Emergency Collection: ಮತ್ತೊಮ್ಮೆ ಮುಗ್ಗರಿಸಿದ ಕಂಗನಾ ರಾಣಾವತ್: 'ಎಮರ್ಜೆನ್ಸಿ' ಸೋಲಿಗೆ ಕಾರಣವೇನು?
Emergency Collection: ಈ ವರ್ಷದ ಬಹು ನಿರೀಕ್ಷೆಯ ಬಾಲಿವುಡ್ ಚಿತ್ರ 'ಎಮರ್ಜೆನ್ಸಿ' ತೆರೆಕಂಡಿದೆ. ಕಂಗನಾ ರಾಣಾವತ್ ನಾಯಕಿ, ನಿರ್ಮಾಪಕಿ ಮತ್ತು ನಿರ್ದೇಶಕಿಯಾಗಿ ಕಾಣಿಸಿಕೊಂಡ ಈ ಚಿತ್ರ ಇದೀಗ ಬಾಕ್ಸ್ ಆಫೀಸ್‌ನಲ್ಲಿ ಕುಂಟುತ್ತಾ ಸಾಗಿದೆ. ಕಂಗನಾ ಅಭಿನಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದ್ದರೂ ಕಲೆಕ್ಷನ್ ಹೆಚ್ಚಾಗದಿರುವುದು ಚಿತ್ರತಂಡದ ನಿದ್ದೆಗೆಡಿಸಿದೆ. ಹಾಗಾದರೆ ಚಿತ್ರದ ಸೋಲಿಗೆ ಕಾರಣವೇನು? ಇಲ್ಲಿದೆ ವಿವರ.
ಮುಂಬೈ: ಒಂದು ಕಾಲದಲ್ಲಿ ಬಾಲಿವುಡ್‌ನಲ್ಲಿ ರಾಣಿಯಂತೆ ಮೆರೆದವರು ಕಂಗನಾ ರಾಣಾವತ್ (Kangana Ranaut). ಇವರು ಕಮರ್ಷಿಯಲ್ ಚಿತ್ರಗಳ ಜತೆಗೆ ಅಭಿನಯಕ್ಕೆ ಒತ್ತು ಇರುವ ಪಾತ್ರಗಳಲ್ಲಿ, ನಾಯಕಿ ಪ್ರಧಾನ ಸಿನಿಮಾಗಳಲ್ಲಿ ಕಾಣಿಸಿಕೊಂಡು ಪ್ರೇಕ್ಷಕರ ಜತೆಗೆ ವಿಮರ್ಶಕರ ಗಮನ ಸೆಳೆದಿದ್ದಾರೆ. ಅಲ್ಲದೆ ಮನೋಜ್ಞ ಅಭಿನಯದ ಮೂಲಕ ರಾಷ್ಟ್ರ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ದಾರೆ. ಆಗಾಗ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಹಲವರ ಕೆಂಗಣ್ಣಿಗೆ ಗುರಿಯಾಗುತ್ತಾರಾದರೂ ಅವರ ಅಭಿನಯಕ್ಕೆ ಎಲ್ಲರೂ ಪೂರ್ಣಾಂಕ ನೀಡುತ್ತಾರೆ. ಹೀಗೆ ಬಾಲಿವುಡ್‌ನಲ್ಲಿ ತನ್ನದೇ ಛಾಪು ಮೂಡಿಸಿರುವ ಕಂಗನಾಗೆ ಇತ್ತೀಚಿನ ದಿನಗಳಲ್ಲಿ ಸೋಲು ಬೆಂಬಿಡದೆ ಕಾಡುತ್ತಿದೆ. ಇತ್ತೀಚೆಗೆ ರಿಲೀಸ್ ಆಗಿರುವ ಅವರ ʼಎಮರ್ಜೆನ್ಸಿʼ ಚಿತ್ರ ಕೂಡ ಬಾಕ್ಸ್ ಆಫೀಸ್‌ನಲ್ಲಿ ಮಂಕಾಗಿದ್ದು, ಗೆಲುವು ಮತ್ತೊಮ್ಮೆ ಮರೀಚಿಕೆಯಾದಂತಾಗಿದೆ (Emergency Collection). ಹಾಗಾದರೆ ಎಮರ್ಜೆನ್ಸಿ ಎಡವಿದ್ದೆಲ್ಲಿ? ಹಲವು ಬಾರಿ ಬಿಡುಗಡೆ ಮುಂದೂಡಿದ್ದೇ ಮುಳುವಾಯ್ತಾ? ಮಾಜಿ ಪ್ರದಾನಿ ಇಂದಿರಾ ಗಾಂಧಿ ಅವರ ಜೀವನ ಚರಿತ್ರೆ ಆಗಿರುವ ಕಾರಣ ಒಂದು ವರ್ಗದ ಪ್ರೇಕ್ಷಕರ ಕೆಂಗಣ್ಣಿಗೆ ಗುರಿಯಾಯ್ತಾ? ಇಲ್ಲಿದೆ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ.
