ಅಲ್ಲು ಅರ್ಜುನ್ (Allu Arjun) ಅವರ ಹುಟ್ಟುಹಬ್ಬದ (Birthday) ಹಿನ್ನೆಲೆಯಲ್ಲಿ ನಿರ್ಮಾಣ ಸಂಸ್ಥೆಯಾದ ಸನ್ ಪಿಕ್ಚರ್ಸ್ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಶೀರ್ಷಿಕೆಯ ಪೋಸ್ಟರ್ ಅನ್ನು ಹಂಚಿಕೊಂಡಿದೆ. ಈ ಪೋಸ್ಟ್‌ಗೆ ಅವರು, "#AA22xA6 ಈಗ ರಾಕಾ. ಮಿತಿಯಿಲ್ಲದ ದರ್ಶನಕ್ಕಾಗಿ ಸಿದ್ಧರಾಗಿ" ಎಂದು ಕ್ಯಾಪ್ಷನ್ ನೀಡಿದೆ ಸನ್ ಪಿಕ್ಚರ್ಸ್. ಈ ಪೋಸ್ಟರ್‌ನಲ್ಲಿ ಅಲ್ಲು ಅರ್ಜುನ್ ಅವರನ್ನು ಇದುವರೆಗೆ ನೋಡಿರದ ವಿಭಿನ್ನ ಮತ್ತು ಸ್ವಲ್ಪಮಟ್ಟಿಗೆ ಆತಂಕ ಹುಟ್ಟಿಸುವ ರೀತಿಯಲ್ಲಿ ಪರಿಚಯಿಸಲಾಗಿದೆ. ಜವಾನ್‌ನಲ್ಲಿ ಅಟ್ಲೀ ಅವರೊಂದಿಗೆ ಕೆಲಸ ಮಾಡಿದ್ದ ಶಾರುಖ್ (Shah Rukh Khan), ರಾಕಾಗೆ ವಿಶ್ ಮಾಡಿದ್ದಾರೆ.
ರಾಕಾ ಬಗ್ಗೆ ಶಾರುಖ್ ಹೇಳಿದ್ದೇನು?
"ಹುಟ್ಟುಹಬ್ಬದ ಶುಭಾಶಯಗಳು ಅಲ್ಲು ಅರ್ಜುನ್. ಪೋಸ್ಟರ್ ನಿಮ್ಮಂತೆಯೇ ಕುತೂಹಲಕಾರಿ ಮತ್ತು ಅದ್ಭುತವಾಗಿದೆ. ನೀವು ಏನು ಮಾಡಿದ್ದೀರಿ ಎಂದು ನೋಡಲು ಕಾಯಲು ಸಾಧ್ಯವಿಲ್ಲ. ಈ ಅನುಭವ... ಅಟ್ಲೀ ಅವರ ಮಾತಿನಲ್ಲಿ ಹೇಳುವುದಾದರೆ - ಮಾಸ್ ಮಾಸ್ ಮಾಸ್!! #ರಾಕಾ ತುಂಬಾ ರೋಮಾಂಚನಕಾರಿಯಾಗಿ ಕಾಣುತ್ತಿದೆ, ಆಲ್ ದಿ ಬೆಸ್ಟ್!!" ಎಂದು ಶಾರುಖ್ ಹೇಳಿದ್ದಾರೆ.
