ರಾಜ್ ಬಿ. ಶೆಟ್ಟಿ ಅಭಿನಯದ 'ರಕ್ಕಸಪುರದೋಳ್' ಚಿತ್ರವು ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ 25 ದಿನ ಪೂರೈಸಿದ್ದು, 50ನೇ ದಿನದತ್ತ ಮುನ್ನುಗುತ್ತಿದೆ. ಈ ಚಿತ್ರವು 2026ರ ಮೊದಲ ಸೂಪರ್ ಹಿಟ್ ಎಂಬ ಹೆಗ್ಗಳಿಕೆಗೆ ಅಧಿಕೃತವಾಗಿ ಪಾತ್ರವಾಗಿದೆ. ಪರಭಾಷೆಯ ಸಾಲು ಸಾಲು ದೊಡ್ಡ ಬಜೆಟ್ ಸಿನಿಮಾಗಳು ತೆರೆಗೆ ಬಂದಿದ್ದರೂ ಸಹ, 'ರಕ್ಕಸಪುರದೋಳ್' ಚಿತ್ರದ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಈಗಲೂ ಬೆಂಗಳೂರಿನ ಬಹುತೇಕ ಮಲ್ಟಿಪ್ಲೆಕ್ಸ್‌ನಲ್ಲಿ ಈ ಸಿನಿಮಾದ ಪ್ರದರ್ಶನ ಕಾಣುತ್ತಿದೆ.
ಇದು ರವಿವರ್ಮಾ ನಿರ್ಮಾಣದ ಸಿನಿಮಾ
ಖ್ಯಾತ ಸಾಹಸ ನಿರ್ದೇಶಕ ಡಾ. ಕೆ. ರವಿವರ್ಮಾ ಅವರ ಚೊಚ್ಚಲ ನಿರ್ಮಾಣದಲ್ಲಿ ಮೂಡಿಬಂದಿರುವ 'ರಕ್ಕಸಪುರದೋಳ್' ಚಿತ್ರಕ್ಕೆ ರವಿ ಸಾರಂಗ ಅವರು ಆಕ್ಷನ್ ಕಟ್ ಹೇಳಿದ್ದಾರೆ. ಅವರಿಗೂ ಕೂಡ ನಿರ್ದೇಶನದ ಮೊದಲ ಸಿನಿಮಾ. ರವಿವರ್ಮಾ ಅವರ ಸಿನಿಮಾ ನಿರ್ಮಾಣ ಮಾಡಬೇಕೆಂಬ ಕನಸಿಗೆ ಮೊದಲ ಪ್ರಯತ್ನದಲ್ಲೇ ಕನ್ನಡಿಗರಿಂದ ಪ್ರೀತಿ ಸಿಕ್ಕಿದ್ದು, ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸು ಕಂಡಿದೆ. ವಾರಾಂತ್ಯಗಳಲ್ಲಿ ರಾಜ್ಯಾದ್ಯಂತ ಮಲ್ಟಿಪ್ಲೆಕ್ಸ್ ಹಾಗೂ ಸಿಂಗಲ್ ಸ್ಕ್ರೀನ್‌ಗಳಲ್ಲಿ ಹೌಸ್‌ಫುಲ್ ಪ್ರದರ್ಶನಗಳು ಕಾಣುತ್ತಿರುವುದು ಚಿತ್ರದ ಜನಪ್ರಿಯತೆಗೆ ಸಾಕ್ಷಿಯಾಗಿದೆ.
