Shankar Nag Birthday: ಇಂದು ಶಂಕರ್ ನಾಗ್ ಜನ್ಮದಿನ; ಆಟೋ ರಾಜನ ಸಿನಿ ಜರ್ನಿ ಹೇಗಿತ್ತು ಗೊತ್ತಾ?
Today Shankar Nag Birthday: ಆಟೋರಾಜ ಈ ಹೆಸರು ಕೇಳಿದಾಗ ಕರಾಟೆ ಕಿಂಗ್, ನಟ ಶಂಕರ್ ನಾಗ್ ಅವರ ಹೆಸರು ಮೊದಲು ನೆನಪಾಗಲಿದೆ. ಕನ್ನಡ ಸಿನಿಮಾ ರಂಗದಲ್ಲಿ ನಾಯಕನಟನಾಗಿ, ಸಹ ನಟರಾಗಿ, ನಿರ್ದೇಶಕನಾಗಿ, ನಿರ್ಮಾಪಕರಾಗಿದ್ದ ಇವರು ಅಪಾರ ಅಭಿಮಾನಿ ಬಳಗದ ಮನಗೆದ್ದಿದ್ದಾರೆ. ನಟ ಶಂಕರ್ ನಾಗ್ ಅವರು ಇಂದು ಬದುಕಿದ್ದರೆ ತಮ್ಮ 71ನೇ ಜನ್ಮ ದಿನಾಚರಣೆಯನ್ನು ಅಭಿಮಾನಿ ಗಳೊಂದಿಗೆ ಆಚರಿಸಬೇಕಿತ್ತು, ಆದರೆ ವಿಧಿಯಾಟಕ್ಕೆ ಬಲಿಯಾಗಿದ್ದ ಅವರು ನಮ್ಮೊಂದಿಗೆ ಇಲ್ಲ ವಾಗಿದ್ದರೂ ನಟಿಸಿದ್ದ ಸಿನಿಮಾ ಮೂಲಕ ಚಿರಕಾಲ ಅಭಿಮಾನಿಗಳ ಮನದಲ್ಲಿ ನೆಲೆಸಿದ್ದಾರೆ.
ಇಂದು ಕರಾಟೆ ಕಿಂಗ್ ಶಂಕರ್ ನಾಗ್ ಜನ್ಮದಿನ -
ನಟ ಶಂಕರ್ ನಾಗ್ ಹಲವರಿಗೆ ಸ್ಪೂರ್ತಿ ಅದರಲ್ಲೂ ಆಟೋ ಚಾಲಕರಿಗಂತೂ ಇವರೆಂದರೆ ಬಹಳಷ್ಟು ಹೆಮ್ಮೆ. 80ರ ದಶಕದಲ್ಲಿ ಅನೇಕ ಹಿಟ್ ಸಿನಿಮಾದಲ್ಲಿ ಮುಖ್ಯಪಾತ್ರ ದಲ್ಲಿ ಇವರು ಅಭಿನಯಿಸಿದ್ದಾರೆ. ಡಾ. ರಾಜ್ ಕುಮಾರ್ (Rajkumar), ಅನಂತ್ ನಾಗ್ (Anant Nag) ಸೇರಿದಂತೆ ಅನೇಕರ ಸಿನಿಮಾಕ್ಕೆ ನಿರ್ದೇಶನ ಮಾಡಿದ್ದ ಇವರು ಕನ್ನಡ ಸಿನಿಮಾರಂಗಕ್ಕೆ ನೀಡಿದ್ದ ಕೊಡುಗೆಯು ಚಿರಕಾಲ ಸ್ಮರಿಸುವಂತದ್ದಾಗಿದೆ.
ನವೆಂಬರ್ 9, 1954 ರಂದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಲ್ಲಾಪುರದಲ್ಲಿ ಸಾರಸ್ವತ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಇವರ ಮಾತೃಭಾಷೆ ಕೊಂಕಣಿ ಯಾಗಿದ್ದರೂ ಮನೆಯಲ್ಲಿ ಎಲ್ಲರೂ ಕನ್ನಡ, ಮರಾಠಿ ಭಾಷೆಯನೇ ಮಾತನಾಡುತ್ತಿದ್ದರು. ಇವರ ಅಣ್ಣ ಅನಂತ ನಾಗ್ ಕಲಿಯುತ್ತಿದ್ದ ಮುಂಬೈನ ಶಾಲೆಗೆ ಇವರು ಕೂಡ ಸೇರಿ ಬಳಿಕ ಅಲ್ಲಿಯೇ ನಾಟಕರಂಗದಲ್ಲಿ ಕೂಡ ಸಕ್ರಿಯರಾದರು. ಮರಾಠಿ ನಾಟಕರಂಗದತ್ತ ಒಲವು ಹೊಂದಿದ್ದ ಇವರು ಬಳಿಕ ಸಿನಿಮಾ ರಂಗದಲ್ಲಿ ಅಭಿನಯಿಸುವ ಅವಕಾಶ ಪಡೆದರು.
