ಸಲ್ಮಾನ್ ಖಾನ್ ಬಾಲಿವುಡ್‌ನ ಏಕೈಕ ಹುಲಿ: ಟೈಗರ್ ಶ್ರಾಫ್ ಹೊಗಳಿದ್ದೇ ದಾಳಿಗೆ ಕಾರಣ; ಶೂಟೌಟ್ ಆರೋಪಿ ಹೇಳಿದ್ದೇನು?
Tiger Shroff Firing Case: ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲಿನ ದಾಳಿಗೆ ಸಂಬಂಧಿಸಿ ಹೊಸ ಹೊಸ ವಿಚಾರಗಳು ಬೆಳಕಿಗೆ ಬರುತ್ತಲೇ ಇದೆ. ಇದೀಗ ಅವರು ಸಲ್ಮಾನ್ ಖಾನ್ ಅವರನ್ನು ಹೊಗಳಿರುವುದು ಅವರ ಮೇಲಿನ ದಾಳಿಗೆ ಪ್ರಮುಖ ಕಾರಣವೆಂದು ವಿಚಾರಣೆ ವೇಳೆ ಆರೋಪಿ ಹೇಳಿದ್ದಾನೆ. ಇದೇ ಸಂದರ್ಭದಲ್ಲಿ ಟೈಗರ್ ಶ್ರಾಫ್ ಕೂಡ ಹೇಳಿಕೆ ನೀಡಿದ್ದು, ತಮಗೆ ಯಾರೊಂದಿಗೂ ದ್ವೇಷವಿಲ್ಲ. ಈ ದಾಳಿಯಿಂದ ನಾನೂ ಆತಂಕಿತನಾಗಿದ್ದೇನೆ ಎಂದು ಹೇಳಿದ್ದಾರೆ.
ಸಂಗ್ರಹ ಚಿತ್ರ -
ಮುಂಬೈ: ನಟ ಸಲ್ಮಾನ್ ಖಾನ್ (Tiger Shroff Firing Case) ಅವರನ್ನು ಹೊಗಳಿದ್ದು ಟೈಗರ್ ಶ್ರಾಫ್ (Tiger Shroff) ಮಾಡಿದ ದೊಡ್ಡ ತಪ್ಪು ಎಂದು ಟೈಗರ್ ಶ್ರಾಫ್ ಮೇಲೆ ದಾಳಿ ಮಾಡಿದ ಆರೋಪಿಗಳಲ್ಲಿ ಒಬ್ಬ ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾನೆ. ದ್ವಿಚಕ್ರ ವಾಹನದಲ್ಲಿ ಬಂದಿದ್ದ ಇಬ್ಬರು ವ್ಯಕ್ತಿಗಳು ಜುಹು ಆಟದ ಮೈದಾನದ ಬಳಿ ಕಳೆದ ಭಾನುವಾರ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ಏಳು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿ 10 ಮಂದಿಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಆರೋಪಿಗಳಲ್ಲಿ ಒಬ್ಬ ಟೈಗರ್ ಶ್ರಾಫ್ ಒಮ್ಮೆ ಸಲ್ಮಾನ್ ಖಾನ್ (salman khan) ಅವರನ್ನು ಹೊಗಳಿದ್ದರಿಂದ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ (Lawrence Bishnoi Gang) ಅವರ ಮೇಲೆ ಗುರಿ ಇಟ್ಟಿತ್ತು ಎಂದು ತಿಳಿಸಿದ್ದಾನೆ.
ಟೈಗರ್ ಶ್ರಾಫ್ ಮೇಲಿನ ದಾಳಿ ಸಂದರ್ಭದಲ್ಲಿ ಅವರ ಕಾರು ಚಾಲಕ ಮತ್ತು ಯೂಟ್ಯೂಬರ್ ಒಬ್ಬರು ಗಾಯಗೊಂಡಿದ್ದರು. ಈ ದಾಳಿಯ ಹೊಣೆಯನ್ನು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನ ಸದಸ್ಯನೊಬ್ಬ ಹೊತ್ತುಕೊಂಡಿದ್ದಾನೆ. ಘಟನೆ ನಡೆದ ಮರುದಿನವೇ ಕೋಟಾ ರೈಲು ನಿಲ್ದಾಣದಲ್ಲಿ ಪುಣೆ- ಜೈಪುರ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನಲ್ಲಿದ್ದ ಆರೋಪಿಗಳನ್ನು ಬಂಧಿಸಲಾಗಿತ್ತು.
