Yash: ಮಗಳು ರಿಷಿಕಾ ಟೀಕಿಸುತ್ತಿರುವ ʻಟಾಕ್ಸಿಕ್ʼ ಸಿನಿಮಾವನ್ನು ಹೊಗಳಿದ್ದ ತಂದೆ ರಾಜೇಂದ್ರ ಸಿಂಗ್ ಬಾಬು! ಅಂದು ಈ ಹಿರಿಯ ನಿರ್ದೇಶಕರು ಹೇಳಿದ್ದೇನು?
ಯಶ್ ನಟನೆಯ 'ಟಾಕ್ಸಿಕ್' ಸಿನಿಮಾವು ಆಗಸ್ಟ್ 26 ರಂದು ಬಿಡುಗಡೆಯಾಗಲಿದೆ. ಈಗಾಗಲೇ ಭಾರಿ ನಿರೀಕ್ಷೆ ಹುಟ್ಟಿಸಿರುವ ಈ ಸಿನಿಮಾವನ್ನು ನಟಿ ರಿಷಿಕಾ ಸಿಂಗ್ ಟೀಕಿಸಿದ್ದು, ಯಶ್ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಈ ನಡುವೆ, ಅವರ ತಂದೆ ಹಿರಿಯ ನಿರ್ದೇಶಕ ಎಸ್. ವಿ. ರಾಜೇಂದ್ರ ಸಿಂಗ್ ಬಾಬು ಅವರು ಈ ಹಿಂದೆಯೇ ಯಶ್ ಅವರ ಹೆಮ್ಮೆಯಿಂದ ಮಾತನಾಡಿದ್ದ ಸಂದರ್ಶನದ ವಿಡಿಯೋ ವೈರಲ್ ಆಗಿದೆ.
-
ʻರಾಕಿಂಗ್ ಸ್ಟಾರ್ʼ ಯಶ್ ನಟನೆಯ ʻಟಾಕ್ಸಿಕ್ʼ ಸಿನಿಮಾವು ಆಗಸ್ಟ್ 26ರಂದು ತೆರೆಗೆ ಬರುವುದಕ್ಕೆ ರೆಡಿಯಾಗಿದೆ. ಈ ಸಿನಿಮಾದ ಟ್ರೇಲರ್ ಮತ್ತು ಹಾಡುಗಳು ಕೂಡ ಸಖತ್ ಟ್ರೆಂಡ್ ಆಗಿವೆ. ಈ ಮಧ್ಯೆ ಹಿರಿಯ ನಿರ್ದೇಶಕ ಎಸ್. ವಿ. ರಾಜೇಂದ್ರ ಸಿಂಗ್ ಬಾಬು ಅವರ ಪುತ್ರಿ, ನಟಿ ರಿಷಿಕಾ ಸಿಂಗ್ ಅವರು ʻಟಾಕ್ಸಿಕ್ʼ ಸಿನಿಮಾದ ಬಗ್ಗೆ ಟೀಕೆಗಳನ್ನು ಮಾಡಿದ್ದಾರೆ. "ನನ್ನ ಅಭಿಪ್ರಾಯ ತಿಳಿಸಿದ್ದೇನೆ" ಎಂದು ಹೇಳಿದ್ದಾರೆ ರಿಷಿಕಾ.
"ಹೆಣ್ಮಕ್ಳಿಗೆ ಅಂದ ಇದ್ರೆ ಚಂದ.. ಗಂಡು ಮಕ್ಳಿಗೆ ಮರ್ಯಾದೆ ಇದ್ರೆ ಚೆಂದ ಕಂದ.. ಇದೇನು ಪ್ಯಾಂಟ್ ಬಿಚ್ಕೊಂಡು ಆಗ್ಬಿಟ್ಟಿದ್ದೀಯ ಮಂಗ.." ಎಂದೆಲ್ಲಾ ನೇರವಾಗಿ ಕೌಂಟರ್ ಕೊಟ್ಟಿರುವ ರಿಷಿಕಾ, ಈಗ ಯಶ್ ಅಭಿಮಾನಿಗಳ ಆಕ್ರೋಶವನ್ನು ಕೂಡ ಎದುರಿಸುತ್ತಿದ್ದಾರೆ. ಇದೀಗ ರಿಷಿಕಾ ಸಿಂಗ್ ಅವರ ತಂದೆ ನಿರ್ದೇಶಕ ಎ. ವಿ. ರಾಜೇಂದ್ರ ಸಿಂಗ್ ಬಾಬು ಅವರು ಈ ಹಿಂದೆ ಯಶ್ ಅವರನ್ನು ಕೊಂಡಾಡಿದ್ದ ವಿಡಿಯೋ ವೈರಲ್ ಆಗುತ್ತಿದೆ.
