ʻಸ್ಲಮ್‌ಡಾಗ್ʼ ಟೀಸರ್ ರಿಲೀಸ್: ತಮಿಳು ನಟ ವಿಜಯ್ ಸೇತುಪತಿ ಎದುರು ಅಬ್ಬರಿಸಿದ ʻಸ್ಯಾಂಡಲ್‌ವುಡ್ ಸಲಗʼ
ಪುರಿ ಜಗನ್ನಾಥ ನಿರ್ದೇಶನದ ಪ್ಯಾನ್ ಇಂಡಿಯಾ ಚಿತ್ರ ‘ಸ್ಲಮ್‌ಡಾಗ್: 33 ಟೆಂಪಲ್ ರೋಡ್’ ಟೀಸರ್ ಮುಂಬೈನಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಚಿತ್ರದಲ್ಲಿ ವಿಜಯ್ ಸೇತುಪತಿ ಭಿಕ್ಷುಕನಾಗಿ ಪವರ್‌ಫುಲ್ ಸಂಭಾಷಣೆಗಳ ಮೂಲಕ ಮಿಂಚಿದ್ದರೆ, ಸ್ಯಾಂಡಲ್‌ವುಡ್ ‘ಸಲಗ’ ದುನಿಯಾ ವಿಜಯ್ ರಗಡ್ ವಿಲನ್ ಆಗಿ ವಿಶಿಷ್ಟ ಮ್ಯಾನರಿಸಂ ಮೂಲಕ ಅಬ್ಬರಿಸಿದ್ದಾರೆ.
-
‘ಮಕ್ಕಳ್ ಸೆಲ್ವನ್’ ವಿಜಯ್ ಸೇತುಪತಿ ಹಾಗೂ ನಿರ್ದೇಶಕ ಪುರಿ ಜಗನ್ನಾಥ್ ಕಾಂಬಿನೇಷನ್‌ನ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಸ್ಲಮ್‌ಡಾಗ್: 33 ಟೆಂಪಲ್ ರೋಡ್’ ಚಿತ್ರದ ಟೀಸರ್ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಈ ಟೀಸರ್‌ನಲ್ಲಿ ಸ್ಯಾಂಡಲ್‌ವುಡ್‌ನ ‘ಸಲಗ’ ದುನಿಯಾ ವಿಜಯ್ ಖಡಕ್ ವಿಲನ್ ಆಗಿ ಅಬ್ಬರಿದ್ದಾರೆ. ಟೀಸರ್‌ನಲ್ಲಿ ದುನಿಯಾ ವಿಜಯ್ ಅವರ ವಿಶೇಷ ಮ್ಯಾನರಿಸಂ ವಿಶೇಷವಾಗಿ ಎಲ್ಲರ ಗಮನ ಸೆಳೆದಿದ್ದಾರೆ.
ಈಗಾಗಲೇ ಬಿಡುಗಡೆಯಾಗಿದ್ದ ಚಿತ್ರದ ವಿಭಿನ್ನ ಟೈಟಲ್ ಹಾಗೂ ಫಸ್ಟ್ ಲುಕ್ ಪೋಸ್ಟರ್‌ಗಳು ಸಿನಿರಸಿಕರಲ್ಲಿ ಭಾರಿ ಕುತೂಹಲ ಮೂಡಿಸಿದ್ದವು. ಇದೀಗ ಬಿಡುಗಡೆಯಾಗಿರುವ ಪವರ್‌ಫುಲ್ ಟೀಸರ್ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಸದ್ಯ ವಿಲನ್ ಪಾತ್ರ ಮಾಡಿರುವ ಸಲಗ ವಿಜಯ್ ಕುಮಾರ್ ಅವರಿಗೆ ಪುರಿ ಜಗನ್ನಾಥ್, ಚಾರ್ಮಿ ಕೌರ್ ಮತ್ತು ವಿಜಯ್ ಸೇತುಪತಿ ಅವರು ಮನಸಾರೆ ಹೊಗಳಿದ್ದಾರೆ.
Duniya Vijay: ದುನಿಯಾ ವಿಜಯ್ ಹೊಸ ತೆಲುಗು ಸಿನಿಮಾದಿಂದ ಹೊರ ಬಿತ್ತು ಬಿಗ್ ಅಪ್ಡೇಟ್!
