ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Salman Khan: ‘ಮಾತೃಭೂಮಿ’ ಚಿತ್ರದ ಟ್ರೇಲರ್ ಟೀಕಿಸಿದವರಿಗೆ ಸಲ್ಮಾನ್ ಖಾನ್ ತಿರುಗೇಟು

Salman Khan: ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಮತ್ತು ನಟಿ ಚಿತ್ರಾಂಗದಾ ಸಿಂಗ್ ಅವರು ತಮ್ಮ ಮುಂಬರುವ ‘ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್’ ( Maatrubhumi trailer) ಚಿತ್ರದ ಪ್ರಚಾರಕ್ಕಾಗಿ ಶುಕ್ರವಾರ ಹೈದರಾಬಾದ್‌ಗೆ ಭೇಟಿ ನೀಡಿದರು. ಈ ವೇಳೆ ಚಿತ್ರದ ಟ್ರೇಲರ್ ಕುರಿತು ವ್ಯಕ್ತವಾಗುತ್ತಿರುವ ಟೀಕೆಗಳಿಗೆ ಸಲ್ಮಾನ್ ಖಾನ್ ಖಡಕ್ ಉತ್ತರ ನೀಡಿದ್ದಾರೆ. ಅಲ್ಲದೆ, ಚಿತ್ರದಲ್ಲಿ ಕೃತಕ ಬುದ್ಧಿಮತ್ತೆ (AI) ಬಳಕೆಯಾಗಿದೆ ಎಂಬ ಆರೋಪಗಳಿಗೂ ಪ್ರತಿಕ್ರಿಯಿಸಿದ್ದಾರೆ.

ಸಲ್ಮಾನ್‌ ಖಾನ್‌

ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಮತ್ತು ನಟಿ ಚಿತ್ರಾಂಗದಾ ಸಿಂಗ್ ಅವರು ತಮ್ಮ ಮುಂಬರುವ ‘ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್’ ( Maatrubhumi trailer) ಚಿತ್ರದ ಪ್ರಚಾರಕ್ಕಾಗಿ ಶುಕ್ರವಾರ ಹೈದರಾಬಾದ್‌ಗೆ ಭೇಟಿ ನೀಡಿದರು. ಈ ವೇಳೆ ಚಿತ್ರದ ಟ್ರೇಲರ್ ಕುರಿತು ವ್ಯಕ್ತವಾಗುತ್ತಿರುವ ಟೀಕೆಗಳಿಗೆ ಸಲ್ಮಾನ್ ಖಾನ್ ಖಡಕ್ ಉತ್ತರ ನೀಡಿದ್ದಾರೆ. ಅಲ್ಲದೆ, ಚಿತ್ರದಲ್ಲಿ ಕೃತಕ ಬುದ್ಧಿಮತ್ತೆ (AI) ಬಳಕೆಯಾಗಿದೆ ಎಂಬ ಆರೋಪಗಳಿಗೂ ಪ್ರತಿಕ್ರಿಯಿಸಿದ್ದಾರೆ.

ಟ್ರೇಲರ್ ಟೀಕಿಸಿದವರಿಗೆ ಸಲ್ಮಾನ್ ಖಾನ್ ತಿರುಗೇಟು

ಹೈದರಾಬಾದ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಟ್ರೇಲರ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿರುವ ಟೀಕೆ ಹಾಗೂ ಟ್ರೋಲ್‌ಗಳ ಕುರಿತು ಸಲ್ಮಾನ್ ಖಾನ್ ಅವರನ್ನು ಪ್ರಶ್ನಿಸಲಾಯಿತು.

ಇದನ್ನೂ ಓದಿ: Bigg Boss Kannada 13: ಪ್ರೋಮೋ ಕಟ್‌ಗಾಗಿ ಶೆಟ್ಟಿ ಡಾನ್‌ ಪ್ಲ್ಯಾನ್‌? ಸೌಂದರ್ಯ ವಿರುದ್ಧ ಸ್ಪರ್ಧಿಗಳ ಅಸಮಾಧಾನ

ಇದಕ್ಕೆ ಉತ್ತರಿಸಿದ ಅವರು, “ನನ್ನ ಸಿನಿಮಾ ಅಥವಾ ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡುವುದರಿಂದ ಅವರಿಗೆ ವೀಕ್ಷಣೆಗಳು, ಫಾಲೋವರ್ಸ್, ಖ್ಯಾತಿ ಅಥವಾ ಹಣ ಸಿಗುವುದಾದರೆ ನನಗೆ ಯಾವುದೇ ತೊಂದರೆಯಿಲ್ಲ. ಅವರಿಗೆ ದೇವರು ಒಳ್ಳೆಯದು ಮಾಡಲಿ” ಎಂದು ವ್ಯಂಗ್ಯವಾಗಿ ಹೇಳಿದರು.

