ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕುಟುಂಬದ ವಿರೋಧದ ನಡುವೆಯೂ ಮದುವೆಯಾಗಲು ರಾಯರ ಅನುಗ್ರಹ ಕಾರಣ ಎಂದ ಗಾಯಕಿ ಸುಹಾನಾ ಸೈಯದ್

Suhana Syed: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಸರಿಗಮಪ ಮೂಲಕ ಖ್ಯಾತಿ ಪಡೆದ ಗಾಯಕಿ ಸುಹಾನಾ ಸೈಯದ್‌ ಮಂತ್ರಾಲಯದ ಗುರುರಾಯರ ಪವಾಡದ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದಾರೆ. ಸುಹಾನಾ ಇತ್ತೀಚೆಗಷ್ಟೇ ನಿತಿನ್‌ ಶಿವಾಂಶ್‌ ಅವರನ್ನು ವರಿಸಿದ್ದಾರೆ. ಇವರಿಬ್ಬರ ಧರ್ಮ ಬೇರೆ ಬೇರೆ ಆಗಿದ್ದ ಕಾರಣ ಈ ಸುದ್ದಿ ವೈರಲ್ ಆಗಿತ್ತು. ಇವರ ಧರ್ಮ ಬೇರೆಯಾದ ಕಾರಣ ಕುಟುಂಬಸ್ಥರ ವಿರೋಧದ ನಡುವೆಯು ಅವರನ್ನು ಒಪ್ಪಿಸಿ ಮದುವೆಯಾಗೋದು ಸುಲಭ ಮಾತಾಗಿರಲಿಲ್ಲ. ಹಾಗಿದ್ದರೂ ಈ ಅಸಾಧ್ಯದ ಕೆಲಸವನ್ನು ಮಂತ್ರಾಲಯದ ಗುರು ರಾಯರು ಮಾಡಿಸಿದ್ದಾರೆ ಎಂದು ಅವರು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ.

ವಿವಾಹವಾಗಲು ಗುರುರಾಯರ ದಯೆ ಕಾರಣ ಎಂದ ಗಾಯಕಿ ಸುಹಾನಾ

ಗಾಯಕಿ ಸುಹಾನಾ ಸೈಯದ್ -

Profile
Pushpa Kumari Dec 8, 2025 7:42 PM

ಬೆಂಗಳೂರು, ಡಿ. 8: ಮಂತ್ರಾಲಯದ ಶ್ರೀ ಗುರು ರಾಯರನ್ನು ನಂಬಿದ ಕಾರಣಕ್ಕೆ ತಮ್ಮ ಜೀವನ ಸಂಪೂರ್ಣ ಬದಲಾಯಿತು ಎಂದು ಅನೇಕ ಸೆಲೆಬ್ರಿಟಿಗಳು ಹೇಳಿದ್ದಾರೆ. ಡಾ. ರಾಜ್‌ಕುಮಾರ್, ಜಗ್ಗೇಶ್ ಸೇರಿದಂತೆ ದೊಡ್ಡ ದೊಡ್ಡ ಸ್ಟಾರ್ ಕುಟುಂಬದವರು ಕೂಡ ರಾಯರನ್ನು ಆರಾಧಿಸಿಕೊಂಡು ಬಂದಿದ್ದಾರೆ. ಇದೀಗ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಸರಿಗಮಪ ಮೂಲಕ ಖ್ಯಾತಿ ಪಡೆದ ಗಾಯಕಿ ಸುಹಾನಾ ಸೈಯದ್‌ (Suhana Syed) ಇದೀಗ ರಾಯರ ಪವಾಡದ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದಾರೆ. ಸುಹಾನಾ ಇತ್ತೀಚೆಗಷ್ಟೇ ನಿತಿನ್‌ ಶಿವಾಂಶ್‌ ಅವರನ್ನು ಮದುವೆಯಾಗಿದ್ದಾರೆ. ಇವರಿಬ್ಬರ ಧರ್ಮ ಬೇರೆ ಬೇರೆ ಆಗಿದ್ದ ಕಾರಣ ಈ ಸುದ್ದಿ ದೊಡ್ಡ ಮಟ್ಟದಲ್ಲಿ ವೈರಲ್ ಆಗಿತ್ತು. ಇವರ ಧರ್ಮ ಬೇರೆಯಾದ ಕಾರಣ ಕುಟುಂಬಸ್ಥರ ವಿರೋಧದ ನಡುವೆಯು ಅವರನ್ನು ಒಪ್ಪಿಸಿ ಮದುವೆಯಾಗೋದು ಸುಲಭ ಮಾತಾಗಿರಲಿಲ್ಲ. ಹಾಗಿದ್ದರೂ ಈ ಅಸಾಧ್ಯದ ಕೆಲಸವನ್ನು ಮಂತ್ರಾಲಯದ ಗುರು ರಾಯರೇ ಮಾಡಿಸಿದ್ದಾರೆ ಎಂದು ಬರೆದುಕೊಂಡಿದ್ದ ಪೋಸ್ಟ್ ಅನ್ನು ಇತ್ತೀಚೆಗಷ್ಟೇ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ವೈರಲ್‌ ಆಗಿದೆ.