ಹಿಂದೊಮ್ಮೆ ವಿಶ್ವವಾಣಿ ಟಿವಿಗೆ ನೀಡಿದ್ದ ಸಂದರ್ಶನದಲ್ಲಿ ಮಾತನಾಡಿದ್ದ ಸಿಂಗ್ ಬಾಬು, "ಸಮಯ ಬದಲಾಗಿದೆ. ಈಗ 'ಟಾಕ್ಸಿಕ್' ಭಾರತದಲ್ಲೇ ಹೆಚ್ಚು ಚರ್ಚೆಯಾಗುತ್ತಿರುವ ಚಿತ್ರ, ಅದಕ್ಕಾಗಿ ನಾವು ಹೆಮ್ಮೆಪಡಬೇಕು. ರಿಷಬ್ ಶೆಟ್ಟಿ ಅವರು ಮಾಡಿದ 'ಕಾಂತಾರ' ಮತ್ತು 'ಕೆ.ಜಿ.ಎಫ್' ಸಿನಿಮಾಗಳ ಬಗ್ಗೆಯೂ ನಮಗೆ ಹೆಮ್ಮೆಯಿರಬೇಕು. ನಾವೀಗ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಯೊಂದಿಗೆ ಪೈಪೋಟಿ ನಡೆಸುತ್ತಿದ್ದೇವೆ" ಎಂದು ಹೇಳಿದ್ದರು.
ಯಶ್‌ಗೆ ನನ್ನ ಸಿನಿಮಾಗಳೆಂದರೆ ತುಂಬಾ ಇಷ್ಟ
"ನಾನು ನಟ ಯಶ್ ಅವರನ್ನು ತುಂಬಾ ಗೌರವಿಸುತ್ತೇನೆ. ಒಮ್ಮೆ ನಮ್ಮ ತಂಗಿಯ ಸಿನಿಮಾದ ಮುಹೂರ್ತಕ್ಕೆ ಬಂದಿದ್ದಾಗ ನಾವಿಬ್ಬರೂ ಜೊತೆಯಾಗಿ ಊಟ ಮಾಡುತ್ತಿದ್ದೆವು. ಅವರಿಗೆ ನನ್ನ 'ಬಂಧನ' ಮತ್ತು 'ನಾಗರಹೊಳೆ' ಚಿತ್ರಗಳು ಎಂದರೆ ತುಂಬಾ ಇಷ್ಟ. ಆ ಸಿನಿಮಾಗಳಲ್ಲಿ ನಾನು ಪಟ್ಟ ಶ್ರಮದ ಬಗ್ಗೆ ಮಾತನಾಡುತ್ತಾ, "ಸರ್, ನಾವೂ 200 ಕೋಟಿ ರೂ. ವೆಚ್ಚದ ಸಿನಿಮಾ ಮಾಡುತ್ತೇವೆ ನೋಡಿ, ನಾವು ಬಿಡುವುದಿಲ್ಲ" ಎಂದು ಅತ್ಯಂತ ಆತ್ಮವಿಶ್ವಾಸದಿಂದ ಹೇಳಿದ್ದರು. ಅದನ್ನು ಹೇಗೆ ಮಾಡಬೇಕು, ಮಾರುಕಟ್ಟೆಗೆ ಹೇಗೆ ಪ್ರವೇಶಿಸಬೇಕು ಮತ್ತು ಹೇಗೆ ಮಾರ್ಕೆಟಿಂಗ್ ಮಾಡಬೇಕು ಎಂಬ ಸಂಪೂರ್ಣ ಅರಿವು ಅವರಿಗಿತ್ತು" ಎಂದು ನಿರ್ದೇಶಕ ಎಸ್. ವಿ. ರಾಜೇಂದ್ರ ಸಿಂಗ್ ಬಾಬು ಹೇಳಿದ್ದರು.
ಯಶ್ ಮತ್ತೆ ಟಾಕ್ಸಿಕ್ ಬಗ್ಗೆ ನಾವೆಲ್ಲ ಹೆಮ್ಮೆ ಪಡಬೇಕು!