ಟೀಸರ್ ಝಲಕ್ ಹಾಗೂ ಡೈಲಾಗ್ ವೈರಲ್
“ಒಂದು ಮಳೆ ಬಿದ್ದರೆ ಕಾಗೆಗಳಂತೆ ಮರದ ಕೆಳಗೆ ಅಡಗಿಕೊಳ್ಳುವ ಬದುಕು ನಮ್ಮದು. ಅಂತಹ ನಮ್ಮ ಜೀವನದ ಜೊತೆ ಆಟವಾಡಿದರೆ ನಾನು ಸುಮ್ಮನೆ ಬಿಡಬೇಕಾ?” ಎಂದು ನಾಯಕ ವಿಜಯ್ ಸೇತುಪತಿ ತಮ್ಮದೇ ಸ್ವಂತ ಧ್ವನಿಯಲ್ಲಿ ಹೇಳುವ ಪವರ್‌ಫುಲ್ ಡೈಲಾಗ್‌ನೊಂದಿಗೆ ಟೀಸರ್ ಆರಂಭವಾಗುತ್ತದೆ. ಚಿತ್ರದಲ್ಲಿ ವಿಜಯ್ ಸೇತುಪತಿ ಭಿಕ್ಷುಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ಹಿರಿಯ ನಟಿ ಟಬು ಖಡಕ್ ಪೊಲೀಸ್ ಅಧಿಕಾರಿಯಾಗಿ ಅಬ್ಬರಿಸಿದ್ದಾರೆ. ಇನ್ನುಳಿದಂತೆ ಇವರಿಬ್ಬರ ಎದುರು ಸ್ಯಾಂಡಲ್‌ವುಡ್ ನಟ ದುನಿಯಾ ವಿಜಯ್ ರಗಡ್ ವಿಲನ್ ಪಾತ್ರದಲ್ಲಿ ಸಖತ್ ಮಾಸ್ ಆಗಿ ಮಿಂಚಿದ್ದಾರೆ.
ಮತ್ತೆ ಮ್ಯಾಜಿಕ್ ಮಾಡಿದ ಪುರಿ ಜಗನ್ನಾಥ್ ಶೈಲಿ
ಹೀರೋ ಎಂಟ್ರಿ ಸೀನ್‌ನಿಂದ ಹಿಡಿದು, ಪವರ್‌ಫುಲ್ ಡೈಲಾಗ್ಸ್ ಮತ್ತು ಆಕ್ಷನ್ ಸನ್ನಿವೇಶಗಳವರೆಗೆ ಟೀಸರ್‌ನ ಪ್ರತಿಯೊಂದು ಫ್ರೇಮ್‌ನಲ್ಲೂ ನಿರ್ದೇಶಕ ಪೂರಿ ಜಗನ್ನಾಥ್ ಅವರ ವಿಶಿಷ್ಟ ಶೈಲಿಯ ಛಾಪು ಎದ್ದು ಕಾಣುತ್ತಿದೆ. ಹರ್ಷವರ್ಧನ್ ರಾಮೇಶ್ವರ್ ನೀಡಿರುವ ಹಿನ್ನೆಲೆ ಸಂಗೀತ ಮತ್ತು ವಿಶುವಲ್ಸ್ ಪ್ರಮುಖ ಆಕರ್ಷಣೆಯಾಗಿದ್ದು, ಒಟ್ಟಾರೆಯಾಗಿ ಈ ಟೀಸರ್ "ಪೂರಿ ಈಸ್ ಬ್ಯಾಕ್" ಎನ್ನುವ ಭರವಸೆಯನ್ನು ಮೂಡಿಸಿದೆ.
ತಾರಾಗಣವೇ ಈ ಸಿನಿಮಾದ ಹೈಲೈಟ್
ಈ ಚಿತ್ರದಲ್ಲಿ ವಿಜಯ್ ಸೇತುಪತಿಗೆ ಜೋಡಿಯಾಗಿ ಸಂಯುಕ್ತಾ ಮೆನನ್ ನಟಿಸುತ್ತಿದ್ದಾರೆ. ಉಳಿದಂತೆ ಜರೀನಾ ವಹಾಬ್, ವಿಟಿವಿ ಗಣೇಶ್, ಬ್ರಹ್ಮಾಜಿ ಸೇರಿದಂತೆ ದಕ್ಷಿಣ ಭಾರತದ ಪ್ರಮುಖ ತಾರಾಗಣ ಈ ಚಿತ್ರದಲ್ಲಿದೆ. ‘ಪೂರಿ ಕನೆಕ್ಟ್ಸ್’ ಬ್ಯಾನರ್ ಅಡಿಯಲ್ಲಿ ಪೂರಿ ಜಗನ್ನಾಥ್ ಹಾಗೂ ಚಾರ್ಮಿ ಕೌರ್ ಜಂಟಿಯಾಗಿ ಈ ಹೈ-ಬಜೆಟ್ ಚಿತ್ರವನ್ನು ನಿರ್ಮಿಸಿದ್ದು, ಜೆಬಿ ಮೋಷನ್ ಪಿಕ್ಚರ್ಸ್‌ನ ಜೆಬಿ ನಾರಾಯಣರಾವ್ ಸಹ-ನಿರ್ಮಾಪಕರಾಗಿದ್ದಾರೆ. ಈ ಸಿನಿಮಾವು ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಸೇರಿದಂತೆ ಭಾರತದ ಪ್ರಮುಖ ಭಾಷೆಗಳಲ್ಲಿ ಏಕಕಾಲಕ್ಕೆ ವಿಶ್ವದಾದ್ಯಂತ ತೆರೆಕಾಣಲು ಸಜ್ಜಾಗಿದೆ.