ರಾಜಕಾರಣಿ ಹಾಗೂ ನಟ ದಳಪತಿ ವಿಜಯ್ ಅವರ ʻಜನ ನಾಯಗನ್ʼ ಸಿನಿಮಾವು ಸೆನ್ಸಾರ್ ಸುಳಿಗೆ ಸಿಲುಕಿದ್ದು, ತೆರೆಗೆ ಬರುವುದು ಯಾವಾಗ ಅನ್ನೋ ಡೌಟು ಎಲ್ಲರಲ್ಲೂ ಇದೆ. ವಿಜಯ್ ಅವರ ಕೊನೆಯ ಸಿನಿಮಾವಾಗಿರುವ ʻಜನ ನಾಯಗನ್ʼಗೆ ಈ ರೀತಿ ಸಮಸ್ಯೆ ಎದುರಾಗಿದ್ದು ಫ್ಯಾನ್ಸ್‌ಗೂ ಬೇಸರ ತಂದಿದೆ. ಈ ನಡುವೆ ಮೊದಲ ಬಾರಿಗೆ ಮಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ವಿಜಯ್, ಸ್ಯಾಂಡಲ್‌ವುಡ್ ನಿರ್ಮಾಪಕರಿಗೆ ಎದುರಾಗಿರುವ ಸಂಕಷ್ಟಕ್ಕೆ ಮರುಗಿದ್ದಾರೆ.
ʻಜನ ನಾಯಗನ್ʼಚಿತ್ರಕ್ಕೆ ಕನ್ನಡದ ನಿರ್ಮಾಪಕ
ಹೌದು, ವಿಜಯ್ ಅವರ ಕೊನೆಯ ಸಿನಿಮಾ ʻಜನ ನಾಯಗನ್ʼಗೆ ಹಣ ಹಾಕಿರುವುದು ಕನ್ನಡ ಕೆವಿಎನ್ ಪ್ರೊಡಕ್ಷನ್ಸ್‌ನ ಕೆ ವೆಂಕಟ್ ನಾರಾಯಣ್. ಸುಮಾರು 400 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾವನ್ನು ಅವರು ನಿರ್ಮಾಣ ಮಾಡಿದ್ದು, ತೆರೆಕಾಣಿಸಲು ಸಾಧ್ಯವಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸೆನ್ಸಾರ್ ಸಮಸ್ಯೆ ಈಗ ಕೋರ್ಟ್‌ನಲ್ಲಿದೆ. ಈ ಬಗ್ಗೆ ವಿಜಯ್ ಮಾತನಾಡಿದ್ದಾರೆ.
Jana Nayagan postponed: 'ಜನ ನಾಯಗನ್' ಸಿನಿಮಾ ರಿಲೀಸ್ ಮುಂದೂಡಿಕೆ ; ದಳಪತಿ ವಿಜಯ್ ಫ್ಯಾನ್ಸ್ ಬೇಸರ
ನಿರ್ಮಾಪಕರ ಸಂಕಷ್ಟ ನೋವು ತಂದಿದೆ
ವಿಜಯ್ ಅವರು ತಮ್ಮ ನಿರ್ಮಾಪಕರಿಗೆ ಎದುರಾಗಿರುವ ಸಂಕಷ್ಟದ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ತಾವು ರಾಜಕೀಯ ಪ್ರವೇಶ ಮಾಡಿದ ನಿರ್ಧಾರದಿಂದಾಗಿ 'ಜನ ನಾಯಗನ್' ಸಿನಿಮಾದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ಅವರು ಹೇಳಿದ್ದಾರೆ. "ರಾಜಕೀಯಕ್ಕೆ ಬಂದ ಮೇಲೆ ಅಡೆತಡೆಗಳು ಬರುತ್ತವೆ ಎಂಬುದು ನನಗೆ ಮೊದಲೇ ತಿಳಿದಿತ್ತು ಮತ್ತು ಅದಕ್ಕೆ ನಾನು ಮಾನಸಿಕವಾಗಿ ಸಿದ್ಧನಿದ್ದೆ. ಆದರೆ, ನನ್ನ ನಿರ್ಮಾಪಕರು ಎದುರಿಸುತ್ತಿರುವ ಸಂಕಷ್ಟ ನನಗೆ ನೋವು ತಂದಿದೆ" ಎಂದು ವಿಜಯ್ ಅವರು ತಿಳಿಸಿದ್ದಾರೆ.
