ಝೀ ಕನ್ನಡ ವಾಹಿನಿಯಲ್ಲಿ ಸೋಮವಾರ ರಾತ್ರಿ 8 ಗಂಟೆಗೆ ಪ್ರಸಾರ ಕಾಣಬೇಕಿದ್ದ ಬಹುನಿರೀಕ್ಷಿತ ಹೊಸ ಕರ್ಣ ಧಾರಾವಾಹಿಯನ್ನು (Karna Serial) ಕೊನೇ ಕ್ಷಣದಲ್ಲಿ ಏಕಾಏಕಿ ರದ್ದು ಮಾಡಲಾಗಿದೆ. ಈ ಧಾರಾವಾಹಿ ಸೋಮವಾರ ಟೆಲಿಕಾಸ್ಟ್ ಆಗುವುದಿಲ್ಲ ಎಂಬ ಮಾಹಿತಿಯನ್ನು ವಾಹಿನಿ ನೀಡಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿತು. ಕರ್ಣ ಧಾರಾವಾಹಿಯು ಪ್ರಸಾರ ಕಾಣುತ್ತಿಲ್ಲ ಮತ್ತು ಹೊಸ ದಿನಾಂಕವನ್ನು ಶೀಘ್ರದಲ್ಲಿ ತಿಳಿಸಲಾಗುವುದು ಎಂದು ಝೀ ಕನ್ನಡವು ಮಾಹಿತಿ ನೀಡಿದೆ. ಇದಕ್ಕೆ ಕಾರಣ ಏನು ಎಂಬುದನ್ನು ಅಧಿಕೃತವಾಗಿ ಯಾರೂ ರಿವೀಲ್ ಮಾಡಿಲ್ಲ.
ಈ ಧಾರಾವಾಹಿಯಲ್ಲಿ ಕಿರಣ್ ರಾಜ್, ಭವ್ಯಾ ಗೌಡ, ನಮ್ರತಾ ಗೌಡ ಮುಖ್ಯ ಭೂಮಿಕೆಯಲ್ಲಿ ನಟಿಸತ್ತಿದ್ದಾರೆ. ಮೂಲಗಳ ಪ್ರಕಾರ ಝೀ ಕನ್ನಡ ವಾಹಿನಿಯ ಪ್ರತಿಸ್ಪರ್ಧಿ ಚಾನೆಲ್ ಜೊತೆಗೆ ಭವ್ಯಾ ಗೌಡ ಅವರ ಅಗ್ರೀಮೆಂಟ್ ಆಗಿತ್ತು. ಅಗ್ರೀಮೆಂಟ್ ಪ್ರಕಾರ, ಕೆಲ ತಿಂಗಳ ಮಟ್ಟಿಗೆ ಭವ್ಯಾ ಗೌಡ ಬೇರೆ ಚಾನೆಲ್‌ಗಾಗಿ ಕೆಲಸ ಮಾಡುವಂತಿಲ್ಲ. ಇದನ್ನೇ ಇಟ್ಟುಕೊಂಡು ಪ್ರತಿಸ್ಪರ್ಧಿ ಚಾನೆಲ್ ಕೋರ್ಟ್ ಮೆಟ್ಟಿಲೇರಿದೆ. ಕರ್ಣ ಧಾರಾವಾಹಿ ಪ್ರಸಾರಕ್ಕೆ ಸ್ಟೇ ತಂದಿದೆ.
ತನ್ನ ಪ್ರೊಮೋ ಮೂಲಕವೇ ದೊಡ್ಡ ಹೈಪ್ ಕ್ರಿಯೆಟ್ ಮಾಡಿದ್ದ ಕರ್ಣ ಧಾರಾವಾಹಿ ನೋಡಲು ವೀಕ್ಷಕರು ಕಾದು ಕುಳಿತಿದ್ದರು. ಆದರೆ ವೀಕ್ಷಕರು ಹಾಗೂ ಅಭಿಮಾನಿಗಳ ಆಸೆಗೆ ಈಗ ತಣ್ಣೀರು ಎರಚಿದಂತಾಗಿದೆ. ಝೀ ಕನ್ನಡ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮಾಹಿತಿ ನೀಡಿ, ‘ಕರ್ಣ ಹುಟ್ಟುವ ಮೊದಲೇ ಶಾಪಗ್ರಸ್ಥ. ತನ್ನದಲ್ಲದ ತಪ್ಪಿಗೆ ಜೀವನ ಪೂರ್ತಿ ಪರಿತಪಿಸಿದವನು. ಹೆಜ್ಜೆ ಹೆಜ್ಜೆಗೂ ದ್ವೇಷ, ಅಸೂಯೆ, ಹತಾಶೆ, ನಿರಾಶೆ, ನೋವು, ಅವಮಾನಗಳಿಗೆ ಗುರಿಯಾದವನು. ಆದರೆ ಎಲ್ಲ ಸವಾಲುಗಳನ್ನೂ ಹಿಮ್ಮೆಟ್ಟಿ ಜನರ ಪ್ರೀತಿ ಗಳಿಸಿದವನು. ಕೊಟ್ಟ ಮಾತಿನಂತೆ ಕರ್ಣ ಬಂದೇ ಬರ್ತಾನೆ.. ಶೀಘ್ರದಲ್ಲೇ, ಅದೇ ಪ್ರೀತಿ, ವಿಶ್ವಾಸದಿಂದ ಕರ್ಣ ನನ್ನ ಬರಮಾಡಿಕೊಳ್ತರಿ ಅಲ್ವಾ’ ಎಂದು ಬರೆದುಕೊಂಡಿದೆ.
