Thamma Movie: ಬಾಲಿವುಡ್‌ನಲ್ಲಿ ದೆವ್ವವಾಗಿ ಹೆದರಿಸಲು ಬಂದ ರಶ್ಮಿಕಾ ಮಂದಣ್ಣ; ʼಥಮ್ಮʼ ಚಿತ್ರ ಹೇಗಿದೆ?
Rashmika Mandanna: ರಶ್ಮಿಕಾ ಮಂದಣ್ಣ-ಆಯುಷ್ಮಾನ್ ಖುರಾನ ಮೊದಲ ಬಾರಿಗೆ ತೆರೆಮೇಲೆ ಒಂದಾದ ಬಾಲಿವುಡ್ ಚಿತ್ರ ʼಥಮ್ಮʼ ತೆತೆಗೆ ಬಂದಿದೆ. ಈ ಹಾರರ್ ಕಾಮಿಡಿ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅದಾಗ್ಯೂ ರಶ್ಮಿಕಾ ಪಾತ್ರಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.

-

ಮುಂಬೈ, ಅ. 21: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಸದ್ಯ ಬಾಲಿವುಡ್‌ನಲ್ಲೇ ತಳವೂರಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಿಂದಿ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ರಶ್ಮಿಕಾ ನಟನೆಯ ಈ ವರ್ಷದ 3ನೇ ಬಾಲಿವುಡ್ ಚಿತ್ರ ಥಮ್ಮ (Thamma Movie) ತೆರೆಗೆ ಬಂದಿದೆ. ಸಾಮಾನ್ಯವಾಗಿ ಪ್ರತಿ ಶುಕ್ರವಾರ ಸಿನಿಮಾಗಳು ರಿಲೀಸ್ ಆಗುತ್ತವೆ. ಆದರೆ ದೀಪಾವಳಿ ಪ್ರಯುಕ್ತ ಮಂಗಳವಾರ (ಅಕ್ಟೋಬರ್ 21) ʼಥಮ್ಮʼ ಬಿಡುಗಡೆಯಾಗಿದೆ. ರಾಷ್ಟ್ರಪ್ರಶಸ್ತಿ ವಿಜೇತ, ಬಾಲಿವುಡ್‌ನ ಪ್ರತಿಭಾವಂತ ನಟರಲ್ಲಿ ಒಬ್ಬರಾದ ಆಯುಷ್ಮಾನ್ ಖುರಾನ (Ayushmann Khurrana) ಜತೆಗೆ ರಶ್ಮಿಕಾ ಮೊದಲ ಬಾರಿಗೆ ಅಭಿನಯಿಸಿರುವ ಕಾರಣ ಈ ಚಿತ್ರ ಆರಂಭದಿಂದಲೇ ಭಾರಿ ಕುತೂಹಲ ಮೂಡಿಸಿದೆ. ಜತೆಗೆ ದೆವ್ವದ ಪಾತ್ರದಲ್ಲಿ ಇಬ್ಬರೂ ಮೊದಲ ಬಾರಿ ಕಾಣಿಸಿಕೊಂಡಿದ್ದ ನಿರೀಕ್ಷೆ ಹೆಚ್ಚಿಸಿದೆ. ಹಾಗಾದರೆ ಹೇಗಿದೆ ಚಿತ್ರ?
ಮ್ಯಾಡಾಕ್ ಫಿಲ್ಮ್ಸ್ ನಿರ್ಮಾಣದ ಈ ಚಿತ್ರಕ್ಕೆ ಹಾರರ್ ಸಿನಿಮಾದ ಮೂಲಕ ಬಾಲಿವುಡ್‌ನಲ್ಲಿ ಹೊಸದೊಂದು ಟ್ರಂಡ್ ಹುಟ್ಟು ಹಾಕಿರುವ ಆದಿತ್ಯ ಸರ್ಪೋದಾರರ್ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Thamma First Song Out: ʼಥಮ್ಮʼ ಬಾಲಿವುಡ್ ಚಿತ್ರದ ಮೊದಲ ಹಾಡು ರಿಲೀಸ್; ಮತ್ತೊಮ್ಮೆ ಬೋಲ್ಡ್ ಅವತಾರದಲ್ಲಿ ಮಾದಕವಾಗಿ ಹೆಜ್ಜೆ ಹಾಕಿದ ರಶ್ಮಿಕಾ ಮಂದಣ್ಣ
ʼಥಮ್ಮʼ ಚಿತ್ರದ ಹಾಡು ಇಲ್ಲಿದೆ:
ಚಿತ್ರದ ಕಥೆ ಕ್ರಿ.ಪೂ. 323ನೇ ಇಸವಿಯಲ್ಲಿ ಆರಂಭವಾಗುತ್ತದೆ. ಮೊದಲು ಪ್ರೇಕ್ಷಕರಿಗೆ ಹಲವು ವರ್ಷಗಳ ಕಾಲ ಜೈಲಿನಲ್ಲಿದ್ದ ಯಕ್ಷಾಸನ್ (ನವಾಝುದ್ದೀನ್ ಸಿದ್ದಿಖಿ)ನ ಪರಿಚಯವಾಗುತ್ತದೆ. ಬಳಿಕ ಪತ್ರಕರ್ತ ಅಲೋಕ್ ಗೋಯಲ್ (ಆಯುಷ್ಮಾನ್ ಖುರಾನಾ) ಕಂಡುಬರುತ್ತಾನೆ. ಸುದ್ದಿಯನ್ನು ಹುಡುಕುತ್ತ ಅವನು ಕಾಡಿಗೆ ತೆರಳುತ್ತಾನೆ. ಅಲ್ಲಿ ತಡಕ (ರಶ್ಮಿಕಾ ಮಂದಣ್ಣ)ನನ್ನು ಭೇಟಿಯಾಗುತ್ತಾನೆ. ಬಳಿಕ ಇಬ್ಬರೂ ಪರಸ್ಪರ ಪ್ರೀತಿಸತೊಡಗುತ್ತಾರೆ. ಅಷ್ಟಕ್ಕೂ ತಡಕ ಯಾರು? ಆಕೆಯ ಹಿನ್ನೆಲೆ ಏನು? ಎನ್ನುವುದೇ ಸಸ್ಪೆನ್ಸ್. ಹಲವು ತಿರುವು, ಟ್ವಿಸ್ಟ್‌ಗಳ ಮೂಲಕ ಚಿತ್ರ ಸಾಗುತ್ತದೆ. ಊಹೆಗೂ ಮೀರಿದ ಕ್ಲೈಮ್ಯಾಕ್ಸ್ ಇದೆ.