"ನಾನು ಕಡಿಮೆ ಮಾತನಾಡಿದೆ ಎಂದು ಕೆಲವರಿಗೆ ಅನಿಸಬಹುದು, ಆದರೆ ನನ್ನ ಭಾಷಣಗಳ ಮೂಲಕ ನಾನು ಸಾರ್ವಜನಿಕರೊಂದಿಗೆ ಸಂಪರ್ಕದಲ್ಲಿದ್ದೇನೆ ಮತ್ತು ಸೂಕ್ತ ಸಮಯದಲ್ಲಿ ಮಾಧ್ಯಮಗಳೊಂದಿಗೆ ಹೆಚ್ಚು ಮುಕ್ತವಾಗಿ ಮಾತನಾಡುತ್ತೇನೆ" ಎಂದು ವಿಜಯ್ ಅವರು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಶಾರುಖ್ ಖಾನ್ ಅವರನ್ನು ತಾವು ಫಾಲೋ ಮಾಡುವುದಾಗಿ ವಿಜಯ್ ಹೇಳಿಕೊಂಡಿದ್ದಾರೆ.
ಶಾರುಖ್ ಖಾನ್ ಅವರ ಮಾತುಗಾರಿಕೆಯನ್ನು ತಾವು ಇಷ್ಟಪಡುವುದಾಗಿ ಹಾಗೂ ಅವರನ್ನು ತಮ್ಮ ರೋಲ್ ಮಾಡೆಲ್ ಎಂದು ಪರಿಗಣಿಸುವುದಾಗಿ ವಿಜಯ್ ಮುಕ್ತವಾಗಿ ಹೇಳಿಕೊಂಡಿದ್ದಾರೆ. ವಿಜಯ್ ಮತ್ತು ಶಾರುಖ್ ಖಾನ್ ನಡುವೆ ಉತ್ತಮ ಬಾಂಧವ್ಯವಿದೆ ಎಂಬುದು ವಿಶೇಷ. ಚೆನ್ನೈನಲ್ಲಿ 'ಜವಾನ್' ಚಿತ್ರೀಕರಣದ ವೇಳೆ ಇವರಿಬ್ಬರ ಭೇಟಿಯ ದೃಶ್ಯಗಳು ವೈರಲ್ ಆಗಿದ್ದವು.
ಜನ ನಾಯಗನ್ ಯಾವಾಗ ಬರಲಿದೆ?
ಎಚ್. ವಿನೋದ್ ನಿರ್ದೇಶನದ 'ಜನ ನಾಯಗನ್' ಸಿನಿಮಾವು ರಾಜಕೀಯ ಅಂಶಗಳನ್ನು ಒಳಗೊಂಡ ಕಮರ್ಷಿಯಲ್ ಎಂಟರ್‌ಟೈನರ್ ಚಿತ್ರವಾಗಿದೆ ಎಂಬ ಮಾಹಿತಿ ಇದೆ. ಈ ಚಿತ್ರದಲ್ಲಿ ಬಾಬಿ ಡಿಯೋಲ್, ಪೂಜಾ ಹೆಗ್ಡೆ, ಮಮಿತಾ ಬೈಜು, ಗೌತಮ್ ಮೆನನ್, ಪ್ರಕಾಶ್ ರಾಜ್ ಮತ್ತು ಇತರರು ನಟಿಸಿದ್ದು, ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ಫೆಬ್ರವರಿಯಲ್ಲೇ ಈ ಸಿನಿಮಾವನ್ನು ತೆರೆಕಾಣಿಸಲು ನಿರ್ಮಾಪಕರು ಶತಪ್ರಯತ್ನ ಹಾಕುತ್ತಿದ್ದಾರೆ ಎನ್ನಲಾಗಿದೆ.