ತಂತ್ರಜ್ಞಾನಕ್ಕೆ ತಕ್ಕಂತೆ ಕೆಲಸ ಮಾಡಬೇಕಿದೆ
"ಮಾನವನ ಭಾವನೆಗಳು ಎಂದಿಗೂ ಒಂದೇ ಆಗಿರುತ್ತವೆ. ಮನುಷ್ಯನ ನಗು, ಅಳು ಮತ್ತು ಕಣ್ಣೀರು ಸೇರಿದಂತೆ ಹೃದಯಕ್ಕೆ ಸ್ಪರ್ಶಿಸುವ ಸನ್ನಿವೇಶಗಳು ಯಾವತ್ತೂ ಬದಲಾಗುವುದಿಲ್ಲ. ತಂತ್ರಜ್ಞಾನವು ಕೇವಲ ಒಂದು ಹೊಸ ಮೆರುಗನ್ನು ನೀಡುತ್ತದೆಯೇ ವಿನಃ, ಒಳಗಿನ ಭಾವನಾತ್ಮಕ ವಸ್ತುವನ್ನು (ಕಂಟೆಂಟ್) ಬದಲಾಯಿಸಲು ಸಾಧ್ಯವಿಲ್ಲ. ಮಾನವೀಯ ಭಾವನೆಗಳನ್ನು ಹೊರತುಪಡಿಸಿ ಸಿನಿಮಾ ಮಾಡಲು ಸಾಧ್ಯವಿಲ್ಲ. ಆ ಕಾಲದಲ್ಲಿ ಈ ಮಟ್ಟದ ತಂತ್ರಜ್ಞಾನ ಇರಲಿಲ್ಲವಾದರೂ, ಅಂದಿನ ನಟರು ಅತ್ಯಂತ ಶ್ರೇಷ್ಠರಾಗಿದ್ದರು. ಇಂದಿನ ನಟರೂ ಶ್ರೇಷ್ಠರೇ, ಅವರು ಈ ಆಧುನಿಕ ತಂತ್ರಜ್ಞಾನಕ್ಕೆ ತಕ್ಕಂತೆ ಕೆಲಸ ಮಾಡಬೇಕಿದೆ" ಎಂದು ಸಿಂಗ್ ಬಾಬು ತಿಳಿಸಿದ್ದರು.
ಬದಲಾವಣೆಗೆ ಹೊಂದಿಕೊಳ್ಳಬೇಕು
"ಕಾಲ ಬದಲಾದಂತೆ ನಾವೂ ಬದಲಾಗುತ್ತಾ ಸಾಗಬೇಕು. 1940ರ ದಶಕದಲ್ಲಿದ್ದ ಹೊನ್ನಪ್ಪ ಭಾಗವತರ್ ಅವರಂತಹ ನಟರು ಸ್ವತಃ ಹಾಡುತ್ತಿದ್ದರು ಮತ್ತು ಆಗ ಸಿನಿಮಾಗಳಲ್ಲಿ ಹಾಡುಗಳೇ ಹೆಚ್ಚಿರುತ್ತಿದ್ದವು. ಕ್ರಮೇಣ ಆ ಪದ್ಧತಿ ಕಡಿಮೆಯಾಯಿತು. ಆನಂತರ ಡಾ. ರಾಜ್‌ಕುಮಾರ್ ಅವರ ಹೊರತಾಗಿ ಬೇರೆ ನಟರು ಹಾಡುವುದು ಅಪರೂಪವಾಯಿತು. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರಂತಹ ಹಿನ್ನೆಲೆ ಗಾಯಕರು ಬಂದ ಮೇಲೆ, ಅಭಿನಯದಲ್ಲಿ ಭಾವನೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕಿತು. ಹೀಗೆ ಒಂದೊಂದೇ ಬದಲಾವಣೆಗಳಾಗುತ್ತಾ ಹೋದಂತೆ, ನಾವು ಅದಕ್ಕೆ ಹೊಂದಿಕೊಳ್ಳುತ್ತಾ ಹೋಗಬೇಕಾಗುತ್ತದೆ" ಎಂದು ಎಸ್. ವಿ. ರಾಜೇಂದ್ರ ಸಿಂಗ್ ಹೇಳಿದ್ದರು.