ಮುಂಬೈ: ಬಾಲಿವುಡ್ ನಟಿ (Bollywood Actress) ಶಿಲ್ಪಾ ಶೆಟ್ಟಿ (Shilpa Shetty) ಮತ್ತು ಅವರ ಪತಿ ಉದ್ಯಮಿ ರಾಜ್ ಕುಂದ್ರಾ (Raj Kundra) ಅವರಿಗೆ ಸಂಕಷ್ಟದ ದಿನಗಳು ಎದುರಾಗಿವೆ. ಇತ್ತೀಚೆಗೆ 60.4 ಕೋಟಿ ರೂ. ವಂಚನೆ ಆರೋಪದಡಿ ಆರ್ಥಿಕ ಅಪರಾಧಗಳ ವಿಭಾಗ (EOW) ದೂರು ದಾಖಲಿಸಿದ ಬೆನ್ನಲ್ಲೇ, ಶಿಲ್ಪಾ ಶೆಟ್ಟಿ ತನ್ನ ಐಕಾನಿಕ್ ಮುಂಬೈ ಬಾಂದ್ರಾದ ಬಾಸ್ಟಿಯನ್ ರೆಸ್ಟೋರೆಂಟ್ ಮುಚ್ಚುವುದಾಗಿ ಘೋಷಿಸಿದ್ದಾರೆ. ಮಂಗಳವಾರ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಶಿಲ್ಪಾ ಶೆಟ್ಟಿ, ಗುರುವಾರದಿಂದ ಮುಂಬೈನ ಐಕಾನಿಕ್ ಸ್ಥಳವಾದ ಬಾಸ್ಟಿಯನ್ ಬಾಂದ್ರಾ ತನ್ನ ಕೊನೆಯ ವಿದಾಯ ಹೇಳಲಿದೆ ಎಂದು ಬರೆದಿದ್ದಾರೆ.
ಇಷ್ಟು ದಿನ ವಿಶೇಷ ತಿನ್ನಿಸುಗಳ ಆಹಾರ ಪ್ರಿಯರಿಗೆ ಟೇಸ್ಟಿ ಫುಟ್ ನೀಡುತ್ತಿದ್ದ ಈ ಸ್ಥಳವನ್ನು ಮತ್ತಷ್ಟು ಸವಿ ನೆನಪಾಗಿ ಉಳಿಯುವಂತೆ ಮಾಡಲು, ಒಂದು ರಸಮಯ ಸಂಜೆಯನ್ನು ಆಯೋಜಿಸುತ್ತಿದ್ದೇವೆ. ಬಾಸ್ಟಿಯನ್ ಬಾಂದ್ರಾ ಮುಚ್ಚಲಿದ್ದರೂ, ಗುರುವಾರದ ಆರ್ಕೇನ್ ಅಫೇರ್ ಕಾರ್ಯಕ್ರಮವು ಬಾಸ್ಟಿಯನ್ ಎಟ್ ದಿ ಟಾಪ್‌ನಲ್ಲಿ ಮುಂದುವರಿಯಲಿದೆ ಎಂದು ಶಿಲ್ಪಾ ಶೆಟ್ಟಿ ತಿಳಿಸಿದ್ದಾರೆ. 2016ರಿಂದ ಸೀಫುಡ್‌ಗೆ ಹೆಸರಾದ ಬಾಸ್ಟಿಯನ್ ಬಾಂದ್ರಾವನ್ನು ಶಿಲ್ಪಾ ಶೆಟ್ಟಿ ಮತ್ತು ರೆಸ್ಟೋರೇಟರ್ ರಂಜಿತ್ ಬಿಂದ್ರಾ ಸಹ-ಮಾಲೀಕತ್ವದಲ್ಲಿ ನಡೆಸುತ್ತಿದ್ದರು.
ಈ ಸುದ್ದಿಯನ್ನು ಓದಿ:Viral Video: ಶ್ವಾನದ ಮೈಮೇಲಿನ ರೋಮ ತೆಗೆದು ಟ್ಯಾಟೂ ಹಾಕಿಸಿ ವಿಕೃತಿ ಮೆರೆದ ಮಾಲೀಕ; ಕಠಿಣ ಕ್ರಮಕ್ಕೆ ಆಗ್ರಹ
ಇನ್ನು ಶಿಲ್ಪಾ ಶೆಟ್ಟಿ ಮತ್ತು ಕುಂದ್ರಾ ಮೇಲೆ ಮುಂಬೈ ಮೂಲದ ಉದ್ಯಮಿ ದೀಪಕ್ ಕೊಠಾರಿ 60.4 ಕೋಟಿ ರೂ. ವಂಚನೆ ಆರೋಪ ಹೊರಿಸಿದ್ದಾರೆ. ಈ ಆರೋಪವು ಶಿಲ್ಪಾ ಶೆಟ್ಟಿ ಮತ್ತು ಕುಂದ್ರಾ ಅವರ ಬೆಸ್ಟ್ ಡೀಲ್ ಟಿವಿ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಸಂಬಂಧಿಸಿದೆ. 2015ರಿಂದ 2023ರವರೆಗೆ ವ್ಯಾಪಾರ ವಿಸ್ತರಣೆಯ ಭರವಸೆಯಡಿ ಕೊಠಾರಿ ಹೂಡಿಕೆ ಮಾಡಿದ್ದ ಹಣವನ್ನು ವೈಯಕ್ತಿಕ ಖರ್ಚಿಗೆ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. EOW ಈ ಪ್ರಕರಣವನ್ನು ತನಿಖೆ ಮಾಡುತ್ತಿದೆ.
ಈ ಆರೋಪಗಳನ್ನು ಶಿಲ್ಪಾ ಶೆಟ್ಟಿ ಮತ್ತು ಕುಂದ್ರಾ ಅವರ ವಕೀಲ ಪ್ರಶಾಂತ್ ಪಾಟೀಲ್ ತಳ್ಳಿಹಾಕಿದ್ದಾರೆ. ಇದು ಸಿವಿಲ್ ವಿವಾದವಾಗಿದ್ದು, ಎನ್‌ಸಿಎಲ್‌ಟಿ ಮುಂಬೈನಲ್ಲಿ ಅಕ್ಟೋಬರ್ 4, 2024ರಂದು ತೀರ್ಪಾಗಿದೆ. ಕಂಪನಿಯು ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು ಮತ್ತು ದೀರ್ಘ ಕಾನೂನು ಹೋರಾಟದಲ್ಲಿತ್ತು. ಯಾವುದೇ ಅಪರಾಧವಾಗಿಲ್ಲ ಎಂದು ಪಾಟೀಲ್ ತಿಳಿಸಿದ್ದಾರೆ. EOWಗೆ ಎಲ್ಲ ದಾಖಲೆಗಳನ್ನು ಒದಗಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಈ ಆರೋಪಗಳು ಶಿಲ್ಪಾ ಶೆಟ್ಟಿ ಮತ್ತು ಕುಂದ್ರಾ ಅವರ ಖ್ಯಾತಿಗೆ ಕಳಂಕ ತರುವ ಉದ್ದೇಶದಿಂದ ಮಾಡಲಾಗಿದೆ ಎಂದು ಪಾಟೀಲ್ ಆರೋಪಿಸಿದ್ದಾರೆ.