ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

‘ಕೆಜಿಎಫ್ 2’ ಬಳಿಕ ಮತ್ತೆ ಸ್ಯಾಂಡಲ್‌ವುಡ್‌ಗೆ ರವೀನಾ ಟಂಡನ್ ಎಂಟ್ರಿ; ‘ಎ ಫಾರ್ ಆನಂದ್’ ಚಿತ್ರದಲ್ಲಿ ಶಿವಣ್ಣನಿಗೆ ಸಾಥ್!

A For Anand Movie: ಶ್ರೀನಿ ನಿರ್ದೇಶನದ ‘ಎ ಫಾರ್ ಆನಂದ್’ ಚಿತ್ರದಲ್ಲಿ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರೊಂದಿಗೆ ಬಾಲಿವುಡ್ ತಾರೆ ರವೀನಾ ಟಂಡನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೆಗಾ ಪ್ರಾಜೆಕ್ಟ್‌ನ ಚಿತ್ರೀಕರಣ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಆರಂಭಗೊಂಡಿದೆ. ಕೆಜಿಎಫ್ 2 ಬಳಿಕ ರವೀನಾ ಕನ್ನಡಕ್ಕೆ ಮರಳಿರುವುದು ಅಭಿಮಾನಿಗಳಲ್ಲಿ ಖುಷಿ ತಂದಿದೆ.

ಶಿವಣ್ಣನಿಗೆ ರವೀನಾ ಟಂಡನ್ ಸಾಥ್; ‘ಎ ಫಾರ್ ಆನಂದ್’ ಚಿತ್ರದಲ್ಲಿ ಸರ್‌ಪ್ರೈಸ್

-

Avinash GR
Avinash GR Oct 8, 2026 7:48 PM

ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್ ಹಾಗೂ ಬಹುಭಾಷಾ ನಟಿ ರವೀನಾ ಟಂಡನ್ ಇದೇ ಮೊದಲ ಬಾರಿಗೆ ಬೆಳ್ಳಿಪರದೆಯ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಬ್ಲಾಕ್‌ಬಸ್ಟರ್ ‘ಕೆಜಿಎಫ್: ಚಾಪ್ಟರ್ 2’ ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ರವೀನಾ ಟಂಡನ್ ಮತ್ತೆ ಕನ್ನಡ ಚಿತ್ರರಂಗಕ್ಕೆ ಮರಳಿದ್ದು, ಎಂ.ಜಿ. ಶ್ರೀನಿವಾಸ್ (ಶ್ರೀನಿ) ನಿರ್ದೇಶನದ ಬಹುನಿರೀಕ್ಷಿತ ‘ಎ ಫಾರ್ ಆನಂದ್’ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ.

1999ರಲ್ಲಿ ಸ್ಯಾಂಡಲ್‌ವುಡ್‌ಗೆ ರವೀನಾ ಎಂಟ್ರಿ

ಕನ್ನಡ ಚಿತ್ರರಂಗದಲ್ಲಿ ರವೀನಾ ಟಂಡನ್ ಅವರದ್ದು ವಿಶೇಷ ನಂಟು. 1999ರಲ್ಲಿ ಬಿಡುಗಡೆಯಾದ ರಿಯಲ್ ಸ್ಟಾರ್ ಉಪೇಂದ್ರ ಅವರ ಕಲ್ಟ್ ಕ್ಲಾಸಿಕ್ ‘ಉಪೇಂದ್ರ’ ಚಿತ್ರದ ಮೂಲಕ ಚಂದನವನ ಪ್ರವೇಶಿಸಿದ ರವೀನಾ, ಆ ಬಳಿಕ ದಶಕಗಳ ನಂತರ ‘ಕೆಜಿಎಫ್: ಚಾಪ್ಟರ್ 2’ ಚಿತ್ರದಲ್ಲಿ ರಮಿಕಾ ಸೇನ್ ಆಗಿ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಮಿಂಚಿದ್ದರು. ಬಾಲಿವುಡ್ ಸೇರಿದಂತೆ ಹಲವು ಚಿತ್ರರಂಗಗಳಲ್ಲಿ ತಮ್ಮದೇ ಛಾಪು ಮೂಡಿಸಿರುವ ಅವರು, ಕನ್ನಡದಲ್ಲಿ ಸದಾ ಪ್ರಬಲ ಮತ್ತು ವಿಶಿಷ್ಟ ಪಾತ್ರಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾ ಬಂದಿದ್ದಾರೆ. ಇದೀಗ ಶಿವರಾಜ್‌ಕುಮಾರ್ ಅವರ ಜೊತೆ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುವ ಮೂಲಕ ಹೊಸ ನಿರೀಕ್ಷೆ ಹುಟ್ಟುಹಾಕಿದ್ದಾರೆ.

