ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Singer Sonu Nigam: ಕನ್ನಡಿಗರನ್ನು ಕೆಣಕಲು ಹೋಗಿ ಸರಿಯಾದ ಹೊಡೆತ ತಿಂದ ಸೋನು ನಿಗಮ್‌; ಸ್ಯಾಂಡಲ್‌ವುಡ್‌ನಿಂದ ಬ್ಯಾನ್

ಕನ್ನಡಿಗರನ್ನು ಪಹಲ್ಗಾಮ್ ಉಗ್ರರಿಗೆ ಹೋಲಿಕೆ ಮಾಡಿದ ಖ್ಯಾತ ಗಾಯಕ ಸೋನು ನಿಗಮ್ ಅವರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್‌ ಮಾಡಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನಿರ್ಧರಿಸಿದೆ. ಸಭೆಯ ಬಳಿಕ ಮಾತನಾಡಿದ ಕೆಎಫ್‌ಸಿಸಿ ಅಧ್ಯಕ್ಷ ನರಸಿಂಹಲು, ʼʼಪಹಲ್ಗಾಮ್ ಗಲಭೆ ಕುರಿತು ಸೋನು ನಿಗಮ್ ಖಾಸಗಿ ಶಾಲೆಯಲ್ಲಿ‌ ಮಾತನಾಡಿದ್ದಾರೆ. ಪಹಲ್ಗಾಮ್ ವಿಚಾರವನ್ನು ಕನ್ನಡಿಗರಿಗೆ ಹೋಲಿಕೆ ಮಾಡಿದ್ದಾರೆ. ಇದು ಸರಿಯಲ್ಲ. ಮತ್ತೆ ಲೈವ್ ಬಂದು ಅವರ ಮಾತನ್ನು ಸಮರ್ಥಿಸಿಕೊಂಡಿದ್ದಾರೆ. ಹೀಗಾಗಿ ಅವರನ್ನು ನಿಷೇಧಿಸಲು ತೀರ್ಮಾನಿಸಲಾಗಿದೆʼʼ ಎಂದು ತಿಳಿಸಿದ್ದಾರೆ.

ಸೋನು ನಿಗಮ್‌ ಸ್ಯಾಂಡಲ್‌ವುಡ್‌ನಿಂದ ಬ್ಯಾನ್

ಸೋನು ನಿಗಮ್‌.

Profile Ramesh B May 5, 2025 3:23 PM

ಬೆಂಗಳೂರು: ಕನ್ನಡಿಗರನ್ನು ಪಹಲ್ಗಾಮ್ ಉಗ್ರರಿಗೆ ಹೋಲಿಕೆ ಮಾಡಿದ ಖ್ಯಾತ ಗಾಯಕ ಸೋನು ನಿಗಮ್ (Singer Sonu Nigam) ಅವರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್‌ ಮಾಡಲಾಗಿದೆ. ಸೋನು ನಿಗಮ್‌ ಅವರ ವಿರುದ್ಧ ಕ್ರಮ ಜರುಗಿಸಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (Karnataka Film Chamber of Commerce-KFCC) ಸೋಮವಾರ (ಮೇ 5) ಸಭೆ ನಡೆಸಿತು. ಈ ಸಭೆಯಲ್ಲಿ ಸೋನು ನಿಗಮ್‌ ಅವರನ್ನು ಸ್ಯಾಂಡಲ್‌ವುಡ್‌ನಿಂದ ನಿಷೇಧಿಸಲು ತೀರ್ಮಾನಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ಈ ಸಭೆಯಲ್ಲಿ ಕೆಎಫ್‌ಸಿಸಿ ಅಧ್ಯಕ್ಷ ನರಸಿಂಹಲು, ವಾಣಿಜ್ಯ ಮಂಡಳಿಯ ಕುಮಾರ್, ಸಂಗೀತ ನಿರ್ದೇಶಕ ಧರ್ಮವಿಶ್, ನಿರ್ದೇಶಕರ ಸಂಘದ ಅಧ್ಯಕ್ಷ ವಿಶ್ವನಾಥ್, ಗಾಯಕಿ ಶಮಿತಾ ಮಲ್ನಾಡ್ ಮತ್ತಿತರರು ಭಾಗವಹಿಸಿದರು.

ಕೆಎಫ್‌ಸಿಸಿ ಅಧ್ಯಕ್ಷ ನರಸಿಂಹಲು ಹೇಳಿದ್ದೇನು?

