ʻದಳಪತಿʼ ವಿಜಯ್ ಅಭಿನಯದ ʻಜನ ನಾಯಗನ್ʼ ಸಿನಿಮಾಕ್ಕೆ ಮೇಲಿಂದ ಮೇಲೆ ಒಂದಲ್ಲಾ ಒಂದು ಸಮಸ್ಯೆಗಳು ಎದುರಾಗುತ್ತಲೇ ಇವೆ. ಸೂಕ್ತ ಸಮಯಕ್ಕೆ ಸೆನ್ಸಾರ್ ಆಗದೇ ಇದ್ದಿದ್ದರಿಂದ ಅಂದುಕೊಂಡ ಸಮಯಕ್ಕೆ ಸಿನಿಮಾ ರಿಲೀಸ್ ಆಗಲಿಲ್ಲ. ಆನಂತರ ಕೋರ್ಟ್ ಕೇಸ್ ಅಂತ ಹೋಗಿದ್ದಕ್ಕೆ ಬಿಡುಗಡೆ ಮತ್ತಷ್ಟು ವಿಳಂಬವಾಗಿದೆ. ಈ ನಡುವೆ ಮತ್ತೊಂದು ಆಘಾತ ಚಿತ್ರತಂಡಕ್ಕೆ ಎದುರಾಗಿದೆ ಎಂಬ ಟಾಕ್ ಕೇಳಿಬಂದಿದೆ. ಅದೇನು? ಮುಂದೆ ಓದಿ.
ಓಟಿಟಿ ಡೀಲ್ ಕ್ಯಾನ್ಸಲ್ ಆಯ್ತಾ?
ಮೂಲಗಳ ಪ್ರಕಾರ, ವಿಜಯ್ ಅವರ ಈ ಕೊನೆಯ ಸಿನಿಮಾದ ಜನ ನಾಯಗನ್‌ನ ಸ್ಟ್ರೀಮಿಂಗ್ ಹಕ್ಕುಗಳನ್ನು 120 ಕೋಟಿ ರೂ.ಗಳಿಗೆ ಅಮೇಜಾನ್ ಪ್ರೈಮ್ ವಿಡಿಯೋ ಖರೀದಿಸಿತ್ತು. ಅಂದುಕೊಂಡಂತೆ, ಈ ಸಿನಿಮಾವು ಜನವರಿ 9ಕ್ಕೆ ಬಿಡುಗಡೆಯಾಗಿ, ಫೆಬ್ರವರಿ ಮೊದಲ ವಾರದಲ್ಲಿ ಒಟಿಟಿಗೆ ಲಭ್ಯವಾಗಲಿದೆ ಎಂದು ಸಂಸ್ಥೆ ನಿರೀಕ್ಷಿಸಿತ್ತು. ಆದರೆ, ಸೆನ್ಸಾರ್ ಸಮಸ್ಯೆಯಿಂದಾಗಿ ಬಿಡುಗಡೆ ತಡವಾಗುತ್ತಿದೆ.
Jana Nayagan postponed: 'ಜನ ನಾಯಗನ್' ಸಿನಿಮಾ ರಿಲೀಸ್ ಮುಂದೂಡಿಕೆ ; ದಳಪತಿ ವಿಜಯ್ ಫ್ಯಾನ್ಸ್ ಬೇಸರ
ಮಾ.9ರಂದು ಈ ಸಿನಿಮಾಗೆ ಸೆನ್ಸಾರ್ ಆಗಬೇಕಿತ್ತು. ಆದರೆ ಸೆನ್ಸಾರ್ ಮಂಡಳಿಯ ಸಮಿತಿಯ ಸದಸ್ಯರೊಬ್ಬರು ಅನಾರೋಗ್ಯಕ್ಕೆ ಒಳಗಾದ ಕಾರಣ ಆ ಪ್ರಕ್ರಿಯೆ ಮತ್ತಷ್ಟು ಮುಂದೂಡಲ್ಪಟ್ಟಿದೆ. ಪದೇಪದೇ ಆಗ್ತಿರುವ ಈ ವಿಳಂಬದಿಂದ ಬೇಸತ್ತ ಪ್ರೈಮ್ ವಿಡಿಯೋ ತನ್ನ ಒಪ್ಪಂದವನ್ನು ರದ್ದು ಮಾಡಿದೆ ಎಂಬ ಟಾಕ್ ಕೇಳಿಬಂದಿದೆ.
