ಅಯ್ಯೋ, ನಟಿ ರಶ್ಮಿಕಾ ಮಂದಣ್ಣ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್; 6 ವಾರ ಯಾವ ಸಿನಿಮಾ ಶೂಟಿಂಗ್‌ಗೂ ಬರಂಗಿಲ್ಲ!
ಖ್ಯಾತ ನಟಿ ರಶ್ಮಿಕಾ ಮಂದಣ್ಣ ಸಿನಿಮಾವೊಂದರ ಹಾಡಿನ ಚಿತ್ರೀಕರಣದ ವೇಳೆ ಡ್ಯಾನ್ಸ್ ಮಾಡುತ್ತಿದ್ದಾಗ ಜಾರಿ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾರೆ. ಸೊಂಟದ ಭಾಗಕ್ಕೆ ಬಲವಾದ ಪೆಟ್ಟಾಗಿದ್ದು, ವೈದ್ಯರು ಆರು ವಾರಗಳ ಕಾಲ ಕಟ್ಟುನಿಟ್ಟಿನ ವಿಶ್ರಾಂತಿಗೆ ಸೂಚಿಸಿದ್ದಾರೆ.
rashmika mandanna hip injured during song shooting and doctor advised rest six weeks rest -
ಖ್ಯಾತ ನಟಿ ರಶ್ಮಿಕಾ ಮಂದಣ್ಣ ಅವರ ಅಭಿಮಾನಿಗಳಿಗೆ ಒಂದು ಬ್ಯಾಡ್ ನ್ಯೂಸ್ ಸಿಕ್ಕಿದೆ. ಇನ್ನೂ ಆರು ವಾರಗಳ ರಶ್ಮಿಕಾ ಮಂದಣ್ಣ ಅವರು ಯಾವುದೇ ಶೂಟಿಂಗ್‌ಗೆ ಹಾಜರಾಗುವಂತಿಲ್ಲ! ಅಷ್ಟಕ್ಕೂ ಅಂಥದ್ದೇನಾಯ್ತು?
ಹೌದು, ರಶ್ಮಿಕಾಗೆ ಗಾಯವಾಗಿದೆ. ಶೂಟಿಂಗ್ ವೇಳೆ ಜಾರಿಬಿದ್ದ ಪರಿಣಾಮ, ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಆರು ವಾರಗಳ ಕಾಲ ರೆಸ್ಟ್ ಮಾಡುವಂತೆ ವೈದ್ಯರು ಸೂಚಿಸಿದ್ದಾರೆ. ಈಚೆಗಷ್ಟೇ ಸಾಲು ಸಾಲು ತೆಲುಗು ನಟರು ಗಾಯಗೊಂಡಿದ್ದರು. ಇದೀಗ ರಶ್ಮಿಕಾ ಕೂಡ ಸಾಲಿಗೆ ಸೇರ್ಪಡೆಗೊಂಡಿದ್ದಾರೆ.
ಅಷ್ಟಕ್ಕೂ ಆಗಿದ್ದೇನು?
ಸಿಕ್ಕಿರುವ ವರದಿಗಳ ಪ್ರಕಾರ, ಸಿನಿಮಾವೊಂದರ ಹಾಡಿನ ಚಿತ್ರೀಕರಣದ ವೇಳೆ ಡ್ಯಾನ್ಸ್ ಮಾಡುತ್ತಿದ್ದಾಗ ರಶ್ಮಿಕಾ ದಿಢೀರನೆ ಜಾರಿ ಬಿದ್ದಿದ್ದಾರೆ. ಪರಿಣಾಮ ಅವರ ಸೊಂಟದ ಭಾಗಕ್ಕೆ ಬಲವಾದ ಪೆಟ್ಟಾಗಿದೆ. ಅಪಘಾತ ಸಂಭವಿಸಿದ ತಕ್ಷಣವೇ ಚಿತ್ರತಂಡ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ರಶ್ಮಿಕಾ ಅವರನ್ನು ತಪಾಸಣೆಗೊಳಪಡಿಸಿದ ವೈದ್ಯರು ಸೊಂಟದ ಭಾಗಕ್ಕೆ ತೀವ್ರ ಗಾಯವಾಗಿದೆ ಎಂದು ದೃಢಪಡಿಸಿದ್ದು, ಕನಿಷ್ಠ 6 ವಾರಗಳ ಕಾಲ ಯಾವುದೇ ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ಕಟ್ಟುನಿಟ್ಟಿನ ಸಲಹೆ ನೀಡಿದ್ದಾರೆ.