ಸಭೆಯ ಬಳಿಕ ಮಾತನಾಡಿದ ಕೆಎಫ್‌ಸಿಸಿ ಅಧ್ಯಕ್ಷ ನರಸಿಂಹಲು, ʼʼಪಹಲ್ಗಾಮ್ ಗಲಭೆ ಕುರಿತು ಸೋನು ನಿಗಮ್ ಖಾಸಗಿ ಶಾಲೆಯಲ್ಲಿ‌ ಮಾತನಾಡಿದ್ದಾರೆ. ಪಹಲ್ಗಾಮ್ ವಿಚಾರವನ್ನು ಕನ್ನಡಿಗರಿಗೆ ಹೋಲಿಕೆ ಮಾಡಿದ್ದಾರೆ. ಇದು ಸರಿಯಲ್ಲ. ಮತ್ತೆ ಲೈವ್ ಬಂದು ಅವರ ಮಾತನ್ನು ಸಮರ್ಥಿಸಿಕೊಂಡಿದ್ದಾರೆ. ಹೀಗಾಗಿ ಅವರನ್ನು ನಿಷೇಧಿಸಲು ತೀರ್ಮಾನಿಸಲಾಗಿದೆ. ಮುಂದಿನ ದಿನಗಳಲ್ಲಿ ಅವರ ವಿರುದ್ದ ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕು ಅಂತ ಚರ್ಚಿಸುತ್ತೇವೆ. ಯಾರು ಕೂಡ ಅವರನ್ನು ಕಾರ್ಯಕ್ರಮಕ್ಕೆ, ಸಿನಿಮಾಕ್ಕೆ ಹಾಡಿಸಲು ಕರೆಯಬಾರದುʼʼ ಎಂದು ಕರೆ ನೀಡಿದರು.

ʼʼಸೋನು ನಿಗಮ್‌ ಅವರಿಂದ ಯಾರಾದರೂ ಹಾಡಿಸಿದರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಯಾವ ರೀತಿ ಕ್ರಮ ಕೈಗೊಳ್ಳಬೇಕು ಎನ್ನುವುದನ್ನು ಆಮೇಲೆ ತೀರ್ಮಾನಿಸುತ್ತೇವೆ. ಸದ್ಯಕ್ಕೆ ಅಸಹಕಾರ ಅಂತ ತೀರ್ಮಾನ ಮಾಡಿದ್ದೇವೆ. ಅವರನ್ನು ಎಷ್ಟು ದಿನ ಬ್ಯಾನ್ ಮಾಡಬೇಕು? ಯಾವ ರೀತಿ ಅವರ ವಿರುದ್ದ ಕ್ರಮ ಕೈಗೊಳ್ಳಬೇಕು ಎನ್ನುವುದನ್ನು ತೀರ್ಮಾನಿಸುತ್ತೇವೆʼʼ ಎಂದು ವಿವರಿಸಿದರು.

ಈ ಸುದ್ದಿಯನ್ನೂ ಓದಿ: Sonu Nigam: ಕನ್ನಡಿಗರ ಕುರಿತು ವಿವಾದಾತ್ಮಕ ಹೇಳಿಕೆ; ಗಾಯಕ ಸೋನು ನಿಗಮ್‌ ವಿರುದ್ಧ ಎಫ್‌ಐಆರ್‌ ದಾಖಲು

ಏನಿದು ವಿವಾದ?

ಇತ್ತೀಚೆಗೆ ಬೆಂಗಳೂರು ನಗರದಲ್ಲಿ ನಡೆದ ರಸಮಂಜರಿ ಕಾರ್ಯಕ್ರಮವೊಂದರಲ್ಲಿ ಕನ್ನಡ ಹಾಡು ಹೇಳಿ ಎಂದು ಪ್ರೇಕ್ಷಕರು ಆಗ್ರಹಿಸಿದ್ದಕ್ಕೆ ಗರಂ ಆಗಿದ್ದ ಸೋನು ನಿಗಮ್‌, ಇದಕ್ಕೇನೇ ಪಹಲ್ಗಾಮ್ ದಾಳಿ ನಡೆದಿದ್ದು ಎಂದು ವೇದಿಕೆ ಮೇಲೆಯೇ ಕಿಡಿಕಾರಿದ್ದರು. ಈ ವಿಡಿಯೊ ಹೊರ ಬಿದ್ದ ಬೆನ್ನಲ್ಲೇ ಕನ್ನಡಪರ ಸಂಘಟನೆಗಳಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಅನೇಕರು ಕನ್ನಡ ಹಾಡುವಂತೆ ಹೇಳಿದ್ದಕ್ಕೂ, ಭಯೋತ್ಪಾದಕರ ದಾಳಿಗೂ ಏನು ಸಂಬಂಧ ಎಂದು ಆಕ್ರೋಶ ಹೊರಹಾಕಿದ್ದರು.