Tiger Shroff: ಫಿಟ್‌ನೆಸ್ ಜರ್ನಿ ಬಗ್ಗೆ ಡಾ. ವೆಂಕಟೇಶ್, ಟೈಗರ್ ಶ್ರಾಫ್ ಮಹತ್ವದ ಸಂವಾದ
ಈ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿರುವ ವೇಳೆಯಲ್ಲಿ ಆರೋಪಿಯೊಬ್ಬ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಟೈಗರ್ ಶ್ರಾಫ್ ಅವರನ್ನು ಏಕೆ ಗುರಿ ಮಾಡಿತ್ತು ಎಂಬುದನ್ನು ವಿವರಿಸಿದ್ದಾನೆ. ಟೈಗರ್ ಶ್ರಾಫ್ ಮತ್ತು ಸಲ್ಮಾನ್ ಖಾನ್ ನಡುವಿನ ನಿಕಟ ಸಂಬಂಧವೇ ಈ ದಾಳಿಗೆ ಮೂಲ ಕಾರಣ. 2022ರಲ್ಲಿ ನಡೆದ ಚಲನಚಿತ್ರ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಟೈಗರ್ ಶ್ರಾಫ್ ಅವರು ಸಲ್ಮಾನ್ ಖಾನ್ ಅವರನ್ನು ಹೊಗಳುತ್ತಾ, "ಚಿತ್ರರಂಗದಲ್ಲಿ ಸಲ್ಮಾನ್ ಒಬ್ಬರೇ ಹುಲಿ' ಎಂದು ಹೇಳಿದ್ದರು ಎಂದು ತಿಳಿಸಿದ್ದಾನೆ.
ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಈ ಹಿಂದೆ ಕೂಡ ಸಲ್ಮಾನ್ ಖಾನ್‌ಗೆ ಆಪ್ತರಾದವರಿಗೆ ಬೆದರಿಕೆ ಹಾಕಿ, ಅವರ ಮೇಲೆ ದಾಳಿಗೆ ಪ್ರಯತ್ನಿಸಿತ್ತು. ಸಲ್ಮಾನ್ ಮತ್ತು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ನಡುವೆ 1999ರಿಂದಲೂ ದ್ವೇಷವಿದೆ. 'ಹಮ್ ಸಾಥ್-ಸಾಥ್ ಹೈ' ಚಿತ್ರದ ಚಿತ್ರೀಕರಣದ ವೇಳೆ ಸಲ್ಮಾನ್ ಖಾನ್ ಕೃಷ್ಣಮೃಗವನ್ನು ಬೇಟೆಯಾಡಿದ್ದು ಇದಕ್ಕೆ ಮುಖ್ಯ ಕಾರಣ ಎನ್ನಲಾಗಿದೆ.
ಲಾರೆನ್ಸ್ ಬಿಷ್ಣೋಯಿ ಸಮುದಾಯದಲ್ಲಿ ಈ ಪ್ರಾಣಿಯನ್ನು ಪವಿತ್ರ ಮೃಗವೆಂದು ಪರಿಗಣಿಸಲಾಗುತ್ತದೆ. ಈ ಮೃಗವನ್ನು ಬೇಟೆಯಾಡಿರುವುದಕ್ಕೆ ಸಲ್ಮಾನ್ ಖಾನ್ ಕ್ಷಮೆ ಕೇಳಬೇಕು, ಇಲ್ಲದಿದ್ದರೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಲಾರೆನ್ಸ್ ಗ್ಯಾಂಗ್ ಆಗ್ರಹಿಸುತ್ತಾ ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯನ್ನು ಆರೋಪಿ ಗ್ಯಾಂಗ್ ಸಾಮಾಜಿಕ ಜಾಲತಾಣಗಳಲ್ಲಿ ಗಮನಿಸುತ್ತಿರುವ ಸಾಧ್ಯತೆ ಇದೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಆರೋಪಿ ರೆಹಾನ್ ನಿರಂತರವಾಗಿ ತನ್ನ ಫೋನ್ ಬಳಸುತ್ತಿರುವುದು ಕಂಡುಬಂದಿದೆ. ತನಿಖೆಗೆ ಸಂಬಂಧಿಸಿದ ಮಾಹಿತಿಯನ್ನು ಇಂಟರ್ನೆಟ್ ಕರೆಗಳ ಮೂಲಕ ಆರೋಪಿಗಳಿಗೆ ರವಾನಿಸಲಾಗುತ್ತಿತ್ತು ಎಂದು ಪೊಲೀಸರು ಶಂಕಿಸಿದ್ದಾರೆ.
