ಕನ್ನಡ ಕಿರುತೆರೆಯಲ್ಲಿ ಸೀರಿಯಲ್‌ಗಳ (Kannada Serial) ಲೆಕ್ಕಾಚಾರ ವಾರದಿಂದ ವಾರಕ್ಕೆ ಬದಲಾಗುತ್ತ ಇರುತ್ತದೆ. ಪ್ರತಿವಾರ ನಿರ್ದೇಶಕರು ಜನರನ್ನು ಸೆಳೆಯಲು ಒಂದಲ್ಲ ಒಂದು ಟ್ವಿಸ್ಟ್ ಕೊಡುತ್ತಾ ಇರುತ್ತಾರೆ. ಯಾವ ಧಾರಾವಾಹಿ ಹಿಟ್ ಆಯಿತು-ಫ್ಲಾಫ್ ಆಯಿತು ಎಂಬುದು ಪ್ರತಿ ವಾರದ ಟಿಆರ್‌ಪಿ ಮೂಲಕ ತಿಳಿಯಲಿದೆ. ಇದೀಗ 22ನೇ ವಾರದ ಟಿಆರ್‌ಪಿ ರೇಟಿಂಗ್ಸ್ ಹೊರಬಿದ್ದಿದೆ. ಕಳೆದ ವಾರ ಕಲರ್ಸ್ ಕನ್ನಡದಲ್ಲಿ ಪ್ರಾರಂಭವಾದ ಹೊಸ ನಂದ ಗೋಕುಲ ಧಾರಾವಾಹಿಗೆ ಬಂಪರ್ ಟಿಆರ್‌ಪಿ ಬಂದಿದೆ. ಮೊದಲ ವಾರವೇ ಕಲರ್ಸ್ನಲ್ಲಿ ಈ ಧಾರಾವಾಹಿ ದಾಖಲೆ ಬರೆದಿದೆ.
ಮಕ್ಕಳನ್ನು ಹೀರೋ ಮಾಡಲು ಹೋರಾಡುವ ಪ್ರತಿಯೊಬ್ಬ ತಂದೆಯ ಕಥೆ ನಂದಗೋಕುಲ ಆಗಿದೆ. ಈ ಧಾರಾವಾಹಿ ಜೂನ್ 4, ಬುಧವಾರದಂದು ರಾತ್ರಿ 9ಕ್ಕೆ ಪ್ರಸಾರ ಆರಂಭಗೊಂಡಿತು. ಬಹು ತಾರಾಗಣದ ಈ ಧಾರಾವಾಹಿಯಲ್ಲಿ ಝೀ ಕನ್ನಡದ ಗಟ್ಟಿಮೇಳದ ಧಾರಾವಾಹಿ ವಿಕ್ರಾಂತ್ ಪಾತ್ರಧಾರಿ ಅಭಿ ದಾಸ್ ಮುಖ್ಯ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಇವರೊಂದಿಗೆ ಅರವಿಂದ್, ರವಿ ಚೇತನ್, ವಿಜಯಚಂದ್ರ, ಯಶವಂತ್ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಚಲನಚಿತ್ರಗಳಲ್ಲಿ ಮಿಂಚುತ್ತಿದ್ದ ಅರವಿಂದ್ ರಾವ್, ರವಿ ಚೇತನ್ ನಂದ ಗೋಕುಲ ಧಾರಾವಾಹಿ ಮೂಲಕ ಮೊದಲ ಬಾರಿಗೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಹೀಗಾಗಿ ಈ ಧಾರಾವಾಹಿ ಹೇಗೆ ಇರುತ್ತೆ ಎಂಬ ಕುತೂಹಲ ಸೀರಿಯಲ್ ಪ್ರೇಮಿಗಳಲ್ಲಿತ್ತು. ಅದರಂತೆ ಈ ಧಾರಾವಾಹಿಗೆ ಮೊದಲ ವಾರವೇ 4.6 ಟಿವಿಆರ್ ಗಳಿಸಿ ಕಲರ್ಸ್ ಕನ್ನಡ ವಾಹಿನಿಯ ಸೀರಿಯಲ್‌ಗಳ ಪೈಕಿ ಅಗ್ರಸ್ಥಾನ ಪಡೆದಿದೆ. ಈ ಹಿಂದೆ ಕಲರ್ಸ್ನ ನಂಬರ್ ಧಾರಾವಾಹಿ ಭಾಗ್ಯ ಲಕ್ಷ್ಮೀ ಮತ್ತು ಮುದ್ದಿ ಸೊಸೆ ಆಗಿತ್ತು. ಇದೀಗ ಮುದ್ದು ಸೊಸೆ 4.5 ಮತ್ತು ಭಾಗ್ಯಲಕ್ಷ್ಮೀ 4.3 ಟಿವಿಆರ್ ಪಡೆದು ಕೆಳಕ್ಕೆ ಜಾರಿದೆ.
ಇನ್ನು ಒಟ್ಟಾರೆಯಾಗಿ ನಂಬರ್ ಒನ್ ಸೀರಿಯಲ್ ಯಾವುದು ಎಂಬುದನ್ನು ನೋಡುವುದಾದರೆ, ಝೀ ಕನ್ನಡದ ಶ್ರಾವಣಿ ಸುಬ್ರಹ್ಮಣ್ಯ ಆಗಿದೆ. ಇದು 8.4 ಟಿವಿಆರ್ ದಾಖಲಿಸುವ ಮೂಲಕ ಮೊದಲ ಸ್ಥಾನದಲ್ಲಿದೆ. 7.8 ಟಿವಿಆರ್ ಪಡೆದು ಬ್ರಹ್ಮಗಂಟು ಸೀರಿಯಲ್ ಎರಡನೇ ಸ್ಥಾನಕ್ಕೇರಿದೆ. ನಾ ನಿನ್ನ ಬಿಡಲಾರೆ ಧಾರಾವಾಹಿ 7.5 ಟಿವಿಆರ್ನೊಂದಿಗೆ ಮೂರನೇ ಸ್ಥಾನ, ಅಣ್ಣಯ್ಯ 7.0 ಟಿವಿಆರ್ ಪಡೆದು ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಐದನೇ ಸ್ಥಾನದಲ್ಲಿ 6.9 ಟಿವಿಆರ್ ಗಿಟ್ಟಿಸಿ ಲಕ್ಷ್ಮೀ ನಿವಾಸ ಧಾರಾವಾಹಿ ಇದೆ.