ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rishab Shetty: ಸೌತ್‌ ಸ್ಟಾರ್‌ ನಿರ್ದೇಶಕರ ಸಾಲು ಸಾಲು ಸೋಲು; ರಿಷಬ್‌ ಶೆಟ್ಟಿ ಮೇಲೆ ನಿರೀಕ್ಷೆಗಳ ಭಾರ

Kantara: Chapter 1: ದಕ್ಷಿಣ ಭಾರತದ ಟಾಪ್‌ ನಿರ್ದೇಶಕರು ಎನಿಸಿಕೊಂಡಿರುವ ಎಸ್‌.ಶಂಕರ್‌, ಎ.ಆರ್‌.ಮುರುಗದಾಸ್‌, ಮಣಿರತ್ನಂ ಸದ್ಯ ಸೋಲಿನ ರುಚ ಕಂಡಿದ್ದಾರೆ. ಈ 6 ತಿಂಗಳಲ್ಲಿ ಇವರ ಬಹು ನಿರೀಕ್ಷಿತ ಚಿತ್ರಗಳು ಸೀತು ಹೋಗಿವೆ. ಈ ಹಿನ್ನೆಲೆಯಲ್ಲಿ ಸ್ಯಾಂಡಲ್‌ವುಡ್‌ ನಿರ್ದೇಶಕ ರಿಷಬ್‌ ಶೆಟ್ಟಿ ಮೇಲೆ ಎಲ್ಲ ನಿರೀಕ್ಷೆ ಇದೆ. ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಸಿಸುತ್ತಿರುವ ʼಕಾಂತಾರ: ಚಾಪ್ಟರ್‌ 1ʼ ಅ. 2ರಂದು ತೆರೆಗೆ ಬರಲಿದೆ.

ಸೌತ್‌ ಸ್ಟಾರ್‌ ನಿರ್ದೇಶಕರ ಸೋಲು; ರಿಷಬ್‌ ಶೆಟ್ಟಿ ಮೇಲೆ ಎಲ್ಲರ ನಿರೀಕ್ಷೆ

-

Ramesh B Ramesh B Jun 14, 2025 11:24 PM

ಬೆಂಗಳೂರು: 2025ರ 6 ತಿಂಗಳು ಉರುಳಿ ಹೋಗಿದ್ದು, ಅರ್ಧ ವರ್ಷ ಸ್ಯಾಂಡಲ್‌ವುಡ್‌ ಪಾಲಿಗೆ ಅತ್ಯಂತ ನೀರಸವಾಗಿತ್ತು. ಈ ಕಾಲಾವಧಿಯಲ್ಲಿ ಸಾಕಷ್ಟು ಚಿತ್ರಗಳು ತೆರೆಕಂಡರೂ ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕೇ ಇಲ್ಲ. ಇತ್ತ ದಕ್ಷಿಣ ಭಾರತೀಯ ಚಿತ್ರರಂಗದ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಅಲ್ಲೊಂದು ಇಲ್ಲೊಂದು ಮಲಯಾಳಂ ಮತ್ತು ತಮಿಳು ಚಿತ್ರಗಳು ಕೊಂಚ ಸದ್ದು ಮಾಡಿದ್ದು ಬಿಟ್ಟರೆ ನಿರೀಕ್ಷಿತ ಸಿನಿಮಾಗಳೆಲ್ಲ ನೆಲ ಕಚ್ಚಿವೆ. ಅದರಲ್ಲಿಯೂ ಭಾರಿ ನಿರೀಕ್ಷೆ ಹುಟ್ಟು ಹಾಕಿದ್ದ, ಸೌತ್‌ ಸಿನಿಮಾ ಇಂಡಸ್ಟ್ರಿಯ ಟಾಪ್‌ ನಿರ್ದೇಶಕರ, ಸೂಪರ್‌ ಸ್ಟಾರ್‌ಗಳ ಸಿನಿಮಾಗಳು ಒಂದರ ಹಿಂದೆ ಒಂದರಂತೆ ನೆಲ ಕಚ್ಚಿವೆ. ಕಮರ್ಷಿಯಲ್‌ ಚಿತ್ರಗಳ ಮೂಲಕವೇ ಗಮನ ಸೆಳೆದ ಎಸ್‌.ಶಂಕರ್‌, ಎ.ಆರ್‌.ಮುರುಗದಾಸ್‌, ಮಣಿರತ್ನಂ ಅವರಂತಹ ದಿಗ್ಗಜ ನಿರ್ದೇಶಕರ ಚಿತ್ರಗಳು ಸೋತು ಸುಣ್ಣವಾಗಿವೆ. ಹೀಗಾಗಿ ಅ. 2ರಂದು ತೆರೆ ಕಾಣಲಿರುವ ಸ್ಯಾಂಡಲ್‌ವುಡ್‌ ನಿರ್ದೇಶಕ ರಿಷಬ್‌ ಶೆಟ್ಟಿ (Rishab Shetty) ಅವರ ʼಕಾಂತಾರ: ಚಾಪ್ಟರ್‌ 1ʼ (Kantara: Chapter 1) ಚಿತ್ರದ ಮೇಲೆ ಈಗ ಎಲ್ಲರ ಕಣ್ಣು ನೆಟ್ಟಿದೆ.

ಹಲವು ಸೂಪರ್‌ ಹಿಟ್‌ ಚಿತ್ರಗಳನ್ನು ನೀಡಿದ್ದ, ಕಾಲಿವುಡ್‌ನ ಜನಪ್ರಿಯ ನಿರ್ದೇಶಕ ಎಸ್‌.ಶಂಕರ್‌ ಅವರ 'ಗೇಮ್‌ ಚೇಂಜರ್‌' ಸಿನಿಮಾ ಮೂಲದ ಸೋಲಿನ ಪರಂಪರೆ ಆರಂಭವಾಯಿತು. ಈ ವರ್ಷಾರಂಭದಲ್ಲಿ ತೆರೆಕಂಡಿದ್ದ ಈ ಟಾಲಿವುಡ್‌ನ ಪ್ಯಾನ್‌ ಇಂಡಿಯಾ ಚಿತ್ರ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಯಿತು. ಟಾಲಿವುಡ್‌ ಸೂಪರ್‌ ಸ್ಟಾರ್‌ ರಾಮ್‌ ಚರಣ್‌ ಮತ್ತು ಶಂಕರ್‌ ಮೊದಲ ಬಾರಿಗೆ ಜತೆಯಾಗಿದ್ದ ಈ ಸಿನಿಮಾದ ಮೇಲೆ ಇನ್ನಿಲ್ಲದಷ್ಟು ನಿರೀಕ್ಷೆ ಇತ್ತು. ಆದರೆ ಇದು ಫ್ಲಾಪ್‌ ಎನಿಸಿಕೊಂಡಿತು. ಕಳೆದ ವರ್ಷ ಶಂಕರ್‌ ʼಇಂಡಿಯನ್‌ 2ʼ ಮೂಲಕ ಸೋಲಿನ ರುಚಿ ಕಂಡಿದ್ದರು. ಅದು ಮತ್ತೆ ಮುಂದುವರಿಯಿತು.

ಈ ಸುದ್ದಿಯನ್ನೂ ಓದಿ: Kantara Chapter 1: 'ಕಾಂತಾರ: ಚಾಪ್ಟರ್‌ 1' ಚಿತ್ರತಂಡದಿಂದ ಹೊರಬಿತ್ತು ಬಿಗ್‌ ಅಪ್‌ಡೇಟ್‌; ಯುದ್ಧದ ದೃಶ್ಯಕ್ಕಾಗಿ 500 ಫೈಟರ್‌ಗಳ ನೇಮಕ

