S Janaki: ʻನನ್ನ ಅಜ್ಜಿ ಈ ಜಗತ್ತಿಗೆ ಸೇರಿದವರು, ಅವರು ನಮ್ಮೆಲ್ಲರ ಹೃದಯಗಳಲ್ಲೂ ಇರುತ್ತಾರೆʼ; ಅಗಲಿದ ಜಾನಕಮ್ಮರನ್ನು ನೆನೆದ ಮೊಮ್ಮಗಳು, ಮಾಜಿ ಸೊಸೆ ಹೇಳಿದ್ದೇನು?
ದಕ್ಷಿಣ ಭಾರತದ ಹೆಮ್ಮೆಯ ಗಾನಕೋಗಿಲೆ ಎಸ್ ಜಾನಕಿ ಅವರ ಅಂತ್ಯಸಂಸ್ಕಾರವನ್ನು ಮೈಸೂರು ಜಿಲ್ಲೆಯ ಕಣಿಯನಹುಂಡಿ ಗ್ರಾಮದ ಫಾರ್ಮ್ ಹೌಸ್‌ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು. ಜಾನಕಮ್ಮ ಇಡೀ ಜಗತ್ತಿಗೆ ಸೇರಿದ ಸ್ವತಂತ್ರ ಮನಸ್ಸಿನ ಧ್ವನಿ ಎಂದು ಮೊಮ್ಮಗಳು ಹಾಗೂ ಮಾಜಿ ಸೊಸೆ ಉಮಾ ಮಾಧ್ಯಮಗಳ ಮುಂದೆ ಭಾವುಕರಾಗಿ ಹೇಳಿದ್ದಾರೆ.
-
ದಕ್ಷಿಣ ಭಾರತದ ಸ್ವರ ಸರಸ್ವತಿ, ಗಾನಕೋಗಿಲೆ ಎಸ್ ಜಾನಕಿ (88) ಅವರ ನಿಧನ ಇಡೀ ಭಾರತೀಯ ಚಿತ್ರರಂಗ ಹಾಗೂ ಕೋಟ್ಯಂತರ ಸಂಗೀತ ಪ್ರೇಮಿಗಳನ್ನು ಕಣ್ಣೀರಿಡುವಂತೆ ಮಾಡಿದೆ. ಮೈಸೂರಿನಲ್ಲಿ ವಿಧಿವಶರಾದ ಜಾನಕಮ್ಮ ಅವರ ಪಾರ್ಥಿವ ಶರೀರದ ಅಂತಿಮ ಸಂಸ್ಕಾರವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗಿದ್ದು, ಅವರ ಅಗಲಿಕೆಗೆ ಮೊಮ್ಮಗಳು ಅಪ್ಸರಾ ಹಾಗೂ ಮಾಜಿ ಸೊಸೆ ಉಮಾ ಮಾಧ್ಯಮಗಳ ಮುಂದೆ ನೋವನ್ನು ಹಂಚಿಕೊಂಡಿದ್ದಾರೆ.
ಕಣಿಯನಹುಂಡಿ ಫಾರಂ ಹೌಸ್‌ನಲ್ಲಿ ಅಂತ್ಯಸಂಸ್ಕಾರ
ಭಾನುವಾರ ಸಂಜೆ ವೇಳೆಗೆ ಮೃತರ ಪಾರ್ಥಿವ ಶರೀರವನ್ನು ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಕಣಿಯನಹುಂಡಿ ಗ್ರಾಮದಲ್ಲಿರುವ ಅವರ ಸ್ವಂತ ಫಾರಂ ಹೌಸ್‌ಗೆ ಕೊಂಡೊಯ್ಯಲಾಯಿತು. ಜಾನಕಿ ಅವರ ಪತಿ 1997ರಲ್ಲಿಯೇ ತೀರಿಹೋಗಿದ್ದರು ಮತ್ತು ಅವರ ಏಕೈಕ ಪುತ್ರ ಮುರಳಿಕೃಷ್ಣ ಅವರು ಕಳೆದ ಜನವರಿಯಲ್ಲಿ ಮೃತಪಟ್ಟಿದ್ದರು. ಆ ಹಿನ್ನೆಲೆಯಲ್ಲಿ ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಮೊಮ್ಮಗಳು ಅಪ್ಸರಾ ಅವರೇ ಅಜ್ಜಿಯ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು.
"ಅಜ್ಜಿ ನಮ್ಮ ಹೃದಯದಲ್ಲಿ ಸದಾ ಜೀವಂತ"
ಮಾಜಿ ಅತ್ತೆಯ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಚೆನ್ನೈನಿಂದ ಮಗಳು ಅಪ್ಸರಾ ಮತ್ತು ಅಳಿಯ ಗಣೇಶ್ ಅವರೊಂದಿಗೆ ಮೈಸೂರಿಗೆ ಮಾಜಿ ಸೊಸೆ ಉಮಾ ಆಗಮಿಸಿದ್ದರು. ಈ ವೇಳೆ ಮಾತನಾಡಿದ ಮೊಮ್ಮಗಳು ಅಪ್ಸರಾ, "ಇದು ನಮ್ಮ ಕುಟುಂಬಕ್ಕೆ ಮಾತ್ರವಲ್ಲ, ಇಡೀ ದೇಶಕ್ಕೇ ತುಂಬಲಾರದ ದೊಡ್ಡ ನಷ್ಟ. ನನ್ನ ಅಜ್ಜಿ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಬದುಕಿದರು, ಅದೇ ಅವರ ಅದ್ಭುತ ವೃತ್ತಿಜೀವನವನ್ನು ರೂಪಿಸಿತು. ನನಗೆ ಅವರ ದೈವಿಕ ಧ್ವನಿ ಮಾತ್ರವಲ್ಲ, ಅವರ ಸೌಮ್ಯ ಸ್ವಭಾವ, ದಯೆ ಮತ್ತು ನಮ್ರತೆ ತುಂಬಾ ಇಷ್ಟ. ಅದೆಲ್ಲವೂ ನನ್ನೊಂದಿಗೆ ಶಾಶ್ವತವಾಗಿ ಉಳಿಯುತ್ತದೆ" ಎಂದು ನೆನೆದರು.
