ಸ್ಯಾಂಡಲ್‌ವುಡ್‌ಗೆ ಪದವಿಪೂರ್ವ ಸಿನಿಮಾದ ಮೂಲಕ ಎಂಟ್ರಿ ಕೊಟ್ಟ ನಟ ಪೃಥ್ವಿ ಶಾಮನೂರು, ಆನಂತರ ಕೋಟಿ, ಉಡಾಳ ಸಿನಿಮಾಗಳಲ್ಲೂ ಬಣ್ಣ ಹಚ್ಚಿದ್ದಾರೆ. ಇದೀಗ ನಾಲ್ಕನೇ ಸಿನಿಮಾಕ್ಕೆ ಬೆಂಗಳೂರಿನ ಶ್ರೀಬಂಡೆ ಮಹಾಂಕಾಳಮ್ಮ ದೇವಸ್ಥಾನದಲ್ಲಿ ಮೂಹೂರ್ತ ನೇರವೇರಿದೆ. ಯೂಥ್‌ಫುಲ್ ಲವ್ ಸ್ಟೋರಿಯುಳ್ಳ ʻಹೃದಯಂʼ ಶೀರ್ಷಿಕೆಯ ಈ ಸಿನಿಮಾಕ್ಕೆ ನಾಯಕಿಯಾಗಿ ʻಮಹಾನಟಿʼ ರಿಯಾಲಿಟಿ ಶೋ ಖ್ಯಾತಿಯ ಆರಾಧನಾ ಭಟ್ ಆಯ್ಕೆ ಆಗಿರುವುದು ವಿಶೇಷ.
ಕಳೆದ 12 ವರ್ಷಗಳಿಂದ ಕನ್ನಡ ಚಿತ್ರರಂಗದ ನಿರ್ದೇಶನ ವಿಭಾಗದಲ್ಲಿ ತೊಡಗಿಕೊಂಡಿರುವ ರಜತ್ ಸೂರ್ಯವಂಶಿ ಹೃದಯಂ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಪ್ರಣಿತ್ ಪಿಕ್ಚರ್ಸ್ ಪ್ರೊಡಕ್ಷನ್ಸ್ ಮೂಲಕ ಶ್ರೀದೇವಿ ಎಲ್.ಕೆ. ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ʻಹೃದಯಂʼ ಚಿತ್ರದ ಪ್ರಥಮ ದೃಶ್ಯಕ್ಕೆ ನಟ ನವೀನ್ ಶಂಕರ್ ಕ್ಲ್ಯಾಪ್ ಮಾಡಿ, ಶುಭ ಹಾರೈಸಿದರೆ, ನಿರ್ದೇಶಕ ಯೋಗರಾಜ್ ಭಟ್, ಸಾಹಿತಿ ಡಾ. ನಾಗೇಂದ್ರ ಪ್ರಸಾದ್ ಈ ಹೊಸ ಚಿತ್ರಕ್ಕೆ ಶುಭ ಹಾರೈಸಿದ್ದಾರೆ.
Mahanati Winner: ವಂಶಿ ಮುಡಿಗೇರಿದ ಮಹಾನಟಿ ಕಿರೀಟ! ವಿಜೇತೆಗೆ ಸಿಕ್ಕ ಬಹುಮಾನ ಏನು?
ಪೃಥ್ವಿ ಶಾಮನೂರು ಹೇಳಿದ್ದೇನು?
"ಪದವಿ ಪೂರ್ವದಿಂದ ವೃತ್ತಿ ಬದುಕು ಆರಂಭಿಸಿದ ನನಗೆ ಇದು ನಾಲ್ಕನೇ ಸಿನಿಮಾ. ಅಂದು ಪದವಿಪೂರ್ವ ಟೀನೇಜ್ ಲವ್ ಸ್ಟೋರಿ ಆಗಿತ್ತು. ಆದರೆ ಈ ಸಿನಿಮಾ 2006ರಲ್ಲಿ ನಡೆಯುವ ಅಪ್ಪಟ ಪ್ರೇಮಕಥೆಯಾಗಿದೆ. ಈ ಲವ್ ಸ್ಟೋರಿ ತುಂಬಾ ಚೆನ್ನಾಗಿದೆ. ಒಬ್ಬ ಕಾಲೇಜ್ ಹುಡುಗನ ಪಾತ್ರದಲ್ಲಿ ನಾನು ಈ ಚಿತ್ರದಲ್ಲಿ ನಟಿಸುತ್ತಿದ್ದೇನೆ" ಎಂದು ಪೃಥ್ವಿ ಶಾಮನೂರು ಹೇಳಿದರು.
