ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Addiction Movie: ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸುಂದರ ಕೃಷ್ಣ ಅರಸ್‌ ಮೊಮ್ಮಗನಿಗೆ ಸಾಥ್‌ ನೀಡಿದ ರಾಘವೇಂದ್ರ ರಾಜ್‌ಕುಮಾರ್

ಸ್ಯಾಂಡಲ್‌ವುಡ್‌ನ ಲೆಜೆಂಡ್ ನಟ ಸುಂದರ ಕೃಷ್ಣ ಅರಸ್ ಅವರ ಮೊಮ್ಮಗ ವಿಧು ಅಭಿನಯದ ‘ಅಡಿಕ್ಷನ್’ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಈ ಸಿನಿಮಾ ಜೂನ್‌ನಲ್ಲಿ ತೆರೆಕಾಣಲಿದೆ. ಅಜಯ್ ಕುಮಾರ್ ನಿರ್ದೇಶನದ ಮತ್ತು ಬೃಂದಾ ಜಯರಾಮ್ ನಿರ್ಮಾಣದ ಈ ಚಿತ್ರವು ಮಕ್ಕಳಲ್ಲಿನ ಮೊಬೈಲ್ ಚಟದ ನೈಜ ಘಟನೆಗಳನ್ನು ಆಧರಿಸಿದೆ.

ಸುಂದರ ಕೃಷ್ಣ ಅರಸ್ ಮೊಮ್ಮಗನ 'ಅಡಿಕ್ಷನ್' ಚಿತ್ರಕ್ಕೆ ಸಾಥ್ ನೀಡಿದ ರಾಘಣ್ಣ

-

Avinash GR
Avinash GR May 19, 2026 3:47 PM

ಕನ್ನಡ ಚಿತ್ರರಂಗ ಕಂಡ ಲೆಜೆಂಡ್‌ ನಟರಲ್ಲಿ ಸುಂದರ ಕೃಷ್ಣ ಅರಸ್‌ ಕೂಡ ಒಬ್ಬರು. ಇದೀಗ ಅವರ ಕುಟುಂಬದ ಮೂರನೇ ತಲೆಮಾರಿನ ನಟ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಸುಂದರ ಕೃಷ್ಣ ಪುತ್ರ ನಾಗೇಂದ್ರ ಅರಸ್‌ ಸಂಕಲನಕಾರನಾಗಿ ಮತ್ತು ನಟರಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ಅವರ ಪುತ್ರ, ಅಂದರೆ ಸುಂದರ ಕೃಷ್ಣ ಅರಸ್‌ ಅವರ ಮೊಮ್ಮಗ ವಿಧು ನಟರಾಗಿ ಸ್ಯಾಂಡಲ್‌ವುಡ್‌ ಪ್ರವೇಶ ಮಾಡಿದ್ದಾರೆ. ʻಅಡಿಕ್ಷನ್‌ʼ ಎಂಬ ಸಿನಿಮಾದಲ್ಲಿ ವಿಧು ಬಣ್ಣ ಹಚ್ಚಿದ್ದಾರೆ.

ಸಾಥ್‌ ನೀಡಿದ ರಾಘಣ್ಣ

ಎಸ್ .ಬಿ .ವಿ ಪ್ರೊಡಕ್ಷನ್ಸ್ ಅಡಿಯಲ್ಲಿ ಬೃಂದಾ ಎನ್ ಜಯರಾಮ್ ನಿರ್ಮಾಣ ಮಾಡಿರುವ ʻಅಡಿಕ್ಷನ್ʼ ಸಿನಿಮಾವು ಸೆನ್ಸಾರ್ ಮಂಡಳಿಯಿಂದ ಪ್ರಮಾಣಪತ್ರವನ್ನು ಪಡೆದುಕೊಂಡಿದೆ. ಜೂನ್‌ನಲ್ಲಿ ಬಿಡುಗಡೆಯಾಗಲಿರುವ ಈ ಸಿನಿಮಾದಲ್ಲಿ ಮಕ್ಕಳಲ್ಲಿನ ಮೊಬೈಲ್ ಚಟದ ಕುರಿತ ಕಥೆ ಇದ್ದು, ನೈಜ ಘಟನೆಗಳನ್ನು ಆಧರಿಸಿ ಈ ಕಥೆಯನ್ನು ರಚಿಸಲಾಗಿದೆಯಂತೆ. ಅಜಯ್ ಕುಮಾರ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ವಿಧುಗೆ ನಟ ರಾಘವೇಂದ್ರ ರಾಜ್‌ಕುಮಾರ್‌ ಸಾಥ್‌ ನೀಡಿದ್ದಾರೆ.