ಮುಖದ ಬಹುಭಾಗವು ನೆರಳು ಮತ್ತು ಕೂದಲಿನಿಂದ ಮುಚ್ಚಲ್ಪಟ್ಟಿದ್ದು, ಕೇವಲ ಒಂದು ಕಣ್ಣು ಮಾತ್ರ ಕಾಣಿಸುತ್ತದೆ. ಅಲ್ಲು ಅರ್ಜುನ್ ಈ ಹಿಂದೆಂದೂ ಕಾಣಿಸಿಕೊಳ್ಳದ ಅತ್ಯಂತ ಭಯಾನಕ ಮತ್ತು ವಿಭಿನ್ನವಾದ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ತೋಳದ ಕಾಲುಗಳಂತಹ ಕೈಗಳು ಮತ್ತು ಉದ್ದನೆಯ ಉಗುರುಗಳಿರುವ ಈ 'ಕ್ರಿಯೇಚರ್ ಸ್ಟೈಲ್' ಲುಕ್ ಸಿನಿಮಾ ಬಗ್ಗೆ ಕುತೂಹಲವನ್ನು ಹೆಚ್ಚಿಸಿದೆ. ಅಲ್ಲು ಅರ್ಜುನ್ ಅವರ ಲುಕ್ ಅನ್ನು ಗಮನಿಸಿದರೆ, ಇದು ವೃತ್ತಿಜೀವನದಲ್ಲೇ ಅತ್ಯಂತ ವಿಭಿನ್ನ ಪ್ರಯೋಗ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಇದೊಂದು ಸೈನ್ಸ್ ಫಿಕ್ಷನ್ ಅಥವಾ ಫ್ಯಾಂಟಸಿ ಥ್ರಿಲ್ಲರ್ ಇರಬಹುದು ಎಂಬದು ಸಿನಿಪ್ರಿಯರ ಊಹೆ ಆಗಿದೆ.
ರಾಕಾ ಸಿನಿಮಾವು ತಮಿಳು, ಕನ್ನಡ, ತೆಲುಗು ಸೇರಿ ಸುಮಾರು 10ಕ್ಕೂ ಹೆಚ್ಚು ಭಾಷೆಗಳಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ. ಸನ್ ಪಿಕ್ಚರ್ಸ್ ಈ ಸಿನಿಮಾದ ಮೇಲೆ ಬರೋಬ್ಬರಿ 800 ಕೋಟಿ ರೂ. ಹಣವನ್ನು ಹೂಡಿಕೆ ಮಾಡುತ್ತಿರುವುದು ವಿಶೇಷ.
ರಾಕಾ ಚಿತ್ರವನ್ನು ಅಟ್ಲೀ ನಿರ್ದೇಶಿಸಿದ್ದು, ಸನ್ ಪಿಕ್ಚರ್ಸ್ ನಿರ್ಮಿಸಿದೆ. ಇದರಲ್ಲಿ ದೀಪಿಕಾ ಪಡುಕೋಣೆ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ 2027 ರಲ್ಲಿ ತೆರೆಗೆ ಬರುವ ನಿರೀಕ್ಷೆಯಿದೆ.
ಶಾರುಖ್ ಮತ್ತು ಅಟ್ಲೀ ಅವರ ಸಹಯೋಗದ 'ಜವಾನ್' ಬಾಕ್ಸ್ ಆಫೀಸ್ ಬ್ಲಾಕ್ಬಸ್ಟರ್ ಆಗಿತ್ತು. ಇದು ಶಾರುಖ್ ಅವರಿಗೆ ಅತ್ಯುತ್ತಮ ನಟ ವಿಭಾಗದಲ್ಲಿ ಮೊದಲ ರಾಷ್ಟ್ರೀಯ ಪ್ರಶಸ್ತಿಯನ್ನು ತಂದುಕೊಟ್ಟಿತು .
ಇದನ್ನೂ ಓದಿ: Amruthadhaare Serial: ಆನಂದ್ ಕಣ್ಗಾವಲಲ್ಲಿ ಸುನಿ; ಜೈದೇವ್ ಕಥೆ ಏನು?
ಶಾರುಖ್ ಕಿಂಗ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಇದರಲ್ಲಿ ಸುಹಾನಾ ಖಾನ್, ಅಭಿಷೇಕ್ ಬಚ್ಚನ್ ಮತ್ತು ದೀಪಿಕಾ ಪಡುಕೋಣೆ ಕೂಡ ನಟಿಸಲಿದ್ದಾರೆ.