ʼಎಮರ್ಜೆನ್ಸಿʼ ಚಿತ್ರಕ್ಕೆ ಕಂಗನಾ ನಾಯಕಿ ಮಾತ್ರವಲ್ಲ ನಿರ್ದೇಶಕಿ, ನಿರ್ಮಾಪಕಿಯೂ ಹೌದು. ಮೊದಲ ಬಾರಿಗೆ ಅವರು ಪೂರ್ಣ ಪ್ರಮಾಣದ ನಿರ್ದೇಶಕಿಯಾಗಿರುವ ಸಿನಿಮಾ ಇದು. ಅಲ್ಲದೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಕಥೆಯನ್ನು ಆಯ್ದುಕೊಂಡ ಕಾರಣಕ್ಕೆ ಈ ಚಿತ್ರ ಗಮನ ಸೆಳೆದಿತ್ತು. ಜತೆಗೆ ಕಂಗನಾ ಅವರ ಲುಕ್ ಥೇಟ್ ಇಂದಿರಾ ಗಾಂಧಿ ಅವರನ್ನು ಹೋಲುತ್ತಿದ್ದರಿಂದ ನಿರೀಕ್ಷೆ ಗರಿಗೆದರಿತ್ತು. ಮಾತ್ರವಲ್ಲ ರಿಲೀಸ್ ಆದ ಟೀಸರ್ ಮತ್ತು ಟ್ರೈಲರ್ ಹಲವರನ್ನು ಆಕರ್ಷಿಸಿತ್ತು. ಹೀಗಾಗಿ ಈ ಬಾರಿ ಕಂಗನಾಗೆ ಗೆಲುವು ಖಚಿತ ಎನ್ನುವ ಮಾತುಗಳೂ ಕೇಳಿ ಬಂದಿದ್ದವು. ಆದರೆ ಇದೀಗ ಈ ನಿರೀಕ್ಷೆಗಳೆಲ್ಲ ತಲೆ ಕೆಳಗಾಗಿದೆ.
This is complete harassment of art and the artist, from Punjab many cities are reporting that these people are not allowing Emergency to be screened.
— Kangana Ranaut (@KanganaTeam) January 17, 2025
I have utmost respect for all religions and after studying and growing up in Chandigarh I have closely observed and followed Sikh… https://t.co/VQEWMqiFih
ಜ. 17ರಂದು ರಿಲೀಸ್ ಆಗಿರುವ ಚಿತ್ರ ಇದುವರೆಗೆ 15 ಕೋಟಿ ರೂ. ಗಳಿಸಲಷ್ಟೇ ಶಕ್ತವಾಗಿದೆ. ಸುಮಾರು 60 ಕೋಟಿ ರೂ. ವೆಚ್ಚದಲ್ಲಿ ತಯರಾದ ʼಎಮೆರ್ಜೆನ್ಸಿʼ ಬಾಕ್ಸ್ ಆಫೀಸ್‌ನಲ್ಲಿ ಹೆಣಗಾಡುತ್ತಿದೆ. 1975ರಂದು ಇಂದಿರಾ ಗಾಂಧಿ ಅವರು ಘೋಷಿಸಿದ ತುರ್ತು ಪರಿಸ್ಥಿತಿಯ ದಿನಗಳತ್ತ ಇದು ಬೆಳಕು ಚೆಲ್ಲುತ್ತದೆ.
ಕಾರಣವೇನು?
ಆರಂಭದಲ್ಲಿ 2023ರ ಅಕ್ಟೋಬರ್‌ನಲ್ಲಿ ಚಿತ್ರ ರಿಲೀಸ್ ಮಾಡಲು ಯೋಜನೆ ಹಾಕಿಕೊಳ್ಳಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಚಿತ್ರವನ್ನು 2024ರ ಜೂನ್‌ಗೆ ಮುಂದೂಡಲಾಯಿತು. ಆದರೆ ಲೋಕಸಭಾ ಚುನಾವಣೆ ಎದುರಾಗಿದ್ದರಿಂದ ಮತ್ತೆ ಬಿಡುಗಡೆಯನ್ನು ಸೆಪ್ಟೆಂಬರ್‌ಗೆ ಪೋಸ್ಟ್‌ಪೋನ್ ಮಾಡಲಾಯಿತು. ಆದರೆ ಆಗಲೂ ಬಿಡುಗಡೆಯ ಹಾದಿ ಸುಗಮವಾಗಲಿಲ್ಲ.