ಚಿತ್ರೀಕರಣ ತಾತ್ಕಾಲಿಕ ಮುಂದೂಡಿಕೆ
ಈ ಅಪಘಾತದಿಂದಾಗಿ ರಶ್ಮಿಕಾ ಅಭಿನಯಿಸುತ್ತಿರುವ ಪ್ರಮುಖ ಸಿನಿಮಾಗಳ ಶೂಟಿಂಗ್‌ಗೆ ಬ್ರೇಕ್ ಬಿದ್ದಿದೆ. ಅವರು ಚೇತರಿಸಿಕೊಳ್ಳುವವರೆಗೆ ಡ್ಯಾನ್ಸ್ ಮತ್ತು ಫೈಟ್ ದೃಶ್ಯಗಳನ್ನೊಳಗೊಂಡ ಶಿಫ್ಟ್, ಶೆಡ್ಯೂಲ್‌ಗಳನ್ನು ನಿರ್ದೇಶಕರು ತಾತ್ಕಾಲಿಕವಾಗಿ ಮುಂದೂಡಿದ್ದಾರೆ. ಇದರಿಂದಾಗಿ ಅವರು ಕೆಲವು ದಿನಗಳ ಕಾಲ ಸಿನಿಮಾ ಚಿತ್ರೀಕರಣ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಿಂದ ದೂರವಿರಲಿದ್ದಾರೆ.
Rashmika-Vijay Wedding: ಮಹೆಂದಿ, ಹಳದಿ , ಸಂಗೀತ್ ಸೆರೆಮನಿ ದಿನಾಂಕ ರಿವೀಲ್; ʻವಿರೋಶ್ʼಮದುವೆ ಸಂಭ್ರಮ
ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ
ರಶ್ಮಿಕಾ ಮಂದಣ್ಣ ಪ್ರಸ್ತುತ ಹಲವು ದೊಡ್ಡ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ರವೀಂದ್ರ ಫುಲ್ಲೆ ನಿರ್ದೇಶನದ ಮೈಸಾ ಎಂಬ ನಾಯಕಿ ಪ್ರಧಾನ ಚಿತ್ರದಲ್ಲಿ ರಶ್ಮಿಕಾ ‘ಗೋಂಡ್’ ಬುಡಕಟ್ಟಿನ ಮಹಿಳೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಆಕ್ಷನ್ ಸೀಕ್ವೆನ್ಸ್ ಮತ್ತು ನೀರಿನಲ್ಲಿನ ದೃಶ್ಯಗಳ ಚಿತ್ರೀಕರಣ ಪೂರ್ಣಗೊಂಡಿತ್ತು. ಪತಿ ವಿಜಯ್ ದೇವರಕೊಂಡ ಜೊತೆ ರಣಬಾಲಿ ಚಿತ್ರದಲ್ಲೂ ರಶ್ಮಿಕಾ ನಟಿಸುತ್ತಿದ್ಧಾರೆ.
ಇತ್ತೀಚೆಗಷ್ಟೇ ರಾಮ್ ಚರಣ್, ನಂದಮೂರಿ ಬಾಲಕೃಷ್ಣ, ಜೂನಿಯರ್ ಎನ್‌ಟಿಆರ್ ಮುಂತಾದವರು ಶೂಟಿಂಗ್ ವೇಳೆ ಗಾಯಗೊಂಡಿದ್ದರು. ಈಗ ರಶ್ಮಿಕಾ ಮಂದಣ್ಣ ಕೂಡ ಗಾಯಗೊಂಡಿದ್ದು, ಅವರು ಶೀಘ್ರವಾಗಿ ಗುಣಮುಖರಾಗಿ ಮತ್ತೆ ಉತ್ಸಾಹದಿಂದ ಸೆಟ್‌ಗೆ ಮರಳಲಿ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾರೈಸುತ್ತಿದ್ದಾರೆ.