ಸಿದ್ದು ಮೂಲಿಮನಿ ನಟನೆ

ಈ ಚಿತ್ರದ ಟೈಟಲ್ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ. ನಿರ್ಮಾಪಕಿ ಬೃಂದಾ ಎನ್. ಜಯರಾಮ್ ಅವರ ಜನ್ಮದಿನದ ವಿಶೇಷವಾಗಿ ಹೊರಬಂದಿರುವ ಈ ಟೀಸರ್, ಸಿನಿರಸಿಕರಲ್ಲಿ ಚಿತ್ರದ ಬಗ್ಗೆ ಭಾರಿ ಕುತೂಹಲ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಜೊತೆಗೆ "ಲವ್ ಯು ಮುದ್ದು" ಖ್ಯಾತಿಯ ಸಿದ್ದು ಮೂಲಿಮನಿ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಸಿನಿಮಾದ ತೂಕವನ್ನು ಹೆಚ್ಚಿಸಿದೆ.

ʻಲವ್‌ ಯು ಮುದ್ದುʼ ಸಿನಿಮಾ ನೋಡಿ ಖುಷಿಯಾದ ಶಿವರಾಜ್‌ಕುಮಾರ್;‌ ನಟ ಸಿದ್ದು ಮೂಲಿಮನಿಗೆ ʻಹ್ಯಾಟ್ರಿಕ್‌ ಹೀರೋʼ ಹೇಳಿದ್ದೇನು?

ಉಳಿದಂತೆ, 'ನಾ ನಿನ್ನ ಬಿಡಲಾರೆ' ಧಾರಾವಾಹಿ ಖ್ಯಾತಿಯ ರಿಷಿಕ, 'ಕಾಟೇರ' ಹಾಗೂ 'ಅಣ್ಣಯ್ಯ' ಧಾರಾವಾಹಿಯ ಬೇಬಿ ಅಂಕಿತ ಗೌಡ, ಮಾಸ್ಟರ್ ಆರುಷ್ ಗುಣಕಿಮಠ, ಶಾಮಸುಂದರ್, ಸುಂದರ್ ವೀಣಾ, ಹರೀಶ್ ರೈ, ಸಿತಾರಾ, ತನುಶ್ರೀ ಹಾಗೂ ಅನುಪಮಾ ಪಂಚಾಕ್ಷರಿ ಸೇರಿದಂತೆ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿದೆ. ವಿಶೇಷವಾಗಿ, ನಿಮ್ಹಾನ್ಸ್ ಸಂಸ್ಥೆಯ ಮಾಜಿ ಮುಖ್ಯಸ್ಥರಾಗಿದ್ದ ಪದ್ಮಶ್ರೀ ಡಾ. ಸಿ.ಆರ್. ಚಂದ್ರಶೇಖರ್ ಅವರು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ವಿಶಿಷ್ಟ ಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ.

ಅಡಿಕ್ಷನ್‌ ಚಿತ್ರಕ್ಕೆ ಗುಂಡ್ಲುಪೇಟೆ ಸುರೇಶ್ ಅವರ ಆಕರ್ಷಕ ಛಾಯಾಗ್ರಹಣವಿದ್ದು, ದಿನೇಶ್ ಕುಮಾರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ರಾಯರ ಹರೀಶ್ ಮತ್ತು ನೆಲಮನೆ ರಾಘವೇಂದ್ರ ಬರೆದಿರುವ ಒಟ್ಟು 6 ಹಾಡುಗಳಿಗೆ ವ್ಯಾಸರಾಜ ಸೋಸಲೆ, ಮೊಹಮ್ಮದ್ ಸಾಬ್, ಸ್ನೇಹ ಹಾಗೂ ಅನಿತಾ ಸಾರಾ ಮಹೇಶ್ ಧ್ವನಿಯಾಗಿದ್ದಾರೆ. ಸದ್ಯ ಟೀಸರ್ ಮೂಲಕ ಭರವಸೆ ಮೂಡಿಸಿರುವ ಚಿತ್ರತಂಡ, ಜೂನ್ ತಿಂಗಳಲ್ಲಿ ಸಿನಿಮಾವನ್ನು ಅದ್ಧೂರಿಯಾಗಿ ತೆರೆಗೆ ತರಲು ಸಿದ್ಧತೆ ನಡೆಸುತ್ತಿದೆ.