ʻಹಳ್ಳಿ ಹೈದ ಪ್ಯಾಟೆಗೆ ಬಂದ’ ಖ್ಯಾತಿಯ ಬಾವತೀಶ್ ರಸ್ತೆ ಅಪಘಾತಕ್ಕೆ ಬಲಿ; ನಿಂತಿದ್ದ ಬಸ್ಸಿಗೆ ಗುದ್ದಿದ ಬೈಕ್!
'ಹಳ್ಳಿ ಹೈದ ಪ್ಯಾಟೆಗೆ ಬಂದ' ಸೀಸನ್ 3ರ ಖ್ಯಾತ ಸ್ಪರ್ಧಿ ಬಾವತೀಶ್ (28) ಮಂಗಳವಾರ ಮಧ್ಯಾಹ್ನ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕೋಳಿಕೆರೆ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ರಸ್ತೆ ಬದಿ ನಿಂತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಬೈಕ್ ಡಿಕ್ಕಿ ಹೊಡೆದ ರಭಸಕ್ಕೆ ಸ್ಥಳದಲ್ಲೇ ಬಾವತೀಶ್ ಕೊನೆಯುಸಿರೆಳೆದಿದ್ದಾರೆ.
-
ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ‘ಹಳ್ಳಿ ಹೈದ ಪ್ಯಾಟೆಗೆ ಬಂದ’ ಸೀಸನ್ 3ರ ಮೂಲಕ ಫೇಮಸ್ ಅಗಿದ್ದ ಬಾವತೀಶ್ (28) ಭೀಕರ ರಸ್ತೆ ಅಪಘಾತವೊಂದರಲ್ಲಿ ಸಾವನ್ನಪ್ಪಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕೋಳಿಕೆರೆ ಸಮೀಪ ಸಂಭವಿಸಿದ ಈ ದುರಂತದಲ್ಲಿ ಬಾವತೀಶ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಹೇಗಾಯ್ತು ಈ ಅಪಘಾತ?
ಮೂಲತಃ ಹಳಿಯಾಳ ತಾಲೂಕಿನ ವಾಡಗರಡೊಳ್ಳಿ ಗ್ರಾಮದ ನಿವಾಸಿಯಾದ ಬಾವತೀಶ್, ಮಂಗಳವಾರ (ಮಾ.24) ಮಧ್ಯಾಹ್ನ ತಮ್ಮ ಬೈಕ್‌ನಲ್ಲಿ ಸಂಚರಿಸುತ್ತಿದ್ದರು. ಈ ವೇಳೆ ರಸ್ತೆ ಬದಿಯಲ್ಲಿ ನಿಂತಿದ್ದ ಕೆಎಸ್‌ಆರ್‌ಟಿಸಿ (KSRTC) ಬಸ್‌ಗೆ ಬಾವತೀಶ್ ಇದ್ದ ಬೈಕ್ ಹಿಂಬದಿಯಿಂದ ಅತಿ ವೇಗವಾಗಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ರಭಸ ಎಷ್ಟಿತ್ತೆಂದರೆ, ಬಾವತೀಶ್ ಅವರ ಬೈಕ್‌ಗೆ ತಕ್ಷಣವೇ ಬೆಂಕಿ ಹೊತ್ತಿಕೊಂಡಿದ್ದು, ಬಾವತೀಶ್ ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಸುಟ್ಟ ಗಾಯಗಳು ಹಾಗೂ ತಲೆಗೆ ಬಿದ್ದ ಬಲವಾದ ಪೆಟ್ಟು ಸಾವಿಗೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.
Dharmendra: ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ನಿಧನ
ರಿಯಾಲಿಟಿ ಶೋ ಮೂಲಕ ಮನೆಮಾತಾಗಿದ್ದ ಪ್ರತಿಭೆ
ಸ್ಟಾರ್ ಸುವರ್ಣ ವಾಹಿನಿಯ ‘ಹಳ್ಳಿ ಹೈದ ಪ್ಯಾಟೆಗೆ ಬಂದ’ ಸೀಸನ್ 3ರಲ್ಲಿ ಸ್ಪರ್ಧಿಯಾಗಿದ್ದ ಬಾವತೀಶ್, ತಮ್ಮ ಮುಗ್ಧ ನಗು, ಅಪ್ಪಟ ಹಳ್ಳಿ ಸೊಗಡಿನ ಮಾತು ಹಾಗೂ ವಿಭಿನ್ನ ಮ್ಯಾನರಿಸಂನಿಂದಲೇ ತೀರ್ಪುಗಾರರ ಮತ್ತು ಅಭಿಮಾನಿಗಳ ನೆಚ್ಚಿನ ಸ್ಪರ್ಧಿಯಾಗಿದ್ದರು. ಹಳ್ಳಿಯ ಪ್ರತಿಭೆಯೊಂದು ನಗರದ ಸಂಸ್ಕೃತಿಗೆ ಹೊಂದಿಕೊಳ್ಳುವ ಸವಾಲನ್ನು ಎದುರಿಸುವ ಈ ಶೋನಲ್ಲಿ ಬಾವತೀಶ್ ತೋರುತ್ತಿದ್ದ ಚತುರತೆ ಮತ್ತು ಅವರ ಕಾಮಿಡಿ ಸೆನ್ಸ್ ಪ್ರೇಕ್ಷಕರನ್ನು ಅಪಾರವಾಗಿ ಸೆಳೆದಿತ್ತು. ಶೋ ಮುಗಿದ ನಂತರವೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದ ಅವರು, ಭವಿಷ್ಯದಲ್ಲಿ ಸಿನಿಮಾ ಅಥವಾ ಕಿರುತೆರೆಯಲ್ಲಿ ದೊಡ್ಡ ಹೆಸರು ಸಂಪಾದಿಸುವ ಗುರಿ ಹೊಂದಿದ್ದರು.
Harish Rai Death: ʼಕೆಜಿಎಫ್ ಚಾಚಾʼ ಹರೀಶ್ ರಾಯ್ ನಿಧನ, ಕ್ಯಾನ್ಸರ್‌ಗೆ ನಟ ಬಲಿ
ಆಕಾಲಿಕವಾಗಿ ಈ ಯುವ ಪ್ರತಿಭೆಯ ಬದುಕು ಅಂತ್ಯವಾಗಿರುವುದಕ್ಕೆ ವಿಷಾದನೀಯ. ಅವರ ಅನಿರೀಕ್ಷಿತ ಸಾವು ಕುಟುಂಬಸ್ಥರು, ಆಪ್ತರು, ಅಭಿಮಾನಿಗಳಿಗೆ ನೋವು ನೀಡಿದೆ. ಸೋಶಿಯಲ್ ಮೀಡಿಯಾದಲ್ಲಿ ಅವರ ಹಳೆಯ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ. ಪ್ರಸ್ತುತ ಈ ಘಟನೆಗೆ ಸಂಬಂಧಿಸಿದಂತೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.