ಪ್ರಭಾಸ್ ಚಿತ್ರದ ಮೂಲಕ ತೆಲುಗಿಗೆ ಕಾಲಿಟ್ಟ ಕನ್ನಡತಿ; ಯಾರಿವರು?
Prabhas Birthday: 'ಬಾಹುಬಲಿʼ ಸರಣಿ ಚಿತ್ರಗಳ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ತೆಲುಗು ನಟ ಪ್ರಬಾಸ್ ಸದ್ಯ ಹಲವು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಈ ಪೈಕಿ ‘ಫೌಜಿ’ ಕೂಡ ಒಂದು. ವಿಸೇಷ ಎಂದರೆ ಈ ಚಿತ್ರದಲ್ಲಿ ಕನ್ನಡ ನಟಿಯೊಬ್ಬರು ಅವಕಾಶ ಸಿಕ್ಕಿದೆ. ಆ ಕುರಿತಾದ ವಿವರ ಇಲ್ಲಿದೆ.

-

ಹೈದರಾಬಾದ್, ಅ. 23: ಟಾಲಿವುಡ್ ರೆಬೆಲ್ ಸ್ಟಾರ್ ಪ್ರಭಾಸ್ (Prabhas) ಅಕ್ಟೋಬರ್ 23ರಂದು 46ನೇ ವರ್ಷಕ್ಕೆ ಕಾಲಿಟ್ಟರು. ಪ್ಯಾನ್ ಇಂಡಿಯಾ ಸ್ಟಾರ್ ಎನಿಸಿಕೊಂಡಿರುವ ಅವರ ಹುಟ್ಟುಹಬ್ಬಕ್ಕೆ ವಿವಿಧ ಚಿತ್ರರಂಗಗಳ ಗಣ್ಯರು ಶುಭ ಹಾರೈಸಿದ್ದಾರೆ. ಜತೆಗೆ ಪ್ರಭಾಸ್ ಅಭಿನಯದ ಹೊಸ ಚಿತ್ರಗಳ ಪೋಸ್ಟರ್ ರಿಲೀಸ್ ಆಗಿ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆಯೇ ಸಿಕ್ಕಿದೆ. ಈ ಪೈಕಿ ‘ಫೌಜಿ’ (Fauzi) ಕೂಡ ಒಂದು. 2022ರಲ್ಲಿ ತೆರೆಕಂಡು ಬಾಕ್ಸ್ ಆಫೀಸ್‌ನಲ್ಲಿ ಭಾರಿ ಯಶಸ್ಸು ಪಡೆದಿದ್ದ ʼಸೀತಾ ರಾಮಮ್ʼ ಸಿನಿಮಾ ನಿರ್ದೇಶಿಸಿದ್ದ ಹನು ರಾಘವಪುಡಿ ಆ್ಯಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದಾಗಿದ್ದು, ಪ್ರಭಾಸ್ ವಿಭಿನ್ನ ಪಾತ್ರದಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಇದೀಗ ಈ ಚಿತ್ರದ ಪೋಸ್ಟರ್ ರಿಲೀಸ್ ಆಗಿದ್ದು, ಪ್ರಭಾಸ್ ಗಂಭೀರ ಲುಕ್ ಮೂಲಕ ಗಮನ ಸೆಳೆದಿದ್ದಾರೆ. ವಿಶೇಷ ಎಂದರೆ ಈ ಚಿತ್ರದ ಮೂಲಕ ಕನ್ನಡ ನಟಿಯೊಬ್ಬರು ತೆಲುಗಿಗೆ ಕಾಲಿಡುತ್ತಿದ್ದಾರೆ.
‘ಫೌಜಿ’ ಸಿನಿಮಾದಲ್ಲಿ ಪ್ರಭಾಸ್‌ಗೆ ನಾಯಕಿಯಾಗಿ ಇಮಾನ್ವಿ ನಟಿಸುತ್ತಿದ್ದಾರೆ. ಇವರೊಂದಿಗೆ ಮತ್ತೊಬ್ಬ ನಾಯಕಿಯೂ ಇರಲಿದ್ದು, ಆ ಪಾತ್ರ ಕನ್ನಡತಿಯ ಪಾಲಾಗಿದೆ. ಹೌದು, ಸಹಜಾಭಿನಯದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ತಮ್ಮದೇ ಛಾಪು ಮೂಡಿಸಿರುವ ಚೈತ್ರಾ ಜೆ. ಆಚಾರ್ ‘ಫೌಜಿ’ ಮೂಲಕ ಟಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಸ್ಟಾರ್ ನಾಯಕನ ಚಿತ್ರದಲ್ಲಿ ಅವರಿಗೆ ದೊಡ್ಡ ಅವಕಾಶ ಸಿಕ್ಕಿದ್ದು, ಕಾಲಿವುಡ್ ಬಳಿಕ ಟಾಲಿವುಡ್‌ನಲ್ಲೂ ಮಿಂಚಲಿದ್ದಾರೆ.