ಜನ ನಾಯಗನ್ ಚಿತ್ರವನ್ನು ಸುಮಾರು 400 ಕೋಟಿ ರೂ.ಗಳಿಗೂ ಅಧಿಕ ಬಜೆಟ್‌ನಲ್ಲಿ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿದೆ. ಸಾಮಾನ್ಯವಾಗಿ ಸ್ಟಾರ್ ನಟರ ಸಿನಿಮಾಗಳು ಡಿಜಿಟಲ್ ಹಕ್ಕುಗಳ ಮಾರಾಟದಿಂದ ಒಳ್ಳೆಯ ಮೊತ್ತವನ್ನೇ ನಿರೀಕ್ಷೆ ಮಾಡುತ್ತಾರೆ. ಅಂದುಕೊಂಡಂತೆಯೇ ದೊಡ್ಡ ಮೊತ್ತಕ್ಕೆ ಈ ಚಿತ್ರಕ್ಕೆ ಸ್ಟ್ರೀಮಿಂಗ್ ಹಕ್ಕುಗಳನ್ನು ಅಮೆಜಾನ್ ಪ್ರೈಮ್ ಪಡೆದಿತ್ತು. ಈಗ ಮಾರಾಟ ಒಪ್ಪಂದ ರದ್ದಾಗಿರುವ ಮಾತು ಕೇಳಿಬಂದಿದೆ.
ಇದು ನಿಜವೇ ಆದರೆ, ಅದು ನಿರ್ಮಾಪಕರಿಗೆ ದೊಡ್ಡ ಆದಾಯವೊಂದು ಕೈಬಿಟ್ಟಂತೆ ಆಗಲಿದೆ. ಆದರೆ, ಇದು ನಿಜವೇ? ಸದ್ಯಕ್ಕಂತೂ ಕೆವಿಎನ್ ಪ್ರೊಡಕ್ಷನ್ಸ್‌ನಿಂದ ಯಾವುದೇ ಮಾಹಿತಿ ಪ್ರತಿಕ್ರಿಯೆ ಸಿಕ್ಕಿಲ್ಲ.
ದಳಪತಿ ವಿಜಯ್ 'ಜನ ನಾಯಗನ್' ಬಿಡುಗಡೆಗೆ ಕಾನೂನು ಸಂಕಷ್ಟ: ಜನವರಿ 27ಕ್ಕೆ ಹೈಕೋರ್ಟ್ ಅಂತಿಮ ತೀರ್ಪು!
ಇನ್ನು, ಈ ಸಿನಿಮಾದ ಡಿಜಿಟಲ್ ಹಕ್ಕುಗಳ ಒಪ್ಪಂದ ರದ್ದಾದರೆ, ಅದು ಅಮೇಜಾನ್ ಪ್ರೈಮ್ ವಿಡಿಯೋಗೆ ನಷ್ಟವಾಗುತ್ತದೆಯೇ ವಿನಃ ಜನ ನಾಯಗನ್‌ಗೆ ಅಲ್ಲ ಎಂಬುದು ವಿಜಯ್ ಅಭಿಮಾನಿಗಳ ವಾದ.
ಎಚ್. ವಿನೋದ್ ನಿರ್ದೇಶನದ ಈ ಸಿನಿಮಾದದಲ್ಲಿ ವಿಜಯ್ ಜೊತೆಗೆ ಪೂಜಾ ಹೆಗ್ಡೆ, ಮಮಿತಾ ಬೈಜು, ಪ್ರಕಾಶ್ ರಾಜ್, ಪ್ರಿಯಾಮಣಿ ಇನ್ನು ಮುಂತಾದವರು ನಟಿಸಿದ್ದಾರೆ. ಅನಿರುದ್ಧ್ ರವಿಚಂದರ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಟಿವಿಕೆ ಪಕ್ಷ ಸ್ಥಾಪಿಸಿ, ಚುನಾವಣೆಗೆ ಸ್ಪರ್ಧೆ ಮಾಡುವ ಉತ್ಸಾಹದಲ್ಲಿರುವ ವಿಜಯ್ ಚಿತ್ರರಂಗಕ್ಕೆ ಗುಡ್‌ಬೈ ಹೇಳುತ್ತಿದ್ದು, ʻಜನ ನಾಯಗನ್ʼ ಅವರ ಕೊನೆಯ ಸಿನಿಮಾವಾಗಿದೆ.