ಆರೋಪಿಗಳು ಪರಾರಿಯಾಗಲು ಬಳಸಿದ್ದ ಬೈಕ್ ಅಂಧೇರಿಯಲ್ಲಿ ಪತ್ತೆಯಾಗಿದೆ. ಅಲ್ಲಿಂದ ತಾವು ರೈಲಿನಲ್ಲಿ ಪ್ರಯಾಣಿಸುತ್ತಿದ್ದೇವೆ ಎಂಬ ಮಾಹಿತಿಯನ್ನು ಸಂದೇಶಗಳ ಮೂಲಕ ಶೂಟರ್‌ಗಳಿಗೆ ಮೊದಲೇ ತಲುಪಿಸಲಾಗಿತ್ತು. ಆರೋಪಿಗಳು ಪೊಲೀಸರಿಂದ ತಪ್ಪಿಸಿಕೊಳ್ಳಲು ಬೈಕ್, ರೈಲು ಮತ್ತು ಕ್ಯಾಬ್‌ಗಳನ್ನು ಬಳಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಟೈಗರ್ ಶ್ರಾಫ್ ಮೇಲೆ ದಾಳಿಯಾದ ಬಳಿಕ ಆರೋಪಿಗಳು ಪೊಲೀಸರಿಂದ ತಪ್ಪಿಸ್ಕೊಳ್ಳಲು ತಮ್ಮ ಮೊಬೈಲ್ ಫೋನ್, ಇಂಟರ್ನೆಟ್ ಸಂಪರ್ಕಗಳನ್ನು ಕಡಿತ ಮಾಡಿಕೊಂಡಿದ್ದರು. ಶೂಟರ್‌ಗಳು ಮತ್ತು ಅವರ ನಿರ್ದೇಶಕರೊಂದಿಗೆ ಪರಸ್ಪರ ಸಂವಹನ ನಡೆಸಲು ಇಂಟರ್ನೆಟ್ ಆಧಾರಿತ 'ವಾಯ್ಸ್ ಓವರ್ ಇಂಟರ್ನೆಟ್ ಪ್ರೋಟೋಕಾಲ್' ಅನ್ನು ಬಳಸಿದ್ದರು. ಆರೋಪಿ ಶೂಟರ್ ಕೇವಲ ಒಂದೇ ಒಂದು ಸಾಮಾನ್ಯ ಫೋನ್ ಕರೆ ಮಾಡಿದ್ದರಿಂದ ಇದು ಪೊಲೀಸರಿಗೆ ದೊಡ್ಡ ಸುಳಿವು ನೀಡಿತ್ತು. ಆರೋಪಿಗಳು ಮುಂಬೈನ ಬೋರಿವಲಿಯಿಂದ ಸೂರತ್‌ಗೆ ಪ್ರಯಾಣಿಸಲು ಖಾಸಗಿ ಕ್ಯಾಬ್ ಅನ್ನು ಬುಕ್ ಮಾಡಿದ್ದರು. ಕ್ಯಾಬ್ ಚಾಲಕನಿಗೆ ಮಾಡಲಾದ ಒಂದು ಕರೆ ಪೊಲೀಸರ ಗಮನಕ್ಕೆ ಬಂದಿದ್ದು, ಇದು ಆರೋಪಿಗಳ ಪ್ರಯಾಣದ ಮಾರ್ಗವನ್ನು ಪತ್ತೆಹಚ್ಚಲು ತನಿಖಾಧಿಕಾರಿಗಳಿಗೆ ಸಹಾಯ ಮಾಡಿತು ಎಂದು ಪೊಲೀಸರು ಹೇಳಿದ್ದಾರೆ.
ಟೈಗರ್ ಶ್ರಾಫ್ ಮೇಲೆ ದಾಳಿ ನಡೆಸಿದ ಆರೋಪಿ ಪಿಸ್ತೂಲ್, ಬ್ಯಾಗ್ ಹಿಡಿದು ಹೊಟೇಲ್‌ನಿಂದ ಹೊರಬಂದ ವಿಡಿಯೊ ವೈರಲ್
ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಮಹಿಳೆಯರನ್ನು ಬಂಧಿಸಲಾಗಿದೆ. ತಮ್ಮ ಮೇಲೆ ನಡೆದ ದಾಳಿಯಿಂದ ಟೈಗರ್ ಶ್ರಾಫ್ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಈ ಘಟನೆಯಿಂದ ತಮಗೆ ಆಘಾತವಾಗಿದೆ. ಎಂದೂ, ಯಾರಿಗೂ ತಮ್ಮೊಂದಿಗೆ ಯಾವುದೇ ದ್ವೇಷವಿಲ್ಲ ಎಂದು ಅವರು ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.