ಮಾಗಡಿ ತಾಲ್ಲೂಕಿನ ಸುಪ್ರಸಿದ್ಧ ಶ್ರೀ ಉಜ್ಜಿನಿ ಚೌಡೇಶ್ವರಿ ದೇವಿಯ ಜಾತ್ರೆ ಹಾಗೂ ಅದರ ಹಿನ್ನೆಲೆಯಲ್ಲಿ ನಡೆಯುವ ನೈಜ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ನಿರ್ದೇಶಕ ಲಕ್ಕಿ ಶಂಕರ್ ನಿರ್ದೇಶಿಸಿರುವ ‘ಊರಬ್ಬ’ ಚಿತ್ರದ ಟ್ರೈಲರ್ ಇತ್ತೀಚೆಗಷ್ಟೇ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಕುಣಿಗಲ್ ಶಾಸಕ ಡಾ. ಎಚ್ ಡಿ ರಂಗನಾಥ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಚಿತ್ರದ ಟ್ರೈಲರ್ ಲಾಂಚ್ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದರು.
8 ಕ್ಯಾಮೆರಾಗಳಲ್ಲಿ ಸೆರೆಯಾದ ಲೈವ್ ಜಾತ್ರೆ
ಈ ಚಿತ್ರದ ಅತಿ ದೊಡ್ಡ ವಿಶೇಷತೆಯೆಂದರೆ, ದೇವಿಯ ನೈಜ ಜಾತ್ರೆಯ ದೃಶ್ಯಗಳನ್ನು ಎಂ.ಡಿ.ಶ್ರೀಧರ್, ಹೆಚ್.ವಾಸು, ಎ. ವಿ. ಕೃಷ್ಣಕುಮಾರ್ ಸೇರಿದಂತೆ 5 ಜನ ಅನುಭವಿ ತಂತ್ರಜ್ಞರು ಒಟ್ಟಾಗಿ 8 ಹೈ-ರೆಸಲ್ಯೂಶನ್ ಕ್ಯಾಮೆರಾಗಳನ್ನು ಬಳಸಿ ಲೈವ್ ಆಗಿ ಸೆರೆಹಿಡಿದಿದ್ದಾರೆ. ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ಲಕ್ಕಿ ಶಂಕರ್, "ಇದು ನಾನು ಮಾಡಿದ್ದಲ್ಲ, ಆ ಚೌಡೇಶ್ವರಿ ದೇವಿಯೇ ಮಾಡಿಸಿದ್ದು. ಉಗಾದಿ ಹಬ್ಬದ 15 ದಿನಗಳ ನಂತರ ಆರಂಭವಾಗುವ ಈ ವಿಶಿಷ್ಟ ಜಾತ್ರೆಯನ್ನು ಇತಿಹಾಸದ ಹಿನ್ನೆಲೆಯೊಂದಿಗೆ ಲೈವ್ ಆಗಿ ಶೂಟ್ ಮಾಡಿದ್ದೇವೆ. ಇಂತಹ ಪ್ರಯೋಗ ಭಾರತೀಯ ಚಿತ್ರರಂಗದಲ್ಲೇ ಮೊದಲು" ಎಂದು ಮಾಹಿತಿ ನೀಡಿದರು. ಹಿರಿಯ ನಿರ್ದೇಶಕ ಹೆಚ್.ವಾಸು ಮಾತನಾಡಿ, "ಜಾತ್ರೆಯಲ್ಲಿ ನಡೆಯುವ ಒಂದಷ್ಟು ತಪ್ಪು ಒಪ್ಪುಗಳನ್ನು ಇಟ್ಟುಕೊಂಡು ನಾವೆಲ್ಲ ಸೇರಿ ಸಂಭಾಷಣೆ ಬರೆದಿದ್ದೇವೆ" ಎಂದರು.