ಚೈತ್ರಾ ಜೆ. ಆಚಾರ್ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್:
ಈ ಸುದ್ದಿಯನ್ನೂ ಓದಿ: Maarnami Teaser: ಕರಾವಳಿ ಭಾಗದ ಪ್ರೇಮಕಥೆ 'ಮಾರ್ನಮಿ'ಗೆ ರಮ್ಯಾ ಸಾಥ್; ನಾಯಕಿ ಚೈತ್ರಾ ಆಚಾರ್ ಪಾತ್ರ ರಿವೀಲ್
1940ರ ಕಾಲಘಟ್ಟದಲ್ಲಿ, ಬ್ರಿಟಿಷ್ ಆಡಳಿತದ ವೇಳೆ ಭಾರತದಲ್ಲಿ ನಡೆಯುವ ಕಥೆಯನ್ನು ‘ಫೌಜಿ’ ಒಳಗೊಂಡಿದ್ದು, ಪ್ರಭಾಸ್ ಜತೆ ಚೈತ್ರಾ ಪಾತ್ರಕ್ಕೂ ಸಾಕಷ್ಟು ಪ್ರಾಮುಖ್ಯತೆ ಇದೆ ಎನ್ನಲಾಗಿದೆ. ತಾವು ಪ್ರಭಾಸ್ ಜತೆ ತೆರೆ ಹಂಚಿಕೊಳ್ಳುತ್ತಿರುವ ವಿಚಾರವನ್ನು ಸ್ವತಃ ಚೈತ್ರಾ ಇನ್‌ಸ್ಟಾಗ್ರಾಮ್ ಮೂಲಕ ತಿಳಿಸಿದ್ದಾರೆ.
ʼʼಹನು ರಾಘವಪುಡಿ ನಿರ್ದೇಶನದ ʼಫೌಜಿʼ ಚಿತ್ರದ ಭಾಗವಾಗುತ್ತಿರುವುದಕ್ಕೆ ಸಂತಸವಾಗುತ್ತಿದೆ. ನಮ್ಮ ಇತಿಹಾಸದ ಧೀಮಂತ ಯೋಧನೊಬ್ಬನ ಕಥೆ ಇದು. ಪ್ರಭಾಸ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳುʼʼ ಎಂದು ಅವರು ಬರೆದುಕೊಂಡಿದ್ದಾರೆ. ಗಾಯಕಿಯಾಗಿಯೂ ಗುರುತಿಸಿಕೊಂಡಿರುವ ಚೈತ್ರಾ ಈ ವರ್ಷ ತೆರೆಗೆ ಬಂದ ʼ3 ಬಿಎಚ್ಕೆʼ ಸಿನಿಮಾ ಮೂಲಕ ತಮಿಳಿಗೆ ಕಾಲಿಟ್ಟಿದ್ದರು. ಇದೀಗ ತೆಲುಗಿಗೆ ಸೀಮೊಲ್ಲಂಘನೆ ಮಾಡಿದ್ದಾರೆ.
2023ರಲ್ಲಿ ರಿಲೀಸ್ ಆದ ರಕ್ಷಿತ್ ಶೆಟ್ಟಿ-ರುಕ್ಮಿಣಿ ವಸಂತ್-ಹೇಮಂತ್ ರಾವ್ ಕಾಂಬಿನೇಷನ್‌ನ ಸ್ಯಾಂಡಲ್‌ವುಡ್ ಚಿತ್ರ ʼಸಪ್ತ ಸಾಗರಾಚೆ ಎಲ್ಲೋʼ ಸೈಡ್ ಬಿಯಲ್ಲಿ ಚೈತ್ರಾ ಜೆ. ಆಚಾರ್ ಗಮನ ಸೆಳೆದಿದ್ದರು. ಸುರಭಿ ಪಾತ್ರದ ಮೂಲಕ ಅವರು ಮೋಡಿ ಮಾಡಿದ್ದರು. ʼ3 ಬಿಎಚ್‌ಕೆʼ ಸಾಧಾರಣ ಯಶಸ್ಸು ಪಡೆದಿದ್ದರೂ ಚೈತ್ರಾ ಪಾತ್ರ ಗಮನ ಸೆಳೆದಿತ್ತು. ಇದರೊಂದಿಗೆ ʼಮೈ ಲಾರ್ಡ್ʼ ತಮಿಳು ಸಿನಿಮಾವನ್ನೂ ಅವರು ಒಪ್ಪಿಕೊಂಡಿದ್ದಾರೆ.
ಕನ್ನಡದಲ್ಲಿಯೂ ಬ್ಯುಸಿ
ಪರಭಾಷೆಯ ಜತೆ ಕನ್ನಡದ ಹಲವು ಸಿನಿಮಾಗಳಲ್ಲಿಯೂ ಚೈತ್ರಾ ನಟಿಸುತ್ತಿದ್ದಾರೆ. ಕುಂದಾಪುರದ ರಿಶಿತ್ ಶೆಟ್ಟಿ ನಿರ್ದೇಶನದ ʼಮಾರ್ನಮಿʼ, ಡಾ.ಶಿವ ರಾಜ್‌ಕುಮಾರ್, ಡಾಲಿ ಧನಂಜಯ್, ಐಶ್ವರ್ಯಾ ರಾಜೇಶ್, ಭಾವನಾ ಮೆನನ್ ಮತ್ತಿತರ ಬಹು ತಾರಾಗಣವಿರುವ, ರೋಹಿತ್ ಪದಕಿ ಆ್ಯಕ್ಷನ್ ಕಟ್ ಹೇಳುತ್ತಿರುವ ʼಉತ್ತರಕಾಂಡʼ, ʼಸ್ಟ್ರಾಬೆರಿʼ, ʼಎದ್ದೇಳು ಮಂಜುನಾಥ 2ʼ ಮೊದಲಾದ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.