ಇತ್ತೀಚೆಗಷ್ಟೆ ನಟ ಕಮಲ್ ಹಾಸನ್ (Kamal Hassan) ಕನ್ನಡಿಗರ ಆಕ್ರೋಶಕ್ಕೆ ಗುರಿಯಾದರು. ‘ಕನ್ನಡ ತಮಿಳಿನಿಂದ ಹುಟ್ಟಿದ್ದು’ ಎಂದು ಹೇಳಿರುವುದು ಅನೇಕ ಕನ್ನಡಿಗರ ಕೋಪಕ್ಕೆ ಕಾರಣವಾಗಿದೆ. ಹಲವಾರು ಕನ್ನಡಪರ ಸಂಘಟನೆಗಳು, ನಟ-ನಟಿಯರು, ಕಮಲ್ ಹಾಸನ್ ಅವರ ಹೇಳಿಕೆಗಳನ್ನು ಕಟುವಾಗಿ ಖಂಡಿಸಿದ್ದಾರೆ. ಈ ನಡುವೆ ಕನ್ನಡತಿ ಧಾರಾವಾಹಿ ಖ್ಯಾತಿಯ ನಟಿ ರಂಜನಿ ರಾಘವನ್ ಅವರು ಕಮಲ್ ಹಾಸನ್‌ಗೆ ಕನ್ನಡ ಪುಸ್ತಕ ಕೊಟ್ಟು ಬಂದಿದ್ದರು. ಆ ಫೋಟೊಗಳನ್ನು ರಂಜನಿ ರಾಘವನ್ ಸ್ವತಃ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತು.
ರಂಜನಿ ರಾಘವನ್ ತಾವು ಬರೆದ ‘ಸ್ವೈಪ್ ರೈಟ್ ಕತೆ ಡಬ್ಬಿ’ ಪುಸ್ತಕವನ್ನು ನೀಡಿ ಇದಕ್ಕೆ ‘ಕಮಲ್ ಸರ್ಗೆ ಕನ್ನಡ ಪುಸ್ತಕ’ ಎಂದು ಕ್ಯಾಪ್ಶನ್ ನೀಡಿದ್ದರು. ಇದನ್ನ ನೋಡಿದ ಅಭಿಮಾನಿಗಳು ರಂಜನಿ ಕಮಲ್ ಅವರಿಗೆ ಕನ್ನಡ ಪುಸ್ತಕ ಕೊಟ್ಟು ಟಾಂಗ್ ಕೊಟ್ಟಿದ್ದಾರೆ, ಈ ಮಧ್ಯೆ ಇದೆಲ್ಲಾ ಯಾಕೆ ಅಂತೆಲ್ಲಾ ಕಾಮೆಂಟ್ಸ್ ಮಾಡುವ ಮೂಲಕ ನಟಿಗೆ ಪ್ರಶ್ನೆ ಕೇಳಿದ್ದರು. ಈ ವಿಚಾರ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ನಟಿ ಸ್ಪಷ್ಟನೆ ಕೊಟ್ಟಿದ್ದಾರೆ.
ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡು, ಕೆಲ ವಿಚಾರವನ್ನು ಸ್ಪಷ್ಟ ಪಡಿಸಿದ್ದಾರೆ. "ಕಮಲ್ ಸರ್ಗೆ ಕನ್ನಡ ಪುಸ್ತಕ ಅಂತ ಕ್ಯಾಪ್ಷನ್ ಕೊಟ್ಟು ಒಂದು ಫೋಟೋ ಅಪ್ಲೋಡ್ ಮಾಡಿದ್ದೆ. ಅದರ ಉದ್ದೇಶ ಬಹುತೇಕರಿಗೆ ಅರ್ಥ ಆಗಿದೆ. ಆದರೆ ಸುಮಾರಷ್ಟು ಜನಕ್ಕೆ ನನ್ನ ಮನೆ ಮಾತು, ಜಾತಿ ಅದು ಇದು ಅಂತ ಬೇರೆ ಬೇರೆ ಆಯಾಮಗಳಿಂದ ಇದು ಕಾಣಿಸ್ತಾ ಇರುವುದರಿಂದ ಈ ವಿಡಿಯೋ ಮಾಡುತ್ತಿದ್ದೇನೆ" ಎಂದು ರಂಜನಿ ರಾಘವನ್ ಅವರು ಹೇಳಿದ್ದಾರೆ.
