕೊಂಡ ರಾಮ್ ಚರಣ್
ಆರಂಭದಲ್ಲಿ ರಾಮ್ ಚರಣ್ ಅವರ ಕಣ್ಣಿಗೆ ಗಾಯವಾಗಿದೆ ಎಂಬ ವದಂತಿಗಳು ಹಬ್ಬಿದ್ದವು. ಆದರೆ, ಅವರ ತಂಡವು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಗಾಯವು ಕಣ್ಣಿನ ಮೇಲ್ಭಾಗದಲ್ಲಿ ಆಗಿದೆಯೇ ಹೊರತು ಕಣ್ಣಿಗಲ್ಲ ಎಂದು ತಿಳಿಸಿದೆ. "ರಾಮ್ ಚರಣ್ ಅವರಿಗೆ ಆ್ಯಕ್ಷನ್ ದೃಶ್ಯದ ವೇಳೆ ಗಾಯವಾಗಿದ್ದು, ನಾಲ್ಕು ಹೊಲಿಗೆಗಳನ್ನು ಹಾಕಲಾಗಿದೆ. ಗಾಯವು ಕಣ್ಣಿನ ಹುಬ್ಬಿನ ಮೇಲ್ಭಾಗದಲ್ಲಿದೆ, ಅವರ ಕಣ್ಣು ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಕಣ್ಣಿಗೆ ಯಾವುದೇ ಸಮಸ್ಯೆ ಆಗಿಲ್ಲ. ಇದು ಸಣ್ಣ ಗಾಯವಾಗಿದ್ದು, ಆತಂಕಪಡುವ ಅಗತ್ಯವಿಲ್ಲ. ಅವರು ಯಾವುದೇ ವಿರಾಮ ತೆಗೆದುಕೊಳ್ಳದೆ ತಕ್ಷಣವೇ ಕೆಲಸಕ್ಕೆ ಮರಳಿದ್ದಾರೆ" ಎಂದು ರಾಮ್ ಚರಣ್ ಟೀಮ್ ತಿಳಿಸಿದೆ.
ಗಾಯವಾಗುತ್ತಿದ್ದಂತೆಯೇ, ಹೊಲಿಗೆ ಹಾಕಿಸಿಕೊಂಡು ಕೆಲವೇ ಗಂಟೆಗಳಲ್ಲಿ ಅವರು ಮತ್ತೆ ಚಿತ್ರೀಕರಣಕ್ಕೆ ಮರಳುವ ಮೂಲಕ ತಮ್ಮ ವೃತ್ತಿಪರತೆಯನ್ನು ಮೆರೆದಿದ್ದಾರೆ. ಈ ಬಗ್ಗೆ ಚಿತ್ರತಂಡ ಮೆಚ್ಚುಗೆ ವ್ಯಕ್ತಪಡಿಸಿದೆ. 'ಉಪ್ಪೇನಾ' ಖ್ಯಾತಿಯ ಬುಚ್ಚಿ ಬಾಬು ಸನಾ ನಿರ್ದೇಶನ ಮಾಡುತ್ತಿರುವ ಈ ಕ್ರೀಡಾ ಆಧಾರಿತ ಆ್ಯಕ್ಷನ್ ಸಿನಿಮಾವನ್ನು ಈ ಮೊದಲು ಮಾರ್ಚ್ 27ರಂದು ರಿಲೀಸ್ ಮಾಡಲು ಯೋಜಿಸಲಾಗಿತ್ತು. ಆದರೆ ಈಗ ಏಪ್ರಿಲ್ 30 ರಂದು ವಿಶ್ವದಾದ್ಯಂತ ರಿಲೀಸ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ.
ಪ್ರಮುಖ ಪಾತ್ರದಲ್ಲಿ ಶಿವಣ್ಣ
ನಟ ಶಿವರಾಜ್‌ಕುಮಾರ್ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಜಗಪತಿ ಬಾಬು, ಜಾನ್ವಿ ಕಪೂರ್, ದಿವ್ಯೇಂದು ಮುಂತಾದವರು ಈ ಚಿತ್ರದಲ್ಲಿದ್ದಾರೆ. ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ. ಆರ್. ರೆಹಮಾನ್ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಪೆದ್ದಿ ಚಿತ್ರವನ್ನು ವೆಂಕಟ ಸತೀಶ್ ಕಿಲಾರು ನಿರ್ಮಾಣ ಮಾಡುತ್ತಿದ್ದು, ಸುಕುಮಾರ್ ರೈಟಿಂಗ್ಸ್ ಮತ್ತು ಮೈತ್ರಿ ಮೂವೀ ಮೇಕರ್ಸ್ ಸಂಸ್ಥೆಗಳು ಪ್ರಸ್ತುತಪಡಿಸುತ್ತಿದ್ದಾರೆ.
ಗುಣಮುಖರಾಗಲಿ ಎಂದು ಹಾರೈಸಿದ ಪಿಕೆ
"ಪೆದ್ದಿ ಚಿತ್ರದ ಚಿತ್ರೀಕರಣದ ಸಮಯದಲ್ಲಿ ರಾಮ್ ಚರಣ್ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ರಾಮ್ ಚರಣ್ ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತೇನೆ" ಎಂದು ಪವನ್ ಕಲ್ಯಾಣ್ ಟ್ವೀಟ್ ಮಾಡಿದ್ದಾರೆ.