ಸರ್ವಕಾಶಿ ಎಂಬ ಮರಾಠಿ ಸಿನಿಮಾದಲ್ಲಿ ನಟನಾಗಿ ಅಭಿನಯಿಸಿ ಚಲನಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಗಿರೀಶ್ ಕಾರ್ನಾಡ್ ಅವರ 'ಒಂದಾನೊಂದು ಕಾಲದಲ್ಲಿ' (Ondanondu Kaladalli) ಎಂಬ ಚಿತ್ರದಲ್ಲಿ ನಟಿಸಿ ಕನ್ನಡ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು. ಇದೇ ಚಿತ್ರದಲ್ಲಿ ಅವರ ಅದ್ಭುತ ನಟನೆಗಾಗಿ `ರಾಷ್ಟ್ರ ಪ್ರಶಸ್ತಿ'ಯನ್ನು ಕೂಡ ಪಡೆದರು. ಕನ್ನಡದ ಜೊತೆಗೆ ಹಿಂದಿ ಮತ್ತು ಮರಾಠಿ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ವೃತ್ತಿ ಜೀವನದಲ್ಲಿ 90 ಚಿತ್ರಗಳಲ್ಲಿ ನಟಿಸಿದ್ದು ಕೆಲವು ಚಿತ್ರಗಳನ್ನು ಸ್ವತಃ ನಿರ್ಮಿಸಿದ್ದಾರೆ.
ಅಣ್ಣ ಅನಂತ್ ನಾಗ್ ಅವರ ಮಿಂಚಿನ ಓಟ ಚಿತ್ರಕ್ಕೆ ಇವರೇ ನಿರ್ದೇಶನ ಮಾಡಿದ್ದು ಈ ಚಿತ್ರ ಹಲವಾರು ಪ್ರಶಸ್ತಿ ಕೂಡ ಸಿಕ್ಕಿದೆ. ಕನ್ನಡದಲ್ಲಿ `ಜನುಮ ಜನುಮದ ಅನುಬಂಧ',`ಗೀತಾ' ಚಿತ್ರ ಗಳನ್ನು ಮತ್ತು ಹಿಂದಿಯಲ್ಲಿ ವಿನೋದ್ ಮೆಹ್ರಾ ಅಭಿನಯದ `ಲಾಲಚ್' ಚಿತ್ರವನ್ನು ಇವರೆ ನಿರ್ದೇಶಿಸಿದರು. `ಆಕ್ಸಿಡೆಂಟ್' ಚಿತಗರಕ್ಕೆ 1984 ರಲ್ಲಿ ರಾಷ್ಟ್ರಪ್ರಶಸ್ತಿ ಲಭಿಸಿದೆ. ಸ್ವಾಮಿ ಚಿತ್ರಕ್ಕಾಗಿ ಅತ್ಯುತ್ತಮ ಮಕ್ಕಳ ಚಿತ್ರದ ವಿಭಾಗದಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ದೊರಕಿದೆ. ಡಾ.ರಾಜ್ ಕುಮಾರ್ ಅವರ ಒಂದು ಮುತ್ತಿನ ಕಥೆ ಸಿನಿಮಾಕ್ಕೆ ಇವರೇ ನಿರ್ದೇಶನ ಮಾಡಿದ್ದು ಸಾಗರಾಳದಲ್ಲಿ ಈ ಸಿನಿಮಾದ ಸಾಹಸ ದೃಶ್ಯ ಚಿತ್ರೀಕರಿಸಲಾಗಿದ್ದು ಈಗಲೂ ಆ ದೃಶ್ಯ ಅಭಿಮಾನಿಗಳ ಮನದಲ್ಲಿ ಉಳಿದುಕೊಂಡಿದೆ.
ಸಿನಿಮಾದ ಜೊತೆಗೆ ಟಿವಿ ವಾಹಿನಿಯಲ್ಲಿಯೂ ಕೂಡ ಇವರು ಸಕ್ರಿಯವಾಗಿದ್ದರು. ಆರ್.ಕೆ. ನಾರಾಯಣ್'ರ ಮಾಲ್ಗುಡಿ ಡೇಸ್ ಪುಸ್ತಕವನ್ನು ಕಿರುತೆರೆ ಧಾರಾವಾಹಿ ಮಾಡಲು ಯೋಜನೆ ರೂಪಿಸಿ ನಿರ್ದೇಶನದಲ್ಲಿ ಮಾಡಿದರು. ಇದು ದೂರದರ್ಶನ ಕಿರುತೆರೆಯಲ್ಲಿ ಯಶಸ್ವಿ ಧಾರವಾಹಿ ಯಾಯಿತು. ಈ ಮೂಲಕ ಶಂಕರ್ ಅವರ ನಿರ್ದೇಶನದಲ್ಲಿ ಮೂಡಿ ಬಂದ ಮೊದಲ ಹಾಗೂ ಕೊನೆಯ ಸೀರಿಸ್ ಇದಾಗಿದೆ.