‘‘ಈಗಿನ ಪರಿಸ್ಥಿತಿಯಲ್ಲಿ ನಾನು ಹೋಗಿ ಕನ್ನಡ ಪುಸ್ತಕ ಕೊಡ್ತೀನಿ ಅಂತ ಅವರು ಒಪ್ಪಿಕೊಳ್ಳೋದಿಲ್ಲ. ಇದು ನಾನು ನಿರ್ದೇಶನ ಮಾಡುತ್ತಿರುವ ಸಿನಿಮಾ ಪ್ರಮೋಷನ್ಗಾಗಿ ತುಂಬಾ ಕಷ್ಟ ಪಟ್ಟು, ನನ್ನ ಸಿನಿಮಾ ತಂಡ ಹೋಗಿ ಕಮಲ್ ಹಾಸನ್ ಸರ್ನ 3-4 ತಿಂಗಳುಗಳ ಹಿಂದೆ ಭೇಟಿಯಾಗಿದ್ದೇವೆ. ನಮ್ಮ ಕಂಟೆಂಟ್ ಬಗ್ಗೆ ಒಳ್ಳೆಯ ಮಾತಾಡಿ, ನಮ್ಮ ಪೋಸ್ಟರ್ ಜೊತೆಗೆ ಫೋಟೋ ತೆಗೆಸಿಕೊಂಡಿದ್ದರು. ಅದನ್ನು ನಾವು ಬಳಸಿಕೊಂಡು ಟೀಸರ್ ಲಾಂಚ್ ಮಾಡಬೇಕು ಅಂತ ಪ್ಲಾನ್ ಮಾಡಿದ್ವಿ. ಆದ್ರೆ ಈ ಮಧ್ಯೆ ಈ ಘಟನೆ ನಡೆದಿದೆ. ಈ ವಿವಾದದಿಂದ ನಮ್ಮೆಲ್ಲರಿಗೂ ಬೇಸರ ಆಗಿದೆ. ಕನ್ನಡ ವಿರೋಧಿ ಹೇಳಿಕೆ ಕೊಟ್ಟು, ಕ್ಷಮೆ ಕೂಡ ಕೇಳೋದಿಲ್ಲ ಅಂದ್ರೆ ನಾವು ಯಾರು ಒಪ್ಪೋದಿಲ್ಲ. ಹೀಗಾಗಿ ಸಿನಿಮಾ ಪ್ರಮೋಷನ್ನನ್ನೇ ಕ್ಯಾನ್ಸಲ್ ಮಾಡಿದ್ದೇವೆ. ಆದ್ರೆ ನಾನು ಅಲ್ಲಿಗೆ ಹೋದಾಗ ಕೊನೆಯ ಕ್ಷಣದಲ್ಲಿ ನಾನು ಬರೆದಿರೋ ಪುಸ್ತಕ ಕೊಟ್ಟಿದ್ದೇನೆ. ಈ ಮೂಲಕ ನಾನು ಅವರ ವಿರುದ್ಧ ಪ್ರತಿಭಟನೆ ಮಾಡ್ತಾ ಇದ್ದೀನಿ ಅನ್ನೋದು ನನ್ನ ಉದ್ದೇಶ ಆಗಿತ್ತು’’ ಎಂದು ಹೇಳಿದ್ದಾರೆ.
ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲರಿಗೂ ಇದೆ ಆದರೆ ಸತ್ಯಕ್ಕೆ ಹತ್ತಿರವಾದ ವಿಚಾರಗಳನ್ನು ಹೇಳಿದಾಗ ಮಾತ್ರ ನಾವು ಪವರ್‌ಫುಲ್ ಎಂದು ಹೇಳುವುದಕ್ಕೆ ನಾನು ಇಷ್ಟ ಪಡುತ್ತೇನೆ, ರಾಜಕೀಯವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ, ನಾವು ಸ್ಟ್ರಾಂಗ್ ಆಗಬೇಕು ಎಂದರೆ ನಮ್ಮ ಆಲೋಚನೆಗಳು ಸತ್ಯಕ್ಕೆ ಹತ್ತಿರವಾಗಿರಬೇಕು ಎಂದಿರುವ ರಂಜನಿ ತಮಿಳಿನಿಂದ ಕನ್ನಡ ಹುಟ್ಟಿದೆ ಎನ್ನುವುದನ್ನು ನಾವ್ಯಾರು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.
Sarigamapa: ಸರಿಗಮಪ ಸೀಸನ್ 21ರ ಕಿರೀಟ ತೊಟ್ಟ ಶಿವಾನಿ ಸ್ವಾಮಿ: ರನ್ನರ್-ಅಪ್ ಯಾರು?