Sathyanarayana Rao Gaikwad: ರಜನಿಕಾಂತ್ ಸಹೋದರನ ಆರೋಗ್ಯದಲ್ಲಿ ಚೇತರಿಕೆ; ಆಸ್ಪತ್ರೆಯಿಂದ ಡಿಸ್‌ಚಾರ್ಚ್
Superstar Rajinikanth: ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಅವರ ಸಹೋದರ ಸತ್ಯನಾರಾಯಣ ರಾವ್ ಗಾಯಕ್ವಾಡ್ ಸದ್ಯ ಚೇತರಿಸಿಕೊಂಡಿದ್ದು, ಶನಿವಾರ (ನವೆಂಬರ್ 8) ಡಿಸ್‌ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ನಾರಾಯಣ ಹೃದಯಾಲಯದಲ್ಲಿ ಸತ್ಯನಾರಾಯಣ ರಾವ್ ಅವರಿಗೆ 2 ದಿನಗಳ ಕಾಲ ಚಿಕಿತ್ಸೆ ನೀಡಲಾಗಿತ್ತು.
ಆಸ್ಪತ್ರೆಯಿಂದ ಡಿಸ್‌ಚಾರ್ಚ್ ಆದ ರಜನಿಕಾಂತ್ ಸಹೋದರ ಸತ್ಯನಾರಾಯಣ ರಾವ್ ಗಾಯಕ್ವಾಡ್ (ಸಂಗ್ರಹ ಚಿತ್ರ). -
ಬೆಂಗಳೂರು, ನ. 9: ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದ ಸೂಪರ್ ಸ್ಟಾರ್ ರಜನಿಕಾಂತ್ (Superstar Rajinikanth) ಅವರ ಸಹೋದರ ಸತ್ಯನಾರಾಯಣ ರಾವ್ ಗಾಯಕ್ವಾಡ್ (Sathyanarayana Rao Gaikwad) ಸದ್ಯ ಚೇತರಿಸಿಕೊಂಡಿದ್ದು, ಶನಿವಾರ (ನವೆಂಬರ್ 8) ಡಿಸ್‌ಚಾರ್ಜ್ ಆಗಿ ಮನೆಗೆ ತೆರಳಿದ್ದಾರೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ನಾರಾಯಣ ಹೃದಯಾಲಯದಲ್ಲಿ ಸತ್ಯನಾರಾಯಣ ರಾವ್ ಅವರಿಗೆ 2 ದಿನಗಳ ಕಾಲ ಚಿಕಿತ್ಸೆ ನೀಡಲಾಗಿತ್ತು. ಚೆನ್ನೈಯಿಂದ ಸ್ವತಃ ರಜನಿಕಾಂತ್ ಆಗಮಿಸಿ ಅಣ್ಣನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಮತ್ತೆ ಅಣ್ಣನ ಆರೋಗ್ಯ ವಿಚಾರಿಸಲು ರಜನಿಕಾಂತ್ ಬೆಂಗಳೂರಿಗೆ ಆಗಮಿಸುವ ಸಾಧ್ಯತೆ ಇದೆ.
ನವೆಂಬರ್ 7ರಂದು 84 ವರ್ಷದ ಸತ್ಯನಾರಾಯಣ ರಾವ್ ಅವರಿಗೆ ಹೃದಯಾಘಾತವಾಗಿತ್ತು. ಆರಂಭದಲ್ಲಿ ಅವರು ಆಸ್ಪತ್ರೆಗೆ ದಾಖಲಾಗಲು ನಿರಾಕರಿಸಿದ್ದರು. ಸಹೋದರನ ಆರೋಗ್ಯದಲ್ಲಿ ಏರುಪೇರಾದ ಬೆನ್ನಲ್ಲೇ ರಜನಿಕಾಂತ್ ಬೆಂಗಳೂರಿಗೆ ಧಾವಿಸಿದ್ದರು.
ಆಸ್ಪತ್ರೆಗೆ ಭೇಟಿ ನೀಡಿದ ರಜನಿಕಾಂತ್:
Superstar #Rajinikanth rushes to Bengaluru to see his brother Sathyanarayana Rao, who has been hospitalized because of health issues.. pic.twitter.com/wAAn7uLqGo
— Laxmi Kanth (@iammoviebuff007) November 8, 2025
ಬಳಿಕ ರಜನಿಕಾಂತ್ ಮನವೊಲಿಸಿ ಅಣ್ಣನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯರ ಸಲಹೆಯಂತೆ 2 ದಿನಗಳ ಚಿಕಿತ್ಸೆ ಬಳಿಕ ಸತ್ಯನಾರಾಯಣ ರಾವ್ ಚೇತರಿಸಿಕೊಂಡಿದ್ದು, ಇದೀಗ ತಮ್ಮ ನಿವಾಸಕ್ಕೆ ಮರಳಿದ್ದಾರೆ. ಸಂಜೆ ತನಕ ಆಸ್ಪತ್ರಯಲ್ಲಿದ್ದು ಅಣ್ಣನ ಆರೈಕೆ ಮಾಡಿದ್ದ ರಜನಿಕಾತ್ ಬಳಿಕ ಚೆನ್ನೈಗೆ ತೆರಳಿದ್ದರು. ಇದೀಗ ಅಣ್ಣನ ಆರೋಗ್ಯ ವಿಚಾರಿಸಲು ವಾಪಸ್ ಬೆಂಗಳೂರಿಗೆ ಆಗಮಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಆಸ್ಪತ್ರೆಗೆ ರಜನಿಕಾಂತ್ ಭೇಟಿ ನೀಡಿದ ವಿಡಿಯೊ ಸದ್ಯ ವೈರಲ್ ಆಗುತ್ತಿದೆ.