ಇನ್ನು ಚಿತ್ರದ ಟ್ರೇಲರ್‌ನಲ್ಲೇ ಇಡೀ ಸಿನಿಮಾದ ಕಥೆಯನ್ನು ತೋರಿಸಲಾಗಿದೆ ಎಂಬ ಟೀಕೆಗಳಿಗೂ ಅವರು ಪ್ರತಿಕ್ರಿಯಿಸಿದರು.

“ಟ್ರೇಲರ್ ತುಂಬಾ ಉದ್ದವಾಗಿದೆ, ಅದರಲ್ಲೇ ಇಡೀ ಸಿನಿಮಾವನ್ನು ತೋರಿಸಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ನಾವು ಇಡೀ ಸಿನಿಮಾವನ್ನು ತೋರಿಸಿಲ್ಲ. ಡಿಸೆಂಬರ್ 4ರಂದು ನಿಮಗೆ ಸಂಪೂರ್ಣ ಸಿನಿಮಾವನ್ನೇ ತೋರಿಸುತ್ತೇನೆ. ಪುಸ್ತಕದ ಮುಖಪುಟ ನೋಡಿ ಅದರ ಬಗ್ಗೆ ನಿರ್ಧಾರ ಮಾಡಬಾರದು ಎಂಬ ಮಾತಿದೆಯಲ್ಲವೇ? ಆದರೆ ನೀವು ಈಗಾಗಲೇ ಮುಖಪುಟ ನೋಡಿ ನಿರ್ಧಾರಕ್ಕೆ ಬಂದಿದ್ದೀರಿ. ಮುಂದೆ ಕಥೆಯಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತವೆ ಎಂಬುದನ್ನು ಕಾದು ನೋಡಿ. ದೇವರ ಇಚ್ಛೆಯಿದ್ದರೆ ಎಲ್ಲವೂ ಬದಲಾಗಲಿದೆ. ಐದು ನಿಮಿಷಗಳ ಟ್ರೇಲರ್‌ನಲ್ಲೇ ನಿಮಗೆ ಇಷ್ಟೊಂದು ತಪ್ಪುಗಳು ಕಾಣಿಸಿದ್ದರೆ, ಎರಡೂವರೆ ಗಂಟೆಗಳ ಸಿನಿಮಾದಲ್ಲಿ ಇನ್ನೆಷ್ಟು ಅಂಶಗಳನ್ನು ಹುಡುಕುತ್ತೀರೋ ಊಹಿಸಿ” ಎಂದು ಹೇಳಿದರು.

AI ಮತ್ತು VFX ಬಗ್ಗೆ ಮಾತನಾಡುವವರಿಗೆ ತಿರುಗೇಟು

‘ಮಾತೃಭೂಮಿ’ ಚಿತ್ರದ ‘ಮದಿರಾಪನ್’ ಹಾಡು ಬಿಡುಗಡೆಯಾದ ಬಳಿಕ, ಆ ಹಾಡಿನಲ್ಲಿ ಸಲ್ಮಾನ್ ಖಾನ್ ನೇರವಾಗಿ ಚಿತ್ರೀಕರಣದಲ್ಲಿ ಭಾಗವಹಿಸಿಲ್ಲ ಹಾಗೂ AI ತಂತ್ರಜ್ಞಾನ ಬಳಸಲಾಗಿದೆ ಎಂಬ ರೀತಿಯ ಚರ್ಚೆಗಳು ನಡೆದಿದ್ದವು. ಚಿತ್ರದ ಟ್ರೇಲರ್ ಬಿಡುಗಡೆಯಾದ ನಂತರವೂ ಇದೇ ರೀತಿಯ ಟೀಕೆಗಳು ಕೇಳಿಬಂದಿದ್ದವು.