ಕ್ಯಾಂಪಸ್‌ನಲ್ಲಿ ಅದ್ಧೂರಿ ಚಿತ್ರೀಕರಣ ಆರಂಭ

‘ಭೈರತಿ ರಣಗಲ್’ ನಂತರ ಸಾಲು ಸಾಲು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿರುವ ಶಿವರಾಜ್‌ಕುಮಾರ್, ಮುಂಬರುವ ರಜನಿಕಾಂತ್ ಅವರ ‘ಜೈಲರ್ 2’ ಚಿತ್ರದಲ್ಲೂ ನಟಿಸಿದ್ದು, ಅಕ್ಟೋಬರ್‌ 15ರಂದು ತೆರೆಗೆ ಬರಲಿದೆ. ಸದ್ಯ ಅವರು ಅಕ್ಟೋಬರ್‌ 7ರಿಂದ ‘ಎ ಫಾರ್ ಆನಂದ್’ ಚಿತ್ರದ ಚಿತ್ರೀಕರಣಕ್ಕೆ ಧುಮುಕಿದ್ದಾರೆ. ಬೆಂಗಳೂರಿನ ಪ್ರೆಸಿಡೆನ್ಸಿ ಯೂನಿವರ್ಸಿಟಿ ಕ್ಯಾಂಪಸ್‌ನಲ್ಲಿ ನಡೆದ ಮೊದಲ ದಿನದ ಶೂಟಿಂಗ್‌ನಲ್ಲಿ ನಟಿ ರವೀನಾ ಟಂಡನ್ ಭಾಗವಹಿಸಿದ್ದರು. ವಿಶ್ವವಿದ್ಯಾಲಯದ ಸಂಸ್ಥಾಪಕ ಅಧ್ಯಕ್ಷರಾದ ಡಾ. ನಿಸಾರ್ ಅಹ್ಮದ್ ಅವರ ಸಮ್ಮುಖದಲ್ಲಿ ನಡೆದ ವಿಶೇಷ ಪೂಜೆ ಹಾಗೂ ಸನ್ಮಾನ ಕಾರ್ಯಕ್ರಮದೊಂದಿಗೆ ಚಿತ್ರೀಕರಣವು ಅದ್ಧೂರಿಯಾಗಿ ಶುಭಾರಂಭಗೊಂಡಿದೆ.

‘ನನ್ನ ಈ ಸಿನಿಮಾ ಪಯಣಕ್ಕೆ ನೀವೇ ಬುನಾದಿ...’; ಸಿಂಗೀತಂ ಶ್ರೀನಿವಾಸರಾವ್ ನಿಧನಕ್ಕೆ ನಟ ಶಿವರಾಜ್‌ಕುಮಾರ್‌‌ ಸಂತಾಪ

ಮತ್ತೆ ಒಂದಾದ ‘ಘೋಸ್ಟ್’ ಕಾಂಬಿನೇಷನ್

ಶಿವರಾಜ್‌ಕುಮಾರ್ ಜೊತೆ ಈ ಹಿಂದೆ ‘ಘೋಸ್ಟ್’ ಸಿನಿಮಾ ಮಾಡಿದ್ದ ನಿರ್ದೇಶಕ ಶ್ರೀನಿ, ‘ಎ ಫಾರ್ ಆನಂದ್’ ಮೂಲಕ ಮತ್ತೊಮ್ಮೆ ಶಿವಣ್ಣನಿಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಈ ಚಿತ್ರಕ್ಕಾಗಿ ಬಹುದೊಡ್ಡ ತಾರಾಗಣವನ್ನೇ ಶ್ರೀನಿ ಒಟ್ಟುಗೂಡಿಸುತ್ತಿದ್ದು, ಚಿತ್ರದ ಮೇಲಿನ ಕೌತುಕವನ್ನು ಹೆಚ್ಚಿಸಿದ್ದಾರೆ. ಇದರ ನಡುವೆ, ನವೆಂಬರ್ 27ರಂದು ತೆರೆಕಾಣಲು ಸಜ್ಜಾಗಿರುವ ತಮ್ಮ ಬಹುನಿರೀಕ್ಷಿತ ‘ಬೀರ್‌ಬಲ್ 2’ ಚಿತ್ರದ ಬಿಡುಗಡೆಯ ತಯಾರಿಯಲ್ಲೂ ಶ್ರೀನಿ ತೊಡಗಿಸಿಕೊಂಡಿದ್ದಾರೆ.

ಪ್ರತಿಷ್ಠಿತ ‘ಗೀತಾ ಪಿಕ್ಚರ್ಸ್’ ಬ್ಯಾನರ್ ಅಡಿಯಲ್ಲಿ ಗೀತಾ ಶಿವರಾಜ್‌ಕುಮಾರ್ ‘ಎ ಫಾರ್ ಆನಂದ್’ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡುತ್ತಿದ್ದರೆ, ಮಹೇಂದ್ರ ಸಿಂಹ ಅವರ ಛಾಯಾಗ್ರಹಣ ಹಾಗೂ ದೀಪು ಎಸ್. ಕುಮಾರ್ ಅವರ ಸಂಕಲನ ಇರಲಿದೆ. ಸದ್ಯ ರವೀನಾ ಟಂಡನ್ ಅವರ ಸೇರ್ಪಡೆಯಿಂದಾಗಿ ‘ಎ ಫಾರ್ ಆನಂದ್’ ಚಿತ್ರತಂಡದ ತೂಕ ಮತ್ತಷ್ಟು ಹೆಚ್ಚಿದೆ.