ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕರ್ಣ ಧಾರಾವಾಹಿ (Karna Serial) ಧೂಳೆಬ್ಬಿಸುತ್ತಿದೆ. ಕಿರುತೆರೆ ಲೋಕದಲ್ಲಿ ಈ ಧಾರಾವಾಹಿ ಇತಿಹಾಸ ನಿರ್ಮಿಸಿದೆ. ಜನರು ಕರ್ಣ ಧಾರಾವಾಹಿಯನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ಕಿರಣ್ ರಾಜ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಈ ಧಾರಾವಾಹಿಯಲ್ಲಿ ಭವ್ಯಾ ಗೌಡ ಹಾಗೂ ನಮ್ರತಾ ಗೌಡ ನಾಯಕಿಯಾಗಿದ್ದಾರೆ. ಕರ್ಣ ತ್ರಿಕೋನ ಪ್ರೇಮಕಥೆಯ ಧಾರಾವಾಹಿ. ಇತ್ತೀಚಿನ ಎಪಿಸೋಡ್ಗಳಲ್ಲಿ ನಿತ್ಯಾ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಮ್ರತಾ ಗೌಡ ಮೇಲೆಯೇ ಕಥೆ ಸಾಗುತ್ತಿದೆ.
ನಮ್ರತಾ ಅವರು ಮೊದಲಿಗೆ ಬಾಲ ನಟಿಯಾಗಿ ಸೀರಿಯಲ್, ಸಿನಿಮಾಗಳಲ್ಲಿ ನಟಿಸಿ ಗುರುತಿಸಿಕೊಂಡವರು. ಬಳಿಕ ಪುಟ್ಟ ಗೌರಿ ಮದುವೆ, ನಾಗಿಣಿ ಧಾರವಾಹಿ ಮೂಲಕ ಹೆಚ್ಚಿನ ಜನಪ್ರಿಯತೆ ಸಿಕ್ಕಿತು. ಬಿಗ್ ಬಾಸ್ ಶೋಗೆ ಹೋಗಿಬಂದ ನಂತರ ಅವರ ಅಭಿಮಾನಿಗಳ ಬಳಗ ಕೂಡ ಹೆಚ್ಚಾಗಿದೆ. ಇದೀಗ ಕರ್ಣ ಧಾರಾವಾಹಿಯಲ್ಲಿ ಮಿಂಚುತ್ತಿದ್ದಾರೆ. ಹೀಗಿರುವಾಗ ಇವರಿಗೆ ಬಂಪರ್ ಆಫರ್ ಒಂದು ಒಲಿದು ಬಂದಿದೆ.
ವಿಜಯ ರಾಘವೇಂದ್ರ ನಾಯಕರಾಗಿ ನಟಿಸುತ್ತಿರುವ, ಪಿ.ಸಿ.ಶೇಖರ್ ನಿರ್ದೇಶನದ ‘ಮಹಾನ್’ ಚಿತ್ರದಲ್ಲಿ ನಮ್ರತಾ ಗೌಡ ನಟಿಸಲಿದ್ದಾರೆ. ಆಕಾಶ್ ಪಿಕ್ಚರ್ಸ್ ಲಾಂಛನದಲ್ಲಿ ಪ್ರಕಾಶ್ ಬುದ್ದೂರು ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ನಟ ಮಿತ್ರ, ‘ರಂಗಿತರಂಗ’ ಖ್ಯಾತಿಯ ನಟಿ ರಾಧಿಕಾ ನಾರಾಯಣ್ ಅವರೂ ನಟಿಸುತ್ತಿದ್ದಾರೆ. ಕನ್ನಡ ಚಿತ್ರರಂಗ ನಮ್ರತಾಗೆ ಹೊಸದಲ್ಲ. ಈ ಹಿಂದೆ ಪುನೀತ್ ರಾಜ್‌ಕುಮಾರ್ ಅಭಿನಯದ ಮಿಲನ, ಎಕ್ಸ್‌ಕ್ಯೂಸ್ ಮೀ ಸೇರಿದಂತೆ ಹಲವು ಸಿನಿಮಾಗಳಲ್ಲಿ ಬಾಲನಟಿಯಾಗಿ ಇವರು ನಟಿಸಿದ್ದರು.
Amruthadhare Serial: ಅಮೃತಧಾರೆಯಲ್ಲಿ ಹೊಸ ಅಧ್ಯಾಯ: ಕ್ಯಾಬ್ ಡ್ರೈವರ್ ಆದ ಕೋಟ್ಯಾಧಿಪತಿ ಗೌತಮ್
ಈ ಚಿತ್ರದ ಕುರಿತು ನಟಿ ನಮ್ರತಾ ಗೌಡ ಮಾತನಾಡಿ, ಸಿನಿಮಾದಲ್ಲಿ ನಟಿಸುವಂತೆ ಅನೇಕ ಸ್ನೇಹಿತರು ಬಹಳ ದಿನಗಳಿಂದ ಒತ್ತಾಯಿಸುತ್ತಿದ್ದರು. ನಾನು ಒಳ್ಳೆಯ ಕಥೆಗಾಗಿ ಕಾಯುತ್ತಿದ್ದೆ. ನಿರ್ದೇಶಕ ಪಿ.ಸಿ.ಶೇಖರ್ ಅವರು ಮಹಾನ್ ಚಿತ್ರದ ಕಥೆ ಹೇಳಿದಾಗ, ಕಥೆ ಮನಸ್ಸಿಗೆ ಹತ್ತಿರವಾಯಿತು. ಕಥೆ ಕೇಳಿದ ತಕ್ಷಣ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡೆ. ರೈತರ ಬದುಕು ಬವಣೆಗಳ ಸುತ್ತ ಹೆಣೆದಿರುವ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ನಟಿಸುತ್ತಿರುವುದು ಬಹಳ ಖುಷಿ ಕೊಟ್ಟಿದೆ ಎಂದು ಹೇಳಿದರು.