Hari Paraak Column: ಆಡಿಸಿ ನೋಡು ಬೀಳಿಸಿ ನೋಡು ಉರುಈ ಹೋಗದು- ಸಿರಾಜ್
ಮೊನ್ನೆ ಬಿಡುಗಡೆ ಆದ ಶೈನ್ ಶೆಟ್ಟಿ ಅವರ ನಾಯಕತ್ವದ ಶಂಕರಾಭರಣ ಸಿನಿಮಾ ನೋಡಿದ ಪ್ರೇಕ್ಷಕನ ಸ್ವಗತ. ಕಾಮಿಡಿ ಹಾರರ್ ಸಿನಿಮಾ ಅಂದ್ರು, ಸು ಫ್ರಮ್ ಸೋ ಥರ ಇದೆ. ಸಖತ್ತಾಗಿದೆ ಅಂದ್ರು. ಅದಕ್ಕೆ ನೋಡೋಣ ಅಂತ ಹೋಗಿದ್ದೆ. ಆದರೆ ಅತ್ಲಾಗೆ ಕಾಮಿಡಿನೂ ಅಲ್ಲ ಇತ್ಲಾಗೆ ಹಾರರ್ ಕೂಡ ಅಲ್ಲ ಅಂತ ಅನಿಸಿತು. ಮಂಗಳೂರು ಭಾಷೆ ಮಾತಾಡೋದನ್ನು ಕಾಮಿಡಿ ಅಂದುಕೊಂಡು ಹೇಗೆ ಸ್ವಾಮಿ ನಗೋದು ಜೀವ? ದೆವ್ವದ ಜೊತೆ ಕೂತು ಜಾಲಿಯಾಗಿ ಐಸ್ ಕ್ರೀಮ್ ತಿನ್ನುವ ನಾಯಕ.
-
ತುಂಟರಗಾಳಿ
ಸಿನಿಗನ್ನಡ
ಮೊನ್ನೆ ಬಿಡುಗಡೆ ಆದ ಶೈನ್ ಶೆಟ್ಟಿ ಅವರ ನಾಯಕತ್ವದ ಶಂಕರಾಭರಣ ಸಿನಿಮಾ ನೋಡಿದ ಪ್ರೇಕ್ಷಕನ ಸ್ವಗತ. ಕಾಮಿಡಿ ಹಾರರ್ ಸಿನಿಮಾ ಅಂದ್ರು, ಸು ಫ್ರಮ್ ಸೋ ಥರ ಇದೆ. ಸಖತ್ತಾಗಿದೆ ಅಂದ್ರು. ಅದಕ್ಕೆ ನೋಡೋಣ ಅಂತ ಹೋಗಿದ್ದೆ. ಆದರೆ ಅತ್ಲಾಗೆ ಕಾಮಿಡಿನೂ ಅಲ್ಲ ಇತ್ಲಾಗೆ ಹಾರರ್ ಕೂಡ ಅಲ್ಲ ಅಂತ ಅನಿಸಿತು. ಮಂಗಳೂರು ಭಾಷೆ ಮಾತಾಡೋದನ್ನು ಕಾಮಿಡಿ ಅಂದುಕೊಂಡು ಹೇಗೆ ಸ್ವಾಮಿ ನಗೋದು ಜೀವ? ದೆವ್ವದ ಜೊತೆ ಕೂತು ಜಾಲಿಯಾಗಿ ಐಸ್ ಕ್ರೀಮ್ ತಿನ್ನುವ ನಾಯಕ. ಈ ದೃಶ್ಯವನ್ನು ನೋಡಿ ಹೇಗೆ ಸ್ವಾಮಿ ಹೆದರಿಕೊಳ್ಳೋದು ಜೀವ? ನಿರ್ದೇಶಕ ಸುಮಂತ್ ಭಟ್ ಅವರಂತೂ ಮುಂದೆ ಇನ್ನೊಂದು ಸಿನಿಮಾ ಮಾಡೋಕೆ ಅವಕಾಶ ಸಿಗುತ್ತೋ ಇಲ್ವೋ ಅನ್ನೋ ಥರ, ತಲೆಗೆ ಹೊಳೆದಿದ್ದನ್ನೆ ಚಿತ್ರೀಕರಣ ಮಾಡಿದ್ದಾರೆ. ಒಂದೇ ರೀತಿಯ ಮತ್ತೆ ಮತ್ತೆ ಪುನಾರಾವರ್ತನೆ ಆಗುವ ದೃಶ್ಯಗಳಿಂದ ಕಿರಿಕಿರಿ ಆಗೋದೇ ಜಾಸ್ತಿ. ಇದಲ್ಲದೆ ಎಷ್ಟೊಂದ್ ವಿಷ್ಯಗಳನ್ನ ತೋರಿಸ್ತಾರೆ ಆದರೆ ಅವುಗಳಿಗೆ ಜಸ್ಟಿಫಿಕೇಷನ್ನೇ ಇಲ್ಲ. ಹಾರರ್ ಸೀನ್‌ಗಳಲ್ಲಿನ ಬ್ಯಾಕ್ ಗ್ರೌಂಡ್ ಸ್ಕೋರ್ ಅಂತೂ ದೆವ್ವಗಳಿಗೇ ಪ್ರೀತಿ. ನಗುವೇ ಬರದ ಕಾಮಿಡಿ ಸಿನಿಮಾ. ಭಯವೇ ಆಗದ ಹಾರರ್ ಸಿನಿಮಾ ಅಂದ್ರೆ ಇದೇ ಇರಬೇಕು. ಒಟ್ಟಿನಲ್ಲಿ ಪ್ರೀಮಿಯರ್ ಶೋಗಳಲ್ಲಿ ಅದ್ಭುತ, ಸೂಪರ್ ಅಂತ ಹೇಳುವ ಪ್ರಾಯೋಜಿತ ಪ್ರೇಕ್ಷಕರ ಮಾತನ್ನು ಕೇಳಿಕೊಂಡು ಸಿನಿಮಾ ನೋಡಬಾರದು ಅನ್ನೋದು ಇನ್ನೊಂದು ಸಲ ಪ್ರೂವ್ ಆಯಿತು.
ಲೂಸ್ ಟಾಕ್ – ಸಿರಾಜ್ ಅಹ್ಮದ್
ಏನ್ ಮಿಯಾ, ನಿನ್ನ ಗೌತಮ್ ಗಂಭೀರ್ ಟೀಮಿಗೆ ಸೆಲೆಕ್ಟ್ ಮಾಡಿಲ್ಲ ಅಂತ ಫುಲ್ ಸುದ್ದಿ ಆಗಿದೆ. ಏನಂತೆ ಗಂಭೀರ್ ಪ್ರಾಬ್ಲಮ್?
- ಅವರಿಗೆ ನನ್ನ ಹೆಸರು ಇಷ್ಟ ಆಗಲಿಲ್ಲವಂತೆ. ಐ ಮೀನ್, ನಾನು ಇಷ್ಟೊಂದ್ ಹೆಸರು ಮಾಡಿರೋದು ಅವರಿಗೆ ಇಷ್ಟ ಆಗಿಲ್ಲ ಅಂತೆ.
ಓಹೋ, ಹಂಗೆ, ಸರಿ, ನಿಂದು ಅವರದ್ದೂ ಏನಾದ್ರೂ ಪರ್ಸನಲ್ ಮ್ಯಾಟ್ರು ಇದೆಯಾ? ಯಾಕೆ ನಿನ್ನ ಕಂಡ್ರೆ ಆಗಲ್ಲ?
- ಅದೆಲ್ಲ ಸಿ‘ರಾಜ್ ಕೀ ಬಾತ್’ ಹೇಳೋಕಾಗಲ್ಲ
ಹೋಗ್ಲಿಬಿಡು, ಆದ್ರೆ ಮುಂದಿನ ಒನ್ ಡೇ ವಿಶ್ವಕಪ್‌ಗೂ ನಿನ್ನನ್ನ ಆಯ್ಕೆ ಮಾಡೋದು ಅನುಮಾನ ಅಂತಿದ್ದಾರಲ್ಲ?
