ಬಿಗ್ ಬಾಸ್ ಕನ್ನಡ ಸೀಸನ್ 10ರ ವಿನ್ನರ್ ಕಾರ್ತಿಕ್ ಮಹೇಶ್ ಸದ್ಯ ಸಿನಿಮಾ ರಂಗದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಮೊನ್ನೆಯಷ್ಟೆ ಇವರ ಹೊಸ ಚಿತ್ರ ಅನೌನ್ಸ್ ಆಗಿದ್ದು, ಸಿಂಪಲ್ ಸುನಿ ನಿರ್ದೇಶನದ ರಿಚಿ ರಿಚ್ ಸಿನಿಮಾದಲ್ಲಿ ನಾಯಕನಾಗಿ ಕಾರ್ತಿಕ್ ನಟಿಸಲಿದ್ದಾರೆ. ರಾಮರಸ ಹೆಸರಿನ ಸಿನಿಮಾದಲ್ಲಿ ಕೂಡ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ ಗೆದ್ದ ಬಳಿಕ ಇವರ ಲೈಫೇ ಬದಲಾಗಿದೆ. ಇದೀಗ ಕಾರ್ತಿಕ್ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಅವರ ಫ್ಯಾನ್ಸ್‌ಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ. ಇದಕ್ಕೆ ಅವರ ಅಮ್ಮನ ಸಾಥ್ ಕೂಡ ಇದೆ.
ಹೌದು ಕಾರ್ತಿಕ್ ಇದೀಗ ನಟನೆಯ ಜತೆಗೆ ಹೊಸದಾದ ಉದ್ಯಮವೊಂದನ್ನು ಕೈಗೆತ್ತಿಕೊಂಡಿದ್ದಾರೆ. ಈ ಸಾಹಸಕ್ಕೆ ಅವರ ಅಮ್ಮನೂ ಜತೆ ನಿಂತಿದ್ದಾರೆ. ಸೋಡಾ ಬಾಟಲ್ ಉದ್ಯಮವನ್ನು ಕಾರ್ತಿಕ್ ಮಹೇಶ್ ಆರಂಭಿಸಿದ್ದಾರೆ. ಈ ಉದ್ಯಮ ಶೀಘ್ರದಲ್ಲಿ ಮಾರುಕಟ್ಟೆಯನ್ನೂ ಪ್ರವೇಶಿಸಲಿದೆ. ಅದಕ್ಕೂ ಮುನ್ನ ಅಮ್ಮನ ಆಶೀರ್ವಾದ ಪಡೆದು ಪೋಸ್ಟ್ ಹಂಚಿಕೊಂಡಿದ್ದಾರೆ. ವಿವಿಧ ಫ್ಲೇವರ್ನಲ್ಲಿ ಇದು ಲಭ್ಯವಿರಲಿದೆ ಎನ್ನಲಾಗಿದೆ. ಶೀಘ್ರವೇ ಇದು ಮಾರುಕಟ್ಟೆಗೆ ಬರಲಿದೆಯಂತೆ.
‘‘ಇವಳು ಗೆದ್ದಾಗ ಹಿಗ್ಗಲಿಲ್ಲ, ಸೋತಾಗ ಕುಗ್ಗಲು ಬಿಡಲಿಲ್ಲ. ಪ್ರತಿಯೊಂದು ಹೆಜ್ಜೆಯಲ್ಲೂ ಮುನ್ನುಗ್ಗು ಮಗನೇ ಎಂದು ಧೈರ್ಯ ತುಂಬುವಳು. ಮುಂದಿನ ಹೆಜ್ಜೆಯಲ್ಲೂ ಜೊತೆಯಾಗಿದ್ದಾಳೆ. ನನ್ನ ಮೊದಲ ಟೀಚರ್. ನನ್ನ ಮೊದಲ ಚಿಯರ್ ಲೀಡರ್. ದಿನದ ಆರಂಭ, ಕೊನೆ ಎಲ್ಲವೂ.. ಪ್ರಸ್ತುತ ಪಡಿಸುತ್ತಿದ್ದೇನೆ GOLIFY, with ಅಮ್ಮ. ಆದಷ್ಟು ಬೇಗ ಮಾರುಕಟ್ಟೆಗೆ’’ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಅನೇಕರು ಶುಭಕೋರಿದ್ದು, ಗುಡ್ ಲಕ್ ಟು ಯೂ ಮಚಾ ಎಂದು ತನಿಷಾ ಕುಪ್ಪಂಡ ಶುಭ ಹಾರೈಸಿದರೆ, ಮಾಜಿ ಬಿಗ್ ಬಾಸ್ ಸ್ಪರ್ಧಿ ಕಿರಿಕ್ ಕೀರ್ತಿ ಸಹ ಶುಭವಾಗಲಿ, ಗೆಲುವು ನಿಶ್ಚಿತ ಎಂದಿದ್ದಾರೆ.
ಬಿಗ್ ಬಾಸ್ ಗೆದ್ದ ಹಣವನ್ನು ಅನೇಕರು ನಾನಾ ರೀತಿಯಲ್ಲಿ ಬಳಕೆ ಮಾಡಿಕೊಳ್ಳುತ್ತಾರೆ. ಮೊನ್ನೆಯಷ್ಟೆ ಬಿಬಿಕೆ 11 ಸೀಸನ್ ಗೆದ್ದ ಹನುಮಂತ 50 ಲಕ್ಷದಲ್ಲಿ ಮನೆ ಸರಿ ಮಾಡಬೇಕು ಹಾಗೂ ಮದುವೆಗೆ ಉಪಯೋಗ ಮಾಡುತ್ತೇನೆ ಎಂದಿದ್ದರು. ಕಾರ್ತಿಕ್ ಅಮ್ಮನಿಗೋಸ್ಕರ ಮನೆ ಕಟ್ಟಬೇಕು ಎನ್ನುವ ಕನಸು ಕಂಡಿದ್ದರು. ಈಗ ಅವರು ಉದ್ಯಮಗಳಲ್ಲೂ ತೊಡಗಿಸಿಕೊಳ್ಳುವ ಮೂಲಕ ಕನಸನ್ನು ನನಸು ಮಾಡಿಕೊಳ್ಳುವತ್ತ ಹೆಜ್ಜೆ ಹಾಕುತ್ತಿದ್ದಾರೆ.
Anusha Rai-Trivikram: ಮತ್ತೆ ಜೊತೆಯಾಗಿ ಕಾಣಿಸಿಕೊಂಡ ಅನುಷಾ ರೈ-ತ್ರಿವಿಕ್ರಮ್: ಹಗ್ ಮಾಡುತ್ತಿರುವ ವಿಡಿಯೋ ವೈರಲ್