ಮುಸ್ಲಿಂ ಕುಟುಂಬದಲ್ಲಿ ಜನಿಸಿದ ಸುಹಾನಾ ಅವರಿಗೆ ಮೊದಲಿಂದಲೂ ಗಾಯನ ಕ್ಷೇತ್ರ ಎಂದರೆ ಬಹಳ ಇಷ್ಟ‌. ಕುಟುಂಬದವರ ವಿರೋಧದ ನಡುವೆಯೂ ಸರಿಗಮಪ ರಿಯಾಲಿಟಿ ಶೋಗೆ ಸ್ಪರ್ಧಿಯಾಗಿ ಬಂದಿದ್ದರು. ಅಲ್ಲಿ ʼಶ್ರೀ ಕಾರನೇ ಶ್ರೀನಿವಾಸನೇʼ ಹಾಡನ್ನು ಹಾಡುವ ಮೂಲಕ ಕರ್ನಾಟಕದಾದ್ಯಂತ ಮನೆಮಾತಾಗಿದ್ದರು.‌ ಇತ್ತೀಚೆಗಷ್ಟೇ ಅವರು ತಮ್ಮ ಬಹುಕಾಲದ ಗೆಳೆಯ ನಿತಿನ್‌ ಶಿವಾಂಶ್‌ ಅವರನ್ನು ಮದುವೆಯಾಗಿದ್ದು, ಪತಿಯ ಜತೆಗೆ ಮಂತ್ರಾಲಯಕ್ಕೆ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ.

ಸುಹಾನಾ ಸೈಯದ್‌ ಅವರ ಪೋಸ್ಟ್‌:

ಅವರು ಮಂತ್ರಾಲಯಕ್ಕೆ ಭೇಟಿಕೊಟ್ಟ ಅನೇಕ ಫೋಟೊಗಳು ವೈರಲ್ ಆಗಿದೆ. ಈ ವೇಳೆ ಅವರು ತಮ್ಮ ಮದುವೆ ನಡೆಯಲು ರಾಯರೇ ಮುಖ್ಯ ಕಾರಣ ಎಂದು ಬರೆದುಕೊಂಡಿದ್ದಾರೆ. ʼʼಪ್ರತಿ ಬಾರಿ ನಾನು ಮಂತ್ರಾಲಯಕ್ಕೆ ಬಂದಾಗ, ನಮ್ಮಿಬ್ಬರ ಕುಟುಂಬದವರು ನಮ್ಮ ಮದುವೆಗೆ ಒಪ್ಪಿಗೆ ನೀಡಲಿ, ಕುಟುಂಬದವರ ಸಮ್ಮುಖದಲ್ಲಿ ಮದುವೆ ನಡೆಯಬೇಕು ಎಂದು ಪ್ರಾರ್ಥಿಸುತ್ತಿದ್ದೆ. ಅದರಂತೆ ನಮ್ಮ ಮದುವೆ ನಡೆದಿದೆʼʼ ಎಂದು ಸುಹಾನಾ ಸೈಯದ್‌ ಹೇಳಿದ್ದಾರೆ.

ಸಿಪಿಐಎಂ ಕಚೇರಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಮಹಾಪರಿನಿರ್ವಾಹಣ ದಿನಾಚರಣೆ

ʼʼಅಂದು ಬೇಡಿಕೊಂಡು ಹೋದ ಬಳಿಕ ಮುಂದೊಂದು ದಿನ ಇಬ್ಬರು ಜತೆಯಾಗಿ ಬರುತ್ತೇವೆ ಎಂದು ಬಯಸಿದ್ದೆವು. ಇಲ್ಲಿಗೆ ಬಂದ ಮೇಲೆ ನಮ್ಮ ಮದುವೆ ನಡೆಯುತ್ತದೆ ಎಂಬ ಭರವಸೆ ನಮಗೆ ಮೂಡಿತು. ಇಲ್ಲಿಂದ ವಾಪಾಸಾಗುವಾಗ ಕಣ್ಣೀರು ಹಾಕಿಕೊಂಡು ಆ ದಿನ ನಾವಿಬ್ಬರು ಹೊರಟು ಬಿಟ್ಟಿದ್ದೆವು. ಇಂದು ರಾಯರ ಅನುಗ್ರಹದಿಂದ ನಾವಿಷ್ಟ ಪಟ್ಟಂತೆ ಮದುವೆಯಾಗಿದ್ದೇವೆ. ಅವರ ಆಶೀರ್ವಾದವು ಸಿಕ್ಕಿತು, ಜತೆಯಾಗಿದ್ದೇವೆ. ರಾಯರಿಗೆ ನಾನೆಂದಿಗೂ ಕೃತಜ್ಞಳಾಗಿದ್ದೇನೆʼʼ ಎಂದು ಸುಹಾನಾ ಬರೆದುಕೊಂಡಿದ್ದಾರೆ

ಇವರ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ನಿಜ ಪ್ರೀತಿಗೆ ಎಂದಿಗೂ ಸೋಲಿಲ್ಲ...ಪ್ರೀತಿ ನಿಶ್ಕಲ್ಮಶವಾಗಿದ್ದರೆ ಯಾವುದೆ ಜಾತಿ ಧರ್ಮ ಅಡ್ಡ ಬರಲಾರದು. ಅದರ ಜತೆಗೆ ದೇವರ ಬಲವು ಸಿಗಲಿದೆ ಎಂದು ಇನ್ನೊಬ್ಬರು ತಿಳಿಸಿದ್ದಾರೆ. ರಾಯರ ಲೀಲೆ, ರಾಯರಿದ್ದಾರೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಾಗಿಲ್ಲ ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.