ಅಗಸ್ಟ್ 30ರಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಶೇರ್ ಮಾಡಿದ ಕಂಗನಾ, ಸೆನ್ಸಾರ್ ಬೋರ್ಡ್‌ನವರು ಪ್ರಮಾಣ ಪತ್ರ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಸೆಪ್ಟೆಂಬರ್‌ನಲ್ಲಿ ಚಿತ್ರ ರಿಲೀಸ್ ಮಾಡುತ್ತಿಲ್ಲ ಎಂದು ತಿಳಿಸಿದ್ದರು. ಕೊನೆಗೂ ಅಕ್ಟೋಬರ್‌ನಲ್ಲಿ ಸೆನ್ಸಾರ್ ಪ್ರಮಾಣ ಪತ್ರ ಲಭಿಸಿದ ಹಿನ್ನೆಲೆಯಲ್ಲಿ ಅಂತಿಮ ಬಿಡುಗಡೆ ದಿನಾಂಕವನ್ನು ನಿರ್ಧರಿಸಲಾಯಿತು. ಹೀಗೆ ಅನೇಕ ವಿಘ್ನಗಳನ್ನು ಎದುರಿಸಿದ ʼಎಮೆರ್ಜೆನ್ಸಿʼ ಜ. 17ರಂದು ತೆರೆ ಕಂಡಿತು.
ʼʼಚಿತ್ರದ ಸೋಲಿಗೆ ಇದೂ ಒಂದು ಕಾರಣ. ನಿರಂತರವಾಗಿ ಬಿಡುಗಡೆ ದಿನಾಂಕ ಬದಲಾಗಿದ್ದು ಸಿನಿಮಾ ಬಗೆಗಿನ ಕುತೂಹಲ ತಣಿಯಲು ಕಾರಣವಾಯಿತು. ರಿಲೀಸ್ ತಡವಾಗಿದ್ದರಿಂದ ಜನರಲ್ಲಿ ಚಿತ್ರದ ಬಗೆಗಿನ ಆಸಕ್ತಿ ಕುಂದಿ ಹೋಗಿತ್ತುʼʼ ಎಂದು ಸಿನಿ ಪಂಡಿತರು ವಿಶ್ಲೇಷಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Emergency Box Office Collection: ಬಾಕ್ಸ್ ಆಫೀಸ್‌ನಲ್ಲಿ ಕಂಗನಾ ಕಮಾಲ್; 'ಎಮರ್ಜೆನ್ಸಿ' ಚಿತ್ರ 2 ದಿನಗಳಲ್ಲಿ ಗಳಿಸಿದ್ದೆಷ್ಟು?
ʼʼಇದು ಪಾಲಿಟಿಕಲ್ ಜಾನರ್‌ನ ಸಿನಿಮಾವಾಗಿದ್ದು ಸಾಮಾನ್ಯವಾಗಿ ಇಂತಹ ಚಿತ್ರಗಳಿಗೆ ಮಾರುಕಟ್ಟೆ ಕಡಿಮೆ. ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ಬಾಲಿವುಡ್‌ನಲ್ಲಿ ಈ ವಿಭಾಗದ ಸಿನಿಮಾಗಳು ಗೆದ್ದಿದ್ದು ಕಡಿಮೆ. ʼಪಿಎಂ ನರೇಂದ್ರ ಮೋದಿʼ, ʼಅಟಲ್ ಬಿಹಾರಿ ವಾಜಪೇಯಿʼಯಂತಹ ಸಿನಿಮಾಗಳೂ ಗಲ್ಲಾ ಪೆಟ್ಟಿಗೆಯಲ್ಲಿ ಸೋತಿವೆ. ಮಹಾರಾಷ್ಟ್ರದಲ್ಲಿ ಸ್ವಲ್ಪ ಮಟ್ಟಿನ ಯಶಸ್ಸು ಕಂಡಿದ್ದು ಬಾಲಸಾಹೇಬ್ ಠಾಕ್ರೆ ಅವರ ಜೀವನ ಚರಿತ್ರೆಯೊಂದೇʼʼ ಎಂದು ಅವರು ವಿವರಿಸಿದ್ದಾರೆ. ಜತೆಗೆ ಚಿತ್ರದ ವಿರುದ್ದ ಹಲವರು ಬೀದಿಗಿಳಿದಿದ್ದು, ಕೆಲವು ರಾಜ್ಯಗಳಲ್ಲಿ ನಿಷೃಧ ಹೇರಿದ್ದು ಕೂಡ ಕಲೆಕ್ಷನ್ ಮೇಲೆ ಪರಿಣಾಮ ಬೀರಿದೆ.
ಇದೆಲ್ಲದರ ಮಧ್ಯೆ ಕಂಗನಾ ಅಭಿನಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ಮತ್ತೊಂದು ರಾಷ್ಟ್ರ ಪ್ರಶಸ್ತಿ ಖಚಿತ ಎನ್ನುವ ಮಾತುಗಳು ಕೇಳಿ ಬಂದಿವೆ.