Peddi: ರಾಮ್ ಚರಣ್ ಜೊತೆ ಐಟಂ ಸಾಂಗ್‌ಗೆ ಡ್ಯಾನ್ಸ್ ಮಾಡಲು ದುಬಾರಿ ಸಂಭಾವನೆ ಪಡೆದ ಶ್ರುತಿ ಹಾಸನ್
ರಾಮ್ ಚರಣ್ ನಟನೆಯ ʻಪೆದ್ದಿʼ ಚಿತ್ರದ ವಿಶೇಷ ಐಟಂ ಹಾಡಿಗೆ ನಟಿ ಶ್ರುತಿ ಹಾಸನ್ ಆಯ್ಕೆಯಾಗಿದ್ದಾರೆ. ಈ ಒಂದು ಹಾಡಿಗಾಗಿ ಅವರು ದುಬಾರಿ ಸಂಭಾವನೆ ಪಡೆದಿದ್ದಾರೆ ಎಂಬ ಸುದ್ದಿ ಇದೆ. ಜಾನಿ ಮಾಸ್ಟರ್ ನೃತ್ಯ ನಿರ್ದೇಶನದಲ್ಲಿ ಈ ಹಾಡು ಮೂಡಿಬರಲಿದ್ದು, ಚಿತ್ರದ ಬಿಡುಗಡೆ ಜೂನ್ ತಿಂಗಳಿಗೆ ಮುಂದೂಡಲ್ಪಟ್ಟಿದೆ. ಈ ಚಿತ್ರದಲ್ಲಿ ಶಿವರಾಜ್‌ಕುಮಾರ್ ಮತ್ತು ಜಾನ್ವಿ ಕಪೂರ್ ಪ್ರಮುಖ ಪಾತ್ರಗಳಲ್ಲಿದ್ದಾರೆ.
-
ʻಮೆಗಾ ಪವರ್ ಸ್ಟಾರ್ʼ ರಾಮ್ ಚರಣ್ ಅವರ ಬಹುನಿರೀಕ್ಷಿತ ʻಪೆದ್ದಿʼ ಸಿನಿಮಾದ ಕೆಲಸಗಳು ಬಿರುಸಿನಿಂದ ಸಾಗುತ್ತಿವೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಈ ಚಿತ್ರವು ಏಪ್ರಿಲ್ 30ರಂದು ತೆರೆಕಾಣಬೇಕಿತ್ತು. ಒಂದಷ್ಟು ಕೆಲಸಗಳು ಬಾಕಿ ಇದ್ದಿದ್ದರಿಂದ ಜೂನ್ 25ಕ್ಕೆ ಪೋಸ್ಟ್‌ಪೋನ್ ಆಗಿರುವ ಮಾಹಿತಿ ಇದೆ. ಈ ಮಧ್ಯೆ ʻಪೆದ್ದಿʼ ಸಿನಿಮಾದ ಐಟಂ ಸಾಂಗ್ ಕುರಿತಂತೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದವು. ಇದೀಗ ಆ ಕುರಿತಂತೆ ಒಂದು ಇಂಟರೆಸ್ಟಿಂಗ್ ಮಾಹಿತಿ ಸಿಕ್ಕಿದೆ.
ʻಪೆದ್ದಿʼ ಜೊತೆ ಶ್ರುತಿ ಹಾಸನ್ ಡ್ಯಾನ್ಸ್
ʻಪೆದ್ದಿʼ ಚಿತ್ರದ ಐಟಂ ಸಾಂಗ್‌ನಲ್ಲಿ ಯಾರು ಕಾಣಿಸಿಕೊಳ್ಳುತ್ತಾರೆ ಎಂಬುದೇ ದೊಡ್ಡ ಚರ್ಚೆಯ ವಿಚಾರವಾಗಿತ್ತು. ಅಂತಿಮವಾಗಿ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ. ನಟಿ ಶ್ರುತಿ ಹಾಸನ್ ಅವರು ಇದೀಗ ಪೆದ್ದಿ ಚಿತ್ರದ ಐಟಂ ಸಾಂಗ್‌ನಲ್ಲಿ ಕಾಣಿಸಿಕೊಳ್ಳದ್ದಾರೆ. ಈ ಮೊದಲು ಹಲವು ನಟಿಯರ ಹೆಸರು ಕೇಳಿಬಂದಿತ್ತಾದರೂ, ಅಂತಿಮವಾಗಿ ಶ್ರುತಿ ಹಾಸನ್ ಅವರಿಗೆ ಈ ಅವಕಾಶ ಒಲಿದಿದೆ. ಇದೀಗ ಎಲ್ಲರ ಗಮನ ಸೆಳೆಯುತ್ತಿರುವುದು ಈ ಐಟಂ ಸಾಂಗ್‌ಗಾಗಿ ಅವರು ಪಡೆಯುತ್ತಿರುವ ಸಂಭಾವನೆ!