ಚಿತ್ರದಲ್ಲಿ ಆಯುಷ್ಮಾನ್ ಖುರಾನ ಜತೆಗೆ ರಶ್ಮಿಕಾ ಪಾತ್ರಕ್ಕೂ ಸಾಕಷ್ಟು ಸ್ಕ್ರೀನ್ ಸ್ಪೇಸ್ ಸಿಕ್ಕಿದೆ. ರಶ್ಮಿಕಾ ಚಿತ್ರದುದ್ದಕ್ಕೂ ತೆರೆಮೇಲೆ ಕಾಣಿಸಿಕೊಳ್ಳುತ್ತಾರೆ. ಜತೆಗೆ ಸಖತ್ ಗ್ಲ್ಯಾಮರಸ್ ಪಾತ್ರದಲ್ಲಿ ನೋಡುಗರ ಎದೆಬಡಿತ ಹೆಚ್ಚಿಸಿದ್ದಾರೆ. ಇವರಿಬ್ಬರ ಮಧ್ಯೆ ಹಲವು ಬೋಲ್ಡ್ ಸೀನ್‌ಗಳಿವೆ.
ಪ್ರೇಕ್ಷಕರು ಏನಂದ್ರು?
ಚಿತ್ರ ನೋಡಿದ ಪ್ರೇಕ್ಷಕರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಎಕ್ಸ್ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಹುತೇಕರು ರಶ್ಮಿಕಾ ಪಾತ್ರಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ʼʼಪ್ರತಿ ಬಾರಿಯೂ ಚಿತ್ರರಂಗವನ್ನು ಒಬ್ಬೊಬ್ಬರು ಆಳುತ್ತಾರೆ. ಇದು ರಶ್ಮಿಕಾ ಯುಗ. ಪ್ರಬಲ ಪಾತ್ರದ ಮೂಲಕ ಅವರು ಗಮನ ಸೆಳೆಯುತ್ತಾರೆʼʼ ಎಂದು ಒಬ್ಬರು ಬರೆದುಕೊಂಡಿದ್ದಾರೆ.
ʼʼಥಮ್ಮʼ ಹಾರರ್ ಮತ್ತು ಕಾಮಿಡಿ ಅಂಶಗಳನ್ನು ಒಳಗೊಂಡಿದೆ. ದೀಪಾವಳಿಯ ರಜೆಗೆ ಇದೊಂದು ಉತ್ತಮ ಆಯ್ಕೆʼʼ ಎಂದು ಇನ್ನೊಬ್ಬರು ತಿಳಿಸಿದ್ದಾರೆ. ʼʼನವಾಝುದ್ದೀನ್ ಸಿದ್ದಿಖಿ ವಿಲನ್ ಪಾತ್ರವನ್ನು ಉತ್ತಮವಾಗಿ ನಿಭಾಯಿಸಿದ್ದಾರೆʼʼ ಎಂದು ಮತ್ತೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಅದಾಗ್ಯೂ ಹಲವರು ಚಿತ್ರದ ಕಥೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಾಮೂಲಿ ಕಥೆ, ಇದರಲ್ಲಿ ಯಾವುದೇ ವಿಶೇಷತೆ ಇಲ್ಲ. ಮುಂದೇನಾಗಲಿದೆ ಎನ್ನುವುದನ್ನು ಸುಲಭವಾಗಿ ಊಹಿಸಬಹುದು ಎಂದಿದ್ದಾರೆ. ಒಟ್ಟಿನಲ್ಲಿ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಲಭ್ಯವಾಗುತ್ತಿದ್ದು, ಸಾಲು ಸಾಲು ರಜೆ ಹಿನ್ನಲೆಯಲ್ಲಿ ಕಲೆಕ್ಷನ್ ಎಷ್ಟು ಮಾಡಲಿದೆ ಎನ್ನುವ ಕುತೂಹಲ ಮೂಡಿದೆ.
ರಶ್ಮಿಕಾಗೆ ಗೆಲುವು ಸಿಗುತ್ತಾ?
ಈ ವರ್ಷ ರಶ್ಮಿಕಾ ಅವರ ಹಿಂದಿಯ ʼಛಾವಾʼ, ʼಸಿಕಂದರ್ʼ ಚಿತ್ರ ತೆರೆಕಂಡಿವೆ. ಈ ಪೈಕಿ ʼಛಾವಾʼ ಜಾಗತಿಕವಾಗಿ 800 ಕೋಟಿ ರೂ. ಕಲೆಕ್ಷನ್ ಮಾಡಿ ಸೂಪರ್ ಹಿಟ್ ಎನಿಸಿಕೊಂಡರೆ ʼಸಿಕಂದರ್ʼ ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿದೆ. ಇದೀಗ ʼಥಮ್ಮʼಗೆ ಯಾವ ರೀತಿ ಪ್ರೇಕ್ಷಕರು ಸ್ಪಂದಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.