ʻರಾಜಾ ಶಿವಾಜಿʼ ಅಬ್ಬರದ ಎದುರು ಡಲ್ ಹೊಡೆದ ಸಾಯಿ ಪಲ್ಲವಿಯ ʻಏಕ್ ದಿನ್ʼ; ಸೋಲಿನ ಸುಳಿಯಲ್ಲಿ ಆಮಿರ್ ಖಾನ್ ಮಗ
ರಿತೇಶ್ ದೇಶ್‌ಮುಖ್ ನಟಿಸಿ ನಿರ್ದೇಶಿಸಿದ ಐತಿಹಾಸಿಕ 'ರಾಜಾ ಶಿವಾಜಿ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆಯುತ್ತಿದ್ದು, ಎರಡೇ ದಿನಕ್ಕೆ 21.90 ಕೋಟಿ ರೂ. ಗಳಿಸಿದೆ. ಅತ್ತ ಆಮಿರ್ ಖಾನ್ ಪುತ್ರ ಜುನೈದ್ ಖಾನ್ ಮತ್ತು ಸಾಯಿ ಪಲ್ಲವಿ ಅಭಿನಯದ 'ಏಕ್ ದಿನ್' ಸಿನಿಮಾ ಕೇವಲ 2.15 ಕೋಟಿ ಗಳಿಸಿ ಹೀನಾಯ ಕುಸಿತ ಕಂಡಿದೆ.
-
ಬಾಲಿವುಡ್ ನಟ ಆಮಿರ್ ಖಾನ್ ಅವರ ಪುತ್ರ ಜುನೈದ್ ಖಾನ್ ನಟನೆಯ ʻಏಕ್ ದಿನ್ʼ ಸಿನಿಮಾವು ಮೇ 1ರಂದು ತೆರೆಕಂಡಿತ್ತು. ಇದು ಸಾಯಿ ಪಲ್ಲವಿ ನಟನೆಯ ಮೊದಲ ಹಿಂದಿ ಸಿನಿಮಾವೂ ಹೌದು. ಆದರೆ ಅದ್ಯಾಕೋ ಏಕ್ ದಿನ್ ಅಂದುಕೊಂಡ ಮಟ್ಟಕ್ಕೆ ಹವಾ ಮಾಡುತ್ತಿಲ್ಲ. ಬದಲಿಗೆ ಅದೇ ದಿನ ತೆರೆಕಂಡ ರಿತೇಶ್ ದೇಶ್‌ಮುಖ್ ಅಭಿನಯದ ಐತಿಹಾಸಿಕ 'ರಾಜಾ ಶಿವಾಜಿ' ಸಿನಿಮಾದ ಮುಂದೆ ಮಂಡಿಯೂರಿಬಿಟ್ಟಿದೆ. ಕಲೆಕ್ಷನ್ ವಿಚಾರದಲ್ಲಿ ʻರಾಜಾ ಶಿವಾಜಿʼ ಹೊಸ ದಾಖಲೆ ಬರೆಯುತ್ತಿದೆ.
ರಿತೇಶ್ ದೇಶ್‌ಮುಖ್ ನಟಿಸಿ, ನಿರ್ದೇಶಿಸಿರುವ 'ರಾಜಾ ಶಿವಾಜಿ' ಚಿತ್ರವನ್ನು ತಮ್ಮದೇ 'ಮುಂಬೈ ಫಿಲ್ಮ್ ಕಂಪನಿ' ಬ್ಯಾನರ್ ಅಡಿಯಲ್ಲಿ ಪತ್ನಿ ಜೆನಿಲಿಯಾ ದೇಶ್‌ಮುಖ್ ಅವರೊಂದಿಗೆ ಜಿಯೋ ಸ್ಟುಡಿಯೋಸ್ ಸಹಯೋಗದಲ್ಲಿ ಇದನ್ನು ನಿರ್ಮಿಸಿದ್ದಾರೆ. ಅತ್ತ ಆಮಿರ್ ಖಾನ್ ತಮ್ಮ 'ಅಮೀರ್ ಖಾನ್ ಪ್ರೊಡಕ್ಷನ್ಸ್' ಅಡಿಯಲ್ಲಿ 'ಏಕ್ ದಿನ್' ಚಿತ್ರವನ್ನು ನಿರ್ಮಿಸಿದ್ದು, ತಮ್ಮ ಪುತ್ರ ಜುನೈದ್ ಖಾನ್‌ಗೆ ಒಂದು ಭರ್ಜರಿ ಬ್ರೇಕ್ ನೀಡಬೇಕು ಎಂಬ ಅವರ ಕನಸು ನನಸಾಗುವ ಸಾಧ್ಯತೆಗಳು ಕ್ಷೀಣಿಸಿವೆ.
