ಮುಂಬೈ, ನ. 2: ಬಾಲಿವುಡ್ ಬಾದ್ ಷಾ, ಸೂಪರ್ ಸ್ಟಾರ್ ಶಾರುಖ್ ಖಾನ್ (Shah Rukh Khan) ಭಾನುವಾರ (ನವೆಂಬರ್ 2) ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. 3 ದಶಕಗಳಿಂದಲೂ ಪ್ರೇಕ್ಷಕರನ್ನು ರಂಜಿಸುತ್ತಿರುವ ಅವರು ಇಂದು 60ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಚಿತ್ರರಂಗದ ಗಣ್ಯರು, ಅಭಿಮಾನಿಗಳು ನೆಚ್ಚಿನ ನಟನಿಗೆ ಶುಭಾಶಯ ತಿಳಿಸುತ್ತಿದ್ದಾರೆ. ಈ ಮಧ್ಯೆ ಶಾರುಖ್ ನಟಿಸುತ್ತಿರುವ ʼಕಿಂಗ್ʼ (King) ಚಿತ್ರದ ಟೀಸರ್ ಹೊರ ಬಂದಿದ್ದು, ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ (King Teaser Unveiled). ಸಿನಿಮಾದಲ್ಲಿ ಶಾರುಖ್ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದು, ತೆರೆಮೇಲೆ ನೆತ್ತರ ಹೊಳೆಯನ್ನೇ ಹರಿಸಿದ್ದಾರೆ.
ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಚಿತ್ರದಲ್ಲಿ ಸಿಕ್ಕಾಪಟ್ಟೆ ಆ್ಯಕ್ಷನ್ ಸೀಕ್ವೆನ್ಸ್‌ಗಳಿದ್ದು, ಇದರ ಸೂಚನೆ ಟೀಸರ್‌ನಲ್ಲೇ ಸಿಕ್ಕಿದೆ. ಭಾರಿ ರಗಡ್ ಅವತಾರದಲ್ಲಿ ಶಾರುಖ್ ಖಾನ್ ಈ ಚಿತ್ರದ ಮೂಲಕ ಪ್ರೇಕ್ಷಕರ ಎದುರು ಬರಲಿದ್ದಾರೆ. ಹೀಗಾಗಿ ಚಿತ್ರದ ಮೇಲಿನ ಕುತೂಹಲ ಇನ್ನಷ್ಟು ಹೆಚ್ಚಾಗಿದೆ. ಮುಂದಿನ ವರ್ಷ ಚಿತ್ರ ತೆರೆ ಕಾಣಲಿದೆ.
ಈ ಸುದ್ದಿಯನ್ನೂ ಓದಿ: Deepika Padukone: ಟಾಲಿವುಡ್‌ನಿಂದ ಹೊರ ಬಿದ್ದರೂ ದೀಪಿಕಾ ಕೈ ಹಿಡಿದ ಬಾಲಿವುಡ್; ಕಿಂಗ್ ಖಾನ್ ಜೊತೆ ಹೊಸ ಸಿನಿಮಾ?
ಹಿಟ್ ಜೋಡಿ
2023ರಲ್ಲಿ ತೆರೆಕಂಡ 'ಪಠಾಣ್' ಚಿತ್ರ ಬಳಿಕ ಸಿದ್ಧಾರ್ಥ್ ಆನಂದ್ ಮತ್ತು ಶಾರುಖ್ ಖಾನ್ ʼಕಿಂಗ್ʼ ಮೂಲಕ ಮತ್ತೆ ಒಂದಾಗುತ್ತಿದ್ದಾರೆ. 'ಪಠಾಣ್' ಬಾಕ್ಸ್ ಆಫೀಸ್‌ನಲ್ಲಿ ಭಾರಿ ಸದ್ದು ಮಾಡಿತ್ತು. ವಿಶೇಷ ಎಂದರೆ ಇವರೊಂದಿಗೆ ಇದೀಗ ದೀಪಿಕಾ ಪಡುಕೋಣೆ ಕೂಡ ಕೈ ಜೋಡಿಸಿದ್ದಾರೆ. ʼಪಠಾಣ್ʼನಲ್ಲಿ ಶಾರುಖ್-ದೀಪಿಕಾ ಜೋಡಿ ಮೋಡಿ ಮಾಡಿತ್ತು. ಇದೀಗ ಇವರು ಬರೋಬ್ಬರಿ 6ನೇ ಬಾರಿ ತೆರೆಮೇಲೆ ಒಂದಾಗುತ್ತಿದ್ದಾರೆ. ನಾಯಕಿ ದೀಪಿಕಾ ಪಾತ್ರಕ್ಕೆ ಚಿತ್ರದಲ್ಲಿ ಸಾಕಷ್ಟು ಪ್ರಾಮುಖ್ಯತೆ ಇದೆ ಎನ್ನಲಾಗಿದೆ.