ಕೇವಲ ಒಂದು ಹಾಡಿನಲ್ಲಿ ಡ್ಯಾನ್ಸ್ ಮಾಡುವುದಕ್ಕಾಗಿ ಶ್ರುತಿ ಬರೋಬ್ಬರಿ 3 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಬರೀ ಒಂದು ಹಾಡಿಗೆ ಇದು ಭಾರಿ ದೊಡ್ಡ ಮೊತ್ತವೆಂದೇ ಪರಿಗಣಿಸಲಾಗಿದೆ. ಅದ್ದೂರಿ ಸೆಟ್ ಮತ್ತು ಸ್ಟೈಲಿಶ್ ನೃತ್ಯದೊಂದಿಗೆ ಈ ಹಾಡು ಮೂಡಿಬರಲಿದ್ದು, ಚಿತ್ರದ ಪ್ರಮುಖ ಹೈಲೈಟ್ ಆಗಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ರಾಮ್ ಚರಣ್ ಜೊತೆ ಸಂಯುಕ್ತಾ ಮೆನನ್ ಈ ವಿಶೇಷ ಹಾಡಿನಲ್ಲಿ ಡ್ಯಾನ್ಸ್ ಮಾಡಲಿದ್ದಾರೆ ಎಂಬುದು ಭಾರಿ ಸುದ್ದಿಯಾಗಿತ್ತು. ಅಂತಿಮವಾಗಿ ರಾಮ್ ಚರಣ್ ಜೊತೆ ಹೆಜ್ಜೆ ಹಾಕುವ ಅವಕಾಶ ಶ್ರುತಿ ಹಾಸನ್ ಪಾಲಾಗಿದೆ. ಅಂದಹಾಗೆ, ಈ ಹಿಂದೆ ಇವರಿಬ್ಬರು 'ಎವಡು' ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ್ದರು.
ಜಾನಿ ಮಾಸ್ಟರ್ ನೃತ್ಯ ನಿರ್ದೇಶನ
ಶ್ರುತಿ ಈ ಹಿಂದೆ 'ಆಗಡು' ಮತ್ತು 'ಹಾಯ್ ನಾನ್ನಾ' ಚಿತ್ರಗಳ ಐಟಂ ಸಾಂಗ್‌ಗಳಲ್ಲಿ ಮಸ್ತ್ ಆಗಿ ಡ್ಯಾನ್ಸ್ ಮಾಡಿದ್ದರು. ಸದ್ಯದ ಮಾಹಿತಿ ಪ್ರಕಾರ, 'ಪೆದ್ದಿ' ಚಿತ್ರೀಕರಣದಲ್ಲಿ ಭಾಗವಹಿಸಲು ಶ್ರುತಿ ಹಾಸನ್ ಈಗಾಗಲೇ ಚೆನ್ನೈನಿಂದ ಹೈದರಾಬಾದ್‌ಗೆ ತಲುಪಿದ್ದಾರೆ ಎಂಬ ಮಾಹಿತಿ ಇದೆ. ಬುಚ್ಚಿಬಾಬು ಸಾನಾ ನಿರ್ದೇಶನದ ಈ ಚಿತ್ರದಲ್ಲಿ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸುತ್ತಿದ್ದಾರೆ.
ಎ.ಆರ್. ರೆಹಮಾನ್ ಸಂಗೀತ ಸಂಯೋಜನೆ ಮಾಡುತ್ತಿದ್ದು, ನೃತ್ಯ ನಿರ್ದೇಶನವನ್ನು ಜಾನಿ ಮಾಸ್ಟರ್ ಮಾಡುತ್ತಿದ್ದಾರೆ. ಇನ್ನು, ಈ ಚಿತ್ರದಲ್ಲಿ ಶಿವರಾಜ್‌ಕುಮಾರ್, ಜಗಪತಿ ಬಾಬು ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ತೆಲುಗು ಸೇರಿದಂತೆ ವಿವಿಧ ಭಾಷೆಗಳಲ್ಲಿ ಪೆದ್ದಿ ಚಿತ್ರವು ತೆರೆಗೆಬರಲಿದೆ.