Bhagya Lakshmi Serial: ಗಂಡ ಮನೆಬಿಟ್ಟೋದರೂ ಕುಗ್ಗದ ಭಾಗ್ಯಾ, ಕೈಬಿಡದ ಕುಸುಮಾ
ಭಾಗ್ಯಾ ತನ್ನ ಸಂಸಾರ ಹಾಳಾಯಿತು ಎಂಬ ನೋವಲ್ಲಿ ಇರುತ್ತಾಳೆ. ತಾವಿಬ್ಬರೂ ಜೊತೆಯಾಗಿ ಇದ್ದ ಫೋಟೋವನ್ನು ತಾಂಡವ್ ಒಡೆದಿರುವುದನ್ನು ನೋಡಿ ಭಾಗ್ಯಾಗೆ ನೋವಾಗುತ್ತದೆ. ಅಷ್ಟರಲ್ಲಿ ಕುಸುಮಾ ಅಲ್ಲಿಗೆ ಬರುತ್ತಾಳೆ.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ (Bhagya Lakshmi Serial) ಸದ್ಯ ಭಾಗ್ಯಾ ಹಾಗೂ ತಾಂಡವ್ ಅಮ್ಮ ಕುಸುಮಾಳಿಗೆ ಸಂಕಷ್ಟ ಎದುರಾಗಿದೆ. ತಾಂಡವ್ ಹಾಗೂ ಶ್ರೇಷ್ಠಾ ಮನೆಮಂದಿ ವಿರುದ್ಧ ತಿರುಗಿ ನಿಂತಿದ್ದಾರೆ. ಮಗನನ್ನು ಸರಿಮಾಡಲು ಹೊರಟ ಕುಸುಮಾಗೆ ಆಘಾತ ಉಂಟಾಗಿದೆ. ಅಪ್ಪ-ಅಮ್ಮನ ನಡತೆಯಿಂದ ಕೋಪಗೊಂಡಿರುವ ತಾಂಡವ್, ಶ್ರೇಷ್ಠಾ ಜೊತೆ ಮನೆಬಿಟ್ಟು ಹೊರಬಂದಿದ್ದಾನೆ. ಇತ್ತ ಭಾಗ್ಯಾ ಒಂಟಿಯಾಗಿದ್ದಾಳೆ, ಆದರೂ ಕುಗ್ಗದೆ ತನಗಿರುವ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾಳೆ.
ಈ ಮನೆಯಲ್ಲಿ ನಾನು ಇರಬೇಕಾ ಅಥವಾ ಭಾಗ್ಯಾ ಇರಬೇಕಾ ಎಂದು ಕೇಳಿದಾಗ ಏನೇ ಆದ್ರು ನಾವು ಭಾಗ್ಯಾನ ಬಿಟ್ಟುಕೊಡೋ ಮಾತೇ ಇಲ್ಲ ಎಂದು ಭಾಗ್ಯಾಳ ಮಾವ ಹೇಳಿದ್ದು ತಾಂಡವ್‌ಗೆ ಎಲ್ಲಿಲ್ಲದ ಕೋಪತರಿಸಿದೆ. ನೀನು ಮಾಡರೊ ಪಾಪ ನಿನ್ನ ಸುಮ್ನೆ ಬಿಡಲ್ಲ. ಅಪ್ಪ-ಅಮ್ಮ ಮಗನ ಮಧ್ಯೆ ತಂದಿಟ್ಟಿದ್ದಿ ಅಲ್ವಾ ಈ ಪಾಪ ನಿನ್ನ ಸುಮ್ನೆ ಬಿಡುತ್ತೆ ಅಂತ ಅನ್ಕೋಬೇಡ.. ಇನ್ನುಂದೆ ಈ ಮನೆ.. ಮನೆಯವರು ಯಾರೂ ನನಗೆ ಬೇಡ ಎಂದು ಶ್ರೇಷ್ಠಾ ಕೈಹಿಡಿದು ಮನೆಯ ಹೊಸ್ತಿಲು ದಾಟಿದ್ದಾನೆ ತಾಂಡವ್.
ತನ್ನ ತಪ್ಪು ಏನೂ ಇಲ್ಲದಿದ್ದರೂ, ತಾಂಡವ್ ಆ ರೀತಿ ಮಾತನಾಡಿ ಹೋಗಿದ್ದಕ್ಕೆ ಭಾಗ್ಯಾ ಕಣ್ಣೀರಿಡುತ್ತಾಳೆ. ಮನೆಯಿಂದ ಹೊರಬಂದು ಕಾರಿನ ಬಳಿ ನಿಂತಿರುವಾಗ ಮತ್ತೆ ಮನೆಗೆ ಬರುವ ಶ್ರೇಷ್ಠಾ, ನಾನು ಅಂದುಕೊಂಡಂತೇ ಆಯ್ತು, ತಾಂಡವ್ ಬೆಲೆ ಏನು ಅಂತ ನಿಮಗೆಲ್ಲಾ ಗೊತ್ತಿಲ್ಲ, ಒಂದು ದಿನ ಗೊತ್ತಾಗುತ್ತೆ, ಅವನನ್ನು ನಾನು ನನ್ನವನ್ನಾಗಿ ಮಾಡಿಕೊಂಡೇ ತೀರುತ್ತೇನೆ ಎಂದು ಚಾಲೆಂಜ್ ಮಾಡುತ್ತಾಳೆ.