- ಎವ್ವೆರಿ ಡಾಗ್ ಹ್ಯಾಸ್ ಒನ್ ಡೇ ಅಂತಾರಲ್ಲ, ಹಂಗೇ ನಂಗೂ ಒನ್ ಡೇ ಬಂದೇ ಬರುತ್ತೆ. ಗಂಭೀರ್‌ಗೂ ಒನ್ ಡೇ ಬರುತ್ತೆ.
ಅದು ನಿಜ ಬಿಡು, ಈಗ ನಿನ್ನ ಮನಸ್ಥಿತಿ ಹೆಂಗಿದೆ? ಆಡಿಸ್ತಾ ಇಲ್ಲ ಅಂತ ಬೇಜಾರಾ?
- ಹಂಗೆಲ್ಲ ಏನಿಲ್ಲ. ಧೈರ್ಯವಾಗೇ ಇದ್ದೀನಿ.
‘ಆಡಿಸಿ ನೋಡು’ ‘ಬೀಳಿಸಿ ನೋಡು’ ಉರುಳಿ ಹೋಗದು ಅಂತ ಅಣ್ಣಾವ್ರು ಹೇಳಿದ ಹಾಗೆ. ಸೂಪರ್, ಮತ್ತೆ ನಿನ್ನ ಮುಂದಿನ ನಡೆ?
- ಯಾವುದಕ್ಕೂ ಇರ್ಲಿ ಅಂತ ಸಿರಾಜ್ ಅಹ್ಮದ್ ಅನ್ನೋ ಹೆಸರನ್ನು ಶಿವರಾಜ್ ಕುಮಾರ್ ಅಂತ ಬದಲಾಯಿಸಿಕೊಳ್ಳೋಣ ಅಂತ ಪ್ಲ್ಯಾನ್ ಇದೆ.
(ಕಾಲ್ಪನಿಕ ಸಂದರ್ಶನ)
ಇದನ್ನೂ ಓದಿ: Hari Paraak Column: ಹಾಫ್, ಫುಲ್ ಮರ್ಡರ್- ಅಲ್ಪ ಪ್ರಾಣ, ಮಹಾಪ್ರಾಣ
ನೆಟ್ ಪಿಕ್ಸ್
ಖೇಮುವಿನದು ತುಂಬಾ ದೊಡ್ಡ ಪರಂಪರೆಯ ಹಿನ್ನೆಲೆ ಇರೋ ಕುಟುಂಬ. ಖೇಮು ಮನೆಯಲ್ಲಿ ಒಬ್ಬನೇ ಮಗ. ಹಾಗಾಗಿ ಆದಷ್ಟು ಬೇಗ ಮಗನಿಗೆ ಮದುವೆ ಮಾಡಿಬಿಡಬೇಕು ಎಂಬುದು ಅವರ ಅಪ್ಪ ಅಮ್ಮನ ಆಸೆ. ಅದರ ಜತೆ ಅವರಿಗಿದ್ದ ಇನ್ನೊಂದು ಆಸೆ ಎಂದರೆ ಮಗನಿಗೊಬ್ಬ ಮಗನೋ ಮಗಳೋ ಹುಟ್ಟಿ ತಮ್ಮ ವಂಶ ಬೆಳೆಯುತ್ತಿದೆ ಎಂಬುದನ್ನು ಖಚಿತ ಪಡಿಸಿಕೊಂಡೇ ತಾವು ಕಣ್ಣುಮುಚ್ಚಿಕೊಳ್ಳಬೇಕು