ಇದರ ನಡುವೆ ಈ ಧಾರಾವಾಹಿಯ ಕಲಾವಿದರು ಅಭಿಮಾನಿಗಳ ಬಳಿ ಕ್ಷಮೆ ಕೇಳುತ್ತಿದ್ದಾರೆ. ನಮ್ರತಾ ಗೌಡ ಅವರು, ತಮ್ಮ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಹಂಚಿಕೊಂಡು ವೀಕ್ಷಕರಿಗೆ ಕೈ ಮುಗಿದು ಕ್ಷಮೆ ಕೇಳಿದ್ದಾರೆ. ನೀವೆಲ್ಲಾ ಕೇಳುತ್ತಿರೋ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ. ತುಂಬಾ ಜನ ಮೆಸೇಜ್ ಮಾಡಿದ್ರಿ. 16ನೇ ತಾರೀಖು ಪ್ರಸಾರ ಆಗಬೇಕಿದ್ದ ಕರ್ಣ ಧಾರಾವಾಹಿ ಏಕೆ ಪ್ರಸಾರ ಆಗಲಿಲ್ಲ ಅಂತ ಕೇಳಿದ್ರಿ. ಆದ್ರೆ ಇಡೀ ತಂಡದ ಪರವಾಗಿ ನಾನು ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ. ಕಾರಣಾಂತರಗಳಿಂದ ನಾವು ಬರೋದಕ್ಕೆ ಆಗಿಲ್ಲ. ಆದ್ರೆ ಪ್ರಾಮಿಸ್ ಮತ್ತೆ 8 ಗಂಟೆಗೆ ನಾವು ಆದಷ್ಟು ಬೇಗನೇ ಬರುತ್ತೇವೆ ಎಂದು ಹೇಳಿದ್ದಾರೆ.
ಕಿರಣ್ ರಾಜ್ ಕೂಡ ಲೈವ್ ಬಂದು ಅಭಿಮಾನಿಗಳ ಬಳಿ ಕ್ಷಮೆ ಕೇಳಿದ್ದಾರೆ. ನಾನು ಇವತ್ತು ಕರ್ಣನಾಗಿ ನಿಮ್ಮ ಮನೆಗೆ ಬರಬೇಕಿತ್ತು. ಆದರೆ ಕೆಲ ಕಾರಣಗಳಿಂದ ಅದು ಆಗಲಿಲ್ಲ. ಹೀಗಾಗಿ ಎಲ್ಲ ವೀಕ್ಷಕರ ಬಳಿ ಕ್ಷಮೆ ಕೇಳುತ್ತಿದ್ದೇನೆ. ಕೆಲವು unfair ಕಾರಣಗಳಿಂದ ಧಾರಾವಾಹಿ ಪ್ರಸಾರ ಸಾಧ್ಯವಾಗಿಲ್ಲ. ಹೀಗಾಗಿ, ಎಲ್ಲಾ ವೀಕ್ಷಕರಿಗೂ ನಾವು ಕ್ಷಮೆ ಕೇಳುತ್ತೇವೆ. ನನಗೆ ಗೊತ್ತಿರುವ ಇನ್ಫರ್ಮೇಷನ್ ಪ್ರಕಾರ.. ಏನೋ ಲೀಗಲ್ ಕಾಂಪ್ಲಿಕೇಷನ್ಸ್ ಆಗಿದೆ. ಅದರಿಂದ ಹೊರಗೆ ಬರಲು ಪ್ರಯತ್ನ ಪಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
Karna Serial: ಲೈವ್ ಬಂದು ಅಭಿಮಾನಿಗಳ ಬಳಿ ಕ್ಷಮೆ ಕೇಳಿದ ಕಿರಣ್ ರಾಜ್