Ek Din Movie: ʻದೇಶದಲ್ಲೇ ಅತ್ಯುತ್ತಮ ನಟಿʼ; ಸಾಯಿ ಪಲ್ಲವಿ ಅಭಿನಯ ಕಂಡು ಭಾವುಕರಾಗಿ ಕಣ್ಣೀರಿಟ್ಟ ಆಮಿರ್ ಖಾನ್
ಹೇಗಿದೆ ಈ ಸಿನಿಮಾಗಳ ಗಳಿಕೆ
ಸ್ಯಾಕ್ನಿಲ್ಕ್ ವರದಿ ಪ್ರಕಾರ, ಬಾಕ್ಸ್ ಆಫೀಸ್‌ನಲ್ಲಿ 'ರಾಜಾ ಶಿವಾಜಿ' ಸಿನಿಮಾದ ಹವಾ ಜೋರಾಗಿದೆ. ಎರಡೇ ದಿನಕ್ಕೆ ಈ ಚಿತ್ರವು 21.90 ಕೋಟಿ ರೂಪಾಯಿಗಳನ್ನ ಸಂಪಾದಿಸಿದೆ. ಇದರಲ್ಲಿ 'ರಾಜಾ ಶಿವಾಜಿ' ಸಿನಿಮಾದ ಮರಾಠಿ ಮತ್ತು ಹಿಂದಿ ಎರಡೂ ವರ್ಷನ್‌ಗಳು ಸೇರಿವೆ. ಅತ್ತ 'ಏಕ್ ದಿನ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೀನಾಯ ಕುಸಿತ ಕಂಡಿದೆ. ಮೊದಲ ದಿನ 1.15 ಕೋಟಿ ಗಳಿಸಿದ್ದ ಈ ಸಿನಿಮಾ, ಎರಡನೇ ದಿನ ಕೇವಲ 1 ಕೋಟಿ ರೂಪಾಯಿ ಗಳಿಸಿದೆ. ಎರಡು ದಿನಗಳ ಒಟ್ಟು ಮೊತ್ತ 2.15 ಕೋಟಿ ರೂಪಾಯಿಯಾಗಿದೆ. ಅಂದರೆ, ಕಲೆಕ್ಷನ್ ವಿಚಾರದಲ್ಲಿ ರಾಜಾ ಶಿವಾಜಿ ಸಿನಿಮಾವು ಏಕ್ ದಿನ್‌ಗಿಂತ 10 ಪಟ್ಟು ಮುಂದಿದೆ.
ರಾಜಾ ಶಿವಾಜಿ ಸಿನಿಮಾದ ಕುರಿತು...
ಮರಾಠ ಸಾಮ್ರಾಜ್ಯದ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ ಕುರಿತ ಈ ಸಿನಿಮಾದಲ್ಲಿ ಶಿವಾಜಿ ಪಾತ್ರವನ್ನು ರಿತೇಶ್ ದೇಶ್‌ಮುಖ್ ನಿಭಾಯಿಸಿದ್ದಾರೆ. ಈ ಚಿತ್ರದಲ್ಲಿ ಜೆನಿಲಿಯಾ ದೇಶ್‌ಮುಖ್, ಅಭಿಷೇಕ್ ಬಚ್ಚನ್, ಸಂಜಯ್ ದತ್, ವಿದ್ಯಾ ಬಾಲನ್, ಮಹೇಶ್ ಮಾಂಜ್ರೇಕರ್, ಫರ್ದೀನ್ ಖಾನ್, ಭಾಗ್ಯಶ್ರೀ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. ನಟ ಸಲ್ಮಾನ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ರಿತೇಶ್ ಅವರ ಪುತ್ರರಾದ ರಾಹಿಲ್ ಮತ್ತು ರಿಯಾನ್ ಕೂಡ ಈ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ.
ಆಮಿರ್ ಖಾನ್ ನಿರ್ಮಾಣದ ʻಏಕ್ ದಿನ್ʼ
2016ರ ಥಾಯ್ ಸಿನಿಮಾ 'ಒನ್ ಡೇ' ಚಿತ್ರದ ರಿಮೇಕ್ ಆಗಿರುವ ಏಕ್ ದಿನ್ ಚಿತ್ರಕ್ಕೆ ಆಮಿರ್ ಖಾನ್ ಮಾಜಿ ಮ್ಯಾನೇಜರ್ ಸುನೀಲ್ ಪಾಂಡೆ ನಿರ್ದೇಶನ ಮಾಡಿದ್ದಾರೆ. ಐಟಿ ಉದ್ಯೋಗಿಯಾಗಿರುವ ರೋಹನ್ (ಜುನೈದ್) ತನ್ನ ಸಹೋದ್ಯೋಗಿ ಮೀರಾಳನ್ನು (ಸಾಯಿ ಪಲ್ಲವಿ) ಪ್ರೀತಿಸುತ್ತಿರುತ್ತಾನೆ, ಆದರೆ ಅದನ್ನು ಹೇಳಲು ಆತನಿಗೆ ಸಂಕೋಚ. ಜಪಾನ್ ಪ್ರವಾಸದ ವೇಳೆ ಮೀರಾ ಅಪಘಾತಕ್ಕೀಡಾಗಿ 'ಟ್ರಾನ್ಸಿಯಂಟ್ ಗ್ಲೋಬಲ್ ಅಮ್ನೇಷಿಯಾ' ಕಾಯಿಲೆಗೆ ತುತ್ತಾಗುತ್ತಾಳೆ. ಇದರಿಂದಾಗಿ ಆಕೆಗೆ ರೋಹನ್ ಹೊರತುಪಡಿಸಿ ಉಳಿದೆಲ್ಲರ ನೆನಪು 24 ಗಂಟೆಗಳ ಕಾಲ ಅಳಿಸಿಹೋಗುತ್ತದೆ. ಇದು ರೋಹನ್ ತನ್ನ ಕನಸಿನ ಪ್ರೇಮವನ್ನು ಕೇವಲ ಒಂದು ದಿನದ ಮಟ್ಟಿಗೆ ಅನುಭವಿಸಲು ಅವಕಾಶ ಮಾಡಿಕೊಡುತ್ತದೆ. ಇದು ಸಿನಿಮಾದ ಮುಖ್ಯ ಕಥಾವಸ್ತುವಾಗಿದೆ.