Tanisha Kuppanda: ಅಸಭ್ಯವಾಗಿ ವರ್ತಿಸಿದ ಫೋಟೋಗ್ರಾಫರ್ ಮೇಲೆ ತನಿಷಾ ಕುಪ್ಪಂಡ ಕೆಂಡ; ಫೋಟೋ ವೈರಲ್
ನಾವೆಲ್ಲಾ ಊರಬ್ಬಕ್ಕೆ ಹೋಗಿದ್ದೆವು
ನಾಯಕಿ ತನಿಷಾ ಕುಪ್ಪಂಡ ಮಾತನಾಡಿ, ಇಡೀ ತಂಡದ ದೊಡ್ಡ ಪರಿಶ್ರಮದಿಂದ ಈ ಸಿನಿಮಾ ಮೂಡಿಬಂದಿದ್ದು, ನಾವೆಲ್ಲಾ ಉಜ್ಜಿನಿ ಊರಬ್ಬಕ್ಕೆ ಹೋಗಿ ಅಲ್ಲಿನ ನೈಜ ಪಾತ್ರಗಳಾಗಿಯೇ ಜೀವಿಸಿದ್ದೇವೆ ಎಂದರು. ‘ಒನ್ಸ್ ಮೋರ್ ಕೌರವ’ ಖ್ಯಾತಿಯ ನರೇಶ್ ಗೌಡ ಅವರು ‘ಆಯುಷ್ ಎಂಟರ್‌ಪ್ರೈಸಸ್’ ಬ್ಯಾನರ್ ಅಡಿ ಈ ಚಿತ್ರವನ್ನು ನಿರ್ಮಿಸುವುದರ ಜೊತೆಗೆ ಪ್ರಮುಖ ಪಾತ್ರದಲ್ಲೂ ನಟಿಸಿದ್ದಾರೆ. ಚಿತ್ರದ ವಿಶೇಷತೆ ಹಂಚಿಕೊಂಡ ಅವರು, "ಮಂಗಳವಾರ ಚೌಡೇಶ್ವರಿ ದೇವಿಯ ವಾರವಾಗಿದ್ದರಿಂದ ಚಿತ್ರದ ಎಲ್ಲಾ ಕೆಲಸಗಳೂ ಇದೇ ದಿನ ನಡೆದಿವೆ. ಜಾತ್ರೆಯ ಸಂದರ್ಭದಲ್ಲಿ ಆರು ಜನ ದಲಿತರಿಗೆ ಜನಿವಾರ ಧರಿಸಿ, ಅಗ್ನಿಕುಂಡ ದಾಟಿಸುವ ವಿಶೇಷ ಆಚರಣೆಯನ್ನು ಇಲ್ಲಿ ತೋರಿಸಲಾಗಿದೆ" ಎಂದು ತಿಳಿಸಿದರು.
Tanisha Kuppanda: ದರ್ಶನ್ ಹೆಸರಿನಲ್ಲಿ ಅನ್ನ ಸಂತರ್ಪಣೆ, ವಿಶೇಷ ಪೂಜೆ; ತನಿಷಾ ಕುಪ್ಪಂಡ ವಿಡಿಯೋ ವೈರಲ್
ತಾರಾಗಣದಲ್ಲಿ ಯಾರೆಲ್ಲಾ ಇದ್ದಾರೆ?
ʻಊರಬ್ಬʼ ಚಿತ್ರದಲ್ಲಿ ನರೇಶ್ ಗೌಡ, ತನಿಷಾ ಕುಪ್ಪಂಡ ಜೊತೆಗೆ ಸಿದ್ದು ಮೂಲಿಮನಿ, ಪಾಯಲ್ ಚಂಗಪ್ಪ, ದೊಡ್ಡಣ್ಣ, ಮಿಮಿಕ್ರಿ ಗೋಪಿ, ಬಿರಾದಾರ್, ಮಿತ್ರ, ಡಾ.ನಂಜಪ್ಪ, ಅರವಿಂದ್ ರಾವ್, ನಿಡಸಾಲೆ ಪುಟ್ಟಸ್ವಾಮಯ್ಯ ಸೇರಿದಂತೆ 40ಕ್ಕೂ ಹೆಚ್ಚು ಪ್ರಸಿದ್ಧ ಕಲಾವಿದರ ದಂಡೇ ಅಭಿನಯಿಸಿದೆ. ಚಿತ್ರಕ್ಕೆ ಅಕ್ಷಯ್ ಎಸ್. ರಿಶಭ್ ಅವರ ಸಂಗೀತವಿದ್ದು, ಕೃಷ್ಣಕುಮಾರ್ ಅವರ ಛಾಯಾಗ್ರಹಣ, ಆರ್.ಡಿ. ರವಿ ಅವರ ಸಂಕಲನ ಹಾಗೂ ಗಣೇಶ್ ಅವರ ಕಲಾ ನಿರ್ದೇಶನವಿದೆ.