ಇನ್ನು ʼಗಜನಿʼಯಂತಹ ಸೂಪರ್‌ ಹಿಟ್‌ ಚಿತ್ರಗಳನ್ನು ನೀಡಿದ್ದ, ಒಂದು ಕಾಲದಲ್ಲಿ ದಕ್ಷಿಣ ಭಾರತ ಜತೆಗೆ ಹಿಂದಿ ಚಿತ್ರರಂಗವನ್ನು ಆಳಿದ್ದ ನಿರ್ದೇಶಕ ಎ.ಆರ್‌.ಮುರುಗದಾಸ್‌ ಅವರ ಕಥೆಯೂ ಇದಕ್ಕಿಂತ ಭಿನ್ನವಾಗಿಲ್ಲ. ತಮ್ಮದೇ ʼಗಜನಿʼ ಚಿತ್ರವನ್ನು ಅದೇ ಹೆಸರಿನಲ್ಲಿ ರಿಮೇಕ್‌ ಮಾಡುವ ಮೂಲಕ 2008ರಲ್ಲಿ ಭರ್ಜರಿಯಾಗಿ ಬಾಲಿವುಡ್‌ಗೆ ಕಾಲಿಟ್ಟ ಕಾಲಿವುಡ್‌ ಎ.ಆರ್‌.ಮುರುಗದಾಸ್‌ ಈ ವರ್ಷ ಮಾತ್ರ ಭರ್ಜರಿ ಹೊಡೆತ ತಿಂದರು. ಅವರು ಮೊದಲ ಬಾರಿಗೆ ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌ಗೆ ಆ್ಯಕ್ಷನ್‌ ಕಟ್‌ ಹೇಳಿದ 'ಸಿಕಂದರ್‌' ಚಿತ್ರ ಮಾರ್ಚ್‌ನಲ್ಲಿ ತೆರೆಗೆ ಬಂತು. ಇದರಲ್ಲಿ ಲಕ್ಕಿ ಚಾರ್ಮ್‌, ಕನ್ನಡತಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಹೀಗೆ ಸೂಪರ್‌ ಸ್ಟಾರ್‌ಗಳ ಕಾಂಬಿನೇಷನ್‌ ಹೊಂದಿರುವ ಇದು ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಲಿದೆ ಎಂದೇ ಲೆಕ್ಕಾಚಾರ ಹಾಕಲಾಗಿತ್ತು. ಆದರೆ ಇದು ಕೂಡ ಸೋತು ಸುಣ್ಣವಾಯ್ತು. ಅಲ್ಲಿಗೆ ಸೋಲಿನ ಸರಪಳಿ ಕಳಚಿ ಬರುವ ಸಲ್ಮಾನ್‌ ಖಾನ್‌ ಕನಸೂ ಕುಸಿದು ಬಿತ್ತು.