ʼಕಿಂಗ್ʼ ಚಿತ್ರದ ಟೀಸರ್ ಇಲ್ಲಿದೆ:
ಅಪ್ಪ-ಮಗಳು ಒಂದೇ ಚಿತ್ರದಲ್ಲಿ
ಮತ್ತೊಂದು ವಿಶೇಷ ಎಂದರೆ ʼಕಿಂಗ್ʼ ಚಿತ್ರದಲ್ಲಿ ಶಾರುಖ್ ಪುತ್ರಿ ಸುಹಾನಾ ಖಾನ್ ಕೂಡ ನಟಿಸುತ್ತಿದ್ದಾರೆ. ಪ್ರಮುಖ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದು, ಅವರ ಪಾತ್ರ ಯಾವ ರೀತಿ ಇರಲಿದೆ ಎನ್ನುವ ಗುಟ್ಟನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ವರದಿಗಳ ಪ್ರಕಾರ ಶಾರುಖ್ ಭೂಗತ ಲೋಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಅನುಭವಿ ಹಂತಕನಾಗಿ ಅಭಿನಯಿಸಲಿದ್ದಾರೆ. ಸುಹಾನಾ ಅವರ ಶಿಷ್ಯೆಯಾಗಿ ನಟಿಸಲಿದ್ದು, ಅಪಾಯಕಾರಿ ಕಾರ್ಯಾಚರಣೆಯಲ್ಲಿ ಅವರೂ ಭಾಗಿಯಾಗಲಿದ್ದಾರೆ ಎನ್ನಲಾಗಿದೆ. ಅನಿಲ್ ಕಪೂರ್, ಅನಿಲ್ ಕಪೂರ್, ಅರ್ಷದ್ ವಾರ್ಸಿ, ಅಭಯ್ ವರ್ಮಾ ಮತ್ತು ರಾಘವ್ ಜುಯಾಲ್ ಈ ಚಿತ್ರದ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಲಿದ್ದಾರೆ. ಟೀಸರ್ ನೋಡಿ ಈಗಾಗಲೇ ಫ್ಯಾನ್ಸ್ ಥ್ರಿಲ್ ಆಗಿದ್ದು, ಬಾಕ್ಸ್ ಆಫೀಸ್‌ನಲ್ಲಿ 1 ಸಾವಿರ ಕೋಟಿ ರೂ. ಕಲೆಕ್ಷನ್ ಪಕ್ಕಾ ಎಂದು ಕಮೆಂಟ್ ಮಾಡಿದ್ದಾರೆ.
ಗೆಲುವಿನ ಅಭಿಯಾನ ಮುಂದುವರಿಸ್ತಾರ ಶಾರುಖ್ ಖಾನ್?
2023ರಲ್ಲಿ ತೆರೆ ಕಂಡ ʼಡಂಕಿʼ ಚಿತ್ರದ ಬಳಿಕ ಶಾರುಖ್ ಖಾನ್ ನಟನೆಯ ಯಾವ ಸಿನಿಮಾವೂ ರಿಲೀಸ್ ಆಗಿಲ್ಲ. ವಿಶೇಷ ಅಂದರೆ ಆ ವರ್ಷ ಶಾರುಖ್ ಹ್ಯಾಟ್ರಿಕ್ ಗೆಲುವು ದಾಖಲಿಸಿದ್ದರು. ʼಪಠಾಣ್ʼ, ʼಜವಾನ್ʼ ಮತ್ತು ʼಡಂಕಿʼ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಮಾಲ್ ಮಾಡಿದ್ದವು. ಹೀಗಾಗಿ ʼಕಿಂಗ್ʼ ಮೂಲಕ ಅವರು ಗೆಲುವಿನ ಓಟ ಮುಂದುವರಿಸುವ ನಿರೀಕ್ಷೆ ಇದೆ.