ಶಂಕರ್ ನಾಗ್ ಅವರು ನಟಿ ಅರುಂಧತಿ ನಾಗ್ ಅವರನ್ನು ಆರು ವರ್ಷ ಪ್ರೀತಿಸಿ ಬಳಿಕ 1980 ರಲ್ಲಿ ಸರಳವಾಗಿ ವಿವಾಹವಾದರು. ಈ ದಂಪತಿಗೆ ಕಾವ್ಯ ಎಂಬ ಮಗಳು ಇದ್ದಾರೆ. ಅಂಜು ಮಲ್ಲಿಗೆ',` ಬ್ಯಾರಿಸ್ಟರ್',`ಸಂಧ್ಯಾ ಚಾಯ' ಮುಂತಾದ ನಾಟಕಗಳನ್ನು ನಿರ್ಮಿಸಿದ್ದ ಇವರು ನಾಟಕಗಳಿ ಗಾಗಿಯೇ ಒಂದು ದೊಡ್ಡ ರಂಗಮಂದಿರ ಕಟ್ಟಿಸಬೇಕೆಂಬ ಆಸೆ ಹೊಂದಿದ್ದರು. ಆದರೆ ಆ ಆಸೆ ಇಡೇರುವ ಮುನ್ನವೆ ರಸ್ತೆ ಅಪಘಾತದಲ್ಲಿ ಇವರು ಸಾವನಪ್ಪಿದ್ದಾರೆ. ಇವರ ಮರಣದ ಬಳಿಕ ಅವರ ಈ ಆಸೆಯನ್ನುವ ಪತ್ನಿ ಅರುಂಧತಿನಾಗ್ ಇಡೇರಿಸಿದ್ದಾರೆ. ಈ ರಂಗಮಂದಿರಕ್ಕೆ `ರಂಗಶಂಕರ' ಎಂಬ ಹೆಸರನ್ನಿಟ್ಟಿದ್ದು ಶಂಕರ್ ನಾಗ್ ಸ್ಮರಣಾರ್ಥ ಅನೇಕ ಕಾರ್ಯಕ್ರಮ ಕೂಡ ಇಲ್ಲಿ ನಡೆಯುತ್ತಿರುತ್ತದೆ.
ನಮ್ಮ ರಾಜ್ಯದಲ್ಲಿ ನಟ ಶಂಕರ್ ನಾಗ್ ಅವರಿಗೆ ದೊಡ್ಡ ಮಟ್ಟಿಗೆ ಆಟೋ ಚಾಲಕರ ಅಭಿಮಾನಿ ಬಳಗವಿದ್ದು ಅವರ ಜನ್ಮ ದಿನವನ್ನು ಚಾಲಕರ ದಿನಾಚರಣೆಯಾಗಿ ಮಾಡಲು ಒತ್ತಾಸೆ ಕೇಳಿ ಬರುತ್ತಲೇ ಇದೆ. ಈಗಾಗಲೇ ನಟಿ ರಚಿತಾ ರಾಮ್ ಅವರನ್ನು ‘ಆಟೊ ರಾಯಭಾರಿ’ಯಾಗಿ ಆಯ್ಕೆ ಮಾಡಲಾಗಿದೆ. ಸರಕಾರ ಇವರ ಬೇಡಿಕೆಗೆ ಸ್ಪಂದಿಸಿದರೆ ಇನ್ನು ಮುಂದಿನ ದಿನದಲ್ಲಿ ಇವರ ಜನ್ಮ ದಿನ ಚಾಲಕರ ದಿನವಾಗಿ ಆಚರಣೆಗೆ ಬರುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಶಂಕರ್ ನಾಗ್ ಅವರ ಆಲೋಚನಾ ಶೈಲಿ, ಸಮಾಜ ಸುಧಾರಣೆ , ಸಿನಿಮಾ ಮೂಲಕ ಸಾಮಾಜಿಕ ಕಳಕಳಿ , ವೃತ್ತಿ ಜೀವನಗಳು ಅನೇಕರಿಗೆ ಸ್ಫೂರ್ತಿ ಎನ್ನಬಹುದು.