"ಅವರು ದೇಶದ ಎಲ್ಲಾ ಭಾಷೆಗಳಲ್ಲಿ ಹಾಡಿದ್ದಾರೆ. ಅವರು ಯಾವುದೇ ಒಂದು ಪ್ರದೇಶಕ್ಕೆ ಸೀಮಿತವಾದವರಲ್ಲ, ಇಡೀ ರಾಷ್ಟ್ರಕ್ಕೆ ಹಾಗೂ ಈ ಜಗತ್ತಿಗೆ ಸೇರಿದವರು. ಅವರು ಸ್ವತಂತ್ರ ಮನೋಭಾವದವರಾಗಿದ್ದು, ಯಾವಾಗಲೂ ನಮ್ಮೆಲ್ಲರ ಹೃದಯಗಳಲ್ಲಿ ಇರುತ್ತಾರೆ. ಅವರದ್ದು ಮಗುವಿನಂತಹ ನಿಷ್ಕಲ್ಮಶ ಮನಸ್ಸು. ಅವರನ್ನು ಹತ್ತಿರದಿಂದ ಬಲ್ಲ ಯಾರಿಗಾದರೂ ಅವರ ಆ ಸುಂದರ ನಗು, ಮಗುವಿನ ಸ್ವಭಾವ ಮತ್ತು ಬುದ್ಧಿವಂತಿಕೆ ಚೆನ್ನಾಗಿ ತಿಳಿದಿದೆ. ಅವರು ಎಂದಿಗೂ ನಮ್ಮಿಂದ ದೂರವಾಗಲು ಸಾಧ್ಯವಿಲ್ಲ" ಎಂದು ಕಣ್ಣೀರು ಹಾಕಿದರು.
"ಅಭಿಮಾನಿಗಳೇ ಅವರ ಜೀವವಾಗಿದ್ದರು"
ಜಾನಕಮ್ಮ ಅವರ ಮಾಜಿ ಸೊಸೆ ಉಮಾ ಅವರು ಮಾತನಾಡಿ, "ನಾನು, ನನ್ನ ಮಗಳು ಅಪ್ಸರಾ ಮತ್ತು ನನ್ನ ಅಳಿಯ ಗಣೇಶ್ ಸೇರಿದಂತೆ ನಮ್ಮ ಇಡೀ ಕುಟುಂಬಕ್ಕೆ ಇದು ದೊಡ್ಡ ನಷ್ಟ. ಈ ದುಃಖದ ಸಮಯದಲ್ಲಿ ನಮಗೆ ಸಾಂತ್ವನ ಹೇಳಿದ ನಿಮ್ಮೆಲ್ಲರ ಕುಟುಂಬಗಳಿಗೂ ನಾವು ಹೇಗೆ ಧನ್ಯವಾದ ಹೇಳಬೇಕೋ ತಿಳಿಯುತ್ತಿಲ್ಲ. ನಾನು ಅವರನ್ನ ಯಾವಾಗಲೂ 'ಅಮ್ಮ' ಅಂತಲೇ ಕರೆಯುತ್ತಿದ್ದೆ. ಅಮ್ಮ ಸದಾ ಹೇಳುತ್ತಿದ್ದರು—ಅಭಿಮಾನಿಗಳೇ ಅವರ ಜೀವ ಎಂದು. ಆ ಅಭಿಮಾನಿಗಳ ಪ್ರೀತಿಯಲ್ಲೇ ಅವರು ಯಾವಾಗಲೂ ಜೀವಂತವಾಗಿರುತ್ತಾರೆ" ಎಂದು ಭಾವುಕರಾಗಿ ನುಡಿದರು.
ಇದೇ ಸಂದರ್ಭದಲ್ಲಿ ಗಾನಕೋಗಿಲೆ ಎಸ್ ಜಾನಕಿ ಅವರಿಗೆ ಸಕಲ ಗೌರವಗಳೊಂದಿಗೆ ಅರ್ಹವಾದ ವಿದಾಯವನ್ನು ನೀಡಿದ ಕರ್ನಾಟಕ ಸರ್ಕಾರಕ್ಕೆ ಸೊಸೆ ಉಮಾ ಮತ್ತು ಮೊಮ್ಮಗಳು ಅಪ್ಸರಾ ವಿಶೇಷ ಧನ್ಯವಾದಗಳನ್ನು ಅರ್ಪಿಸಿದರು.