ಎಂಬುದು. ಆದರೆ ಹಾಗಂತ ಖೇಮು ಅಪ್ಪ ಅಮ್ಮ ತೋರಿಸಿದ ಹುಡುಗಿಯನ್ನು ಕಣ್ಣುಮುಚ್ಚಿಕೊಂಡು ಒಪ್ಪಿಕೊಳ್ಳುವವನಲ್ಲ, ನನಗೆ ಇದೇ ಥರ ಹುಡುಗಿ ಬೇಕು ಎಂದು ಹಠ ಹಿಡಿದು ಕುಳಿತ. ಸರಿ ಮಗನ ಆಸೆಗೆ ಕಟ್ಟು ಬಿದ್ದು, ಜಾತಿ, ಹಣ, ಅಂತಸ್ತು ಎಲ್ಲವನ್ನೂ ಕಡೆಗಣಿಸಿ ಮನೆಯ ಹುಡುಗಿಯಾದರೂ ಸರಿ ಮಗನಿಗೊಂದು ಮದುವೆ ಮಾಡಿ ಮುಗಿಸಿಬಿಡಬೇಕು ಎಂದು ಖೇಮು ಅಪ್ಪ ಅಮ್ಮ ನಿರ್ಧಾರ ಮಾಡಿದರು. ಸರಿ ನೂರಾರು ಹುಡುಗಿಯರ ನಂತರ ಖೇಮುಗೆ ಖೇಮುಶ್ರೀ ಇಷ್ಟವಾದಳು. ನೋಡಲು ಲಕ್ಷಣವಾಗಿದ್ದ ಖೇಮುಶ್ರೀ ಅವನ ಅಪ್ಪ ಅಮ್ಮನಿಗೂ ಹಿಡಿಸಿದಳು. ಒಂದು ಮುಹೂರ್ತ ನೋಡಿ ಮದುವೆ ನಿಶ್ಚಯ ಮಾಡಿದರು. ಖೇಮುಶ್ರೀಯ ಕುಟುಂಬಕ್ಕೆ ಪರಿಚಯವಿದ್ದ ಒಬ್ಬ ಶಾಸ್ತ್ರಿಗಳೇ ಮದುವೆ ಉಸ್ತುವಾರಿ ನೋಡಿಕೊಂಡರು. ಮದುವೆ ಅದ್ಧೂರಿಯಾಗಿ ನಡೆಯಿತು.
ಎಲ್ಲರೂ ಖುಷ್, ಆದರೆ, ಮದುವೆಯಾಗಿ ಒಂದು ವರ್ಷವಾದರೂ ಖೇಮುಶ್ರೀಗೆ ಮಕ್ಕಳಾಗಲಿಲ್ಲ, ಕಂಡ ಕಂಡ ದೇವರಿಗೆ ಹರಕೆ ಹೊತ್ತರು. ಕಂಡ ಕಂಡ ಡಾಕ್ಟರಿಗೆ ತೋರಿಸಿದರು. ಮೂರು ವರ್ಷ ಕಳೆದರೂ ಯಾವುದೂ ಉಪಯೋಗವಾಗಲಿಲ್ಲ. ಕೊನೆಗೆ ಖೇಮುಶ್ರೀ ತಮಗೆ ಮದುವೆ ಮಾಡಿಸಿದ ಶಾಸ್ತ್ರಿಗಳ ಬಳಿಯೇ ಪರಿಹಾರ ಕೇಳಲು ಹೋದಳು.
