ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Sonu Nigam: ಹಾಡುತ್ತಾ... ಕುಣಿಯುತ್ತಾ ಸಂಗೀತ ಕಾರ್ಯಕ್ರಮ ನೀಡುತ್ತಿದ್ದ ಸೋನು ನಿಗಮ್‌ ವೇದಿಕೆಯಲ್ಲೇ ಅಸ್ವಸ್ಥ-ವಿಡಿಯೊ ಇದೆ

ಖ್ಯಾತ ಗಾಯಕ ಹಾಗೂ ಸಂಗೀತಕಾರ ಸೋನು ನಿಗಮ್ ದಿಢೀರ್ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಾಗಾದ್ರೆ ಈ ಜನಪ್ರಿಯ ಗಾಯಕನಿಗೆ ಏನಾಯ್ತು..? ಈ ಘಟನೆಗೆ ಸಂಬಂಧಿಸಿದ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ.

ಏಕಾಏಕಿ ಅಸ್ವಸ್ಥ...ಅಷ್ಟಕ್ಕೂ ಸೋನು ನಿಗಮ್‌ಗೆ ಆಗಿದ್ದೇನು? ವಿಡಿಯೊ ವೈರಲ್‌

ಸಾಂದರ್ಭಿಕ ಚಿತ್ರ

Profile Sushmitha Jain Feb 3, 2025 11:15 AM

ಮುಂಬೈ: ಬಹುಭಾಷಾ ಗಾಯಕ ಹಾಗೂ ಖ್ಯಾತ ಸಂಗಿತಗಾರ ಸೋನು ನಿಗಮ್ (Sonu Nigam) ಅವರು ಸಂಗೀತ ಕಾರ್ಯಕ್ರಮವೊಂದರ ನಡುವೆ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಫೆ.02ರಂದು ಪುಣೆಯಲ್ಲಿ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ಸೋನು ಅವರು ಕಿಕ್ಕಿರಿದು ತುಂಬಿದ್ದ ಸಂಗೀತಾಭಿಮಾನಿಗಳ ನಡುವೆ ಜಬರ್ದಸ್ತ್ ಪ್ರದರ್ಶನ ನೀಡುತ್ತಿದ್ದರು. ಈ ಸಂದರ್ಭದಲ್ಲಿ ಅವರಿಗೆ ಇದ್ದಕ್ಕಿದ್ದಂತೆ ಬೆನ್ನಿನ ಭಾಗದಲ್ಲಿ ನೋವು ಕಾಣಿಸಿಕೊಂಡಿದೆ.

ಆದರೂ, ಕಾರ್ಯಕ್ರಮವನ್ನು ಸೋನು ನಿಗಮ್ ಮುಂದುವರಿಸಿದ್ದಾರೆ, ಆದರೆ ಆ ಬಳಿಕ ಅವರಿಗೆ ತೀವ್ರ ಸ್ವರೂಪದ ಬೆನ್ನು ನೋವು ಕಾಣಿಸಿಕೊಂಡ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗ ಆಸ್ಪತ್ರೆಯ ಬೆಡ್ ಮೇಲಿಂದ ವಿಡಿಯೋ ಶೇರ್ ಮಾಡಿರುವ ಸೋನು ನಿಗಮ್ ಅವರು ತನ್ನ ಅನಾರೋಗ್ಯ ಸಮಸ್ಯೆಯ ಬಗ್ಗೆ ಹೇಳಿಕೊಂಡಿದ್ದಾರೆ. ಅದರಲ್ಲಿ ಅವರು ಹೀಗೆ ಹೇಳಿಕೊಂಡಿದ್ದಾರೆ.



