ಝೀ ಕನ್ನಡ ವಾಹಿನಿಯ ಮೂಲಕ ಕರ್ನಾಟಕದ ಜನರ ಮನೆಮನಸ್ಸಿಗೆ ತಲುಪಿದ್ದ, ಕಾಮಿಡಿ ಕಿಲಾಡಿ ಹಾಸ್ಯ ಕಾರ್ಯಕ್ರಮದ ಸೀಸನ್ 3ರ ವಿನ್ನರ್ ರಾಕೇಶ್ ಪೂಜಾರಿ (Rakesh Poojary) ದಿಢೀರ್ ಸಾವು ಅವರ ಇನ್ನೂ ಅರಗಿಸಿಕೊಳ್ಳಲು ಆಗುತ್ತಿಲ್ಲ. ಸ್ನೇಹಿತನ ಮದುವೆಯ ಮೆಹಂದಿ ಕಾರ್ಯಕ್ರಮದಲ್ಲಿ ಮೇ 12 ರ ಬೆಳಗ್ಗಿನ ಜಾವ ಸುಮಾರು 1.30ಕ್ಕೆ ಬಿಪಿ ಲೋ ಆಗಿ ಕುಸಿದು ಬಿದ್ದರು. ಆ ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ರಾಕೇಶ್ ಚಿಕಿತ್ಸೆಗೆ ಸ್ಪಂದಿಸದೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮನೆಗೆ ಆಧಾರವಾಗಿದ್ದ ಮಗ ರಾಕೇಶ್ನನ್ನು ಕಳೆದುಕೊಂಡ ದುಃಖದಲ್ಲಿ ಇಡೀ ಕುಟುಂಬವಿದೆ.
ನಟ ರಾಕೇಶ್ ಪೂಜಾರಿ ಅಂತಿಮ ದರ್ಶನಕ್ಕೆ ಅನೇಕ ಕಲಾವಿದರು ಬಂದಿದ್ದರು. ನಟಿ ನಯನ, ಸೂರ್ಯ ಕುಂದಾಪುರ, ದೀಕ್ಷಿತ್, ಪ್ರವೀಣ್, ದೀಪಿಕಾ, ವಾಣಿ, ಉಮೇಶ್ ಕಿನ್ಮಾರ, ಸೂರಜ್, ಜೀ ಮೆಂಟರ್ ವಿಜಯ್ ಶೆಟ್ಟಿ ಸೇರಿದಂತೆ ಸಾಕಷ್ಟು ಕಲಾವರು ಗೆಳೆಯನ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ. ಈ ಪೈಕಿ ರಾಕೇಶ್ಗೆ ಹತ್ತಿರವಾಗಿದ್ದ ವಾಣಿ ಕೆಲ ಮಹತ್ವದ ವಿಚಾರವನ್ನು ಹಂಚಿಕೊಂಡಿದ್ದಾರೆ.
ಕಾಮಿಡಿ ಕಿಲಾಡಿಗಳು ಸೀಸನ್ 3ರಲ್ಲಿ ವಿನ್ನರ್ ಆಗಿದ್ದಾಗ ರಾಕೇಶ್ ಅವರಿಗೆ 8 ಲಕ್ಷ ರೂ. ನಗದು ಬಹುಮಾನ ಸಿಕ್ಕಿತ್ತು. ಸದ್ಯ ವಾಣಿ ಅವರು ರಾಕೇಶ್ ಆ ಹಣವನ್ನು ಏನು ಮಾಡಿದರು ಎಂಬುದನ್ನು ಹೇಳಿದ್ದಾರೆ. ‘‘ಅವನ ದೊಡ್ಡ ಆಸೆ ಎಂದರೆ, ತಂಗಿಗೆ ಮದುವೆ ಮಾಡಬೇಕು ಎಂಬುದು. ಕಾಮಿಡಿ ಕಿಲಾಡಿಗಳು ಶೋನಲ್ಲಿ ಗೆದ್ದ ಹಣವನ್ನು ಕೂಡ ತಂಗಿ ಮದುವೆಗೆ ಬೇಕು ಅಂತ ಫಿಕ್ಸೆಡ್ ಡೆಪಾಸಿಟ್ ಹಾಕಿದ್ದ. ನಮಗೂ ಈ ವಿಚಾರ ಗೊತ್ತಿರಲಿಲ್ಲ. ಈಗ ಗೊತ್ತಾಯ್ತು. ಅವನ ಕುಟುಂಬಕ್ಕೆ ಒಳ್ಳೆಯದಾಗಬೇಕು ಅಷ್ಟೇ" ಎಂದು ವಾಣಿ ಗೌಡ ಹೇಳಿದ್ದಾರೆ.
ಇದೇವೇಳೆ ಮಾತನಾಡಿದ ನಯನ, ತಂಗಿಯ ಮದುವೆ ಮಾಡಬೇಕು ಎಂಬುದೇ ಆತನ ದೊಡ್ಡ ಕನಸಾಗಿತ್ತು. ಅವನ ಜೀವನದ ಒಂದೇ ಒಂದು ಆಸೆ ತಂಗಿಯ ಮದುವೆ ತುಂಬಾ ಗ್ರ್ಯಾಂಡ್ ಆಗಿ ಆಗಬೇಕು ಅನ್ನೋದಾಗಿತ್ತು. ಕಲಾವಿದರೆಲ್ಲರು ರಾಕೇಶ್ ಪೂಜಾರಿ ಕುಟುಂಬಕ್ಕೆ ಸಹಾಯ ಮಾಡಬೇಕು ಎಂದು ನಯನ ಕೇಳಿಕೊಂಡಿದ್ದಾರೆ.
Anusha Rai: ‘ನಾನು ಮದುವೆ ಆಗೋ ಹುಡುಗ ದರ್ಶನ್ ಥರ ಇರಬೇಕು’ ಎಂದ ಬಿಗ್ ಬಾಸ್ ಅನುಷಾ ರೈ
ರಾಕೇಶ್ ತಂಗಿ ಮದುವೆ ಕುರಿತು ಮಾಸ್ಟರ್ ಆನಂದ್ ಕೂಡ ಮಾತನಾಡಿದ್ದು, "ತಂಗಿ ಮದುವೆ ಮಾಡುವುದು ರಾಕೇಶನ ಕನಸು. ಆದರೆ ಈಗ ಅದು ನಮ್ಮೆಲ್ಲರ ಟಾರ್ಗೆಟ್ ಆಗಿದೆ. ಮದುವೆಯನ್ನು ಚೆನ್ನಾಗಿ ಮಾಡಬೇಕು ಅಂತ ಮಾತನಾಡಿಕೊಳ್ಳುತ್ತಿದ್ದೇವೆ. ನಾವು ಕೈಲಾಸವನ್ನೇ ತಂದು ಪಕ್ಕಕ್ಕಿಟ್ಟರು ಆ ಕುಟುಂಬ ಸಮಾಧಾನವಾಗಲ್ಲ. ನಾವು ಎಷ್ಟೇ ಅದ್ದೂರಿಯಾಗಿ ಮದುವೆ ಮಾಡಿದರೂ ಅಣ್ಣ ಇಲ್ಲ ಅನ್ನೋ ಕೊರಗನ್ನು ನಮ್ಮಿಂದ ನೀಗಿಸಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.