ಈ ಕುರಿತು ಮಾತನಾಡಿದ ಸಲ್ಮಾನ್ ಖಾನ್, “ನಮ್ಮ ಸಿನಿಮಾ ದೇಶದ ಸೈನಿಕರು ಮತ್ತು ಅವರ ಕುಟುಂಬಗಳ ಕುರಿತಾಗಿದೆ. ಆದರೆ ಜನರು ಅದರ ಬಗ್ಗೆ ಮಾತನಾಡುವ ಬದಲು VFX ಮತ್ತು AI ಬಗ್ಗೆ ಚರ್ಚಿಸುತ್ತಿದ್ದಾರೆ. ಇವರೆಲ್ಲ ಯಾರು? ಎಲ್ಲಿಂದ ಬರುತ್ತಾರೆ?” ಎಂದು ಪ್ರಶ್ನಿಸಿದರು.

ಮುಂದುವರಿದು, “ಇವರೆಲ್ಲ AI ತಜ್ಞರೇ? ಅಥವಾ VFX ತಜ್ಞರೇ? ಈ ದೃಶ್ಯದಲ್ಲಿ ಸಲ್ಮಾನ್ ಖಾನ್ ನಟಿಸಿದಂತೆ ಕಾಣುತ್ತಿಲ್ಲ, ಬೇರೆ ಯಾರೋ ಇರಬೇಕು ಎಂದು ಹೇಳುತ್ತಾರೆ. ನಿಮಗೆ ಒಂದು ವಿಷಯ ತಿಳಿಸುತ್ತೇನೆ. ನನಗೆ ಇಂತಹ ಎಲ್ಲ ವಿಚಾರಗಳು ಗಮನಕ್ಕೆ ಬರದೇ ಇರಬಹುದು. ಆದರೆ ನನ್ನ ತಂಡ ಇವುಗಳನ್ನೆಲ್ಲ ಗಮನಿಸುತ್ತಿರುತ್ತದೆ” ಎಂದರು.

ನೈಜ ಸ್ಥಳಗಳಲ್ಲಿ ಚಿತ್ರೀಕರಿಸಿದ ದೃಶ್ಯಗಳಿಗೂ ಕೆಲವರು VFX ಬಳಕೆಯಾಗಿದೆ ಎಂದು ಆರೋಪಿಸುತ್ತಿರುವುದನ್ನು ಸಲ್ಮಾನ್ ಖಾನ್ ಪ್ರಸ್ತಾಪಿಸಿದರು. ಇಂತಹ ಟೀಕೆ ಮಾಡುವವರಿಗೆ ವ್ಯಂಗ್ಯವಾಗಿ ಧನ್ಯವಾದ ತಿಳಿಸಿದ ಅವರು, ಸೈನಿಕರು ಮತ್ತು ಅವರ ಕಥೆಯ ಮೇಲೂ ಸ್ವಲ್ಪ ಗಮನ ಹರಿಸುವಂತೆ ಸೂಚಿಸಿದರು.

ಭಾರತ-ಚೀನಾ ಸಂಘರ್ಷದ ಹಿನ್ನೆಲೆಯ ಚಿತ್ರ

‘ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್’ ಚಿತ್ರಕ್ಕೆ ಆರಂಭದಲ್ಲಿ ‘ಬ್ಯಾಟಲ್ ಆಫ್ ಗಾಲ್ವಾನ್’ ಎಂದು ಹೆಸರಿಡಲಾಗಿತ್ತು. ಭಾರತ ಮತ್ತು ಚೀನಾ ನಡುವಿನ ಗಾಲ್ವಾನ್ ಕಣಿವೆಯ ಸಂಘರ್ಷದ ಹಿನ್ನೆಲೆಯನ್ನು ಹೊಂದಿರುವ ಈ ಚಿತ್ರದಲ್ಲಿ ದೇಶದ ಸೈನಿಕರ ಹೋರಾಟ ಮತ್ತು ಅವರ ತ್ಯಾಗದ ಕಥೆಯನ್ನು ತೋರಿಸಲಾಗುತ್ತದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: Bigg Boss Kannada 13: ಕಳಪೆ ಆಯ್ಕೆಯಲ್ಲಿ ಮನೆಯವರ ಒಮ್ಮತ; ಈ ಮೂವರು ಜೈಲಿಗೆ, ಕಣ್ಣೀರಿಟ್ಟ ಗಾನವಿ!

ಅಪೂರ್ವ ಲಖಿಯಾ ನಿರ್ದೇಶನದ ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಮತ್ತು ಚಿತ್ರಾಂಗದಾ ಸಿಂಗ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವು ಡಿಸೆಂಬರ್ 4ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Yashaswi Devadiga

View all posts by this author