‘ಇವತ್ತು ನನ್ನ ಜೀವನದ ಅತ್ಯಂತ ಕಠಿಣ ದಿನ. ಸಾಮಾನ್ಯವಾಗಿ ನಾನು ವೇದಿಕೆಯಲ್ಲಿ ಹಾಡುವಾಗ ಅತ್ತಿಂದಿತ್ತ ಒಡಾಡುತ್ತಾ, ಕುಣಿಯುತ್ತಾ ಹಾಡು ಹಾಡುತ್ತೇನೆ. ಇಲ್ಲಿಯೂ ಹಾಗೆ ಮಾಡುತ್ತಿದ್ದ ಸಂದರ್ಭದಲ್ಲಿ ನನ್ನ ಬೆನ್ನಿನಲ್ಲಿ ಇದ್ದಕ್ಕಿದ್ದಂತೆ ನೋವು ಕಾಣಿಸಿಕೊಂಡಿತು. ಆದರೆ ಆ ನೋವನ್ನು ಸಹಿಸಿಕೊಂಡು ಪ್ರದರ್ಶನ ಮುಂದುವರಿಸಿದೆ. ಆದರೆ ಬರಬರುತ್ತಾ ಆ ನೋವು ಹೆಚ್ಚಾಗುತ್ತಾ ಹೋಯಿತು. ಬೆನ್ನಲ್ಲಿ ಯಾರೋ ಸೂಜಿಯಿಂದ ಚುಚ್ಚಿದಂತೆ ನೋವಾಗಲು ಪ್ರಾರಂಭವಾಯಿತು. ಕೊನೆಗೆ ನೋವನ್ನು ತಡೆದುಕೊಳ್ಳಲಾಗಲಿಲ್ಲ. ಈಗ ಇಲ್ಲಿದ್ದೇನೆ..ಮಾತೆ ಸರಸ್ವತಿ ನನ್ನ ಕೈಹಿಡಿದಳು..’ ಎಂದು ಈ ಜನಪ್ರಿಯ ಗಾಯಕ ತನ್ನ ಈ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Microfinance torture: ಮೈಕ್ರೋಫೈನಾನ್ಸ್‌ನವರು ಕಿರುಕುಳ ಕೊಟ್ಟರೆ ನನಗೆ ಕರೆ ಮಾಡಿ: ಎಚ್‌ ಡಿ ಕುಮಾರಸ್ವಾಮಿ

ಬಹುಭಾಷಾ ಹಿನ್ನಲೆ ಗಾಯಕ ಮತ್ತು ಸಂಗೀತ ನಿರ್ದೇಶಕ, ಡಬ್ಬಿಂಗ್ ಕಲಾವಿದ ಮತ್ತು ನಟರಾಗಿರುವ ಸೋನು ನಿಗಮ್ ಹಿಂದಿ, ಕನ್ನಡ, ಸೇರಿದಂತೆ ಒಟ್ಟು 32 ಭಾಷೆಗಳಲ್ಲಿ 6,000 ಹಾಡುಗಳನ್ನು ಹಾಡಿದ್ದಾರೆ. ಸೋನು ನಿಗಮ್ ಅವರನ್ನು ಆಧುನಿ ರಫಿ ಎಂದೇ ಕರೆಯಲಾಗುತ್ತದೆ. ತನ್ನ ಗಾಯನಕ್ಕಾಗಿ ನ್ಯಾಷನಲ್ ಅವಾರ್ಡ್, ಫಿಲ್ಮ್ ಫೇರ್ ಅವಾರ್ಡ್ ಪುರಸ್ಕಾರಗಳಿಗೂ ಇವರು ಪಾತ್ರರಾಗಿದ್ದಾರೆ.

ಕನ್ನಡ ಸೇರಿದಂತೆ ದೇಶದ ವಿವಿಧ ಭಾಷೆಗಳಲ್ಲಿ ಸೂಪರ್‌ ಹಿಟ್‌ ಹಾಡುಗಳನ್ನು ಸೋನು ಹಾಡಿದ್ದಾರೆ. ಮುಂಗಾರು ಮಳೆ ಸಿನಿಮಾದ ನಂತರದ ದಿನಗಳಲ್ಲಿ ಸೋನು ನಿಗಮ್ ಅವರು ಕನ್ನಡಿಗರಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ. ಸೋನು ನಿಗಮ್ ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೊಳಗಾಗಿರುವ ಸುದ್ದಿಯಿಂದ ಅವರ ಅಭಿಮಾನಿಗಳು ಇದೀಗ ತೀವ್ರ ಆತಂಕಕ್ಕೆ ಒಳಗಾಗಿದ್ದು, ತನ್ನ ನೆಚ್ಚಿನ ಗಾಯಕ ಶೀಘ್ರ ಗುಣಮುಖರಾಗಲಿ ಎಂದು ಎಲ್ಲರೂ ಹಾರೈಸುತ್ತಿದ್ದಾರೆ.