ಮನೆ ಕೆಲಸದವಳಿಗೆ ಲೈಂಗಿಕ ಕಿರುಕುಳ: 'ಧುರಂಧರ್' ನಟ ನದೀಮ್ ಖಾನ್ ಬಂಧನ
Nadeem Khan: ಮನೆಕೆಲಸದಾಕೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ನಟ ನದೀಮ್ ಖಾನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮದುವೆಯಾಗುವುದಾಗಿ ಸುಳ್ಳು ಹೇಳಿ ಸುಮಾರು 10 ವರ್ಷಗಳ ಕಾಲ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಅವರ ಮನೆಯ ಕೆಲಸದ ಮಹಿಳೆ ನೀಡಿದ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.
ನದೀಮ್ ಖಾನ್ (ಸಂಗ್ರಹ ಚಿತ್ರ) -
ಮುಂಬೈ, ಜ. 26: ಮನೆಕೆಲಸದಾಕೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ನಟ ನದೀಮ್ ಖಾನ್ (Nadeem Khan) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮದುವೆಯಾಗುವುದಾಗಿ ಸುಳ್ಳು ಹೇಳಿ ಸುಮಾರು 10 ವರ್ಷಗಳ ಕಾಲ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಅವರ ಮನೆಯ ಕೆಲಸದ ಮಹಿಳೆ ನೀಡಿದ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ವರದಿಗಳ ಪ್ರಕಾರ, ದೂರುದಾರ ಮಹಿಳೆಗೆ 41 ವರ್ಷ ವಯಸ್ಸು ಆಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ
ಬಾಲಿವುಡ್‌ನ ಇತ್ತೀಚಿನ ಹಿಟ್ ಚಿತ್ರ 'ಧುರಂಧರ್'ನಲ್ಲಿ ನದೀಮ್ ಖಾನ್ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ಡಕಾಯಿತ್ ರೆಹಮಾನ್‌ನ ಮನೆಯ ಅಡುಗೆ ಕೆಲಸ ಸಿಬ್ಬಂದಿ ಅಖ್ಲಾಕ್ ಆಗಿ ಅಭಿನಯಿಸಿದ್ದರು. ಸದ್ಯ ಅವರನ್ನು ಮುಂಬೈ ಪೊಲೀಸರು ಅತ್ಯಾಚಾರದ ಆರೋಪದ ಮೇಲೆ ಬಂಧಿಸಿದ್ದಾರೆ. ದೂರುದಾರ ಮಹಿಳೆ ಸುಮಾರು 10 ವರ್ಷಗಳಿಂದ ನಟ ತಮ್ಮ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.
ಬೆಲ್ ಬಾಟಮ್ ನಿರ್ಮಾಪಕರ ಹೊಸ ಸಿನಿಮಾ ಅನೌನ್ಸ್! ನಿರ್ದೇಶಕರು ಯಾರು?
ಸಂತ್ರಸ್ತ ಮಹಿಳೆ 2015ರಿಂದಲೂ ನದೀಮ್ ಖಾನ್‌ನ ಪರಿಚಯವಿತ್ತು ಎಂದು ಹೇಳಿಕೊಂಡಿದ್ದಾರೆ. ಆಗ ಅವರಿಗೆ 31 ವರ್ಷ ವಯಸ್ಸು ಆಗಿದ್ದು ಮನೆಕೆಲಸದವಳಾಗಿ ಸೇರಿಕೊಂಡಿದ್ದರು. ಆರಂಭದಲ್ಲಿ ಭಯ ಮತ್ತು ಮಾನಸಿಕ ಒತ್ತಡದಿಂದಾಗಿ ಪೊಲೀಸರನ್ನು ಸಂಪರ್ಕಿಸಲು ಹಿಂಜರಿದಿದ್ದಾರೆ. ಆದರೆ, ನಂತರ ನಟ ಮದುವೆಯನ್ನು ನಿರಾಕರಿಸಿ ಮಾನಸಿಕವಾಗಿ ಕಿರುಕುಳ ನೀಡಲು ಪ್ರಾರಂಭಿಸಿದ ಬಳಿಕ ಅಧಿಕೃತ ದೂರು ದಾಖಲಿಸಲು ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ.
ಮಾಲವಣಿ ಪೊಲೀಸ್ ಠಾಣೆಯಲ್ಲಿ ನಟನ ವಿರುದ್ಧ ಅತ್ಯಾಚಾರ ಮತ್ತು ನಂಬಿಕೆ ದ್ರೋಹದ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಸ್ತುತ ನದೀಮ್ ಖಾನ್ ಪೊಲೀಸ್ ಕಸ್ಟಡಿಯಲ್ಲಿದ್ದು, ತನಿಖೆ ನಡೆಯುತ್ತಿದೆ.
ನದೀಮ್ ಖಾನ್ ಹಿಂದಿಯ ʼಮಿಮಿʼ, ʼವಧ್ʼ, ʼಮೈನ್ ಲಡೇಗಾʼ ಚಲನಚಿತ್ರಗಳಲ್ಲಿ ಕೆಲವು ಸಣ್ಣ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಸಂಜಯ್ ಮಿಶ್ರಾ ಮತ್ತು ನೀನಾ ಗುಪ್ತಾ ನಟನೆಯ 'ವಧ್ 2' ಇದೇ ಫೆಬ್ರವರಿ 6ರಂದು ಬಿಡುಗಡೆಯಾಗಬೇಕಿದೆ. ಅಲ್ಲದೆ 'ಧುರಂಧರ್ 2'ನಲ್ಲೂ ಇವರು ನಟಿಸಲಿದ್ದಾರೆ ಎಂಬ ವದಂತಿ ಇದೆ. 2022ರಲ್ಲಿ, ನದೀಮ್ ಅಮಿತಾಬ್ ಬಚ್ಚನ್ ಜತೆಗೆ ಕೌನ್ ಬನೇಗಾ ಕರೋಡ್ ಪತಿ ಪ್ರೋಮೋದಲ್ಲಿಯೂ ಕಾಣಿಸಿಕೊಂಡಿದ್ದರು.