ರಜನಿಕಾಂತ್ ಅವರಿಗೆ ಸತ್ಯನಾರಾಯಣ ರಾವ್ ಸಹೋದರ ಮಾತ್ರವಲ್ಲ ಮಾರ್ಗದರ್ಶಿಯೂ ಹೌದು. ರಜನಿಕಾಂತ್ ಸೂಪರ್‌ಸ್ಟಾರ್ ಆಗಿದ್ದಾರೆಂದರೆ ಅದಕ್ಕೆ ಕಾರಣ ಈ ಸತ್ಯನಾರಾಯಣ ರಾವ್ ಎನ್ನುತ್ತಾರೆ ಕುಟುಂಬಸ್ಥರು. ರಜನಿಕಾಂತ್ ಮೇಲೆ ಅವರು ಅಷ್ಟು ಪ್ರಭಾವ ಬೀರಿದ್ದಾರೆ. ರಜನಿಕಾಂತ್ ಅವರ ಬೆನ್ನೆಲುಬು ಎಂದೇ ಅವರು ಗುರುತಿಸಲ್ಪಡುತ್ತಾರೆ. ರಜನಿಕಾಂತ್ ಅವರ ವೈಯಕ್ತಿಕ ಮತ್ತು ವೃತ್ತಿ ಜೀವನದ ಬೆಳವಣಿಗೆಗೆ ಅವರ ಕೊಡುಗೆ ಅಪಾರ ಎನ್ನಲಾಗಿದೆ.
ಈ ಸುದ್ದಿಯನ್ನೂ ಓದಿ: Actor Rajinikanth: ಕಮಲ್ ಹಾಸನ್ ಜತೆಗಿನ ಚಿತ್ರದ ಬಳಿಕ ನಟನೆಗೆ ರಜನಿಕಾಂತ್ ವಿದಾಯ?
ರಜನಿಕಾಂತ್ ಸದ್ಯದ ಪ್ರಾಜೆಕ್ಟ್
ಕೆಲವು ತಿಂಗಳ ಹಿಂದೆ ರಿಲೀಸ್ ಆದ ʼಕೂಲಿʼ ಚಿತ್ರದಿಂದ ಸಾಧಾರಣ ಯಶಸ್ಸು ಗಳಿಸಿದ್ದ ರಜನಿಕಾಂತ್ ಸದ್ಯ ಹಲವು ಪ್ರಾಜೆಕ್ಟ್‌ಗಳಲ್ಲು ಬ್ಯುಸಿ ಇದ್ದಾರೆ. ʼಜೈಲರ್ 2' ಚಿತ್ರದ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿರುವ ಅವರು ಇತ್ತೀಚೆಗಷ್ಟೇ ತಮ್ಮ 173ನೇ ಸಿನಿಮಾವನ್ನು ಘೋಷಿಸಿದ್ದಾರೆ. ಈ ಚಿತ್ರವನ್ನು ಕಮಲ್ ಹಾಸನ್ ನಿರ್ಮಿಸುತ್ತಿರುವುದು ವಿಶೇಷ. ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಸಿ. ಸುಂದರ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಈ ಚಿತ್ರ 2027ರ ಸಂಕ್ರಾಂತಿ ವೇಳೆಗೆ ತೆರೆಗೆ ಬರುವ ಸಾಧ್ಯತೆ ಇದೆ.
ಇದಲ್ಲದೆ ರಜನಿಕಾಂತ್ ಮತ್ತು ಕಮಲ್ ಹಾಸನ್ ಹಲವು ದಶಕಗಳ ಬಳಿಕ ಮತ್ತೆ ಒಟ್ಟಿಗೆ ನಟಿಸಲು ಮುಂದಾಗಿದ್ದಾರೆ. ಈ ಚಿತ್ರವನ್ನೂ ಕಮಲ್ ಹಾಸನ್ ನಿರ್ಮಿಸುವ ಸಾಧ್ಯತೆ ಇದ್ದು, ಶೀಘ್ರದಲ್ಲೇ ಸೆಟ್ಟೇರಲಿದೆ ಎನ್ನುವ ಮಾತು ಕೇಳಿ ಬಂದಿದೆ. ಈ ಬಗ್ಗೆ ಅಧಿಕೃತ ಹೇಳಿಕೆ ಇನ್ನಷ್ಟೇ ಹೊರ ಬೀಳಬೇಕಿದೆ.