ಅತ್ತ ಸ್ನೇಹಿತನ ಮನೆಗೆ ಬಂದ ತಾಂಡವ್-ಶ್ರೇಷ್ಠಾ, ಭಾಗ್ಯಾಗೆ ಬುದ್ದಿ ಕಲಿಸಲು ಪ್ಲ್ಯಾನ್ ಮಾಡುತ್ತಾನೆ. ಅವ್ಳ ನೆಮ್ಮದಿ ಹಾಳಮಾಡಬೇಕು.. ನನ್ಗೆ ಮಾಡಿರೊ ಅವಮಾನಕ್ಕೆ ಅವಳಿಗೆ ಸರಿಯಾದ ಶಿಕ್ಷೆ ಕೊಡಬೇಕು.. ಅವ್ಳು ಮನೆ ಬಿಟ್ಟು ರೋಡ್ ರೋಡ್ ಅಲಿಬೇಕು ಅಂಥಾ ಸ್ಥಿತಿ ಬರಬೇಕು ಇದೇ ನನ್ನ ಲೈಫ್ನ ಗೋಲ್ ಎಂದು ಹೇಳುತ್ತಾನೆ. ಆಗ ನಾನು ನಿನ್ನ ಜೊತೆ ಇರುತ್ತೇನೆ ಎಂದು ಶ್ರೇಷ್ಠಾ ಸಮಾಧಾನ ಮಾಡುತ್ತಾಳೆ.
ಇನ್ನು ಭಾಗ್ಯಾ ತನ್ನ ಸಂಸಾರ ಹಾಳಾಯಿತು ಎಂಬ ನೋವಲ್ಲಿ ಇರುತ್ತಾಳೆ. ತಾವಿಬ್ಬರೂ ಜೊತೆಯಾಗಿ ಇದ್ದ ಫೋಟೋವನ್ನು ತಾಂಡವ್ ಒಡೆದಿರುವುದನ್ನು ನೋಡಿ ಭಾಗ್ಯಾಗೆ ನೋವಾಗುತ್ತದೆ. ಅಷ್ಟರಲ್ಲಿ ಕುಸುಮಾ ಅಲ್ಲಿಗೆ ಬರುತ್ತಾಳೆ. ಒಂದಲ್ಲಾ ಒಂದು ದಿನ ತಾಂಡವ್‌ಗೆ ಶ್ರೇಷ್ಠಾ ಬುದ್ಧಿ ಅರ್ಥವಾಗುತ್ತದೆ. ಅವನು ಖಂಡಿತ ಇಲ್ಲಿಗೆ ವಾಪಸ್ ಬಂದೇ ಬರುತ್ತಾನೆ. ಅವನು ಬಂದಾಗ ನೀನು ಇದೇ ಭಾಗ್ಯಾ ಆಗಿರಬೇಕು, ಮತ್ತೆ ಅವನನ್ನು ಸ್ವೀಕರಿಸಬೇಕು ಎನ್ನುತ್ತಾಳೆ. ಆಗ ಒಮ್ಮೆ ಒಡೆದ ಮನಸ್ಸು ಮತ್ತೆ ಸೇರುವುದು ಕಷ್ಟ ಎಂದು ಭಾಗ್ಯಾ ಹೇಳುತ್ತಾಳೆ.
ಆದರೆ, ಮರುದಿನ ಬೆಳಗ್ಗೆ ಭಾಗ್ಯಾ ನೋವಿನ ನಡುವಲ್ಲೂ ಕುಗ್ಗದೆ ಸಂಕ್ರಾಂತಿ ಹಬ್ಬ ಆಚರಿಸಲು ಬೆಳಗ್ಗೆ ಬೇಗ ಎದ್ದು ರಂಗೋಲಿ ಬಿಡುತ್ತಾಳೆ. ಅವಳನ್ನು ನೋಡಿ ಕುಸುಮಾ, ಧರ್ಮರಾಜ್ ಆಶ್ಚರ್ಯವಾಗುತ್ತಾರೆ. ನೀನು ಎಷ್ಟೇ ನೋವಿನಲ್ಲಿದ್ದರೂ ನಮಗಾಗಿ ಇದೆಲ್ಲಾ ಮಾಡುತ್ತಿದ್ದೀಯ ಎಂದು ಖುಷಿಯಾಗುತ್ತಾರೆ. ಅಷ್ಟರಲ್ಲಿ ಸುನಂದಾ ಅಲ್ಲಿಗೆ ಬರುತ್ತಾಳೆ. ಗಂಡ ಮನೆ ಬಿಟ್ಟು ಹೋಗಿದ್ದಾನೆ. ಈ ಸಮಯದಲ್ಲಿ ನೀನು ಹಬ್ಬ ಮಾಡಬೇಕಾ ಎಂದು ಕೇಳುತ್ತಾಳೆ.
ಒಟ್ಟಾರೆ ಭಾಗ್ಯಾ ತನ್ನ ನೋವನ್ನು ಬಚ್ಚಿಟ್ಟುಕೊಂಡು ಮನೆಯವರ ಸಂತೋಷಕ್ಕೆ ನಾರ್ಮಲ್ ಆಗಿದ್ದಾಳೆ. ಅತ್ತ ತಾಂಡವ್-ಶ್ರೇಷ್ಠಾ ಮಧ್ಯೆ ಮುಂದೇನು ಆಗುತ್ತದೆ?, ತಾಂಡವ್‌ಗೆ ಬಿದ್ದಿ ಬರುತ್ತಾ ಅಥವಾ ಭಾಗ್ಯಾ-ಕುಸುಮಾ ಹೊಸ ಪ್ಲ್ಯಾನ್ ಏನಾದರು ಮಾಡುತ್ತಾರ ಎಂಬುದು ನೋಡಬೇಕಿದೆ.