ಅನಿರುದ್ಧ್ ಭಟ್ ನಟನೆಗೆ ಫಿದಾ
ಈ ಚಿತ್ರದ ಗೆಲುವಿಗೆ ಪ್ರಮುಖ ಕಾರಣವಾಗಿರುವುದು ಇದರ ವಿಭಿನ್ನ ಕಥಾಹಂದರ. ಪೊಲೀಸ್ ಅಧಿಕಾರಿಯಾಗಿ ರಾಜ್ ಬಿ. ಶೆಟ್ಟಿ ಗಮನಸೆಳೆಯುವಂತಹ ಅಭಿನಯ ನೀಡಿದರೆ, ಖಳ ನಟನ ಪಾತ್ರದಲ್ಲಿ ಅನಿರುದ್ಧ್ ಭಟ್ ಅವರ ಅಭಿನಯವು ಈ ಚಿತ್ರದ ಮತ್ತೊಂದು ಹೈಲೈಟ್ ಎನ್ನಬಹುದು. ಅರ್ಚನಾ ಕೊಟ್ಟಿಗೆ, ಸ್ವಾತಿಷ್ಟ ಕೃಷ್ಣ, ಜಹಾಂಗೀರ್, ಬಿ. ಸುರೇಶ, ಗೌರವ್ ಶೆಟ್ಟಿ ಮುಂತಾದವರ ನಟನೆ ಕೂಡ ಪ್ರೇಕ್ಷಕರನ್ನು ಇಷ್ಟವಾಗಿತ್ತು.
'ರಕ್ಕಸಪುರದೋಳ್' ಚಿತ್ರದ ಸಸ್ಪೆನ್ಸ್ ತುಂಬಿದ ಥ್ರಿಲ್ಲರ್ ಸಬ್ಜೆಕ್ಟ್ ಪ್ರೇಕ್ಷಕರಿಗೆ ಹೊಸ ಅನುಭವ ನೀಡಿದೆ. ಕೇವಲ ನಟನೆಯಷ್ಟೇ ಅಲ್ಲದೆ, ಚಿತ್ರದ ಹಿನ್ನೆಲೆ ಸಂಗೀತ ಮತ್ತು ಛಾಯಾಗ್ರಹಣ ವಿಭಾಗದಲ್ಲೂ 'ರಕ್ಕಸಪುರದೋಳ್' ಉನ್ನತ ಗುಣಮಟ್ಟವನ್ನು ಕಾಯ್ದುಕೊಂಡಿದೆ. ಸದ್ಯದ ಪರಿಸ್ಥಿತಿಯಲ್ಲಿ ಒಂದು ಸಿನಿಮಾ ಚಿತ್ರಮಂದಿರದಲ್ಲಿ ಎರಡು ವಾರ ಉಳಿಯುವುದೇ ದೊಡ್ಡ ಸವಾಲಾಗಿದೆ. ಅಂತಹ ಸನ್ನಿವೇಶದಲ್ಲಿ 'ರಕ್ಕಸಪುರದೋಳ್' ಸುಮಾರು 50ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ 25 ದಿನ ಪೂರೈಸಿ, ಅರ್ಧಶತಕ ಬಾರಿಸಲು ಸಜ್ಜಾಗುತ್ತಿದೆ. ಮೂಲಗಳ ಪ್ರಕಾರ, ಈ ಚಿತ್ರಕ್ಕೆ ಹೂಡಿದ ಬಂಡವಾಳಕ್ಕಿಂತ ಎರಡು ಪಟ್ಟು ಹೆಚ್ಚಿನ ಲಾಭ ಕೇವಲ ಚಿತ್ರಮಂದಿರದದಿಂದಲೇ ವಾಪಸಾಗಿದೆಯಂತೆ.
ಸದ್ಯದ ಸಕ್ಸಸ್ ಪಡೆದ ಖುಷಿಯಲ್ಲಿರುವ ಚಿತ್ರತಂಡ, ಶೀಘ್ರದಲ್ಲೇ ದೊಡ್ಡ ಮಟ್ಟದ ವಿಜಯೋತ್ಸವ ಹಮ್ಮಿಕೊಳ್ಳಲು ಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ಚಿತ್ರದ ಅಸಲಿ ಬಾಕ್ಸ್ ಆಫೀಸ್ ಗಳಿಕೆಯ ಅಧಿಕೃತ ಅಂಕಿಅಂಶಗಳನ್ನು ಹಂಚಿಕೊಳ್ಳುವುದಾಗಿ ಚಿತ್ರತಂಡ ತಿಳಿಸಿದೆ.