‘ನೋಡಿ ಶಾಸ್ತ್ರಿಗಳೇ ಮದುವೆಯಾಗಿ ಮೂರು ವರ್ಷವಾಯಿತು. ಇನ್ನೂ ಮಕ್ಕಳಾಗಲಿಲ್ಲ, ಅತ್ತೆ ಮಾವ ನನ್ನನ್ನು ಹೀಯಾಳಿಸುತ್ತಾರೆ. ನನಗೆ ಸಂತಾನಭಾಗ್ಯ ಬೇಕು. ಇದಕ್ಕೆ ಏನಾದರೂ ಪರಿಹಾರ ಕೊಡಿ ಸ್ವಾಮಿ’ ಎಂದಳು. ಶಾಸ್ತ್ರಿಗಳು ಒಂದು ಕ್ಷಣ ಯೋಚನೆ ಮಾಡಿ, ‘ನೀನೇನೂ ಹೆದರಿಕೊಳ್ಳಬೇಡ ಮಗಳೇ, ನಾನು ನಾಳೆ ತಿರುಪತಿಗೆ ಹೋಗುತ್ತಿದ್ದೇನೆ. ನಿನ್ನ ಇಚ್ಛೆ ಈಡೇರಲಿ ಎಂದು ಅಲ್ಲಿ ವೆಂಕಟೇಶ್ವರನಿಗೆ ತುಪ್ಪದ ದೀಪ ಹಚ್ಚಿ ಬರುತ್ತೇನೆ’ ಎಂದರು.
ಇದೆಲ್ಲಾ ಆಗಿ ಮೂರು ವರ್ಷ ಕಳೆಯಿತು. ಒಂದು ದಿನ ಖೇಮುಶ್ರೀ ಮಾರ್ಕೆಟ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅದೇ ಶಾಸ್ತ್ರಿಗಳು ಸಿಕ್ಕಿದರು. ‘ಅರೇ ನೀನು ಖೇಮುಶ್ರೀ ಅಲ್ವಾ?’ ಎಂದರು. ‘ಹೌದು ಶಾಸ್ತ್ರಿಗಳೇ ಹೇಗಿದ್ದೀರ?’ ಎಂದು ಕೇಳಿದಳು ಖೇಮುಶ್ರೀ.
‘ನಂದ್ ಬಿಡಮ್ಮ. ನೀನ್ ಹೇಗಿದೀಯಾ ಹೇಳು. ನಿನಗೆ ಮಕ್ಕಳಾದವಾ?’ ಅಂತ ಕೇಳಿದರು. ಅದಕ್ಕೆ ಖೇಮುಶ್ರೀ ‘ಹೌದು ಸ್ವಾಮಿ, ನಿಮ್ಮ ಆಶೀರ್ವಾದದಿಂದ ಒಂದು ಬಾರಿ ಅವಳಿ ಜವಳಿ, ಇನ್ನೊಂದು ಬಾರಿ ತ್ರಿವಳಿ ಮಕ್ಕಳು, ಮೊನ್ನೆ ಮೂರನೇ ಬಾರಿ ಇನ್ನೊಂದು ಗಂಡು ಮಗು ಆಗಿದೆ ಅಂದಳು. ಅದಕ್ಕೆ ಶಾಸ್ತ್ರಿಗಳು’ ನೋಡು ತಿರುಪತಿ ವೆಂಕಟೇಶ್ವರ ಕೈಬಿಡಲ್ಲ ಅಂತ ನಾನು ಹೇಳಿರಲಿಲ್ವಾ? ಎನ್ನುತ್ತಾ ‘ಆದ್ಸರಿ ನಿನ್ನ ಗಂಡ ಖೇಮು ಎಲ್ಲಿ, ನಿನ್ ಜತೆ ಬರಲಿಲ್ವಾ ಅವನು?’ ಅಂತ ಕೇಳಿದರು.
ಅದಕ್ಕೆ ಖೇಮುಶ್ರೀ ಹೇಳಿದಳು ‘ಇಲ್ಲಾ ಶಾಸ್ತ್ರಿಗಳೇ ಅವರು ತಿರುಪತಿಗೆ ಹೋಗಿದ್ದಾರೆ’ ಅಂದಳು. ‘ಅದೇನು ಈಗ? ಏನ್ ವಿಶೇಷ? ತಿರುಪತಿಗೆ ಯಾಕೆ ಹೋಗಿದ್ದಾನೆ’ ಅಂತ ಶಾಸ್ತ್ರಿಗಳು ಕೇಳಿದ್ದಕ್ಕೆ ಖೇಮುಶ್ರೀ ಉತ್ತರ ಕೊಟ್ಟಳು ‘ನೀವು ಹಚ್ಚಿಟ್ಟಿದ್ರಲ್ಲ ತುಪ್ಪದ ದೀಪ, ಅದನ್ನ ಆರಿಸಿ ಬರೋಕೆ ಹೋಗಿದ್ದಾರೆ.