ವಿರೋಧ ತೀವ್ರವಾಗುತ್ತಿದ್ದಂತೆ ತಮ್ಮ ಮಾತಿಗೆ ಸ್ಪಷ್ಟನೆ ನೀಡಿ ಸೋನು ನಿಗಮ್‌ ವಿಡಿಯೊ ಮಾಡಿದ್ದರು. ಈ ಸ್ಪಷ್ಟನೆ ವಿಡಿಯೊದಲ್ಲಿ ಅವರು ಕನ್ನಡಿಗರನ್ನು ಅಣಕಿಸಿದ್ದು ಮಾತ್ರವಲ್ಲದೆ ಗೂಂಡಾಗಳು ಎಂಬ ಪದ ಬಳಕೆ ಮಾಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು.

ತಮ್ಮ ಹೇಳಿಕೆಗೆ ಕನ್ನಡಿಗರಿಂದ ಭಾರೀ ಆಕ್ರೋಶ ವ್ಯಕ್ತವಾದ ಹಿನ್ನೆಲೆ ಸೋನು ನಿಗಮ್‌ ವಿಡಿಯೊವೊಂದನ್ನು ರಿಲೀಸ್‌ ಮಾಡಿದ್ದರು. ವಿಡಿಯೊದಲ್ಲಿ ʼʼಕನ್ನಡ... ಕನ್ನಡ... ಕೂಗುವಲ್ಲಿ ವ್ಯತ್ಯಾಸ ಇದೆ. ನಾಲ್ಕೈದು ಜನ ಗೂಂಡಾ ರೀತಿಯಲ್ಲಿ ವರ್ತಿಸುತ್ತಾ ಅಲ್ಲಿ ಕನ್ನಡ ಕನ್ನಡ ಎಂದು ಕೂಗುತ್ತಿದ್ದರು. ಸುಮ್ಮನಿರುವಂತೆ ಅಲ್ಲಿ ಅನೇಕರು ಅವರಿಗೆ ಮನವಿ ಮಾಡುತ್ತಿದ್ದರು. ಕಾರ್ಯಕ್ರಮದ ವಾತಾವರಣ ಹಾಳು ಮಾಡದಿರಿ ಎಂದು ಹೇಳುವುದು ಅನಿವಾರ್ಯವಾಗಿತ್ತು. ಪ್ರೇಕ್ಷಕರಾಗಿ ಬೆದರಿಕೆ ಹಾಕುವ ಹಕ್ಕು ಯಾರಿಗೂ ಇಲ್ಲ. ಪಹಲ್ಗಾಮ್‌ನಲ್ಲಿ ದಾಳಿ ನಡೆದಾಗ ಉಗ್ರರು ಭಾಷೆ ಯಾವುದೆಂದು ಕೇಳಿರಲಿಲ್ಲ. ಹೀಗಾಗಿ ಅವರಿಗೆ ತಿಳಿ ಹೇಳುವುದು ಅನಿವಾರ್ಯವಾಗಿತ್ತು. ಹಾಗಂತ ಹೇಳಿ ಕನ್ನಡಿಗೆರೆಲ್ಲರೂ ಕೆಟ್ಟವರೆಂದಲ್ಲ. ಅಲ್ಲಿನ ಜನರು ಬಹಳ ಒಳ್ಳೆಯವರು. ದೇಶದ ಯಾವ ಭಾಗಕ್ಕೆ ಹೋದರೂ ಇಂತಹ ಕೆಲವೊಂದು ಜನರಿರುತ್ತಾರೆ. ಅಂತಹವರನ್ನು ಆ ಕ್ಷಣವೇ ತಡೆಯುವುದು ಅತ್ಯವಶ್ಯಕ. ಪ್ರೀತಿಯ ಭೂಮಿಯಲ್ಲಿ ದ್ವೇಷದ ಬೀಜ ಬಿತ್ತುವುದನ್ನು ತಡೆಯಲೇಬೇಕು. ಅಲ್ಲಿದ್ದ ನಾಲ್ಕೈದು ಜನ ಕನ್ನಡ ಹಾಡುವಂತೆ ಬೇಡಿಕೆ ಇಟ್ಟಿರಲಿಲ್ಲ. ಬದಲಾಗಿ ಅವರು ನನಗೆ ಬೆದರಿಕೆ ಹಾಕಿದ್ದರುʼʼ ಎಂದು ಸ್ಪಷ್ಟನೆ ಕೊಟ್ಟಿದ್ದರು. ಸ್ಪಷ್ಟನೆ ನೆಪದಲ್ಲಿಯೂ ಅವರು ಕನ್ನಡಿಗರನ್ನು ಕೆಣಕ್ಕಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದ್ದು, ಅದಾದ ಬಳಿಕ ಅವರನ್ನು ಬ್ಯಾನ್‌ ಮಾಡಬೇಕೆಂದ ಕೂಗು ಜೋರಾಗಿತ್ತು.