ಇನ್ನು ಇತ್ತೀಚಿನ ಉದಾಹರಣೆ ಎಂದರೆ ಮಣಿರತ್ನಂ-ಕಮಲ್‌ ಹಾಸನ್‌ ಜೋಡಿಯದ್ದು. ತಮಿಳುನಾಡು ಮಾತ್ರವಲ್ಲ ದೇಶಾದ್ಯಂತ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿರುವ ಇವರು ಸುಮಾರು ಮೂರೂವರೆ ದಶಕಗಳ ಬಳಿಕ ʼಥಗ್‌ ಲೈಫ್‌ʼ ಚಿತ್ರಕ್ಕಾಗಿ ಒಂದಾಗಿದ್ದು ನಿರೀಕ್ಷೆ ಗರಿಗೆದರುವಂತೆ ಮಾಡಿತ್ತು. ಅಲ್ಲದೆ ಎ.ಆರ್‌.ರೆಹಮಾನ್‌, ಸಿಂಬು, ತ್ರಿಶಾ ಮುಂತಾದ ಘಟಾನುಘಟಿಗಳು ʼಥಗ್‌ ಲೈಫ್‌ʼನ ಭಾಗವಾಗಿ ಕುತೂಹಲ ಮೂಡಿಸಿದ್ದರು. ಆದರೆ ಈ ಮಾಸಾರಂಭದಲ್ಲಿ ರಿಲೀಸ್‌ ಆದ ಈ ಚಿತ್ರ ಕುಂಟುತ್ತಾ ಸಾಗಿದೆ. ಈಗಾಗಲೇ ಗಲ್ಲಾ ಪೆಟ್ಟಿಗೆಯಲ್ಲಿ ನೆಲ ಕಚ್ಚಿದ್ದು, ಹಾಕಿದ ದುಡ್ಡು ವಾಪಾಸ್‌ ಬರೋದು ಸಂಶಯ ಎಂಬಂತಾಗಿದೆ. ʼʼಕನ್ನಡ ತಮಿಳಿನಿಂದಲೇ ಹುಟ್ಟಿದ್ದುʼʼ ಎನ್ನುವ ಕಮಲ್‌ ಹಾಸನ್‌ ಅವರ ವಿವಾದಾತ್ಮಕ ಹೇಳಿಕೆಯೂ ಚಿತ್ರದ ಕಲೆಕ್ಷನ್‌ ಮೇಲೆ ಪರಿಣಾಮ ಬೀರಿದೆ. ಕರ್ನಾಟಕದಲ್ಲಿ ಈ ಚಿತ್ರ ತೆರೆಕಂಡಿಲ್ಲ.

ನಿರೀಕ್ಷೆ ಹುಟ್ಟು ಹಾಕಿದ ರಿಷಬ್‌

ಸದ್ಯ ಎಲ್ಲರ ಕಣ್ಣು ಸ್ಯಾಂಡಲ್‌ವುಡ್‌ ನಿರ್ದೇಶಕ, ನಟ ರಿಷಬ್‌ ಶೆಟ್ಟಿ ಮೇಲಿದೆ. 2022ರಲ್ಲಿ ತೆರೆಕಂಡು ಇಡೀ ಜಾಗತಿಕ ಸಿನಿರಂಗವೇ ಬೆರಗುಗಣ್ಣಿನಿಂದ ನೋಡಿದ ʼಕಾಂತಾರʼ ಚಿತ್ರದ ಮೂಲಕ ಗಮನ ಸೆಳೆದ ಅವರು ಸದ್ಯ ಇದರ ಪ್ರೀಕ್ವೆಲ್‌ ಸಿದ್ಧಗೊಳಿಸುತ್ತಿದ್ದಾರೆ. ʼಕಾಂತಾರ: ಚಾಪ್ಟರ್‌ 1ʼ ಸಿನಿಮಾ ಮೂಲಕ ಅವರು ಮತ್ತೊಮ್ಮೆ ಮ್ಯಾಜಿಕ್‌ ಮಾಡುತ್ತಾರೆ ಎನ್ನುವ ನಿರೀಕ್ಷೆಯಲ್ಲಿದೆ ಭಾರತೀಯ ಚಿತ್ರೋದ್ಯಮ. ʼಕಾಂತಾರʼದಂತೆಯೇ ಇದರಲ್ಲಿಯೂ ನಾಯಕನಾಗಿ ನಟಿಸುವ ಜತೆಗೆ ನಿರ್ದೇಶನದ ಜವಾಬ್ದಾರಿಯನ್ನೂ ಅವರು ಹೊತ್ತುಕೊಂಡಿದ್ದಾರೆ. ಈ ವರ್ಷದ ಅ. 2ರಂದು ʼಕಾಂತಾರ: ಚಾಪ್ಟರ್‌ 1ʼ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ. ಇದುವರೆಗಿನ ಸೋಲನ್ನು ಅವರು ಮರೆಸಲಿದ್ದಾರೆ ಎನ್ನುವ ಭರವಸೆ ಹಲವರದ್ದು.