ಬಿಗ್ ಬಾಸ್ ಕನ್ನಡ ಸೀಸನ್ 11ರ (Bigg Boss Kannada 11) ಫಿನಾಲೆಯಲ್ಲಿ ಹನುಮಂತ ಲಮಾಣಿ ದಾಖಲೆಯ 5 ಕೋಟಿಗೂ ಅಧಿಕ ಮತಗಳನ್ನು ಪಡೆದುಕೊಂಡು ವಿನ್ನರ್ ಆಗಿದ್ದಾರೆ. ಟ್ರೋಫಿ ಜೊತೆಗೆ ಅವರಿಗೆ 50 ಲಕ್ಷ ರೂ. ನಗದು ಹಣವನ್ನು ಕೂಡ ಬಿಗ್ ಬಾಸ್ ಕಡೆಯಿಂದ ನೀಡಲಾಗಿದೆ. ಜನ ಮೆಚ್ಚಿದ ಈ ಸ್ಪರ್ಧಿಗೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ. ಬಿಗ್ ಬಾಸ್ ಟ್ರೋಫಿ ಗೆದ್ದು ಹನುಮಂತ ಅವರು ಗೆಲ್ಲಿಸಿದ ಜನರಿಗೆ ಧನ್ಯವಾದ ಹೇಳಲು ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭ ಅವರು ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಬಿಗ್ ಬಾಸ್ ಶೋಗೆ ಬಂದ ಬಗ್ಗೆ ಮಾತನಾಡಿದ ಹನುಮಂತ, ನಾನು ಬಿಗ್ ಬಾಸ್ ಶೋನಲ್ಲಿ ಗೆಲ್ಲಲೇ ಬೇಕು ಅಂತ ಬರಲಿಲ್ಲ. ಇಲ್ಲಿ ಬಂದು ಸ್ವಲ್ಪ ದಿನ ಇದ್ದು ಮಜಾ ಮಾಡೋಣ ಅಂತ ಅಂದೆ. ನನಗೆ ಇದಕ್ಕೂ ಮೊದಲು ಎರಡು ಸಲ ಬಿಗ್ ಬಾಸ್ ಆಫರ್ ಬಂದಿತ್ತು. ಆದರೆ ನಾನು ಬಿಗ್ ಬಾಸ್ಗೆ ಹೋಗಿರಲಿಲ್ಲ. ಈ ಸೀಸನ್ನಲ್ಲೇ ಸುದೀಪ್ ಅವರ ಕೊನೆಯ ನಿರೂಪಣೆ ಅಂತ ಗೊತ್ತಾಯಿತು. ಸುದೀಪ್ ಸರ್ ಇರುವಾಗಲೇ ಹೋಗಿ ಬರೋಣ ಅಂತ ಈ ಸಲ ನಾನು ಬಿಗ್ ಬಾಸ್ಗೆ ಹೋದೆ ಎಂದು ಹನುಮಂತು ಹೇಳಿದ್ದಾರೆ.
ಗೆಲುವಿಗಾಗಿ ತಾವು ಯಾವುದೇ ಪ್ಲ್ಯಾನ್ ಮಾಡಿರಲಿಲ್ಲ. ನಾನು ಹೇಗೆ ಇದ್ದೆನೋ ಹಾಗೇ ಆಡಿದ್ದೇನೆ ಎಂದಿದ್ದಾರೆ. ನಾನು ಮೊದಲೆಲ್ಲ ಬಿಗ್ ಬಾಸ್ ಶೋ ದೇವರಾಣೆಗೂ ನೋಡುತ್ತಿರಲಿಲ್ಲ. ಈಗ ಬಿಗ್ ಬಾಸ್‌ನಿಂದ ಬಂದ ಹಣದಿಂದ ಇರುವ ತಗಡಿನ ಮನೆಯನ್ನ ರಿಪೇರಿ ಮಾಡಿಸುತ್ತೇನೆ. ಆಮೇಲೆ ಮದುವೆ ಆಗುತ್ತೇನೆ. ಈ 2 ಆಸೆ ನನಗಿದೆ ಎಂದು ಹನುಮಂತು ಹೇಳಿದರು. ಹಾಗೆಯೆ ವಿಚಿತ್ರ ಆಸೆಯೊಂದನ್ನು ಬಿಗ್ ಬಾಸ್ ಮುಂದೆನೇ ತೆರೆದಿಟ್ಟಿದ್ದಾನೆ. ಬಿಗ್ ಬಾಸ್ ಯಾರು ಅಂತ ತೋರಿಸಬೇಕು. ಅವರು ತನ್ನ ಮದುವೆಗೆ ಬರಬೇಕು.. ಅವರೇ ಮಂತ್ರ ಹೇಳಬೇಕು ಎಂದು ಕೇಳಿಕೊಂಡಿದ್ದಾನೆ.
ಇಂದು ಸ್ವಗ್ರಾಮಕ್ಕೆ ಹನುಮಂತ:
ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಚಿಲ್ಲೂರುಬಡ್ನಿಯ ಹನುಮಂತ ಲಮಾಣಿ ಬಿಗ್ ಬಾಸ್ ಗೆದ್ದಿದ್ದಕ್ಕೆ ಗ್ರಾಮದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಇಂದು ಸ್ವಗ್ರಾಮಕ್ಕೆ ಹನುಮಂತ ಆಗಮಿಸಲಿದ್ದು, ಗ್ರಾಮದ ಜನರು ಅದ್ಧೂರಿ ಸ್ವಾಗತ ಸಿದ್ಧತೆ ನಡೆಸಿದ್ದಾರೆ. ಗ್ರಾಮದ ಪ್ರಮುಖ ರಸ್ತೆಯಲ್ಲಿ ಡೊಳ್ಳು, ಭಜನೆ ಹಾಗೂ ಜಾಂಜ್ ಮೇಳೆ ಸೇರಿದಂತೆ ವಿವಿಧ ಕಲಾತಂಡಗಳ ಮೂಲಕ ಸ್ವಾಗತ ಮಾಡಲಿದ್ದಾರೆ. ಅಲ್ಲದೆ ಕೆಲವು ಅಭಿಮಾನಿಗಳು ಈಗಾಗಲೇ ಹನುಮಂತ ಅವರನ್ನು ನೋಡಲು ಮನೆಗೆ ಆಗಮಿಸುತ್ತಿದ್ದಾರಂತೆ.
Hanumantha BBK 11: ಬಿಗ್ ಬಾಸ್ನಲ್ಲಿ ಸಿಕ್ಕಿದ 50 ಲಕ್ಷವನ್ನು ಹನುಮಂತ ಏನು ಮಾಡ್ತಾರಂತೆ ಗೊತ್ತಾ?