ಲೈನ್ ಮ್ಯಾನ್
ಕಂಡೀಷನ್ –
ಹೆಂಡತಿ- ರೀ, ನೀವು ತಿಂಗಳಿಗೆ 2 ದಿನ ಕುಡಿಯೋದು ಜಾಸ್ತಿ ಆಯಿತು. ಕಮ್ಮಿ ಮಾಡಿ.
- ಗಂಡ: ಸರಿ ಕಣೆ, ಇನ್ನು ಮುಂದೆ ತಿಂಗಳಿಗೆ 2 ದಿನ ಕುಡಿಯಲ್ಲ.
- ಗಂಡ ಏನಂತ ಕಮಿಟ್ ಆದ ಅಂತ ನಿಮಗೇನಾದ್ರೂ ಗೊತ್ತಾಯ್ತಾ?
ಜನರೇಷನ್ ಟಾಕ್ –
ಅಪ್ಪ- ನಿಂಗೆ ಎಷ್ಟಾಯ್ತು ವಯಸ್ಸು?
- ಮಗ- 11 - ಅಪ್ಪ- ನಿನ್ನ ವಯಸ್ಸಲ್ಲಿ ...ನಂಗೆ 12 ವರ್ಷ ಆಗಿತ್ತು ಗೊತ್ತಾ?
ಡಯಟ್ ಡೌಟ್
- ಡಯಟ್ ಮಾಡಿದ್ರೆ ದೊಡ್ ಮನುಷ್ಯರು ಅನ್ನಿಸಿಕೊಂಡವರು ಸಣ್ಣವರಾಗ್ತಾರಾ?
ವೈರುಧ್ಯ - ಒಂದೊಂದ್ಸಲ ಆ ದೇವರಿಗೆ ಮನುಷ್ಯತ್ವನೇ ಇಲ್ಲ ಅನ್ಸುತ್ತೆ.. ಗೋಡೆಗೆ ಮೊಳೆ ಹೊಡೆಯುವಾಗ ಸುತ್ತಿಗೆಯನ್ನು ಮೊಳೆಯಿಂದ ಎಷ್ಟು ದೂರದಲ್ಲಿ ಇಟ್ಟುಕೊಂಡಿರಬೇಕು ಅನ್ನುವ ಜ್ಞಾನ
- ಸೆನ್ಸ್ ಆಫ್ ಹ್ಯಾಮರ್
ವಾಷಿಂಗ್ ಡೌಟ್
- ಕೈ ತೊಳ್ಕೊಂಡ್ಮೇಲೆ ಉಗುರಿನ ಸಂಧಿಯಲ್ಲಿ ಸೋಪ್‌ನ ಪೀಸ್ ಸಿಕ್ಕಾಕೊಂಡಾಗ ಮತ್ತೆ ಸೋಪ್ ಹಾಕ್ಕೊಂಡು ಕೈ ತೊಳೆದುಕೋಬೇಕಾ?
ಕಾಫಿ ಕಲರ್ ಟೀಶರ್ಟ್‌ನ ಏನಂತಾರೆ ?
- ಯಾವುದೇ ಕಲರ್ ಇರ್ಲಿ, ಟೀಶರ್ಟೇ ಅಂತಾರೆ.
ಬೀಡಾ ಅಂಗಡಿಯಲ್ಲಿ ಕೆಲಸ ಮಾಡುವವನು
- ‘ಎಲೆ’ ಮಾನವ
ಕೀಟನಾಶಕ ಮಾರುವವನು
-‘ಹುಳು’ ಮಾನವ
ಪ್ರಕೃತಿ ಪ್ರೇಮದಿಂದ ಗಿಡ ನೆಡುವವನು
- ಅ‘ಮರ’ ಪ್ರೇಮಿ