ʻಮಹಾನಟಿʼ ಶೋ ಖ್ಯಾತಿಯ ಆರಾಧನಾಗೆ ಇದು ಎರಡನೇ ಸಿನಿಮಾ. "ನನಗೆ ಈ ಸಿನಿಮಾದ ಕಥೆ ಕೇಳಿ ತುಂಬಾ ಖುಷಿ ಆಗಿದೆ. ನನ್ನದು ಇಲ್ಲಿ ಕಾಲೇಜ್ ಹುಡುಗಿಯ ಪಾತ್ರ, ನನ್ನ ಪಾತ್ರಕ್ಕೆ ಮೂರು ಶೇಡ್ಸ್ ಇದೆ" ಎನ್ನುತ್ತಾರೆ ಆರಾಧನಾ ಭಟ್.
22-23ರ ವಯಸ್ಸಿನ ಕಾಲೇಜು ವಿದ್ಯಾರ್ಥಿಗಳ ಲವ್ ಸ್ಟೋರಿ
"ನಾನು ನಂದಕಿಶೋರ್ ಜತೆ ವಿಕ್ಟರಿ, ಅಧ್ಯಕ್ಷ ಮುಂತಾದ ಚಿತ್ರಗಳಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದೇನೆ. ನನ್ನ ನಿರ್ದೇಶನದ ಮೊದಲ ಚಿತ್ರವಿದು. ಇದೊಂದು ಫೀಲ್ ಗುಡ್ ಲವ್ ಸ್ಟೋರಿ. ನೈಜ ಘಟನೆ ಒಂದನ್ನು ಆಧರಿಸಿ ಈ ಸಿನಿಮಾ ಮಾಡುತ್ತಿದ್ದೇನೆ. 2000-2006ರ ಸಮಯದಲ್ಲಿ ನಡೆಯುವ ಕಾಲೇಜ್ ಲವ್ ಸ್ಟೋರಿಯನ್ನು ಈ ಚಿತ್ರದ ಮೂಲಕ ಹೇಳಹೊರಟಿದ್ದೇವೆ. ಆ ಕಾಲದಲ್ಲಿ 22-23ರ ವಯಸಿನ ಕಾಲೇಜು ವಿದ್ಯಾರ್ಥಿಗಳ ನಡುವೆ ಪ್ರೀತಿ, ಪ್ರೇಮದ ಪ್ರಕರಣಗಳು ಹೇಗೆಲ್ಲಾ ನಡೆಯುತ್ತಿತ್ತು ಎಂಬುದನ್ನು ಈ ಚಿತ್ರದಲ್ಲಿ ತೋರಿಸುತ್ತಿದ್ದೇವೆ" ಎನ್ನುತ್ತಾರೆ ರಜತ್ ಸೂರ್ಯವಂಶಿ.
ಮಾರ್ಚ್ ಮೊದಲ ವಾರದಿಂದ ಶೂಟಿಂಗ್ ಆರಂಭವಾಗಲಿದ್ದು, ಬೆಂಗಳೂರು, ಮೈಸೂರು, ಮಂಗಳೂರು, ಮಡಿಕೇರಿ ಹಾಗೂ ಕೇರಳದಲ್ಲಿ ಚಿತ್ರೀಕರಣ ನಡೆಸುವ ಯೋಜನೆ ಚಿತ್ರತಂಡಕ್ಕೆ ಇದೆ. ಈ ಚಿತ್ರದ ಐದು ಹಾಡುಗಳನ್ನು ಚೇತನ್ ದಾವ್ಯ ಕಂಪೋಸ್ ಮಾಡುತ್ತಿದ್ದಾರೆ. ಚಿತ್ರದ ನಾಯಕಿಯ ತಂದೆಯಾಗಿ ರಮೇಶ್ ಇಂದಿರಾ, ನಾಯಕನ ತಂದೆ, ತಾಯಿಯಾಗಿ ರವಿಭಟ್ - ಸ್ವಾತಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀರೋ ಸ್ನೇಹಿತನಾಗಿ ʻಕಾಮಿಡಿ ಕಿಲಾಡಿಗಳುʼ ಖ್ಯಾತಿಯ ಸೂರಜ್ ನಟಿಸುತ್ತಿದ್ದಾರೆ. ಸಾಗರ್ ಛಾಯಾಗ್ರಹಣ ಮಾಡುತ್ತಿದ್ದಾರೆ.